ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೧೫೫

ದೊಡ್ಡ ಸ್ವಾತಂತ್ರ್ಯ ಪುಢಾರಿಗಳನ್ನೇ ಜೈಲಿಗೆ ಕಳಿಸಿದ್ದೇವೆ!ನೀವು ಯಾವ ಲೆಕ್ಕ?ತಿಳೀತಾ?"
{gap}ಅಪ್ಪುವಿಗೆ ಬೆದರಿಕೆಯ ಈ ನುಡಿ ಮೆಚ್ಚುಗೆಯಾಗಲಿಲ್ಲ.ಆತ ಗಟ್ಟಿಯಾಗಿ ಹೇಳಿದ:
{gap}"ಯಾಕೆ ಹೀಗೆ ಕಿರಿಚ್ತೀರಿ?ನಾವು ನ್ಯಾಯದ ಹಾದೀಲೇ ನಡೀತಾ ಇದ್ದೇವೆ.
{gap}ಯಾವ ತಪ್ಪೂ ಮಾಡಿಲ್ಲ.ಕಾನೂನು ಪ್ರಕಾರ ಏನಾದರೂ ಮಾಡೋದಿದ್ರೆ ಕ್ರಮ ಜರಗಿಸಿ.ಸುಮ್ನೆ ಮಾತಾಡ್ಬೇಡಿ!"
{gap}"ಸಾಕು ಮಾಡು!" ಎಂದು ಘೌಜುದಾರರು ಮುಷ್ಟಿಯಿಂದ ತನ್ನ ತೊಡೆಗೇ ಗುದ್ದಿದರು.
{gap}ಅಷ್ಟರಲ್ಲೆ ಸುದ್ದಿ ಹಬ್ಬಿ ರೈತರೆಲ್ಲ ನಂಬಿಯಾರರ ಮನೆಯತ್ತ ಧಾವಿಸಿ ಬರತೊಡಗಿದರು.ಸಂಘದ ಪ್ರಮುಖರು, ಸದಸ್ಯರಾದವರು, ಸದಸ್ಯರಾಗದವರು ಎಲ್ಲರೂ.ಹೆಂಗಸರೂ ಬಂದು ಸೇರಿದರು.ಮೊಗಸಾಲೆಯಲ್ಲಿ ಕುಳಿತಿದ್ದವರ ಎದೆ ಗುಂಡಿಗೆಗಳ ಬಡಿತ ತೀವ್ರವಾಯಿತು.ನಂಬಿಯಾರರೇ ಕಾಗದ ಬರೆದು ಪೋಲೀಸ್ ಅಧಿಕಾರಿಯನ್ನು ಕರೆಸಿದ್ದರು.ಆ ರೀತಿಯ ಬಲ ಪ್ರದರ್ಶನದಿಂದ ರೈತರಲ್ಲಿ ಭೀತಿ ಹುಟ್ಟಿಸಬಹುದೆಂಬುದು ಅವರ ಯೋಚನೆಯಾಗಿತ್ತು.ಈಗ ನೀರಮೇಲಿನ ಹೋಮವಾಗಿತ್ತು ಆ ಯತ್ನ.ಪೋಲೀಸರು ದಕ್ಷತೆಯಿಂದ ವರ್ತಿಸಿಯೆ ಇರಲಿಲ್ಲ.ಮದುವೆಯ ಮನೆಯೋ ಸಾವಿನ ಮನೆಯೋ ಎಂಬಂತೆ ನೆರೆಯುತ್ತಿದ್ದ ರೈತರನ್ನು ಕಂಡು ನಂಬಿಯಾರರು ಬಂಜೆ ಕ್ರೋಧದಿಂದ ತಪ್ತರಾಗಿ ಶತಪಥ ತುಳಿದರು.
{gap}ಈ ಪರಿಸ್ಥಿತಿಯನ್ನು ಬೇಗನೆ ಕೊನೆಗಾಣಿಸಿದಷ್ಟೂ ತಮಗೆ ಹಿತವೆಂದು ಘೌಜದಾರರು ಜಮೀನ್ದಾರರೆಡೆಗೆ ನೋಡಿದರು.ಅಲ್ಲಿಂದ ಯಾವ ನಿರ್ದೇಶವೂ ದೊರೆಯದಿರಲು ತಾವೇ,"ನೀವಿನ್ನು ಹೋಗಬಹುದು!"ಎಂದು ಅಪ್ಪು ಮತ್ತು ಚಿರುಕಂಡನಿಗೆ ಅಂದರು.
{gap}ನಂಬೂದಿರಿ ಎದ್ದು ಕ್ಷೀಣಸ್ವರದಲ್ಲಿ"ನಾನಿನ್ನು ಹೋಗ್ತೇನೆ,ಆಗದೆ?"ಎಂದು ನಂಬಿಯಾರರನ್ನು ಕೇಳಿದರು.ಅವರಿಗೆ ದೊರೆತುದು "ಹೂಂ"ಎಂಬ ಒಂದೇ ಸ್ವರದ ಉತ್ತರ.
{gap}ಸಂಘದ ಯುವಕ ಪ್ರಮುಖರಿಗೇ ತೊಂದರೆ ಸಂಭವಿಸಿತೆಂದು ಭಾವಿಸಿ, ರೈತರು ಓಡಿಬಂದಿದ್ದರು.ಆದರೆ ಹಾಗೇನೂ ಆಗದೆ ಇದ್ದುದನ್ನು ಕಂಡು, ಎಷ್ಟೋ ಜನರಿಗೆ ಸಮಾಧಾನವಾಯಿತು. ಅಲ್ಲಿ ನಡೆದ ಸಂಭಾಷಣೆಯನ್ನು ತಾವೇ ಕೇಳುವುದಾಗಲಿಲ್ಲ ಎಂದು ಸ್ವಲ್ಪ ನಿರಾಶೆಯೂ ಆಯಿತು.