ಜೀವನ
ಸಂಪಾದಿಸಿಶಿಶುನಾಳ ಶರೀಫರು ತಮ್ಮ ತತ್ವಪದಗಳಿಂದಾಗಿ ಕರ್ನಾಟಕದ ತುಂಬ ಖ್ಯಾತರಾಗಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿರುವ ಶಿಶುನಾಳವು ಈಗಲೂ ಸಹ ಒಂದು ಸಣ್ಣಹಳ್ಳಿ. ಈ ಹಳ್ಳಿಯಲ್ಲಿ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಹಾಗು ಅವರ ಹೆಂಡತಿ ಹಜ್ಜೂಮಾ ದಂಪತಿಗಳು ಜೀವಿಸುತ್ತಿದ್ದರು. ಈ ದಂಪತಿಗಳಿಗೆ ಅನೇಕ ವರ್ಷಗಳವರೆಗೆ ಮಕ್ಕಳಿಲ್ಲದ್ದರಿಂದ, ಹುಲಗೂರಿನಲ್ಲಿದ್ದ ಸಂತ ಖಾದರ ಷಾವಲಿ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅದರ ಫಲವಾಗಿ ಕ್ರಿ.ಶ. ೧೮೧೯ನೆಯ ಇಸವಿಯ ಮಾರ್ಚ ತಿಂಗಳಿನ ೭ನೆಯ ದಿನಾಂಕದಂದು ಮಹಮ್ಮದ ಶರೀಫ ಜನಿಸಿದರು. ಶರೀಫರು ಶಿಶುನಾಳದಲ್ಲಿಯೇ ಇದ್ದ ಕೂಲಿಮಠದಲ್ಲಿ ಕಲಿತು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಶಿಶುನಾಳದ ಅಕ್ಕಪಕ್ಕದಲ್ಲಿದ್ದ ಮಂಡಿಗನಾಳ, ಕ್ಯಾಲಕೊಂಡ, ಪಾಣಿಗಟ್ಟಿ, ಎರಿಬೂದಿಹಾಳ, ಗುಂಜಳ ಹಳ್ಳಿಗಳ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲವು ವರ್ಷ ಕೆಲಸ ಮಾಡಿದರು.
- ಕೆಲ ಕಾಲಾನಂತರ ಕೆಲಸ ಬಿಟ್ಟ ಶರೀಫರು ತಮ್ಮ ಹಳ್ಳಿಯಲ್ಲಿಯೇ ಆಧ್ಯಾತ್ಮಚಿಂತನೆಯಲ್ಲಿ ಮಗ್ನರಾಗಿದ್ದರು. ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡು ಆಧ್ಯಾತ್ಮ ಚರ್ಚೆಯಲ್ಲಿ ತೊಡಗಿರುತ್ತಿದ್ದರು. ಈ ಸಮಯದಲ್ಲಿ ಅವರಿಗೆ ಕಳಸದ ಗೋವಿಂದ ಭಟ್ಟರ ಭೆಟ್ಟಿಯಾಯಿತು. ಗೋವಿಂದ ಭಟ್ಟರಿಂದ ಶರೀಫರಿಗೆ ಉಪದೇಶವಾಯಿತು. ಸ್ವಜಾತಿ ಬಾಂಧವರಿಗೆ ಇದು ಸರಿ ಬರಲಿಲ್ಲ. ಆದರೆ ಶರೀಫರು ತಮ್ಮ ಗುರುವಿನ ಸಂಗವನ್ನು ಬಿಡಲಿಲ್ಲ.
- ತಮ್ಮ ಗುರುವನ್ನು ಶರೀಫರು ಹೀಗೆ ವರ್ಣಿಸುತ್ತಾರೆ:
ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪಲ್ಲ||
ಕರ ಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರ ಬೋಧಿಸಿ ಕರವಿಟ್ಟು ಶಿರದೊಳು ||೧||
ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨||(ಕಸ್ತು=ಕಸಿದು : Snatch)
ಗುರುವರ ಗೋವಿಂದ ಪರಮಗಾರುಡಿಗ ನೀ—
ನಿರುತಿಹೆ ತಿಳಿಯದು ನರರಿಗೆ ಪರಿಯಿದು ||೩||
ಗೀತೆಗಳು
ಸಂಪಾದಿಸಿ- ಶಿಶುನಾಳ ಶರೀಫರು ೪೦೦ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅನೇಕ ಗೀತೆಗಳು ಸಂದರ್ಭಾನುಸಾರವಾಗಿ ಹೊರಹೊಮ್ಮಿದ ಹಾಡುಗಳು. ಇಂತಹ ಹಾಡುಗಳಲ್ಲಿ “ಬಿದ್ದೀಯಬೆ ಮುದುಕಿ”, “ಗಿರಣಿ ವಿಸ್ತಾರ ನೋಡಮ್ಮ” , “ಅಳಬೇಡ ತಂಗಿ ಅಳಬೇಡ” ಮೊದಲಾದವು ಪ್ರಸಿದ್ಧವಾದ ಹಾಡುಗಳಾಗಿವೆ.
- ಕೋಡಗನ ಕೋಳಿ ನುಂಗಿತ್ತಾ ತಂಗಿ,
- ಚಂದದಿ ಕೇಳಿದರ ವಿಸ್ತಾರ
- ಗುಡಿಯ ನೋಡಿರಣ್ಣಾ ದೇಹದ
- ಸ್ನೇಹ ಮಾಡಬೇಕಿಂಥವಳ!
- ಮೋಹದ ಹೆಂಡತಿ ಸತ್ತ ಬಳಿಕ
- ಒಳ್ಳೇ ನಾರಿ ಕಂಡೆ
- ಅತ್ತ ಇತ್ತ ಹರಿದಾಡುವ ಮನಸಿಗೆ
- ಅಗ್ಗದ ಅರವಿ ತಂದು
- ಬಿದ್ದಿಯಬ್ಬೇ ಮುದುಕಿ
- ಹುಟ್ಟಿದ ಹೊಲಿಮನಿ
- ಸೋರುತಿಹುದು ಮನೆಯ ಮಾಳಿಗಿ
- ತರವಲ್ಲ ತಗಿ ನಿನ್ನ ತಂಬೂರಿ
- ದುಡ್ಡು ಕೆಟ್ಟದ್ದು ನೋಡಣ್ಣ
- ಕೂ ಕೂ ಎನುತಿದೆ ಬೆಳವಾ
- ಮನಸೇ ಮನಸಿನ ಮನಸ ನಿಲ್ಲಿಸುವುದು
- ಅಳಬೇಡ ತಂಗಿ ಅಳಬೇಡ
- ಗಿರಣಿ ವಿಸ್ತಾರ ನೋಡಮ್ಮ
- ಎಲ್ಲರಂಥವನಲ್ಲ ನನ ಗಂಡ
- ಚೋಳ ಕಡಿತು, ನನಗೊಂದು ಚೋಳ ಕಡಿತು
- ಎಡಿ ಒಯ್ಯನು ಬಾರೆ ದೇವರಿಗೆ
ನನ್ನ ಹೇಣ್ತೆ ನನ್ನ ಹೇಣ್ತಿ
ಸಂಪಾದಿಸಿ- ಶರೀಫರಿಗೆ ಕುಂದಗೋಳದ ನಾಯಕ ಮನೆತನದ ಫಾತಿಮಾಳೊಡನೆ ಮದುವೆಯಾಯಿತು.
- ಒಂದು ಒಡಪಿನ ಪದ!
- ಶರೀಫರಿಗೆ ತಮ್ಮ ಹೆಂಡತಿಯ ಬಗೆಗೆ: ಇಲ್ಲಿ ಹೆಣ್ಣೆಂಬುದು ಒಂದು ಪ್ರಕೃತಿಯ ತತ್ವ ಎಂಬ ಅರ್ಥದಲ್ಲಿ ಇದೆ. ಹೆಂದತಿ,ತಾಯಿ, ಅತ್ತಿಗೆ ನಾದಿನಿ ಮತ್ತು ಮಗಳು ಇವೆಲ್ಲಾ ಪ್ರಕೃತಿಯ ಹೆಣ್ತನದ ನಾನಾ ರೂಪ- ಎಲ್ಲಾ ಒಂದೇ ತತ್ವ! ಪ್ರಕೃತಿಯ ತತ್ವವೇ ಈ ನಾನಾ ಹೆಣ್ಣಿನ ರೂಪದಲ್ಲಿ ಕಾಣಿಸಿಕೊಳ್ಳುವುದು ಎಂಬುದು ಈ ಪದದ ತಾತ್ಪರ್ಯ.
- ಹೇಣ್ತೆ - ಇದನ್ನು ಹೇಣ್ತಿ ಎಂದು ತಿದ್ದಿದೆ
ನನ್ನ ಹೇಣ್ತೆ ನನ್ನ ಹೇಣ್ತಿ
ನಿನ್ನ ಹೆಸರೇನ್ಹೇಳಲಿ ಗುಣವಂತೆ ||ಪಲ್ಲ||
ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ ||ಅನುಪಲ್ಲ||
ಮೊದಲಿಗೆ ತಾಯ್ಯಾದಿ ನನ್ನ ಹೇಣ್ತಿ ಮತ್ತೆ
ಸದನಕ ಸೊಸಿಯಾದಿ ನನ್ನ ಹೇಣ್ತಿ ಮತ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ್ನ ಹೇಣ್ತಿ ||೧||
ಅತ್ತಿಗಿ ನಾದುನಿ ನನ್ನ ಹೇಣ್ತಿ
ನಮ್ಮತ್ಯಾಗಿ ನಡಿದೀಯೇ ನನ್ನ ಹೇಣ್ತೆ
ತುತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹೆತ್ತವ್ವನೆನಸಿದೆ ನನ್ನ ಹೇಣ್ತಿ
ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ಎನಗ
ತಕ್ಕವಳೆನಿಸಿದೆ ನನ್ನ ಹೇಣ್ತೆ ||೨||
ಅಕ್ಕರದಲ್ಲಿ ಅನಂತಕಾಲಾ ನಮ್ಮ
ಅಕ್ಕಾಗಿ ನಡೆದೆಲ್ಲ ನೀ ನನ್ನ ಹೇಣ್ತಿ
ಬಾಳೊಂದು ಚಲ್ವಿಕೆ ನನ್ನ ಹೇಣ್ತಿ
ಆಳಾಪಕೆಳಸಿದೆ ನನ್ನ ಹೇಣ್ತಿ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದೆನಿಸಿದೆ ನನ್ನ ಹೇಣ್ತಿ ||೩||
ಮಂಗಳರೂಪಳೆ ನನ್ನ ಹೇಣ್ತೆ
ಅರ್ಧಾಂಗಿಯೆನಿಸಿದೆ ನನ್ನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ್ನ ಹೇಣ್ತೆ
ಕುಶಲದಿ ಕೂಡಿದ ನನ್ನ ಹೇಣ್ತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ್ನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ ||೪||
ನೋಡಿ
ಸಂಪಾದಿಸಿ- ಶಿಶುನಾಳ ಶರೀಫರು (ಕನ್ನಡ ವಿಕಿ)[ಶಿಶುನಾಳ ಶರೀಫರು]kn:ಶಿಶುನಾಳ ಶರೀಫರು
ಆಧಾರ
ಸಂಪಾದಿಸಿ- ಶಿಶುನಾಳ ಶರೀಫರ ಪದಗಳು -ಅನಾಮಿಕ
- ಶಿಶುನಾಳ ಶರೀಫರು
- ಶಿಶುನಾಳ ಶರೀಫರ ಗೀತೆಗಳು
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ- ↑ ಶಿಶುನಾಳ ಶರೀಫರ ಗೀತೆಗಳು.
- ↑ ಸಲ್ಲಾಪ
- ↑ ಕವನ ಸಂಗ್ರಹ. ಸಂತ ಶಿಶುನಾಳ ಶರೀಫ. ಶಿಶುನಾಳ ಶರೀಫರ ಗೀತೆಗಳು.
- ↑ ಶಿಶುನಾಳ ಶರೀಫರ ಪದಗಳು -ಅನಾಮಿಕ
- ↑ ಶಿಶುನಾಳ ಶರೀಫರು
- ↑ ಶಿಶುನಾಳ ಶರೀಫರ ಗೀತೆಗಳು