ಈ ಪುಟವನ್ನು ಪ್ರಕಟಿಸಲಾಗಿದೆ
VIII
ವಸಂತ ಕಾಲದ ಬಲಿ.


VIII ವಸಂತ ಕಾಲದ ಬಲಿ.

ವಸಂತಕಾಲವು ಪ್ರಾಪ್ತವಾಯಿತು. ಗಿಡಮರಗಳು ತಮ್ಮ ಹೂ ಹಣ್ಣುಗಳಿಂದಲೂ, ಹೊಲಗದ್ದೆಗಳು ಪೈರು ಪಚ್ಚೆಗಳಿಂದಲೂ, ಹಕ್ಕಿಗಳು ತಮ್ಮ ಇಂಪಾದ ಹಾಡಿನಿಂದಲೂ ಎಲ್ಲರನ್ನೂ ಆನಂದಪಡಿಸುತಿದ್ದುವು. ಒಂದು ದಿನ ಒಬ್ಬ ರಾಜದೂತನು ಸಂತೆಗೂಡುವಲ್ಲಿ ನಿಂತುಕೊಂಡು, "ಯವನದೇಶದ ರಾಜನೇ, ಯವನದೇಶದ ಜನಗಳೇ, ಇತ್ತ ಕೇಳಿರಿ. ನೀವು ವರ್ಷಂಪ್ರತಿ ಸಲ್ಲಿ ಸತಕ್ಕ ಕಪ್ಪವು ಎಲ್ಲಿದೆ ?” ಎಂದು ಕೇಳುತಿದ್ದನು. ಆಗ ನಗರವೆಲ್ಲ ಮರುಗುವುದಕ್ಕೆ ತೊಡಗಿತು. ಆದರೆ ಅಜಿತನು ಆ ದೂತನ ಇದಿರಿಗೆ ನೆಟ್ಟಗೆ ನಿಂತುಕೊಂಡು, “ಎಲೋ ನಾಯಿಮೊಗದವನೆ, ನೀನು ಯಾರು ? ಕಪ್ಪಕೇಳಲು ನಿನಗೆ ಎಷ್ಟು ಧೈರ್ಯ ? ಏನು ಮಾಡಲಿ? ನೀನು ರಾಜದೂತನಾದೆ. ಇಲ್ಲದಿದ್ದರೆ, ನಿನ್ನ ತಲೆಯನ್ನು ಜಜ್ಜಿ ಪುಡಿ ಮಾಡಿಬಿಡುತಿದ್ದೆ" ! ಎಂದನು.

ವೃದ್ದನೂ ಬುದ್ದಿವಂತನೂ ಆದ ಆ ದೂತನು ಅಜಿತನ ಮಾತಿಗೆ ಕೋಪಿಸದೆ, "ಎಲಾ ಯುವಕ, ನಾನು ನಾಯಿಮೋರೆಯವನೂ ಅಲ್ಲ, ನಾಚಿಕೆಗೆಟ್ಟವನೂ ಅಲ್ಲ, ನನ್ನ ಯಜಮಾನನ ಆಜ್ಞೆಯನ್ನು ನಡಿಸುವುದಕ್ಕೆ ಬಂದಂಥವನು. ಪ್ರಸಿದ್ಧವಾದ ಶತಪುರದ ರಾಜನಾದ ಶತಬಲಿಯೇ ನನ್ನೊಡೆಯನು. ಆದರೆ ನೀನು ಬಹುಶಃ ಇಲ್ಲಿಗೆ ಹೊಸಬನಾಗಿರಬೇಕು. ಹಾಗಲ್ಲದಿದ್ದರೆ, ನಾನು ಇಲ್ಲಿಗೆ ಬಂದ ಕಾರಣವೂ, ನನಗಿರುವ ಹಕ್ಕೂ ನಿನಗೆ ಗೊತ್ತಿರಬೇಕಿತ್ತು” ಎಂದನು.