ಮು ನ್ನು ಡಿ

ಈಗ ಐದು ತಿಂಗಳ ಹಿಂದೆ ಒಂದು ದಿನ ನಾನು ಕಚೇರಿಯಲ್ಲಿದ್ದಾಗ ನನಗೆ ದಿನದ ಟಪಾಲಿನೊಂದಿಗೆ ಒಂದು ಪತ್ರವು ಬಂದಿತು. ಅದನ್ನು ಬರೆದವರು ನನ್ನ ವಿಷಯದಲ್ಲಿ ಬಹಳ ವಿಶ್ವಾಸವನ್ನು ಸೂಚಿಸಿ ತಾವು ಗ್ರಾಮಜೀವನದ ಚಿತ್ರಗಳ ಒಂದು ಪುಸ್ತಕವನ್ನು ಬರೆದಿರುವುದಾಗಿಯೂ, ಅದನ್ನು ನಾನು ಒಂದುಸಲ ನೋಡಬೇಕೆಂತಲೂ, ಅದಕ್ಕೆ ಒಂದು ಮುನ್ನುಡಿಯನ್ನು ಬರೆದುಕೊಡಬೇಕೆಂತಲೂ ಕೇಳಿದ್ದರು. ಪತ್ರವನ್ನು ನೋಡಿಯೇ ನನಗೆ ಅದನ್ನು ಬರೆದವರ ವಿಷಯದಲ್ಲಿ ಪ್ರೀತಿ ಹುಟ್ಟಿತು; ಅವರ ಗ್ರಂಥವು ಚೆನ್ನಾಗಿರುವುದೆಂದು ಭಾಸವಾಯಿತು. ಇದಾದ ಐದಾರು ದಿನದ ಮೇಲೆ ಗ್ರಂಥಕರ್ತರು ನನ್ನ ಬಳಿ ಬಂದು ಪುಸ್ತಕದ ಕೆಲವು ಭಾಗಗಳನ್ನು ಓದಿ ಹೇಳಿದರು. ಅವರ ವಿಷಯದಲ್ಲೂ ಅವರ ಗ್ರಂಥದ ವಿಷಯದಲ್ಲಿಯೂ ನನಗೆ ಮೊದಲೇ ಉಂಟಾಗಿದ್ದ ಭಾವವು ಅವರ ಓದನ್ನು ಕೇಳಿ ಸಮರ್ಥವಾಯಿತು. ಆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯುವುದಕ್ಕೆ ನಾನು ಅಂದು ಸಂತೋಷದಿಂದ ಒಪ್ಪಿದೆನು; ಇಂದು ಅದನ್ನು ಬಹಳ ಸಂತೋಷ ದಿಂದ ಬರೆಯುತ್ತಿದ್ದೇನೆ.

ಶ್ರೀಮಾನ್ ಗೊರೂರು ರಾಮಸ್ವಾಮಿ ಐಯಂಗಾರ್‍ರವರ ಹಳ್ಳಿಯ ಚಿತ್ರಗಳನ್ನು ನೋಡಿ ನಾನು ಆನಂದಪಟ್ಟಿದೇನೆ. ಇವರು ಸುಲಭವಾಗಿ ಮಾಡುವ ವರ್ಣನೆಗಳು ನಾವು ಕನಸಿನಲ್ಲಿ ಕಂಡು ಮೆಚ್ಚಿ ನಿಜವಾದೀತೇ ಎಂದು ಆಶಿಸುವ ಒಂದು ಪ್ರಪಂಚವನ್ನು ನಮ್ಮ ಎಚ್ಚರದ ದೃಷ್ಟಿಯ ಮುಂದೆ ತಂದು ನಿಲ್ಲಿಸುತ್ತವೆ. ಈ ಊರುಗಳು, ಊರುಗಳ ಈ ಜನಗಳು, ಈ ಹೊಲಗದ್ದೆ ಪೈರುಗಳು, ಹೊಳೆ ಕೆರೆ ದೇವಾಲಯಗಳು, ಸರಳವಾದ ಸುಂದರವಾದ ಈ ನಡೆನುಡಿ, ಈ ಬಾಳು-ಇವೆಲ್ಲ ನಮಗೆ ಹೊಸವಲ್ಲದಿದ್ದರೂ ಹೊಸವಾಗಿ ಕಂಡು ಮನಸ್ಸನ್ನು ಮುಗ್ಧವಾಗಿ ಮಾಡುತ್ತವೆ. ಗ್ರಂಥಕರ್ತರು ಸುತ್ತಣ ಪ್ರಪಂಚವನ್ನು ಚೆನ್ನಾಗಿ ನೋಡಿ ಅದರ ಅಂದಚೆಂದಕ್ಕೆ ಮನಸ್ಸಿನಲ್ಲಿ ಎಡೆಗೊಟ್ಟು ಅದರ ಬದುಕಿನಲ್ಲಿ ತಮ್ಮ ಬದುಕನ್ನು ಬೆರೆಸಿ ತಾವೇ ಅದು ಎಂಬಂತೆ ಅದರೊಂದಿಗೆ ಸೇರಿಹೋಗಿದ್ದಾರೆ. ಹೀಗಾದ ಮೇಲೆ ತಮ್ಮ ಜೀವವನ್ನು ಮರುಳುಗೊಳಿಸಿದ ಆ ಪ್ರಪಂಚದ ಅಂದ ಚೆಂದವನ್ನು ಇತರರಿಗೆ ತಿಳಿಸೋಣವೆಂದು ತಮಗಾದ ಅನುಭವಗಳನ್ನು ವ್ಯಕ್ತಪಡಿಸಲು ಈ ಚಿತ್ರಗಳನ್ನು ರಚಿಸಿದ್ದಾರೆ. ಈ ಚಿತ್ರಗಳು ನಮಗೆ ಆನಂದವನ್ನುಂಟುಮಾಡುವುದೆಂದು ಹೇಳಿದಮೇಲೆ ಗ್ರಂಥಕರ್ತರು ತಮ್ಮ ಉದಾರವಾದ ಕಾರ್ಯದಲ್ಲಿ ಜಯಶೀಲರಾಗಿದ್ದಾರೆ ಎಂದು ಬೇರೆಯಾಗಿ ಹೇಳಬೇಕಾಗಿಲ್ಲ.

ಸಾಮಾನ್ಯವಾಗಿ ನಾವು ಪ್ರಪಂಚದಲ್ಲಿ ಸಂತೆಗೆ ಬಂದವರಂತೆ ನಡೆದು ಕೊಳ್ಳುತ್ತೇವೆ. ಏನೋ ನಮ್ಮ ನಮ್ಮ ಕೆಲಸವೆಂದುಕೊಂಡಿರುವ ಕೆಲಸವನ್ನು ಹೇಗೋ ಮಾಡುವುದು; ನಮ್ಮವರೆಂದ ಒಬ್ಬರಿಬ್ಬರನ್ನು ನಮ್ಮವರಂತೆ ಕಾಣುವುದು; ನಮ್ಮ ದಿನ ಮುಗಿದೊಡನೆ ಈ ಬಾಳನ್ನು ಬಿಟ್ಟು ಕದಲುವುದು; ಅಥವಾ ಕೆಲಸ ಮುಗಿದ ಮೇಲೂ ಮನೆಯ ನೆನಪು ಬರದೆ ಸಂತೆಯಾಳದಲ್ಲಿರೋಣವೆಂದು ಮರದ ಕೆಳಗೆ ಮಲಗುವ ಮದ್ಯಪಾಯಿಯಂತೆ ರುಚಿಯಳಿದ ಬದುಕಿಗೆ ಇನ್ನೂ ತಗಲಿಕೊಂಡಿರುವುದು. ಇದು ಸಾಮಾನ್ಯ ಜೀವನದ ಕಾರ್‍ಯಕ್ರಮ. ನಿಜವಾಗಿ ನೋಡಿದರೆ ನಾವು ಬಂದಿರುವುದು ಸಂತೆಗಲ್ಲ; ಒಂದು ಕೇಳೀಗೃಹಕ್ಕೆ, ಒಂದು ವಿವಾಹಮಂಟಪಕ್ಕೆ, ಒಂದು ದೇವಾಲಯಕ್ಕೆ, ನಾವು ಪ್ರಪಂಚದಲ್ಲಿ ಮಾಡಬೇಕಾಗಿರುವುದು ಬರಿಯ ವ್ಯಾಪಾರವಲ್ಲ. ನಾವು ಇಲ್ಲಿಯ ಆಟದಲ್ಲಿ ಸೇರಬೇಕಾಗಿದೆ, ಇಲ್ಲಿಯ ಉತ್ಸವದಲ್ಲಿ ಭಾಗಿಗಳಾಗಬೇಕಾಗಿದೆ, ಇಲ್ಲಿಯ ಪೂಜೆಯಲ್ಲಿ ಕಲೆಯಬೇಕಾಗಿದೆ. ಇದನ್ನು ಅರಿಯದ ಅಥವಾ ಮರೆತ ನಮಗೆ ಇಂಥ ಪುಸ್ತಕಗಳು ಪ್ರಪಂಚದಲ್ಲಿ ನಮ್ಮ ನಿಜವಾದ ಕಾರ್ಯವೇನೆಂದು ಜ್ಞಾಪಕ ಕೊಡುತ್ತವೆ. ಕೊಳ್ಳುವ ಮಾರುವ ವ್ಯವಹಾರದ ನಿಲುವಿನಿಂದ ನಮ್ಮ ಮನಸ್ಸು ಜನದ ವಿಷಯದಲ್ಲಿ ಪ್ರೇಮದ ನಿಲುವಿಗೆ ತಿರುಗುತ್ತದೆ. ಸರಸದಿಂದ ಒಲಿಸಿ ಮನಸ್ಸನ್ನು ಹೀಗೆ ತಿದ್ದುವ ಗ್ರಂಥಗಳು ಸಿಕ್ಕುವುದು ಓದುವವರ ಪುಣ್ಯ. ಈ ಕಾರಣದಿಂದ ಮಾತ್ರವಲ್ಲದೆ ನಮಗೆ ಪ್ರಕೃತದಲ್ಲಿ ಗ್ರಾಮಗಳ ವಿಷಯದಲ್ಲಿ ಹುಟ್ಟಿರುವ ಔದಾಸೀನ್ಯವನ್ನು ಕಳೆಯುವುದಕ್ಕೆ ಇಂಥ ಚಿತ್ರಗಳು ಅಗತ್ಯವಾಗಿ ಬೇಕಾಗಿವೆ. ನಮ್ಮ ನಾಗರಿಕತೆ ಗ್ರಾಮಗಳನ್ನು ಅವಲಂಬಿಸಿದ್ದು; ನಮ್ಮ ದೇಶದ ತಪಸ್ಸು ವನಗಳಲ್ಲಿ ಬೆಳೆದದ್ದು, ಆದರೆ ಪಾಶ್ಚಾತ್ಯರ ಸಂಪರ್ಕದಿಂದ ನಮಗೆ ವನವಾಗಲೀ ಗ್ರಾಮವಾಗಲೀ ಮೊದಲಿನಷ್ಟು ಈಗ ಪ್ರಿಯವಾಗಿಲ್ಲ. ವಿಶ್ವ ಶಿಲ್ಪಿಯು ನಮ್ಮ ನಾಡ ಜೀವನದ ಕಣ್ಣನ್ನು ಗ್ರಾಮಗಳಲ್ಲಿ ಇಟ್ಟನು. ನಾವು ಇದನ್ನು ಮರೆತಿದ್ದೇವೆ; ಈಚೆಗೆ ನಗರಗಳಲ್ಲಿ ಗುಂಪು ಸೇರುತ್ತಿದೇವೆ. ಶಾಂತಿಯಿಂದ ಕೂಡಿದ ಗ್ರಾಮಜೀವನವನ್ನು ಸೌಕರ್ಯಗಳು ಸಾಲವೆಂಬ ಕಾರಣದಿಂದ ಬಿಡುತ್ತಾ ಸಲಕರಣೆಗಳು ಹೆಚ್ಚಾಗಿರುವ ನಗರಗಳ ಅಶಾಂತ ಜೀವನಕ್ಕೆ ಆಶಿಸುತ್ತಿದ್ದೇವೆ. ಅಶಾಂತಿಯಲ್ಲಿ ಸುಖವೆಲ್ಲಿಂದ ಬರಬೇಕು? ಆದರೆ ಇದನ್ನು ನಾವು ತಿಳಿಯುವುದು ತಾನೆ ಹೇಗೆ? ಸಲಕರಣೆಗಳು ಕಡಿಮೆಯಾದರೂ ಗ್ರಾಮ ಜೀವನದಲ್ಲಿ ಒಂದು ಸೊಗಸು ಒಂದು ಸುಖ ಇದೆಯೆಂಬುದನ್ನು ತೋರಿಸುವುದರಿಂದ ಇದು ನಮಗೆ ಮಂದಟ್ಟಾಗಬಹುದು. ನಗರಗಳಲ್ಲಿರುವ ಜನರು ಒಂದು ಮನೆಯವರಾದರೂ ಬೇರೆ ಬೇರೆ ಆವರಣಗಳಲ್ಲಿ ಸುಳಿದಾಡುತ್ತಿರುವರು. ಹಳ್ಳಿಯಲ್ಲಿರುವವರು ಬೇರೆ ಬೇರೆ ಮನೆಯವರಾದರೂ ಒಂದು ಸಂಸಾರದವರಂತೆ ನಡೆದುಕೊಳ್ಳುವರು. ನಗರಗಳಲ್ಲಿ ನಾಗರಿಕತೆಯ ಅಭ್ಯಾಸಗಳು ಬಾಳಿಗೆ ಬಾಳಿಗೆ ಮಧ್ಯೆ ಗೋಡೆಗಳಂತೆ ಬೆಳೆಯುತ್ತವೆ. ಹಳ್ಳಿಯಲ್ಲಿ ನಿರಂತರ ಸಹವಾಸದಿಂದ ಜನರು ಒಬ್ಬರಿಗೊಬ್ಬರು ಒಡಹುಟ್ಟುಗಳಂತೆ ಆಗುತ್ತಾರೆ. ತನ್ನ ಮಗು ಚೆನ್ನಾಗಿಲ್ಲವೆಂಬುದನ್ನು ತಿಳಿದೂ ನೆನೆಯದ ತಾಯಂತೆ, ತನ್ನ ಗಂಡ ಮನ್ಮಥನಲ್ಲವೆಂಬುದನ್ನು ಕಂಡೂ ಮರೆಯುವ ಹೆಂಡತಿಯಂತೆ ಸದಾಕಾಲ ಜೊತೆಯಾಗಿರುವುದರಿಂದ ಹಳ್ಳಿಯ ಜನರು ಒಬ್ಬರನ್ನೊಬ್ಬರು ಸಮಾಧಾನದಿಂದ ಪ್ರೀತಿಯಿಂದ ನೋಡುವುದನ್ನು ಕಲಿಯುತ್ತಾರೆ. ಇದು ನಮಗೆ ತಿಳಿಯಬೇಕಾದರೆ ಇಂಥ ಗ್ರಂಥಕರ್ತರ ಸಹಾಯ ಬೇಕು. ಇವರು ಕಸವನ್ನು ಒಂದು ಬದಿಗಿರಿಸಿ ಮುಖ್ಯವಾದದ್ದು ರಸ ಎಂದು ತೋರಿಸಿರುವುದರಿಂದ ನಮಗೆ ಜನಜೀವನದ ತಿರುಳು ಯಾವುದು ಎಂದು ಗೋಚರವಾಗುತ್ತದೆ. ಈ ಗ್ರಂಥದ ಭಾಷೆಯ ರೀತಿಯೂ ಗಮನಕ್ಕೆ ಅರ್ಹವಾದದ್ದು. ವಿಷಯದ ಸೊಗಸಿನಂತೆ ಈ ಭಾಷೆಯ ಸೊಗಸೂ ಜನಜೀವನದ ಸಾಮೀಪ್ಯದಿಂದ ಬಂದಿದೆ. ಈ ಗ್ರಂಥದಲ್ಲಿ ಜನರಾಡುವ ಮಾತೇ ಸಾಹಿತ್ಯವೂ ಆಗಿದೆ. ನಿಜವೂ ಇಷ್ಟೇ. ಸಾಹಿತ್ಯದ ಭಾಷೆಯೆಂದರೆ ಬೇರೆ ಯಾವುದೋ ಒಂದು ಭಾಷೆಯೆಂದು ನಮ್ಮಲ್ಲಿ ಅಲ್ಲಲ್ಲಿ ವಾಡಿಕೆಯಾಗಿರುವ ಭಾವನೆ ಅಷ್ಟೇನೂ ಸರಿಯಾದುದಲ್ಲ. ಗ್ರಂಥವೆನ್ನುವುದು ಬಹುಮಟ್ಟಿಗೆ ಬರಹದ ಮೂಲಕ ಮಾಡುವ ಸಂಭಾಷಣೆ. ಸಂಭಾಷಣೆಯ ವಿಷಯ ಬೇರೆ ಬೇರೆಯಾದಾಗ ಅದಕ್ಕೆ ಅನುಗುಣವಾಗಿ ಭಾಷೆಯ ರೀತಿಯು ಸ್ವಲ್ಪವೋ ಹೆಚ್ಚಾಗಿಯೋ ಮಾರ್ಪಡಬಹುದೇ ಹೊರತು ಸಂಭಾಷಣೆಯೇ ಅಲ್ಲದ ಬರಹ ಬಹಳವಿರಲಾರದು. ಜನರ ದಿನ ದಿನದ ಜೀವನವನ್ನು ವರ್ಣಿಸುವುದಕ್ಕೆ ಅವರ ದಿನ ದಿನದ ಭಾಷೆಯೇ ತಕ್ಕದ್ದು. ಇದನ್ನು ಉಪಯೋಗಿಸಿರುವುದರಿಂದ ಈ ಗ್ರಂಥದಲ್ಲಿ ಆ ಜನದ ಬಾಳಿನ ಸರಳತೆ, ಸ್ವಚ್ಛತೆ, ನೋವು, ನಗೆ ಎಲ್ಲವೂ ಸುಲಭವಾಗಿ ವ್ಯಕ್ತವಾಗಿವೆ. ಇಲ್ಲಿ ಬರುವ ಜನರೂ ಅವರ ನಡೆಯ ನುಡಿಯ ನಿಜವೆಂದು ನಮ್ಮ ಆಂತರ್‍ಯವು ಒಪ್ಪುತ್ತದೆ. ನಿಜವಲ್ಲ ಎಂದು ಎಲ್ಲಿಯಾದರೂ ಕಾಣುವುದಾದರೆ ಈ ಸೂತ್ರವನ್ನು ಬಿಟ್ಟ ಕಡೆಯಲ್ಲಿಯೇ ಉತ್ತಮ ರೀತಿಯ ವಸ್ತು, ಪ್ರಾಜ್ಞತೆಗೆ ಈ ಬಗೆಯ ಕೌಶಲವೂ ಸೇರಿ ಈ ಗ್ರಂಥದ ಚಿತ್ರಗಳೆಲ್ಲ ಜನರ ಜೀವನದಿಂದ ಎತ್ತಿಟ್ಟವುಗಳಂತೆ ಕಾಣುತ್ತಿವೆ.

ಗ್ರಂಥಕರ್ತರಿಗೆ ನಮ್ಮ ನಾಡಮೇಲೆ ನಮ್ಮ ಜನರ ಮೇಲೆ ಬಹಳ ಪ್ರೇಮವಿದೆ. ಜಾತಿ ಮತ ಭೇದಗಳಿಲ್ಲದೆ ಇವರು ಎಲ್ಲವನ್ನೂ ಸಮವಾದ ದೃಷ್ಟಿಯಿಂದ ಏಕರೀತಿಯ ವಿಶ್ವಾಸದಿಂದ ನೋಡಬಲ್ಲರು. ಪ್ರೇಮಪೂರಿತವಾದ ಇವರ ಕಣ್ಣು ಈ ನಾಡಿನಲ್ಲಿ ಈ ಜನದಲ್ಲಿ ಇರುವ ಒಳ್ಳೆಯ ಗುಣಗಳನ್ನು ನೋಡಿ ನೋಡಿ ಆನಂದಗೊಂಡಿದೆ. ತಪ್ಪು ಕಂಡಲ್ಲಿ ಇಂಥ ಕಣ್ಣು ಕೋಪದ ಕಿಡಿಯನ್ನು ಉಗುಳುವುದಿಲ್ಲ; ದೊಡ್ಡ ತಪ್ಪಾದರೆ ಎರಡು ತೊಟ್ಟು ಕಣ್ಣೀರನ್ನು ಹಾಕುತ್ತದೆ; ಸಣ್ಣ ತಪ್ಪಾದರೆ ನಗೆಯನ್ನು ಸೂಸುತ್ತದೆ. ಈ ಗ್ರಂಥದಲ್ಲಿ ಗ್ರಂಥಕರ್ತರು ಜನರ ದೊಡ್ಡ ತಪ್ಪುಗಳನ್ನು ತೋರಿಸಲು ಯತ್ನಿಸಿಲ್ಲ. ಅದನ್ನು ಇತರರು ಮಾಡಬಹುದು; ಇವರೇ ಇನ್ನೊಂದು ಸಂದರ್ಭದಲ್ಲಿ ಮಾಡಬಹುದು. ಈ ಗ್ರಂಥದಲ್ಲಿ ಪ್ರೇಮದಿಂದ ಕಂಡ ಕೆಲವು ಒಳ್ಳೆಯ ಗುಣಗಳು, ಸಣ್ಣ ಪುಟ್ಟ ತಪ್ಪುಗಳು ಇಷ್ಟನ್ನು ಮಾತ್ರ ಇವರು ಸೂಚಿಸಿದ್ದಾರೆ. ಗುಣಗಳ ಚಿತ್ರದಿಂದ ನಮಗೆ ನಮ್ಮ ಜೀವನದ ವಿಷಯದಲ್ಲಿ, ನಮ್ಮ ಗ್ರಾಮಗಳ ಜೀವನದ ವಿಷಯದಲ್ಲಿ ಪ್ರೀತಿಯುಂಟಾಗುತ್ತದೆ. ಸಣ್ಣ ಪುಟ್ಟ ತಪ್ಪುಗಳ ನೋಟದಿಂದ ನಾವು ಗ್ರಂಥಕರ್ತರೊಂದಿಗೆ ನಗುತ್ತೇವೆ. ಭಾವನೆಯ ಉನ್ನತ ಸ್ಥಾನಗಳಲ್ಲಿ ಕುಳಿತು ಓದುವವರನ್ನು ಜೊತೆಯಲ್ಲಿ ಕರೆದುಕೊಂಡು ಅವರಿಗೆ ಶೀಲದ ಸೌಂದರ್್ಯವನ್ನು ತೋರಿಸುವ ಶಕ್ತಿ ಅಪೂರ್ವವಾದದ್ದು. ಈ ಗ್ರಂಥಕರ್ತರಲ್ಲಿ ಈ ಶಕ್ತಿ ಚೆನ್ನಾಗಿದೆ.

ಜನರ ವಿಷಯದಲ್ಲಿ, ನಾಡ ವಿಷಯದಲ್ಲಿ ತಮಗಿರುವ ಪ್ರೇಮವನ್ನು ಸೂಚಿಸಿ ಅದೇ ಪ್ರೇಮವನ್ನು ಓದುವವರಲ್ಲಿ ಉಂಟುಮಾಡಲು ಇವರು ಉಪಯೋಗಿಸಿರುವ ಮುಖ್ಯ ಸಾಧನ ಹಾಸ್ಯ. ಈ ಗ್ರಂಥವನ್ನು ಓದುತ್ತಾ ನನಗೆ ಹತ್ತಾರು ಸಲ ಮಿತವಾಗಿಯೋ ಅತಿಯಾಗಿಯೋ ನಗೆ ಬಂದಿದೆ. ಕಾವೇರಿಯ ಪ್ರವಾಹ ಎಷ್ಟು ಎತ್ತರ ಬಂದಿತ್ತು ಎನ್ನುವುದನ್ನು ಆಯಾ ವರ್ಷ ಯಾರ ಮನೆಯ ಬಾಗಿಲಲ್ಲಿ ಸೀರೆ ಒಗೆದರು ಎನ್ನುವುದರಿಂದ ವರ್ಣಿಸುವ ಇವರ ಜನರನ್ನೂ, ಇವರ ಬಸ್ ಪ್ರಯಾಣದ ವರ್ಣನೆಯನ್ನೂ, ಇವರಿಗೆ ದಾರಿಯಲ್ಲಿ ಒಂದೊಂದಾಗಿ ಆದ ತೊಂದರೆಗಳ ಕತೆಯನ್ನೂ, ಕಾವೇರಿಯ ಪ್ರವಾಹಕ್ಕೆ ಹೆದರಿ ಮದುವೆಗಾಗಿ ಆಚೆಯ ತಡಿಗೆ ಹೋಗಲಾರದೆ ಈ ತಡಿಯಿಂದಲೇ ವಧೂವರರಿಗೆ ಆಶೀರ್ವಾದಮಾಡುತ್ತೇನೆಂದ ಇವರ ಜತೆಯ ಮುದುಕರ ವಿಷಯವನ್ನೂ, ಐಯಂಗಾರಿಗಳ ಮೊಹರಮಿನ ವರ್ಣನೆಯನ್ನೂ, ಬಾಲ ವಸ್ತ್ರಾಪಹರಣದ ಕತೆಯನ್ನೂ, ಜೋಡಿದಾರರ ಬಾಲ್ಯದ ಕಲ್ಕ್ಯವತಾರದ ವೈಭವವನ್ನೂ, ಆಮೇಲೆ ಅವರು ರೋಣಗಲ್ಲಿನಂತೆ ಕುದುರೆಯ ವೇಗವನ್ನು ತಡೆದುದೇ ಮೊದಲಾದ ವಿಷಯವನ್ನೂ, ಹನುಮನು ಹೆಂಡದಿಂದ ಉದ್ಧತನಾದ ಚರಿತ್ರೆಯನ್ನೂ, ಕಿಟ್ಟು ನರಹರಿಯ ತಿಂಡಿಯ ಹೂಜಿಯ ಕತೆಯನ್ನೂ ನೋಡಿ ಓದಿ ಕೇಳಿ ಯಾರಾದರೂ ನಗುವರು. ಗ್ರಂಥಕರ್ತರು ಇಲ್ಲಿ ಚಿತ್ರಿಸಿರುವ ರೀತಿಯಿಂದ ಇವರ ಪಾತ್ರಗಳು ಇನ್ನು ಮೇಲೆ ಸಾಹಿತ್ಯ ಪ್ರೇಮಿಗಳಿಗೆ ಬಹಳ ಪ್ರಿಯರಾಗುತ್ತಾರೆ. ಜೋಡಿದಾರರಂತೂ ತಮ್ಮ ಜೋಡಿಯ ದೊಡ್ಡಸ್ತಿಕೆಯೊಂದಿಗೆ ಸಾಹಿತ್ಯದ ವ್ಯಕ್ತಿಗಳ ಪಙ್ಕ್ತಿಯಲ್ಲಿ ಮೇಲಣ ಒಂದು ಪೀಠವನ್ನು ಈಗ ಜಹಗೀರಿಯಾಗಿ ಸಂಪಾದಿಸಿದ್ದಾರೆಂದು ಹೇಳಬಹುದು. ಇಂಥ ಜಹಗೀರಿ ಬಹಳ ದೊಡ್ಡ ಗೌರವ; ಇದನ್ನು ಕೊಡುವ ಯೋಗ್ಯತೆ ಲೋಕದ ರಾಜರಿಗಿಲ್ಲ. ಹೀಗೆಯೇ ಭಾವನವರು, ಹನುಮ, ವಾಸ್ಕೋಡಿಗಾಮ; ಹೀಗೆಯೇ ಇನ್ನಿತರರು. ಇವರಲ್ಲಿ ಯಾರನ್ನೂ ಇನ್ನು ನಾವು ನಮ್ಮ ಜ್ಞಾಪಕದಿಂದ ಬಿಟ್ಟು ಕಳುಹಿಸುವುದಿಲ್ಲ.

ಪ್ರಕೃತಿಯ ಸೌಂದರವನ್ನು ಇವರು ಅಲ್ಲಲ್ಲಿ ಹೃದಯಂಗಮವಾಗಿ ವರ್ಣಿಸಿದ್ದಾರೆ. ಅಲ್ಲಿ ಭಾಷೆ ಆ ಕೆಲಸಕ್ಕೆ ತಕ್ಕದ್ದಾಗಿ ಸುಂದರವಾಗಿದೆ. ಈ ವರ್ಣನೆಗಳನ್ನು ಓದುವುದರಲ್ಲಿಯೂ ಪಾಠಕರು ಅತಿಶಯವಾದ ಆನಂದವನ್ನು ಅನುಭವಿಸುವರು.

ಬೇನೆಯ ಭಾವ ಒಂದೆರಡನ್ನು ಈ ಗ್ರಂಥದಲ್ಲಿ ಕಾಣಬಹುದು. ಹೃದಯದ ಮಂದರ ತಂತಿಗಳನ್ನು ಮಿಡಿಯುವುದರಲ್ಲಿಯೂ ಈ ಗ್ರಂಥಕರ್ತರಿಗೆ ಬಹಳ ಕೌಶಲ್ಯವಿದೆಯೆಂದು ಗ್ರಂಥದ ಆ ಭಾಗಗಳಿಂದ ವ್ಯಕ್ತವಾಗುತ್ತದೆ.

ಇನ್ನೂ ಹಲವು ಗುಣಗಳನ್ನು ಈ ಸಣ್ಣ ಗ್ರಂಥದಲ್ಲಿ ಕಾಣಬಹುದು. ನಮ್ಮ ಜನರು ಈ ಪುಸ್ತಕವನ್ನು ಓದಿ ಅದನ್ನೆಲ್ಲಾ ಕಾಣುವರೆಂದು ನನಗೆ ನಂಬಿಕೆಯುಂಟು. ಶ್ರೀಮಾನ್ ಐಯಂಗಾರರು ಇವುಗಳಂತೆ ಇನ್ನೂ ಅನೇಕ ಚಿತ್ರಗಳನ್ನು ಬರೆದಿದ್ದಾರೆ. ನಮ್ಮ ಜನರು ಈ ಗ್ರಂಥಕ್ಕೆ ತೋರಿಸುವ ಆದರಣೆಯಿಂದ, ಆ ಬೇರೆ ಚಿತ್ರಗಳನ್ನು ಅಚ್ಚು ಮಾಡಿಸುವುದಕ್ಕೆ ಆವಶ್ಯಕವಾದ ಉತ್ತೇಜನವು ಗ್ರಂಥಕರ್ತರಿಗೆ ದೊರೆಯಲೆಂದು ನಾನು ಹಾರೈಸುತ್ತೇನೆ.

ಬೆಂಗಳೂರು, ಪ್ರಜೋತ್ಪತ್ತಿ, ಸಂ॥
ಜ್ಯೇಷ್ಠ ಶುದ್ಧ ತೃತೀಯೆ.


ಶ್ರೀನಿವಾಸ