ಈ ಪುಟವನ್ನು ಪರಿಶೀಲಿಸಲಾಗಿದೆ

 ಚಿರಸ್ಮರಣೆ ೧೧೩

"ಊಟಕ್ಕೇನು ಮಾಡೋಣ ಈಗ?"
"ನಾನೂ ಅದೇ ಪ್ರಶ್ನೆ ಕೇಳ್ಬೇಕೂಂತಿದ್ದೆ" ಎಂದ ಧಾಂಡಿಗ, ಹಲ್ಲು ಕಿಸಿಯುತ್ತ.
ಚಿರುಕಂಡನ ತಂದೆ, "ನಮ್ಮಲ್ಲಿಗೆ ಬಂದುಬಿಡಿ" ಎಂದು ಅತ್ಯಂತ ವಿನಯದಿಂದ ಹೇಳಿದ.
ಆದರೆ ಪಂಡಿತರ ನಿರ್ಧಾರದ ಧ್ವನಿ ಬೇರೆಯೆ ಮಾತನ್ನಾಡಿತು:
"ಈಗೇನೂ ಬೇಡ. ಇಲ್ಲೇ ಸಲ್ಪ ಹೊತ್ತಿದ್ದು.ಈ ಹಾದಿಯಾಗಿಯೇ ಹೊರಡ್ತೇವೆ."
ಆ ಮಾತನ್ನು ನಂಬುವುದಾಗದೆ ಚಿರುಕಂಡನ ತಂದೆ ಹೇಳಿದ:
"ಈಗಲೇ ಹೊರಡ್ಬೇಕೆ? ರಾತ್ರೆ ವಿಶ್ರಾಂತಿ ತಗೊಳೋದಿಲ್ವ?"
"ಇಲ್ಲ, ಬೆಳಕು ಹರಿಯೋದಕ್ಮು೦ಚೆಯೇ ನಾವು ತ್ರಿಕರಪುರ ದಾಟ್ಬೇಕು."
ಇದೆಲ್ಲದರ ಮಹತ್ವ ತನ್ನ ತಂದೆಗೆ ತಿಳಿಯದೆಂದು ಚಿರುಕಂಡನಿಗೆ ಬೇಸರವಾಯಿತು.
ಅಷ್ಟರಲ್ಲಿ ಕೋರ ಎದ್ದುನಿ೦ತ.
"ಎಲ್ಲಿಗೆ ಹೊರಟೆ?" ಎಂದರು ಮಾಸ್ತರು.
"ಆ ಹೋಟೆಲಿನವನನ್ನು ಎಬ್ಬಿಸಿ ಅವಲಕ್ಕಿ ಬಾಳೆಹಣ್ಣಾದರೂ ತರ್ತೇನೆ."
"ಯಾರಿಗೇಂತ ಹೇಳ್ತೀಯಾ?"
"ಅಷ್ಟೂ ನನಗೆ ತಿಳೀದಾ? ನಾನು ಮಂಕುದಿಣ್ಣೆ ನಿಜವಾದರೂ, ಇಷ್ಟು ಸಮಯದಿಂದ ನಿಮ್ಮ ಜತೇಲಿದ್ದುದಕ್ಕೆ-"
"ಆಗಲಪ್ಪಾ ಹೋಗು" ಎಂದರು ಮಾಸ್ತರು, ಕೋರನ ನೋವಿನ ಧ್ವನಿಯನ್ನು ತಡೆದು.
ಕೋರ ಹೋಗುತ್ತಲೇ ಧಾ೦ಡಿಗನೆ೦ದ:
"ಸದ್ಯ ಬದುಕಿದೆ! ಎಲ್ಲಿ ಇವತ್ತು ರಾತ್ರಿಯೆಲ್ಲ ತಣ್ಣೀರೇ ಗತೀಂತ ತೀರ್ಮಾನವಾಗ್ತದೋ೦ತ ಭಯವಾಗಿತ್ತು.
ಪ೦ಡಿತರು ಆ ಮಾತು ಕೇಳಿ ಧಾ೦ಡಿಗನತ್ತ ನೋಡಿ ಆತ್ಮೀಯತೆಯಿ೦ದ ಮುಗುಳ್ನಕ್ಕರು....
....ಅದೊಂದು ಸ್ಮರಣೀಯ ರಾತ್ರೆ. ಒಂದು ದಿನ, ಒಂದು ವರ್ಷದಷ್ಟೇ ಅಮೂಲ್ಯವಾದುದು ಎನ್ನುವ ಭಾವನೆ. ಅದರ ಫಲವಾಗಿ, ತಾವು ಬೇಗ ಬೇಗನೆ ಬೆಳೆಯುತ್ತಿದ್ದ ಅನುಭವ.
ಕಯ್ಯೂರಿಗೆ ಪಂಡಿತರ ಆಗಮನದ ಫಲಶ್ರುತಿಯೇ ವಯಸ್ಕರ ರಾತ್ರಿ ಶಾಲೆ.