ಹಳ್ಳಿಯ ಚಿತ್ರಗಳು/ನಾವು ಮಾಡಿದ ಒಂದು ಯಾತ್ರೆ

ನಾವು ಮಾಡಿದ ಒಂದು ಯಾತ್ರೆ


ನಮ್ಮ ಚಿಕ್ಕಪ್ಪನ ಮಗ ರಾಜು, ಆ ಹುಡುಗಿಯನ್ನು ನೋಡಿದ ಕೂಡಲೇ, ಮಾವಿನ ಹಣ್ಣಿಗಾಗಿ ಬಾಯಿ ಬಿಡುವ ಹುಡುಗನಂತೆ ಬಾಯಿ ಬಿಡುತ್ತಿದ್ದ. ಆದರೆ ಹುಡುಗಿಯರಿಗೆ ಮದುವೆಯ ವಿಷಯ ಹೇಳಿದರೆ ಹೇಗೆ ನಾಚಿಕೆಯೋ, ಹಾಗೆಯೇ ತನ್ನ ಮದುವೆ ವಿಚಾರ ಹೇಳಿದರೆ ರಾಜುಗೆ ನಾಚಿಕೆ, ಮದುವೆ ಗೊತ್ತಾದ ಮೇಲೂ ಅವನು ಒಂದು ದಿವಸ ನನ್ನೊಂದಿಗೆ

“ಈ ಮದುವೆಯಿಂದ ತಪ್ಪಿಸಿಕೊಳ್ಳೋದು ಹ್ಯಾಗೆ? ನಾನು ಬೇಡವೆಂದರೂ ನಮ್ಮ ತಂದೆಯವರು ಗೊತ್ತುಮಾಡಿಬಿಟ್ಟಿದ್ದಾರೆ. ದೊಡ್ಡವರ ಮಾತನ್ನು ಸುಲಭವಾಗಿ ಮೀರುವುದಕ್ಕೆ ಆಗುವುದಿಲ್ಲ" ಎಂದ.

ನಾನು “ಹಾಗಾದರೆ ಮದುವೆಯ ಮೊದಲು ರಾತ್ರಿ ಮೈಸೂರಿಗೆ ಎದ್ದುಬಿಡು" ಎಂದೆ. “ಹಾಗೆಯೇ ಆಗಲಿ” ಎಂದ.

ಆದರೆ ಹಣ್ಣಿಗಾಗಿ ಹಲ್ಲು ಬಿಡುತ್ತಿರುವ ಹುಡುಗ, ಕೈಗೆ ಸಿಕ್ಕುತ್ತಿರುವ ಹಣ್ಣನ್ನು ಬಿಟ್ಟುಹೋದುದನ್ನು ಯಾರಾದರೂ ಕಂಡಿದ್ದಾರೆಯೆ? ನಾನೂ ನೋಡಲಿಲ್ಲ.

ಹಾಸನದಿಂದ ೮ ಮೈಲು ದೂರದಲ್ಲಿರುವ ಶಿವಳ್ಳಿಯಲ್ಲಿ ಅವನ ಮದುವೆ ನಡೆಯಬೇಕೆಂದು ಗೊತ್ತಾಗಿತ್ತು. ಮೇಲುಕೋಟೆಯಿಂದ ನನ್ನ ಗೆಳೆಯ ಗುಂಡುವೂ ನಮ್ಮೂರಿಗೆ ಬಂದ. ಇಬ್ಬರೂ ಶಿವಳ್ಳಿಗೆ ಹೊರಟೆವು. ಮದುವೆಯ ದಿವಸವೇ ಅಲ್ಲಿಗೆ ಹೋದೆವು. ಧಾರೆ ಆಯಿತು.

ಮದುವೆಯ ಮನೆಯಲ್ಲಿ ವರನಿಗೆ ವಧುವಿನ ಜ್ಞಾನ; ವಧುವಿಗೆ ವರನ ಜ್ಞಾನ, ನಮಗೆ ಮದುವೆಯ ಊಟದ ಹೊರತು ಮತ್ತಾವುದರ ಕಡೆಗೂ ಲಕ್ಷ್ಯವಿರಲಿಲ್ಲ. ನನ್ನ ಹೆಂಡತಿಯೂ ಮದುವೆಗಾಗಿ ಬಂದಿದ್ದಳು. ಆದರೆ ಆ ಗದ್ದಲದಲ್ಲಿ ಅವಳೊಂದಿಗೆ ಒಂದು ಮಾತನ್ನೂ ಆಡಲು ಅವಕಾಶವಿರಲಿಲ್ಲ. ಅಲ್ಲದೆ ಅವಳಿಗೆ ಆರತಿ ಅಕ್ಷತೆ, ಅರಸಿನ ಕುಂಕುಮ, ಹಸೆಮಣೆ, ಇವುಗಳ ಸಂಭ್ರಮ. ಹೊತ್ತಿಗೆ ಸರಿಯಾಗಿ ಅವಳು ನನಗೂ ಗುಂಡುವಿಗೂ ಒಂದೊಂದು ಲೋಟ ಕಾಫಿ ತಂದುಕೊಡುತ್ತಿದ್ದುದೇ ನಮ್ಮ ಪುಣ್ಯವೆಂದುಕೊಳ್ಳಬೇಕಾಯಿತು.

ಊಟವಾದ ನಂತರ, ಉಳಿದ ನೆಂಟರಿಷ್ಟರೆಲ್ಲ ಇಸ್ಪೀಟ್ ಪ್ರಾರಂಭಿಸಿಬಿಟ್ಟರು. ನಾನೂ ಗುಂಡುವೂ ಇಸ್ಪೀಟ್ ಆಟ ಸ್ವಲ್ಪ ಹೊತ್ತು ನೋಡಿದೆವು. ಆದರೆ ಬೇಸರಿಕೆ ಆಯಿತು. ಊರ ಹೊರಗಡೆ ಹೋಗಿಬರೋಣ ಬಾ ಎಂದು ಹೇಳಿಕೊಂಡು ಇಬ್ಬರೂ ಹೊರಟೆವು. ಅಂದು ಮಳೆಗಾಲ; ಸೋನೆಯು ಅರ್ಧಗಂಟೆಗೊಂದು ಬಾರಿ ಬರುತ್ತಲೇ ಇದ್ದಿತು. ಸೂರ್‍ಯನು ಎಲ್ಲೊ ದಿವಸಕ್ಕೊಂದು ಸಾರಿ ಮಂಕಾಗಿ ತೋರಿ, ಮೋಡಗಳ ಮರೆಯಲ್ಲಿ ಅವಿತುಕೊಳ್ಳುತ್ತಿದ್ದನು. ನನಗೆ ಚಳಿಯಿಂದ ಮೈ ನಡುಗುತ್ತಿದ್ದಿತು. ಖಾದಿಯ ಶಾಲನ್ನು ಬಲವಾಗಿ ಹೊದೆದುಕೊಂಡು ಕೆರೆಯ ಬಳಿಗೆ ಹೋದೆವು. ಕೆರೆಯ ನೀರು ಕೆಂಪಾಗಿ ತೋರುತ್ತಲಿದ್ದಿತು. ಬಯಲಿನ ಭತ್ತದ ಬೆಳೆಯು ಗಾಳಿಯಿಂದ ಬಳುಕಾಡುತ್ತಿದ್ದಿತು. ದೂರದಲ್ಲಿ ಅಡಿಕೆ ಮಾವು ತೆಂಗುಗಳಿಂದ ಕೂಡಿದ ತೋಟಗಳು, ಭೂಮಿಯ ಸೆರಗಿನಂತೆ ಎದ್ದು ತೋರುತ್ತಿದ್ದುವು. ಮಳೆ ಬಿದ್ದು ಭೂಮಿಯ ಎಲ್ಲಾ ಕಡೆಯ ಹಸುರಾಗಿದ್ದಿತು. ಶಿವಳ್ಳಿಯ ಸುತ್ತ ಕೊಳಗಳೆಲ್ಲ ನೀರಿನಿಂದ ತುಂಬಿದ್ದುವು. ನಾವು ಒಂದು ಕೊಳದ ಬಳಿಗೆ ಹೋದೆವು. ಅದು ಬಹಳ ಸುಂದರವಾದ ಕೊಳ, ನಾಲ್ಕು ಕಡೆಗಳಲ್ಲಿಯೂ ಅದಕ್ಕೆ ಮೆಟ್ಟಲುಗಳನ್ನು ಕಟ್ಟಿದ್ದರು. ಪದೇ ಪದೆ ಮೀನುಗಳು ಮೇಲಕ್ಕೆ ನೆಗೆದು ನೀರಿನೊಳಕ್ಕೆ ಬೀಳುತ್ತಿದ್ದುವು. ಕೆಲವು ಕಮಲಗಳೂ ಒಂದೆಡೆ ಸ್ವಲ್ಪ ಪಾಚಿಯೂ ಬೆಳೆದಿದ್ದವು. ಗಾಳಿಯು ಬರ್‍ರೆಂದು ಬೀಸುತ್ತಿದ್ದಿತು. ಕೊಳದ ದಡದಲ್ಲಿದ್ದ ಮಂಟಪದಲ್ಲಿ ನಾನೂ, ನನ್ನ ಸ್ನೇಹಿತ ಗುಂಡುವೂ ಬೆಚ್ಚಗೆ ಕುಳಿತೆವು.

ಪ್ರಕೃತಿಗೆ ಒಂದು ವಿಧವಾದ ಮಂಕು ಕವಿದಿದ್ದಂತೆ ತೋರಿತು. ಸೋನೆಯ ಮಳೆಯ ಹನಿಯ ಹೊರತು ಮತ್ತಾವ ಶಬ್ದವೂ ಕೇಳುತ್ತಿರಲಿಲ್ಲ. ಮಳೆಗಾಲದ ಕುಳಿರ್ಗಾಳಿಯು ಬೀಸುತ್ತಿದ್ದಿತು. ಪ್ರಕೃತಿಯ ಸ್ತುತಿಪಾಠಕರಾದ ಹಕ್ಕಿಗಳೊಂದೂ ಕಣ್ಣಿಗೆ ಬೀಳಲಿಲ್ಲ. ಒಂದೊಂದು ಸಮಯದಲ್ಲಿ ಮೋಡಗಳು ಬಹಳ ಹೆಚ್ಚಾಗಿ ಗುಡುಗಿ ಪ್ರಕೃತಿಯು ಬಹಳ ದುಃಖದಿಂದ ಬಳಲುವಂತೆ ತೋರುತ್ತಿದ್ದಿತು. ಮೋಡದ ಭಾರವನ್ನು ತಾಳಲಾರದೆ ಬಾನು ನೊಂದು ಅಳುತ್ತಿದ್ದಿತು. ಮಧ್ಯೆ ಮಧ್ಯೆ ಸೋನೆಯು ನಿಂತಾಗ ಗಂಭೀರವಾದ ಮೌನ; ಗಾಳಿಯು ಬೀಸಿದ ಕೂಡಲೆ ಆ ಮೌನವನ್ನು ಭೇದಿಸಿಕೊಂಡು ಪಟ ಪಟನೆ ಮರದ ಎಲೆಗಳಿಂದ ಉದುರುವ ಮಳೆಯ ಹನಿ, ಪ್ರಕೃತಿಯು ನಿದ್ರಾವಸ್ಥೆಯಲ್ಲಿದ್ದು ಕನವರಿಸುತ್ತಿರುವಂತೆ ತೋರಿತು. ಪ್ರಕೃತಿಯು ಈ ಮನೋಧರ್ಮದ ಪರಿಣಾಮವು ನಮ್ಮ ಮೇಲೆಯೂ ಆಯಿತು. ನಾವು ಮಂಕರಾಗಿ ಒಬ್ಬರನ್ನೊಬ್ಬರು ಮರೆತು ಕುಳಿತೆವು. ಗುಂಡುವು ನಿಧಾನವಾಗಿ ಹಾಡಲು ಪ್ರಾರಂಭಿಸಿದನು. ನನ್ನ ಅರಿವೇ ಅವನಿಗೆ ಇರಲಿಲ್ಲ. ತಾನೆಲ್ಲಿರುವೆನೆಂಬುದು ಅವನಿಗೆ ಮರೆತು ಹೋಗಿದ್ದಿತು. ಹಾಡುವುದರಲ್ಲಿ ಅವನು ಪ್ರಚಂಡ ಬಹಳ ಸಣ್ಣ ದನಿಯಲ್ಲಿ ರಾಗಾಲಾಪನೆಮಾಡುತ್ತಿದ್ದನು. ಶಂಕರಾಭರಣ, ಕಲ್ಯಾಣಿ, ಸಾವೇರಿ, ಕಾನಡಾ, ಅಠಾಣ ಎಲ್ಲವೂ ಒಂದೊಂದಾಗಿ ಹೊರಕ್ಕೆ ಬಂದವು. ಗಾನದಿಂದಲೇ ಆವೃತವಾದ ಒಂದು ಲೋಕವನ್ನು ನಾವು ಸೃಷ್ಟಿಮಾಡಿಬಿಟ್ಟೆವು. ಅಠಾಣ ರಾಗವನ್ನು ಗುಂಡನು ಇಂಪಾಗಿ ಹಾಡುವಾಗ ನನ್ನಲ್ಲಿದ್ದ ವಿಮರ್ಶಕನು ಭೇಷ್ ಭೇಷ್ ಎಂದನು. ಅದನ್ನು ಕೇಳಿ ಗುಂಡನು ಗಾನಲೋಕದಿಂದ ಇಹಲೋಕಕ್ಕೆ ಬಂದನು. ಅವನ ೩-೪ ಕವಿತೆಗಳನ್ನು ಹಾಡಿಸಿ ಕೇಳಿದುದಾಯಿತು. ಗಡಿಯಾರವನ್ನು ನೋಡಿದೆ. ನಾವು ಕೊಳದ ದಡದಲ್ಲಿ ೪ ಗಂಟೆಗಳ ಕಾಲ ಕುಳಿತಿದ್ದೆವು ಎಂದು ಗೊತ್ತಾಯಿತು.

ಗುಂಡನು ಹೇಳಿದನು “ಮದುವೆಯ ನಾಲ್ಕು ದಿವಸಗಳೂ ನಾವಿಲ್ಲಿ ಹೀಗೆಯೇ ಬಂದು ಕೂತಿರುವುದಕ್ಕಾಗುವುದಿಲ್ಲ. ಇವತ್ತು ಇಲ್ಲಿಗೆ ಬರದೆ ಇದ್ದಿದ್ದರೆ, ಹೇಗೆ ಕಾಲವನ್ನು ನೂಕುತ್ತಿದ್ದೆವೆಂಬುದೇ ನನಗೆ ಯೋಚನೆ ಯಾಗಿತ್ತು. ಒಂದು ದಿವಸ ಮಟ್ಟಿಗೆ ಎಲ್ಲಿಗಾದರೂ ಹೋಗಿಬರೋಣ-ಓಹೋ ನೀನು ಹಳೇಬೀಡನ್ನು ನೋಡಿದ್ದೀಯಾ?”

ನಾನು ತಕ್ಷಣ ಉತ್ತರ ಕೊಡಲಿಲ್ಲ. ಒಂದು ಘಳಿಗೆ ಯೋಚಿಸಿ “ನೋಡಿದ್ದೇನೆ-ನೋಡಿಲ್ಲ” ಎಂದೆ. ಗುಂಡನು "ಅಂದರೆ?" ಎಂದ.

ನಾನು "ಅಂದರೆ? ಅಂದರೆ" ಎಂದೆ.

“ಹಾಗಾದರೆ ದಾರಿಯಲ್ಲಿ ಬರುತ್ತಿರುವಾಗ ದೂರದಿಂದ ಎಲ್ಲಿಯೋ ನೋಡಿರಬೇಕು."

“ಏನೂ ಇಲ್ಲ. ಹಳೇಬೀಡನ್ನು ನೋಡುವುದಕ್ಕಾಗಿಯೇ ಹಳೆಬೀಡಿಗೆ ಹೋದೆ."

“ನೀನೆ ವಾಸಿಕಣೋ, ಹಳೇಬೀಡು ದೇವಸ್ಥಾನವನ್ನು ನೋಡಿ ಬಂದುಬಿಟ್ಟಿದ್ದೀಯೆ.

“ದೇವಸ್ಥಾನವನ್ನು ನೋಡಲಿಲ್ಲ.”

ಹಳೇಬೀಡಿಗೆ ಹೋಗಿ ದೇವಸ್ಥಾನ ನೋಡದೆ ಬರೋದುಂಟೇನೋ? ಯಾವುದೋ ಬೇರೆ ಕೆಲಸಕ್ಕೆ ಹೋಗಿದ್ದೆ ಅಂತ ಕಾಣುತ್ತೆ. ಆದರೂ ದೇವಸ್ಥಾನ ನೋಡಿಬರಬಹುದಾಗಿತ್ತು."

ನಾನು ಸಹಿಸಲಾರದೆ “ಇಲ್ಲ ಮಹರಾಯ, ದೇವಸ್ಥಾನಾನ ನೋಡೋದಕ್ಕೆ ಹೋದೆ. ಆದರೆ ದೇವಸ್ಥಾನ ಮಾತ್ರ ನೋಡಲಿಲ್ಲ. ಜ್ಞಾಪಿಸಿಕೊಂಡರೆ ಈಗಲೂ ಹೊಟ್ಟೆ ಉರಿಯುತ್ತೆ" ಎಂದೆ.

ಗುಂಡನ ಮುಖದಲ್ಲಿ ಚೇಷ್ಟೆಯ ನಗೆ ತೋರಿತು. ಹಿ೦ದಲ ಅನುಭವ ಜ್ಞಾಪಕಕ್ಕೆ ಬಂದು ಹೊಟ್ಟೆ ಉರಿಯುತ್ತಿದ್ದುದರಿಂದ, ಅವನನ್ನು ತಿಂದುಬಿಡಬೇಕೆಂದು ನನಗೆ ಅನ್ನಿಸುತ್ತಿತ್ತು. ಗುಂಡುವು ನನ್ನ ಹೆಗಲಿನಮೇಲೆ ಕಯ್ಯಿಟ್ಟು,

“ಏನೋ ಅದು ನಿನ್ನ ಒಗಟು ನನಗೆ ಗೊತ್ತಾಗೋದೆ ಇಲ್ಲವಲ್ಲ. ಸ್ವಲ್ಪ ಸ್ಪಷ್ಟವಾಗಿ ಹೇಳು. ನನ್ನ ಮೇಲೆ ಯಾಕೆ ಉರಿದುಬೀಳುತ್ತೀಯೆ?" ಎಂದ.

ನಾನು ಹೇಳಿದೆ. “ನೋಡು ಈಗ ೧೦ ವರ್ಷದ ಮಾತು. ಆಗ ನಾನು ಸ್ಕೌಟ್ ಆಗಿದ್ದೆ. ನಮ್ಮ ಗ್ರೂಪಿನಲ್ಲಿ ನಾನು, ಮತ್ತೊಬ್ಬ ನಮ್ಮ ತರಗತಿಯ ವಿದ್ಯಾರ್ಥಿ ಇಬ್ಬರೇ ಬ್ರಾಹ್ಮಣರಿದ್ದುದು. ಉಳಿದವರೆಲ್ಲಾ ೧೮ ಜನ ಬ್ರಾಹ್ಮಣೇತರರು. ನಮ್ಮ ಮೇಷ್ಟ್ರೂ, ಬ್ರಾಹ್ಮಣ. ಆದರೆ ಕಾಸ್ಮೊಪಾಲಿಟನ್ ಅನ್ತಾರಲ್ಲ ಹಾಗೆ. ನನಗೆ ಆಗ ವಯಸ್ಸು ೧೭ ಆಗಿತ್ತು. ಪುರೋಹಿತರ ಮಗ, ಹೋಟಲಿನ ಕಡೆ ತಲೆ ತಿರುಗಿಸಿ ಕೂಡ ಮಲಗಿದವನಲ್ಲ. ಆದರೆ ಹಳೇಬೀಡನ್ನು ನೋಡಬೇಕೆಂಬ ಆಸೆ ಅಡಗಿಸಲಸಾಧ್ಯವಾಗಿದ್ದಿತು. ಒಂದು ಶನಿವಾರ ಮಧ್ಯಾಹ್ನ ನಾವು ೨೦ ಜನರೂ ಸ್ಕೌಟು ಮಾಸ್ಟರೊಂದಿಗೆ ಹಳೇಬೀಡಿಗೆ ನಡೆದುಕೊಂಡೇ ಹೊರಟುಬಿಟ್ಟೆವು. ರಾತ್ರಿ ೮ ಗಂಟೆಗೆ ಹಗರೆಗೆ ಹೋದೆವು. ಅಲ್ಲಿ ನಾವು ತೆಗೆದುಕೊಂಡುಹೋಗಿದ್ದ ತಿಂಡಿಯನ್ನು ತಿಂದುದಾಯಿತು. ಕ್ಯಾಂಪ್ ಫೈರ್‌ (Camp fire) ಆಯಿತು. ಅದರ ಸುತ್ತ ಪ್ರತಿಯೊಬ್ಬ ಸ್ಕೌಟೂ ಮನಬಂದಂತೆ ಕಿರಚಿದ; ಹಾಡಿದ. ಮುಸಾಫರ್‌ಖಾನೆಯೊಳಕ್ಕೆ ಹೋಗಿ ಮಲಗಿಕೊಂಡೆವು. ಆದರೆ ಅಲ್ಲಿಯ ಸೊಳ್ಳೆಗಳೊ ದೇವರೇ ಗತಿ. ರಾತ್ರಿಯೆಲ್ಲ ವೀಣೆ ಮತ್ತು ಪಿಟೀಲು, ಕೆಲವು ವೇಳೆ ತಂಬೂರಿ. ನನಗಂತೂ ಕಣ್ಣು ಮುಚ್ಚುವುದಕ್ಕೆ ಆಗಲಿಲ್ಲ. ಉಳಿದವರೆಲ್ಲಾ ಗೊರಕೆ ಹೊಡೆಯುತ್ತಿದ್ದರು. ಇರುಳಿನ ಮೌನದಲ್ಲಿ ಅವರ ಗೊರಕೆಯು ಬಹಳ ಸ್ಪಷ್ಟವಾಗಿಯೂ ಕೆಲವುವೇಳೆ ಗಂಭೀರವಾಗಿ ತೋರುತ್ತಿದ್ದಿತು. ಆ ಗೊರಕೆಯಲ್ಲಿಯೂ ಒಂದು ಕ್ರಮವಿದ್ದಂತೆ ತೋರಿತು. ಪ್ರಶ್ನೆ, ಉತ್ತರ, ಪ್ರಶ್ನೆ ಉತ್ತರ; ಗೊರಕೆಗಳು ಈ ರೀತಿ ನಡೆಯುತ್ತಿದ್ದುವು. ಅವರ ನಿದ್ರೆಯನ್ನು ನೋಡಿ ನನಗೆ ಹೊಟ್ಟೆಯುರಿಯಿತು. ಬ್ರಾಹ್ಮಣರನ್ನು ಕಂಡರೆ ಸೊಳ್ಳೆಗಳಿಗೂ ದ್ವೇಷ. ಬ್ರಾಹ್ಮಣೇತರರನ್ನು ಅವುಗಳೂ ಮುಟ್ಟುವುದಿಲ್ಲವೇನೋ! ಎಂದುಕೊಂಡೆ. ಬೆಳಗಾಯಿತು. ನಡೆದುಕೊಂಡೇ ಹಳೇಬೀಡನ್ನು ಸೇರಿದೆವು. ಆ ವೇಳೆಗೆ ಗಂಟೆ ೧೧ ಆಗಿತ್ತು,

ಸರಿ; ಹಳೇಬೀಡನ್ನು ಮುಟ್ಟಿದ ಕೂಡಲೆ ಮೊದಲು ಅಡಿಗೆಯ ವಿಚಾರ ಚರ್ಚೆಗೆ ಬಂತು. ನಾನೂ ನನ್ನ ಸ್ನೇಹಿತ ಮತ್ತೊಬ್ಬ ಬ್ರಾಹ್ಮಣನೂ, “ಬ್ರಾಹ್ಮಣೇತರರು" ಬೇರೆ ಅಡಿಗೆಮಾಡಿಕೊಳ್ಳಲಿ ಎಂದೆವು. ಆದರೆ ಬೇರೆ ಅಡಿಗೆಗೆ ಬೇರೆ ಪಾತ್ರೆಗಳು ಬೇಕಲ್ಲ. ನಮ್ಮ ಬಳಿ ಪಾತ್ರೆಗಳಿಗೆ ಗತಿ ಇರಲಿಲ್ಲ. ಕೊನೆಯಲ್ಲಿ ನಮ್ಮ ಜಾತಿಯನ್ನು ಉಳಿಸಿಕೊಳ್ಳುವುದಕ್ಕಾಗಿ, ನಾವೇ ಎಲ್ಲರಿಗೂ ಅಡಿಗೆಮಾಡಲು ಒಪ್ಪಿಕೊಂಡುಬಿಟ್ಟೆವು. ಉಳಿದ ಸ್ಕೌಟುಗಳೆಲ್ಲಾ ಆನಂದದಿಂದ ಕಿರಚುತ್ತಾ ಶಿಳ್ಳು ಹಾಕುತ್ತಾ ಈಜುವುದಕ್ಕೆ ದ್ವಾರಸಮುದ್ರಕ್ಕೆ ಹೊರಟುಹೋದರು. ೨೦ ಜನಕ್ಕೆ ಅಡಿಗೆ ಮಾಡೋದು ಸಾಮಾನ್ಯವೇ? ಹೊಗೆ ಕುಡಿದು ನಮ್ಮಿಬ್ಬರಿಗೂ ಕಣ್ಣು ಕೆಂಪಾಗಿಬಿಟ್ಟಿತು. ಉಳಿದವರೆಲ್ಲಾ ಕೆರೆಯಲ್ಲಿ ಆನಂದದಿಂದ ಈಜಿ ಮೈನೋವನ್ನೆಲ್ಲಾ ಕಳೆದುಕೊಂಡು ಹೊಸ ಹುರುಪಿನಿಂದ ಬಂದರು. ಮೂರು ಗಂಟೆ ಹೊತ್ತಿಗೆ ಅಡಿಗೆ ಆಯಿತು. ನಮ್ಮನ್ನು ಸ್ವಾರ್ಥಪರರೆಂದು ಅವರು ತಿಳಿಯಬಾರದೆಂದು ನಾವೇ ಅವರಿಗೆಲ್ಲಾ ಬಡಿಸಿಬಿಟ್ಟೆವು. ಅಡಿಗೆಮಾಡಿದ ಆಯಾಸದಿಂದ ನನಗೆ ಊಟ ಸೇರಲಿಲ್ಲ. ರಾತ್ರಿ ನಿದ್ರೆ ಇಲ್ಲದುದರಿಂದ ಒಂದು ಮರದ ನೆರಳಿನಲ್ಲಿ ಮಲಗಿಬಿಟ್ಟೆ. ಚೆನ್ನಾಗಿ ನಿದ್ರೆ ಬಂದಿತು.

ನಾಲ್ಕು ಗಂಟೆಗೆ ಸ್ಕೌಟುಗಳೆಲ್ಲಾ ದೇವಸ್ಥಾನಕ್ಕೆ ಹೋಗಿ ನೋಡಿಕೊಂಡುಬಂದರು. ನಾನು ಮಲಗಿಯೇ ಇದ್ದೆ. ರಾತ್ರಿ ೮ ಗಂಟೆಗೆ ಹೊರಡಲು ನನ್ನನ್ನು ಎಬ್ಬಿಸಿದರು. ಹೊರಟು ಬೆಳಿಗ್ಗೆ ಹಾಸನಕ್ಕೆ ಹಿಂದುರಿಗಿದೆವು. ದೇವಸ್ಥಾನ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಕೂಡ ನೋಡಲಿಲ್ಲ.”

ನಾನು ಇಷ್ಟು ಹೇಳಿ ಸುಮ್ಮನಾದೆ. ಗುಂಡ ಉದ್ದಕ್ಕೂ ಮುಗುಳುನಗೆ ನಗುತ್ತಲೇ ಇದ್ದ. ಕೊನೆಯ ತಡಿಯಲಾರದೆ ಒಂದುಸಲ ಗಟ್ಟಿಯಾಗಿಯೆ ನಕ್ಕುಬಿಟ್ಟ.

ಸ್ವಲ್ಪ ಚರ್ಚೆ ನಡೆದನಂತರ, ಬೇಲೂರಿಗೆ ಹೋಗಿ ಹಾಗೆಯೇ ಹಳೇಬೀಡನ್ನೂ ನೋಡಿಕೊಂಡು ಹಿಂದಿರುಗಬೇಕೆಂದು ನಮ್ಮಲ್ಲಿ ತೀರ್ಮಾನ ವಾಯಿತು. ಆದರೆ ಇದಕ್ಕೆ ಒಂದು ಅಡಚಣೆಯಿದ್ದಿತು. ಈ ವಿಚಾರ ನಮ್ಮವಳಿಗೆ ತಿಳಿದರೆ, ಅವಳು “ನಾನೂ ಬರುತ್ತೇನೆ” ಎಂದುಬಿಡುತ್ತಿದ್ದಳು. ಆ ಮಳೆಗಾಲದಲ್ಲಿ ಅವಳನ್ನು ಕರೆದುಕೊಂಡು ಹೋಗುವುದೆಲ್ಲಿ? ಕೊನೆಗೆ ಮದುವಣಿಗನಾದ ರಾಜು ಒಬ್ಬನಿಗೆ ಮಾತ್ರ ತಿಳಿಸಿ ಹೊರಟು ಹೋಗಬೇಕೆಂದೂ, ಹಿಂದಿರುಗಿದನಂತರ ನನ್ನ ಹೆಂಡತಿಯ ಹುಬ್ಬುಗಂಟನ್ನೂ, ಮುಖದ ಕೋಪವನ್ನೂ ಒರಸಿ ಸಮಾಧಾನಮಾಡಬಹುದೆಂದೂ ತೀರ್ಮಾನವಾಯಿತು.

ಮರುದಿವಸ ಊಟವಾದನಂತರ ನೆಂಟರೆಲ್ಲಾ ಪದ್ಧತಿಯಂತೆ ಇಸ್ಪೀಟ್ ಆಟದಲ್ಲಿ ಕುಳಿತಿದ್ದರು. ನಮ್ಮವಳು ಎದುರಿಗೇ ಹೂವನ್ನು ಕಟ್ಟುತ್ತಾ ಕುಳಿತಿದ್ದಳು. ನಾವು ಮರುದಿವಸವೇ ಹಿಂದಿರುಗುವವರಾದುದರಿಂದ ಯಾವ ಸಾಮಾನನ್ನೂ ತೆಗೆದುಕೊಂಡು ಹೋಗುವವರಾಗಿರಲಿಲ್ಲ. ಆದರೆ ರಾತ್ರಿ ಮಲಗುವುದಕ್ಕೆ ಮಾತ್ರ ಒಂದು ಕಂಬಳಿ ಬೇಕಾಗಿದ್ದಿತು. ನನ್ನ ಹತ್ತಿರ ಒಂದು ಕರಿಯ ಕಂಬಳಿ ಇದೆ. ಅದು ನನ್ನೊಂದಿಗೆ ಮದರಾಸು, ಬೊಂಬಾಯಿ, ಅಹಮದಾಬಾದ್, ಬೆಳಗಾಂ ಮುಂತಾದ ಕಡೆಗಳನ್ನೆಲ್ಲಾ ತಿರುಗಿದೆ. ಗುಂಡನು ಅದಕ್ಕೆ ರೊಮಾಂಟಿಕ್ ಕಂಬಳಿ ಎಂದು ಹೆಸರಿಟ್ಟಿದ್ದಾನೆ. ನಾನು ಎಲ್ಲಿ ಪ್ರಯಾಣ ಹೊರಟರೂ ಕಂಬಳಿಯು ಹೊರಕ್ಕೆ ಬಂದೇ ಬರುತ್ತದೆ. ಅದರಲ್ಲೂ ಈಗ ಮಳೆಗಾಲ ಕೇಳಬೇಕೆ? ಕಂಬಳಿಯನ್ನು ತೆಗೆದು ಮಡಿಸಿ ಇಟ್ಟಿ. ನನ್ನ ಹೆಂಡತಿಯು “ಕಂಬಳಿಯನ್ನು ಯಾಕೆ ಮಡಿಸುತ್ತಿದ್ದೀರಿ?” ಎಂದಳು. ನಾನು ಅಪರಾಧಿಯಂತೆ "ಏನೋ ಮಡಿಸಿದೆ" ಎಂದೆ. ಹೆಂಗಸರಿಗೆ ಬುದ್ದಿ ಏನು ಚುರುಕೋ ದೇವರೇ ಬಲ್ಲ. ಆ ಪುಣ್ಯಾತಿ ಆ ಸ್ಥಳ ಬಿಟ್ಟು ಏಳಲೇ ಇಲ್ಲ. ಹೂವು ಕಟ್ಟುವುದು ಮುಗಿಯಲೇ ಇಲ್ಲ. ಗುಂಡ ೨-೩ ಸಲ ಒಳಕ್ಕೆ ಬಂದು ನೋಡಿ ಹೋದ. ಬಸ್ಸಿಗೆ ಹೊತ್ತಾಗುತ್ತಾ ಬಂತು. ನಾನು ಅಶಾಂತಿಯಿಂದ ಆ ಕಡೆ ಈ ಕಡೆ ಹೊರಳಾಡಿದೆ. ನನ್ನ ಹೆಂಡತಿಯು ನನ್ನನ್ನು ನೋಡಿ ೨-೩ ಸಲ ನಕ್ಕಳು. ಇನ್ನು ಶರಣಾಗತನಾಗುವುದರ ಹೊರತು ಬೇರೆ ಉಪಾಯ ತೋರಲಿಲ್ಲ. ಹೆಂಡತಿಯನ್ನು ಒಳಕ್ಕೆ ಕರೆದೆ. ಹೊರಟಿರುವ ವಿಷಯವನ್ನು ಒಪ್ಪಿಕೊಂಡೆ. ಬಸ್ಸಿಗೆ ಹೊತ್ತಾಗುತ್ತಿರುವುದನ್ನು ನೋಡಿ ಅವಳು ಅಡ್ಡ ಬರಲಿಲ್ಲ. ಒಳಗೆ ಹೋಗಿ ಮದುವೆಯ ತಿಂಡಿಯನ್ನೂ ಸ್ವಲ್ಪ ಹುಳಿಯನ್ನವನ್ನೂ ಕೇಳಿ ತಂದಳು. ಸರಿ ಅಪರಾಧಿಗೆ ಒಳ್ಳೆಯ ಶಿಕ್ಷೆಯನ್ನೇ ವಿಧಿಸಿದಂತಾಯಿತೆಂದುಕೊಂಡೆ. ಹೊರಡುವಾಗ “ಈಗ ಹೋಗಿ ಬನ್ನಿ. ಬಂದ ಮೇಲೆ ಇದೆ ನಿಮಗೆ ಹುಟ್ಟಿದ ದಿವಸ” ಎಂದಳು. ಅವಳ ಕೈಲಿ, ಹುಟ್ಟಿದ ದಿವಸ"ವನ್ನು ನಾನು ಅನೇಕ ಸಾರಿ ಕಂಡಿದ್ದುದರಿಂದ ನನಗೆ ಗಾಬರಿಯಾಗಲಿಲ್ಲ.

ನಾವು ಹಾಸನದಲ್ಲಿ ಬಸ್ಸಿನಲ್ಲಿ ಕುಳಿತು ಬೇಲೂರಿಗೆ ಹೊರಟೆವು. ಕುಳಿರ್ಗಾಳಿಯು ಬೀಸುತ್ತಿದ್ದುದರಿಂದ ಇಬ್ಬರಿಗೂ ಸೇರಿ ಒಂದೇ ಕಂಬಳಿ ಯನ್ನು ಸುತ್ತಿಕೊಂಡೆವು. ನಾವು ದಾರಿಯಲ್ಲಿ ಕಂಡ ದೃಶ್ಯಗಳ ಸೊಬಗನ್ನು ನನ್ನ ಈ ಬಡ ಲೇಖನಿಯು ವರ್ಣಿಸಬಲ್ಲದೆ? ಮಲನಾಡೆಂಬ ಒಂದೇ ಪದದಲ್ಲಿ ಪ್ರಕೃತಿಯ ಸಮಸ್ತ ಸೌಂದಯ್ಯವೂ ಅಡಕವಾಗಿದೆ ಎಂಬುದನ್ನು ನೀವು ತಿಳಿಯಬೇಕು. ನಾವು ಹೋಗುತ್ತಿದ್ದ ರಸ್ತೆಯ ಉದ್ದಕ್ಕೂ ಹಸುರಾದ ಮರಗಳು ಸಾಲಿಟ್ಟಿದ್ದುವು. ಭೂದೇವಿಯ ಕಾಂತಿಯು ಹೊರಕ್ಕೆ ಚೆಲ್ಲಿ ತೋರುವಂತೆ ನೋಡಿದೆಡೆಯೆಲ್ಲಾ ಇಳೆಯು ಹಸುರಾಗಿದ್ದಿತು. ನೀರು ತುಂಬಿದ ಚಿಕ್ಕ ಕೊಳಗಳು ಮುತ್ತಿನ ಮಣಿಗಳಂತೆ ತೋರುತ್ತಿದ್ದುವು. ಅಲ್ಲಲ್ಲಿ ಚಿಕ್ಕ ದೊಡ್ಡ ಬೆಟ್ಟಗುಡ್ಡಗಳು ಎದ್ದು ಕಾಣುತ್ತಿದ್ದುವು. ಮಳೆಯ ನೀರು ಅವುಗಳ ಮೇಲಿನಿಂದ ಕೆಳಕ್ಕೆ ಉರುಳಿ, ಕಲ್ಲುಗಳೊಡನೆ ಆಟವಾಡುತ್ತಾ ಜುಳು ಜುಳು ರವದಿಂದ ಹರಿಯುತ್ತಿದ್ದಿತು. ನಾವು ಹೊರಟ ದಿವಸ ಮಳೆ ಇರಲಿಲ್ಲ. ಸೂರ್ಯನು ಚೆನ್ನಾಗಿಯೇ ಪ್ರಕಾಶಿಸುತ್ತಿದ್ದನು. ಅವನ ಕಿರಣಗಳು ಬೆಟ್ಟದ ತುದಿಯನ್ನು ಮುತ್ತಿಡುತ್ತಿದ್ದುವು, ಮರದ ಎಲೆಗಳೊಡನೆ ಮಾತನಾಡುತ್ತಿದ್ದುವು. ತುಂಬಿದ ಕೊಳದ ಅಲೆಗಳೊಂದಿಗೆ ಕುಣಿದಾಡುತ್ತಿದ್ದುವು. ಮೊದಲ ದಿವಸ ಮಳೆಯ ಮೋಡದ ದೆಸೆಯಿಂದ ಸೂರ್‍ಯನು ಕಣ್ಣಿಗೇ ಕಂಡಿರಲಿಲ್ಲ. ಈ ದಿವಸ ಬಿಸಿಲು ಸುಖವಾಗಿ ಭೂಮಿಯ ಮೇಲೆ ಒರಗಿದುದನ್ನು ಕಂಡು ಹಕ್ಕಿಗಳು ಆನಂದದಿಂದ ಗಾನಮಾಡುತ್ತಿದ್ದುವು.

ಸಂಧ್ಯಾಕಾಲ ೪ ಗಂಟೆಗೆ ಬೇಲೂರನ್ನು ತಲಪಿದೆವು. ದೇವಸ್ಥಾನವು ಎದುರಿಗೇ ಕಾಣುತ್ತಿದ್ದಿತು. ಹೆಸರನ್ನು ಕೇಳಿದೊಡನೆಯೇ ಮೈ ಪುಳಕಿತವಾಗುವಾಗ, ಎದುರಿಗೆ ಇದ್ದರೆ ಕೇಳಬೇಕೆ, ನಾವು ಆತುರದಿಂದ ದೇವಾಲಯದ ಪ್ರಾಕಾರದೊಳಕ್ಕೆ ನುಗ್ಗಿದೆವು. ಆ ಕಲೆಯ ದಿವ್ಯ ರಾಶಿಯನ್ನು ನೋಡಿ ಮುಗ್ಧರಾದೆವು, ಮಂಕರಾದೆವು, ಮೂಕರಾದೆವು. ಯಾವ ಕಡೆ ಮೊದಲು ನೋಡಬೇಕು, ಯಾವ ಕಡೆ ಆಮೇಲೆ ನೋಡಬೇಕೆಂಬುದೇ ನಮಗೆ ತಿಳಿಯಲಿಲ್ಲ-ಬಗೆ ಬಗೆಯ ತಿಂಡಿಗಳು ಎದುರಿಗೆ ಇರುವಾಗ ಯಾವುದನ್ನು ಮೊದಲು ತಿನ್ನಬೇಕೆಂದು ತಿಳಿಯದಿರುವ ಹುಡುಗನಂತೆ. ಅಂತೂ ದೇವಸ್ಥಾನವನ್ನು ಮೊದಲು ಒಂದು ಸುತ್ತು ತಿರುಗಿದೆವು. ಅದರಿಂದ ತೃಪ್ತರಾಗದೆ ಎರಡನೆಯ ಸಲ ಮತ್ತೆ ಯಾತ್ರೆಯನ್ನು ಪ್ರಾರಂಭಿಸಿದೆವು. ದೇವಸ್ಥಾನದ ಎರಡು ಕಡೆಯೂ ಸುಂದರವಾಗಿ ಚಿತ್ರಿತವಾದ. ಹೊಯ್ಸಳ ವಿಗ್ರಹಗಳು; ಒಳಗಡೆ ನವರಂಗ, ಅದರ ಸುತ್ತಲೂ ಗದ್ದುಗೆ; ಒಂದೇ ಸಮನಾಗಿ ತೋರಿದರೂ ಬೇರೆ ಬೇರೆಯಾದ ಕಲೆಯ ಬೆಡಗನ್ನುಳ್ಳ ಚಿತ್ರದ ಕಂಬಗಳು, ಕಡೆದ ಕಂಬಗಳಂತೆ ಬಗೆ ಬಗೆಯ ದುಂಡುಗಳಿಂದಲೇ ಅವು ನಿರ್ಮಿತವಾಗಿವೆ; ಸುಂದರವಾದ ಕೆತ್ತನೆಯ ಕೆಲಸದ ನೃಸಿಂಹ ಸ್ತಂಭ; ಅದರಲ್ಲಿರುವ ತ್ರಿಮೂರ್ತಿಗಳ ನಾನಾ ಅವತಾರದ ಚಿತ್ರಗಳು. ಬಳಿಯಲ್ಲಿರುವ ಗರುಡ ವಿನತೆಯರ ಕಂಭ, ನವರಂಗದ ಹೊರಭಾಗದಲ್ಲಿ ಅಡಿಪಾಯದಿಂದ ೫ ಅಡಿಯವರೆಗೆ ಕೆತ್ತಿ ಮಾಡಿರುವ ಬಗೆ ಬಗೆಯ ವಿಗ್ರಹಗಳು. ಆನೆ, ಕುದುರೆ, ರಥ, ಲತೆ ಮತ್ತು ಮಣಿ ತೋರಣಗಳು; ಸುಂದರಿಯೊಬ್ಬಳು ಮನವೊಪ್ಪುವಂತೆ ಅಲಂಕಾರಮಾಡಿಕೊಂಡು ಬಳಿಯಲ್ಲಿರುವ ಕನ್ನಡಿಯಲ್ಲಿ ತನ್ನ ಮುಂಗುರುಳನ್ನೂ ಚೆಂದುಟಿಯನ್ನೂ ಹೊಳೆಯುವ ಕಣ್ಣುಗಳನ್ನೂ ನೋಡುತ್ತಿರುವಳು. ನರ್ತನದಲ್ಲಿ ಮನಸ್ಸು ಲೀನವಾದ ಬೇಡಿತಿಯ ಉಡುಪಿನ ಸೆರಗನ್ನು ಕಪಿಯೊಂದು ಹಿಡಿದು ಎಳೆಯುತ್ತಿರುವುದು. ಯೌವನ ಸ್ತ್ರೀಯೊಬ್ಬಳು ಚಿಗುರಿಗೆ ಸಮಾನವಾದ ತನ್ನ ಕರಗಳಲ್ಲಿ ತಾಂಬೂಲವನ್ನು ಹಿಡಿದು, ಮತ್ತೊಂದು ನಳಿತೋಳಿನ ಮೇಲೆ ಗಿಳಿಯನ್ನು ಕುಳ್ಳಿರಿಸಿಕೊಂಡು ಆಡಿಸುತ್ತಿರುವಳು. ಲಲನೆಯೊಬ್ಬಳು ತಾಳವನ್ನು ಹಾಕುತ್ತಿರುವಳು. ಚೆಲುವೆಯೊಬ್ಬಳು ಮೃದಂಗವನ್ನು ಬಾರಿಸುತ್ತಿರುವಳು. ಒಬ್ಬ ಲಲನಾಮಣಿಯು ಠೀವಿಯಿಂದ ಬಾಣವನ್ನು ಪ್ರಯೋಗಿಸುವ ಸಾಹಸದಲ್ಲಿ ತೊಡಗಿರುವಳು. ಕಲಾಕೋವಿದೆಯೊಬ್ಬಳು ವೇಣುವಾದನ ಮಾಡುತ್ತಿರುವಳು. ಒಬ್ಬ ಸರಸಿಯು ಪ್ರಿಯನಲ್ಲಿ ಪ್ರಣಯ ಕೋಪವನ್ನು ನಟಿಸುತ್ತಿರುವಳು.

ನಮಗಂತೂ ಆ ವನಿತೆಯರ ಗಾನವು ಕೇಳುತ್ತಿದೆಯೋ ಎಂದು ಭಾಸವಾಯಿತು. ಅವರೆದುರಿಗೆ ನಿಂತಾಗ ಅವರು ನಮ್ಮನ್ನು ನೋಡಿ ನಗುವಂತೆ ತೋರಿತು.

“ಶ್ರುತಗಾನದಭಿರಾಮಮಾದೊಡಮಶ್ರುತಗಾನಮಭಿರಾಮತರಂ” ಎಂಬುದು ನಮಗೆ ಅನುಭವವಾಯಿತು. ದೇವಸ್ಥಾನದ ಯಾವ ಭಾಗವೂ ಮನುಷ್ಯ ನಿರ್ಮಿತವಾಗಿದ್ದುದರಂತೆ ತೋರಲಿಲ್ಲ. ಅದು ದೇವಲೋಕದಲ್ಲಿ ರತಿಯ ಎದುರಿಗೆ ಅವಳ ಊಹೆಯಿಂದ ನಿರ್ಮಿತವಾಗಿ ಇಲ್ಲಿಗೆ ತರಲ್ಪಟ್ಟು ಇಡಲ್ಪಟ್ಟ ಕಲೆಯ ನೆಲೆಯಂತೆ ತೋರಿತು. ನಾನು "ಜಕಣಾಚಾರಿ, ಇದು ನೀರವವಾದ ಧ್ವನಿಯಿಂದ ನಿನ್ನ ಮಹಿಮೆಯನ್ನು ಹೊಗಳುತ್ತಿದೆ" ಎಂದು ಪ್ರಾರಂಭಿಸಿದೆ.

ಗುಂಡನು “ನಿನ್ನ ವಾಚಾಳತನವನ್ನು ಇಲ್ಲಿ ಬಿಚ್ಚಬೇಡ" ಎಂದು ಗದರಿಸಿದ. ನಾನು ಮಾತನಾಡದೆ ಸುಮ್ಮನಾದೆ.

ದೇವಾಲಯದ ಒಳಗಿನ ಕಂಬದಲ್ಲಿ ಒಂದು ಸ್ತ್ರೀ ವಿಗ್ರಹವಿದೆ. ಅದರ ಮುಖವಂತೂ ಲಾವಣ್ಯದಿಂದ ಉಕ್ಕುತ್ತಿದೆ. ಇದಕ್ಕೂ ಜೀವವಿದೆಯೋ ಎಂದು ನಮಗೆ ಭ್ರಾಂತಿ ಬಂದಿತು. ವಿಗ್ರಹವಂತೂ ಲಜ್ಜೆಯೇ ಮೂರ್ತಿಮತ್ತಾಗಿ ನಿಂತಿದೆ. ಯಾರು ಏನು ತಿಳಿದುಕೊಳ್ಳುತ್ತಾರೆಯೋ ಎಂಬುದಾಗಿ ನಾವು ಸುತ್ತಲೂ ೨-೩ ಸಲ ನೋಡಿ ಅದರ ಕೆನ್ನೆಗಳನ್ನು ಒಂದು ಸಲ ಮುಟ್ಟಿದೆವು. ನಮ್ಮ ಸ್ಪರ್ಶದಿಂದ ಅದು ನಾಚಿಕೆಗೊಂಡಂತೆ ತೋರಿತು. ಗುಂಡನು "ಎಲ್ಲರೂ ಹೀಗೆಯೇ ಮುಟ್ಟುತ್ತಿದ್ದರೆ ಈ ವಿಗ್ರಹದ ಕೆನ್ನೆಯು ಬೇಗ ಗುಂಡಿಬಿದ್ದು ಹೋಗುತ್ತದೆ" ಎಂದ.

ಅನಂತರ ಮಂಗಳಾರತಿ ಆಯಿತು. ಗುಂಡನು "ಮೂಲದೇವರು ದೊಡ್ಡದಾಗಿ ಗಂಭೀರವಾಗಿದೆ. ಪರವಾಯಿಲ್ಲ. ಮುಖದಲ್ಲಿ ಒಂದು ವಿಧವಾದ ಗತ್ತು ಇದೆ. ಈ ವೈಭವ, ಈ ದೇವಸ್ಥಾನ, ಈ ಕಲೆ ಇವೆಲ್ಲವೂ ನನ್ನ ಹಕ್ಕು ಎಂದು ಅದು ಹೇಳುತ್ತಿರುವಂತೆ ತೋರುತ್ತದೆ" ಎಂದ. ಮಂಗಳಾರತಿಯಾಗಿ ನಾವು ದೇವಾಲಯದಿಂದ ಹೊರಕ್ಕೆ ಬರುವ ವೇಳೆಗೆ ೭-೩೦ ಗಂಟೆ ಆಗಿದ್ದಿತು. ಆಗತಾನೆ ಚಂದ್ರನು ಹೊರಕ್ಕೆ ಬರುತ್ತಿದ್ದನು. ಬೆಳದಿಂಗಳಲ್ಲಿ ಆ ದೇವಾಲಯದ ಒಂದು ನೋಟವನ್ನು ಅನುಭವಿಸಬೇಕೆಂದು ನಾವು ಚೆನ್ನಿಗರಾಯನ ದೇವಾಲಯದ ಎದುರಿಗೆ ಕುಳಿತುಕೊಂಡೆವು. ಹಿಂದಲ ವೈಭವ, ಅಂದಿನ ರಾಜರು, ಆಗಿನ ಕಲೆಯ ಪರಾಕಾಷ್ಠೆ, ಇಂದಿನ ಕಲಾರಹಿತ ಜೀವನದ ನಿಸ್ಸಾರತೆ- ಇವುಗಳ ಹಗಲು ಕನಸುಗಳನ್ನು ಒಂದೊಂದಾಗಿ ಕಂಡೆವು. ಗತವೈಭವವನ್ನು ನೆನೆದು ನಿಟ್ಟುಸಿರುಬಿಟ್ಟೆವು.

ರಾತ್ರಿ ಹತ್ತೂವರೆ ಗಂಟೆಯಾಯಿತು. ನಮ್ಮ ಗಂಟಿನಲ್ಲಿದ್ದ ಹುಳಿಯನ್ನವನ್ನೂ ತಿಂಡಿಯನ್ನೂ ಬಲಿಹಾಕಿಬಿಟ್ಟೆವು. ಅನಂತರ ಮಲಗಿಕೊಳ್ಳುವುದೆಲ್ಲಿ? ಎಂಬ ಯೋಚನೆಗೆ ಪ್ರಾರಂಭವಾಯಿತು. ನಮಗೆ ಯಾರೋ ಗುರುತಿನವರೊಬ್ಬರು ಅಲ್ಲಿ ಶಾಲೆಯ ಉಪಾಧ್ಯಾಯರಾಗಿದ್ದರು. ಅವರ ಮನೆಯನ್ನು ಬಹಳ ಶ್ರಮಪಟ್ಟು ಕಂಡುಹಿಡಿದೆವು. ಗುಂಡನು "ಈ ಅವೇಳೆಯಲ್ಲಿ ಪಾಪ ಮಲಗಿರುವವರನ್ನು ಯಾಕೆ ಎಬ್ಬಿಸಬೇಕು. ಹೇಗೂ ರೊಮಾಂಟಿಕ್ ಕಂಬಳಿ ಇದೆಯಲ್ಲ. ಛತ್ರದಲ್ಲಿ ಹೋಗಿ ಮಲಗಿರೋಣ ಬಾ” ಎಂದನು. ಛತ್ರದಲ್ಲಿ ಚಳಿಯಲ್ಲಿ ನಡುಗುವುದು ನನಗೆ ಇಷ್ಟವಿರಲಿಲ್ಲ. ನಾನು "ಉಪಾಧ್ಯಾಯ ಇನ್ನೂ ಹುಡುಗ. ಇಷ್ಟು ಬೇಗ ಮಲಗಿರೋದಿಲ್ಲ. ಮಲಗಿದ್ದರೆ ಎಬ್ಬಿಸೋಣ. ನಾವೇನು ನಿತ್ಯ ಬರುತ್ತೇವೆಯೆ ಬಾ?” ಎಂದೆ.

"ನಿತ್ಯ ಬರದ ಮಾತ್ರಕ್ಕೆ ಮಲಗಿರುವವರನ್ನು ಅವೇಳೆಯಲ್ಲಿ ಎಬ್ಬಿಸಲು ನಿನಗೆ ಯಾರು ಅಧಿಕಾರವನ್ನು ಕೊಟ್ಟಿದ್ದಾರೆ" ಎಂದ ಗುಂಡ. ನಾನು ಅವನ ಮಾತಿಗೆ ಲಕ್ಷ್ಯವನ್ನು ಕೊಡಲಿಲ್ಲ. ಗುಂಡನು "ನೀನು ಮಹಾ ವರಟ" ಎಂದ. ಅದಕ್ಕೂ ಸುಮ್ಮನಿದ್ದುಬಿಟ್ಟೆ,

ಉಪಾಧ್ಯಾಯನ ಮನೆ ಬಾಗಲಿಗೆ ಒಳಗಿನಿಂದ ಅಗಣಿ ಹಾಕಿತ್ತು. ಕೂಗಿ ಕೂಗಿ ನಮಗೆ ಗಂಟಲು ಸೋತುಹೋಯಿತು. ನೆರೆಹೊರೆಯ ಮನೆಯವರಿಗೆಲ್ಲಾ ಎಚ್ಚರವಾಗಿಬಿಟ್ಟಿತು. ಆದರೆ ಪುಣ್ಯಾತ್ಮ ನಮ್ಮ ಮೇಷ್ಟು ಮಾತ್ರ ಹೊರಕ್ಕೆ ತಲೆಹಾಕಲಿಲ್ಲ. ನಮಗೂ ಬೇಜಾರಾಗಿ ಯಾವುದಾದರೂ ಒಂದು ಛತ್ರಕ್ಕೆ ಹೋಗೋಣವೆಂದು ಯೋಚಿಸುತ್ತಿರುವಷ್ಟರಲ್ಲಿ, ಒಳಗಡೆ ಹೆಜ್ಜೆಯ ಸದ್ದಾಯಿತು. ಮೇಷ್ಟು ಕಣ್ಣು ತಿಕ್ಕುತ್ತಾ ಬಾಗಲು ತೆರೆದ. ಒಳಗೆ ಹೋಗಿ ಮಲಗಿಕೊಂಡೆವು.

ಬೆಳಿಗ್ಗೆ ಆರೂವರೆ ಗಂಟೆಗೆ ಬಸ್ಸು ಹಳೇಬೀಡಿಗೆ ಹೊರಡುವುದರಲ್ಲಿದ್ದಿತು. ಆ ಮಹಾರಾಯ್ತಿ ಮೇಷ್ಟ್ರು ಹೆಂಡತಿ ಅಷ್ಟು ಹೊತ್ತಿಗೇ ನಮಗೆ ಕಾಫಿ ಉಪ್ಪಿಟ್ಟು ಮಾಡಿಕೊಟ್ಟರು. ಮೇಷ್ಟು, ಇನ್ನೂ ಮಲಗಿಯೇ ಇದ್ದ. ನಾವು ಬಸ್ಸಿನಲ್ಲಿ ೭ ಗಂಟೆಗೆ ಹಳೇಬೀಡನ್ನು ಮುಟ್ಟಿದೆವು.

ಹಳೇಬೀಡಿಗೆ ಹೋದೊಡನೆಯೇ ನನಗೆ ಹಿಂದೆ ನಡೆದುದೆಲ್ಲಾ ಜ್ಞಾಪಕಬಂದಿತು. ಗುಂಡನು "ನಿನಗೇನು? ದೇವಸ್ಥಾನದಲ್ಲಿ ನೀನು ನೋಡಬೇಕಾದದ್ದೇನೂ ಇಲ್ಲ. ಆಗಲೇ ಒಂದುಸಲ ಪೂರ್ಣವಾಗಿ ಎಲ್ಲಾ ನೋಡಿಬಿಟ್ಟಿದ್ದೀಯೆ? ಎಂದ.

ನಾನು "ನನ್ನನ್ನು ಕೆಣಕಬೇಡ. ಅದರ ಫಲಕ್ಕೆ ಆಮೇಲೆ ನೀನೆ ಜವಾಬ್ದಾರನಾಗಬೇಕಾಗುತ್ತೆ” ಎಂದೆ.

ಇಬ್ಬರೂ ಮತ್ತೇನೂ ಮಾತನಾಡದೆ ದೇವಸ್ಥಾನದ ಕಡೆಗೆ ಹೊರಟೆವು, ಬೇಲೂರು ದೇವಾಲಯದ ಕಲೆಗಿಂತ ಹಳೇಬೀಡು ದೇವಾಲಯದ ಕಲೆಯು ಉತ್ತಮವಾದುದು; ಹೆಚ್ಚು ಸುಸಂಸ್ಕೃತವಾದುದು. ಗಂಭೀರವಾದುದು ಮತ್ತು ಆಳವಾದುದು. ಗುಂಡನು

“ನಾವು ಮೊದಲು ಬೇಲೂರನ್ನು ನೋಡಿದುದೇ ಚೆನ್ನಾಯಿತು. ಇಲ್ಲದಿದ್ದರೆ, ಇದನ್ನು ನೋಡಿದಮೇಲೆ ಇದರೆದುರಿಗೆ ಅದು ಬಹಳ ಅಲ್ಪವಾಗಿ ತೋರುತ್ತಿದ್ದಿತು” ಎಂದ.

ಈ ಚಿತ್ರದಲ್ಲಿ ಹಳೆಬೀಡಿನ ದೇವಾಲಯವನ್ನೆಲ್ಲಾ ವರ್ಣಿಸುವುದು ನನ್ನ ಉದ್ದೇಶವಲ್ಲ. ಕಲೆಯ ನೆಲೆಯಾದ ಆ ದೇವಾಲಯದಲ್ಲಿ ಪೂಜೆಯಿಲ್ಲ; ಗಂಟೆಯಿಲ್ಲ; ಗದ್ದಲವಿಲ್ಲ. ದೇವಾಲಯವು ವಿಧವೆಯ ಹಾಗೆ ಅಳುತ್ತಿರುವಂತೆ ತೋರಿತು. ಆ ಸೌಂದರ್ಯ ರಾಶಿಯೆಲ್ಲವೂ ವ್ಯರ್ಥ. ಹೇಳುವವರಿಲ್ಲ; ಕೇಳುವವರಿಲ್ಲ; ಬೇಕೆನ್ನುವವರಿಲ್ಲ; ಆದರಿಸುವವರಿಲ್ಲ. ಆ ಸೌಂದರ್ಯವನ್ನು ನೋಡಿದುದರಿಂದ ಉಂಟಾದ ಆನಂದದೊಂದಿಗೆ ಪ್ರತಿಕ್ಷಣದಲ್ಲಿಯೂ ಯಾವುದೊ ಒಂದು ವಿಧವಾದ ಅನಿರ್ವಚನೀಯವಾದ ದುಃಖವು ನಮ್ಮನ್ನು ಪೀಡಿಸುತ್ತಲೇ ಇದ್ದಿತು.

ನಾವು ದೇವಸ್ಥಾನವನ್ನು ಎರಡುಸಲ ಸುತ್ತಿದೆವು. ಆದರೂ ನಮಗೆ ತೃಪ್ತಿ ಆಗಲಿಲ್ಲ. ಹೊರಡುವುದಕ್ಕೆ ಮಾತ್ರ ಹೊತ್ತಾಯಿತು. ಅನಂತರ ಪ್ರಸಿದ್ದವಾದ ಜೈನ ಬಸ್ತಿಯ ಕಡೆಗೆ ಹೋದೆವು. ಅದರ ಬಾಗಲಿಗೆ ಬೀಗ ಹಾಕಿದ್ದಿತು. ಎದುರಿಗೆ ಒಂದು ಮನೆಯ ಮುಂದೆ ಹುಡುಗಿಯೊಬ್ಬಳು ಹಸುವಿನ ಹಾಲನ್ನು ಕರೆಯುತ್ತಿದ್ದಳು. ಅವಳ ಹೆಗಲಿನಮೇಲೆ ತಲೆಯನ್ನಿಟ್ಟು ಕರುವು ಹಸುವಿನ ಕಡೆಗೆ ಹಗ್ಗವನ್ನು ಜಗ್ಗುತ್ತಿತ್ತು. "ಬಸ್ತಿಯ ಬೀಗದಕ್ಕೆ ನಿನ್ನ ಬಳಿ ಇದೆಯೇನಮ್ಮಾ?” ಎಂದು ನಾನು ಆಕೆಯನ್ನು ಕೇಳಿದೆ. ಹುಡುಗಿಯು ಕತ್ತನ್ನು ಒಂದು ಕಡೆಗೆ ಕೊಂಕಿಸಿ "ನನ್ನ ಬಳಿ ಇಲ್ಲ” ಎಂದಳು. ಅವಳ ಮುಖದಲ್ಲಿ ಚೇಷ್ಟೆಯ ನಗೆ ತೋರಿತು. ಧ್ವನಿಯು ವಿನೋದದಿಂದ ಕೂಡಿತ್ತು. ಅವಳ ಬಳಿಯೇ ಬೀಗದಕ್ಕೆ ಇರಬಹುದೆಂದು ನಾವು ಯೋಚಿಸಿ ಅವಳು ಕರುವನ್ನು ಬಿಡುವವರೆಗೆ ಕದದ ಕಿಂಡಿಯಿಂದ ಒಳಗಡೆ ನೋಡುತ್ತಾ ನಿಂತಿದ್ದೆವು. ಅನಂತರ ನಾವು ನೂರಾರು ಮೈಲಿಯಿಂದ ಬಂದವರೆಂದು ಹೇಳಿ ಸ್ವಲ್ಪ ವಿನಯದಿಂದ ಅವಳನ್ನು ಬೇಡಿದುದಾಯಿತು. ಕತ್ತಿನ ನೂಲಿನಲ್ಲಿದ್ದ ಬೀಗದಕೈ ಹೊರಕ್ಕೆ ಬಂತು. ಗೋಮಟೇಶ್ವರನಿಗೆ ನಮ್ಮ ಮನ್ನಣೆಯನ್ನು ಸಲ್ಲಿಸಿ ಕಂಬದಲ್ಲಿ ಮುಖವನ್ನು ನೋಡಿಕೊಂಡು ಹೊರಕ್ಕೆ ಬಂದೆವು.

ಆ ವೇಳೆಗೆ ಗಂಟೆ ಹನ್ನೊಂದಾಯಿತು. ಆದರೆ ಆಕಾಶವು ಮೋಡಗಳಿಂದ ಕವಿದಿದ್ದುದರಿಂದ ನಮಗೆ ಬಿಸಲಿನ ಬೇಗೆಯು ಗೊತ್ತಾಗಲಿಲ್ಲ. ಬೇಲೂರು ಅಲ್ಲಿಂದ ಹತ್ತು ಮೈಲು ದೂರ ಮಾತ್ರ. “ನಡೆದುಕೊಂಡೇ ಹೊರಟುಹೋಗೋಣ, ಬಸ್ಸು ಬರೋದು ಸಾಯಂಕಾಲ; ಅಲ್ಲಿಯವರೆಗೆ ಇಲ್ಲಿ ಯಾತಕ್ಕೆ ನೊಣ ಹೊಡೆಯುತ್ತಿರಬೇಕು" ಎಂದ ಗುಂಡ.

ನಾನು “ಆಗಬಹುದು. ಆದರೆ ತಡಿಯಲಾರದ ಹಸಿವಲ್ಲ ನನಗೆ ಏನು ಮಾಡೋದು” ಎಂದೆ.

ಗುಂಡನು "ಏನು ರಾವಣನ ಹೊಟ್ಟೆಯೋ ನಿನಗೆ, ಹಸಿವು ಹಸಿವು ಅಂತ ಪ್ರಾಣಬಿಡ್ತೀಯ” ಎಂದ.

ನಮ್ಮ ಎದುರಿಗೆ ಒಂದು ಅಂಗಡಿಯಿದ್ದಿತು. “ಅಲ್ಲಿ ಬಾಳೆಯ ಹಣ್ಣನ್ನು ತೆಗೆದುಕೊಳ್ಳೋಣ” ಎಂದೆ. ಗುಂಡನು ಈ ಮಳೆಗಾಲದಲ್ಲಿ ಆ ಬಾಳೆಹಣ್ಣನ್ನು ತಿಂದರೆ ಹೊಟ್ಟೆಯೆಲ್ಲಾ ನಡುಗುವುದಕ್ಕೆ ಪ್ರಾರಂಭವಾಗುತ್ತದೆ. ನನಗೆ ಬೇಡ. ಬೇಕಾದರೆ ನೀನು ತೆಗೆದುಕೊ” ಎಂದ.

ಒಬ್ಬನಿಗೆ ಸಾಕೆಂದು ಒಂದು ಆಣೆಯನ್ನು ಕೊಟ್ಟು ೫ ಬಾಳೆಯ ಹಣ್ಣನ್ನೂ ಸ್ವಲ್ಪ ಬೆಲ್ಲವನ್ನೂ ಕೊಂಡುಕೊಂಡೆ. ಅರ್ಧ ಮೈಲು ಹೋದ ನಂತರ ರಸ್ತೆಯ ಪಾರ್ಶ್ವದ ದಿಣ್ಣೆಯ ಗರಿಕೆಯ ಮೇಲೆ ನನ್ನ ಕಂಬಳಿಯನ್ನು ಹಾಸಿ ಇಬ್ಬರೂ ಕುಳಿತುಕೊಂಡೆವು. ನಾನು ಬಾಳೆಯ ಹಣ್ಣನ್ನು ತಿನ್ನಲು ಪ್ರಾರಂಭಿಸಿದೆ. ಒಂದು ಹಣ್ಣನ್ನು ನಾನು ತಿಂದಕೂಡಲೆ ಗುಂಡನೂ ಒಂದು ಹಣ್ಣನ್ನು ತಿಂದನು. ನಾನು "ಹುಂ ಐದು ಇದ್ದದ್ದು ನಾಲ್ಕೆ ಆಯಿತು" ಎಂದುಕೊಂಡೆ. ತಿನ್ನುವ ಗಾಬರಿಯಲ್ಲಿದ್ದುದರಿಂದ ಆಗಲೇ ಗುಂಡನ ಮೇಲೆ ತಿರುಗಿ ಬೀಳಲು ಅವಕಾಶವಾಗಲಿಲ್ಲ. ಎರಡನೇ ಹಣ್ಣನ್ನು ನಾನು ತಿಂದ ಕೂಡಲೇ ಗುಂಡನೂ ಮತ್ತೊಂದು ಹಣ್ಣನ್ನು ತಿಂದುಬಿಟ್ಟನು. ಅನಂತರ ನನ್ನೊಂದಿಗೆ ಜಗಳವಾಡಿ ಮೂರನೆಯ ಹಣ್ಣಿನಲ್ಲೂ ಸಮವಾಗಿ ಅರ್ಧಪಾಲು ಕಿತ್ತುಕೊಂಡನು. "ಬಾಳೆಯ ಹಣ್ಣೇ ಬೇಡ. ಹೊಟ್ಟೆಯಲ್ಲಿ ನಡುಕ ಹುಟ್ಟುತ್ತೆ” ಎಂದಿದ್ದ ಗೃಹಸ್ಥ ಇವ. ಈ ಕಾಲದಲ್ಲಿ ಜನರು ತಾವು ಹೇಳಿದಂತೆ ಎಲ್ಲಿ ನಡೆಯುತ್ತಾರೆ. ನಾನು "ಅಲ್ಲಯ್ಯ ಪುಣ್ಯಾತ್ಮ ಅಲ್ಲೆ ಹೇಳಿದ್ರೆ ಇನ್ನೊಂದಾಣೆ ಹಣ್ಣು ತೆಗೆದು ಕೊಳ್ಳುತ್ತಿದ್ದೆನಲ್ಲ? ” ಎಂದೆ

ಗುಂಡನು "ನನಗೆ ಬೇಕಿರಲಿಲ್ಲ. ನೀನು ತಿನ್ನುತ್ತಿರುವಾಗ ಸುಮ್ಮನೆ ಹೇಗೆ ಕೂತಿರೋದು ಅಂತ ಒಂದು ಚೂರನ್ನು ತಿಂದೆ" ಎಂದ. ನಾನು “ನೀನು ತಿಂದದ್ದು ಒಂದು ಚೂರೇ ಹೌದು” ಎಂದುಕೊಂಡೆ. -

೧೦ ಮೈಲು ಇದ್ದ ಆ ದಾರಿಯಲ್ಲಿ ನಾವು ಚರ್ಚಿಸಿದ ವಿಷಯಗಳಿಗೆ ಮೇರೆ ಇಲ್ಲ. ಜೀವನ, ಮರಣ, ಕಲೆ, ದೇವರು, ಸಾಹಿತ್ಯ, ಸ್ವಾತಂತ್ರ್ಯ, ಹೊಯ್ಸಳರ ವೈಭವ-ಇವುಗಳ ಮೇಲೆಲ್ಲಾ ಯಥೇಚ್ಛವಾಗಿ ಉಪನ್ಯಾಸವನ್ನು ನಡೆಸಿದೆವು. ದಾರಿ ನಡೆದ ಶ್ರಮವೇ ಗೊತ್ತಾಗಲಿಲ್ಲ. ಎಷ್ಟು ಬೇಗ ೧೦ ಮೈಲು ಮುಗಿದುಹೋಯಿತು ಎನಿಸಿತು. ಬೇಲೂರಿಗೆ ಬರುವ ವೇಳೆಗೆ ಒಂದು ಗಂಟೆ ಆಗಿತ್ತು. ಆಗ ಮಳೆ ಸ್ವಲ್ಪ ಗಟ್ಟಿಯಾಗಿಯೆ ಬಂದಿತು. ಕಂಬಳಿ ಇತ್ತಲ್ಲ ಅದನ್ನೆ ಇಬ್ಬರೂ ನಿಲುವಂಗಿಯಂತೆ ಮೈಮೇಲೆ ಹಾಕಿಕೊಂಡುಬಿಟ್ಟೆವು. ಅಲ್ಲೊಂದು ಕಡೆ ಸ್ವಲ್ಪ ಹಲಸಿನತೊಳೆ ಕೊಂಡುಕೊಂಡೆವು. ಅದನ್ನು ತಿನ್ನುವಾಗಲೂ ಇದೇ ಬಗೆಯ ಕಾದಾಟ.

ಪುಣ್ಯಾತ್ಮ ಮೇಷ್ಟು ತುಂಬ ಬಿಸಿನೀರು ಕಾಯಿಸಿ ಇಟ್ಟಿದ್ದ. ಇಬ್ಬರೂ ಸ್ನಾನಮಾಡಿದೆವು. ನಮಗಂತೂ ಒಂದು ಊರನ್ನೇ ನುಂಗಿ ಬಿಡುವಷ್ಟು ಹಸಿವಾಗಿದ್ದಿತು. ಮೇಷ್ಟ್ರ ಹೆಂಡತಿ ಅಡಿಗೆಯನ್ನು ಚೆನ್ನಾಗಿಯೇ ಮಾಡಿದ್ದರು. ಆದರೆ ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದವೇ ನೀರು ಎಂಬಂತೆ, ಬಾಯಿಗೆ ಒಂದು ತುತ್ತು ಹಾಕುವುದರೊಳಗಾಗಿಯೇ ಬಸ್ಸು ಹಾಸನದ ಕಡೆಗೆ ಹೊರಟುಬಿಟ್ಟಿತು. ಗಡಿಬಿಡಿಯಿಂದ ಊಟವನ್ನು ಮುಗಿಸಿ ಮೇಷ್ಟರಿಗೂ ಅವನ ಹೆಂಡತಿಗೂ ವಂದನೆ ಹೇಳಿ ಬಸ್ಸು ಹತ್ತಿಬಿಟ್ಟೆವು. ಗುಂಡ ದಾರಿಯಲ್ಲಿ ೨-೩ ಸಲ "ಅಡಿಗೆ ಚೆನ್ನಾಗಿತ್ತು; ಆದರೆ ಹಾಳಾದ ಬಸ್ಸು ಊಟಮಾಡೋದಕ್ಕೆ ಅವಕಾಶಕೊಡಲಿಲ್ಲ" ಎಂದ. ಅಂತೂ ಸಂಧ್ಯಾಕಾಲ ೫ ಗಂಟೆಗೆ ಶಿವಳ್ಳಿಗೆ ಹಿಂದಿರುಗಿದೆವು.

ಆ ದಿವಸವೆಲ್ಲಾ ನನಗೆ ಬೇಲೂರು, ಹಳೇಬೀಡಿನ ಯೋಚನೆ ತಪ್ಪಲೇ ಇಲ್ಲ. ಯಾವಾಗಲೂ ಆ ದೇವಸ್ಥಾನಗಳು ಕಣ್ಣೆದುರಿಗೆ ಕಟ್ಟಿರುತ್ತಿದ್ದುವು. ಅವುಗಳನ್ನು ಮರೆತುಬಿಡಬೇಕೆಂದು ನಾನು ಪಟ್ಟ ಪ್ರಯತ್ನವೆಲ್ಲ ವ್ಯರ್ಥವಾಯಿತು. ನನ್ನ ಮಂಕು ಮುಖವನ್ನು ನೋಡಿ ನನ್ನ ಹೆಂಡತಿಯು ಮತ್ತಾವಾಗಲಾದರೂ ನನ್ನನ್ನು ತರಾಟೆಗೆ ತೆಗೆದುಕೊಂಡರೆ ಸರಿ ಎಂದು ಸುಮ್ಮನಾದಳು. ರಾತ್ರಿ ಹಾಸಿಗೆಯಲ್ಲಿ ಮಲಗಿ ಕಣ್ಣು ಮುಚ್ಚಿದಕೂಡಲೆ ದೇವಸ್ಥಾನಗಳೆರಡೂ ಕಣ್ಣೆದುರಿಗೆ ನಿಂತವು. ಆ ಬೇಲೂರು ದೇವಸ್ಥಾನದ ಸ್ತ್ರೀ ವಿಗ್ರಹವಂತೂ ನನ್ನನ್ನ ಬೇಟೆಯಾಡುವುದಕ್ಕೆ ಪ್ರಾರಂಭಿಸಿಬಿಟ್ಟಿತು. ನಿದ್ರೆಮಾಡಲು ನಾನು ಮಾಡಿದ ಪ್ರಯತ್ನ ಎಲ್ಲಾ ವ್ಯರ್ಥವಾಯಿತು. ಅರ್ಧ ನಿದ್ರೆ ಅರ್ಧ ಎಚ್ಚರ. ಕಣ್ಣನ್ನು ಮುಚ್ಚಿದ ಕೂಡಲೆ ಆ ಸ್ತ್ರೀ ವಿಗ್ರಹವು ನನ್ನೆದುರಿಗೆ ನಿಂತಿತು. ಇದ್ದಕ್ಕಿದ್ದಂತೆಯೇ ಅದು ಸಜೀವವಾಗಿ ಪೀತಾಂಬರವನ್ನು ಧರಿಸಿ, ಕಂಪಿನಿಂದಿಂದಾದ ಮಲ್ಲಿಗೆಯ ಮಲರನ್ನು ಮುಡಿದುಕೊಂಡು ನನ್ನೆದುರಿಗೆ ನರ್ತನ ಮಾಡಲಾರಂಭಿಸಿತು. ಆ ನರ್ತನವನ್ನು ನೋಡಿ ನಾನು ಮಗ್ನನಾದೆ. ಎಲ್ಲಿದ್ದೆನೆಂಬುದನ್ನೇ ಮರೆತೆ. ಆ ನರ್ತಕಿಯ ಜೊತೆಯಲ್ಲಿಯೇ ಗಾನ ಪ್ರಪಂಚದಲ್ಲಿಯೂ, ನರ್ತನ ಪ್ರಪಂಚದಲ್ಲಿಯೂ, ಕಲಾ ಪ್ರಪಂಚದಲ್ಲಿಯೂ ಸ್ವರ್ಗಲೋಕದ ಕಡೆಗೆ ಏರಿದೆ. ನರ್ತಕಿಯ ಒಂದೆರಡು ನೋಟದಿಂದಲೂ, ನಿಟ್ಟುಸಿರಿನಿಂದಲೂ ಭೂಮಿಯನ್ನು ಬಿಟ್ಟುಹೋಗಲು ಅವಳಿಗೆ ಸ್ವಲ್ಪ ಪಶ್ಚಾತ್ತಾಪವುಂಟಾಗಿರಬಹುದೆಂದು ತಿಳಿದೆ. ಸ್ವರ್ಗಲೋಕದ ಬಾಗಲಿಗೆ ನರ್ತಕಿಯು ಹೋದಕೂಡಲೆ ಆ ಬಾಗಲು ತೆರೆಯಿತು. ನರ್ತಕಿಯು ಒಳಕ್ಕೆ ಹೋದಳು. ನಾನೂ ಅವಳನ್ನು ಹಿಂಬಾಲಿಸಲು ಮುಂದುವರಿದೆ. ಆಗವಳು ಗಂಭೀರಭಾವದಿಂದ ಈ ರೀತಿ ಹೇಳಿದಳು:-

“ಕನ್ನಡಿಗರಲ್ಲಿ ಕಲಾಭಿವೃದ್ಧಿಯನ್ನೂ ಸೌಂದರ್ಯೋಪಾಸನೆಯ ಧೈಯವನ್ನೂ ಉಂಟುಮಾಡುವುದಕ್ಕಾಗಿ ನಾನು ಸ್ವರ್ಗಲೋಕದಿಂದ ಭೂಮಿಗೆ ಬಂದೆ. ಹಿ೦ದಲ ಅರಸರೂ, ಹಿಂದಲ ಪ್ರಜೆಗಳೂ ನನ್ನ ಮಾತಿಗೆ ಗೌರವವನ್ನಿತ್ತು ಕಲೆಯನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದರು. ನಿಮಗೆ ಅದು ಬೇಕಿಲ್ಲ. ಅಂದಿನ ಅವರ ವೈಭವವನ್ನೂ ಇಂದಿನ ನಿಮ್ಮ ಅವನತಿಯನ್ನೂ ನೋಡಿ ಅತ್ತು ನನ್ನ ಕಣ್ಣು ಪೋಟೆಯಾಯಿತು. ಸೌಂದರ್ಯವೂ ಕಲೆಯೂ ಭಗವಂತನ ಮುಖ್ಯ ಅಂಶವೆಂಬುದನ್ನೇ ನೀವು ಮರೆತಿದ್ದೀರಿ. ಅರಸಿಕರ ಬಳಿ ನನಗೇನು ಕೆಲಸ? ಮರಳುಗಾಡಿನಲ್ಲಿ ಅರಳಿದ ಮಲ್ಲಿಗೆ ಇರಬಲ್ಲದೆ?” ಎಂದಳು.

ನಾನು ದೈನ್ಯದಿಂದ “ನಿನ್ನನ್ನು ಗೌರವಿಸುತ್ತೇನೆ. ಪೂಜಿಸುತ್ತೇನೆ; ಕಲೆಯ ನೆಲೆಯನ್ನರಿಯುತ್ತೇನೆ. ಬಾ” ಎಂದೆ.

ನರ್ತಕಿಯು ದುಃಖಪೂರ್ಣವಾದ ನಗೆಯಿಂದ “ನಿನ್ನೊಬ್ಬನಿಂದ ಏನಾದೀತು?” ಎಂದು ಹೇಳಿ ಒಳಕ್ಕೆ ಹೊರಟುಹೋದಳು. ಅವಳನ್ನು ಹಿಡಿದುಕೊಳ್ಳಲು ನಾನು ಕೈಗಳನ್ನು ಚಾಚಿದೆ. ಸ್ವರ್ಗದ ಬಾಗಿಲು ಮುಚ್ಚಿ ಹೋಯಿತು. ನಾನು ದುಃಖದಿಂದ

"ಅಯ್ಯೋ ಹೋದೆಯ; ಅಯ್ಯೋ ಹೋದೆಯ; ಹೋದೆಯ” ಎಂದುಕೊಂಡು ಕಣ್ಣು ಬಿಟ್ಟೆ. ಎದುರಿಗೆ ನನ್ನ ಹೆಂಡತಿಯು ನಿಂತಿದ್ದಳು.

ಆ ದಿವಸವೆಲ್ಲಾ ನರ್ತಕಿಯೂ ಅವಳ ಮಾತೂ ನನ್ನ ಮನಸ್ಸನ್ನು ಬಿಟ್ಟು ಹೋಗಲಿಲ್ಲ.