ಈ ಪುಟವನ್ನು ಪರಿಶೀಲಿಸಲಾಗಿದೆ



೯೬

ಚಿರಸ್ಮರಣೆ

"ಈ ರೀತಿ ಶಾಲೆಯ ಸ್ಧಾಪನೆಗೆ ನಾನೇ ಮೂಲ ಕಾರಣನಾದರೂ ರೈತರ ಮಕ್ಕಳಿಗೆಲ್ಲ ವಿದ್ಯೆ ಕೊಡೋ ವಿಷಯದಲ್ಲಿ ನನ್ನದೇ ಆದ ಅಭಿಪ್ರಾಯವುಂಟು. ಈ ಜನ ಯಾರೂ ಕಾಲೇಜಿಗೆ ಹೋಗಬೇಕಾಗಿಲ್ಲ; ಹೈಸ್ಕೂಲು ಇವರಿಗೆ ಅಗತ್ಯವಿಲ್ಲ. ರೈತರು ಮಕ್ಕಳು ಸಹಿ ಹಾಕೋದಕ್ಕೆ ಕಲಿತರೆ ಸಾಕು. ಇಷ್ಟು ವಿದ್ಯೆಯಾದರೂ ಯಾಕೆ ಗೊತ್ತೆ? ಬರೇ ಹೆಬ್ಬಿಟ್ಟಿನ ರುಜುವೇ ಇದ್ದರೆ, ಏನೂ ತಿಳೀದೋರಿಗೆ ಮೋಸಮಾಡ್ತಾ ಇದ್ದಾರೇಂತ ಇವರು ಬಡ್ಕೋಬಹುದು. ಮುಂದೆ ಹಾಗಲ್ಲ. ಕರಾರು ಪತ್ರ ಏನಿದ್ದರೂ, ಬರೆದದ್ದು ಪೂರ್ತಿ ಅರ್ಧವಾಗಿದೇಂತ ಹೇಳಿ, ಅವರು ಅಕ್ಷರದಲ್ಲೇ ಸಹಿ ಹಾಕ್ಬಹುದು, ಎನು ಹೇಳ್ತೀರಾ?"
ಈ ಸಲವೂ ಏನನ್ನೂ ಹೇಳುವುದು ಮಾಸ್ತರಿಂದಾಗಲಿಲ್ಲ. ಅವರು ಅವಾಕ್ಕಾದರು. ಉಳ್ಳವರ ವಿಷಯ ಅವರೆಷ್ಟೋ ತಿಳಿದಿದ್ದರೂ ಈ ವಿಚಾರಸರಣಿಯ ವಿಶಿಷ್ಟತೆಯನ್ನು ಕಂಡು ಬೆರಗಾದರು. ಅವರ ಎದೆಯೊಳಗೆ ಸಂಕಟವಾಯಿತು. ಆತ್ಮಾಭಿಮಾನಿಯಾದ ಮನುಷ್ಯ. ಇಂಥ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ ಎದ್ದು ಹೋಗಬಹುದು. 'ಬರ್ತೇನೆ ಕೆಲಸವಿದೆ' ಎಂದು ಹೇಳಿ ಎದ್ದು ಹೋಗಲೇಬೇಕು, ಎನ್ನಿಸಿತು. ಆದರೆ ಹಾಗೆ ವಿರಸಕ್ಕೆ ಎಡೆ ಕೊಡುವುದರ ಪರಿಣಾಮವೇನೆಂದು ಊಹಿಸುವುದು ಕಷ್ಟವಾಗಿರಲಿಲ್ಲ. ಬಹಿರಂಗವಾಗಿ ನಂಬಿಯಾರರನ್ನು ಕೆಣಕುವುದೆಂದರೆ, ತನ್ನ ಕೆಲಸಕ್ಕೆ ತಾನೇ ಸಂಚಕಾರ ತಂದುಕೊಂಡ ಹಾಗೆ. ಉಪಾಧ್ಯಾಯ ವೃತ್ತಿಯಿಂದ ಹೊರಬಿದ್ದ ಬಳಿಕ ರೈತರ ನಡುವಿನ ತನ್ನ ದುಡಿಮೆಯೂ ಕೊನೆಗಂಡಹಾಗೆ, ಇದು ಸ್ಪಷ್ಟವಾಗಿದ್ದ ಮಾಸ್ತರು, ಭಾವನೆಗಳನ್ನು ತನ್ನ ಹತೋಟಿಯೊಳಗಿಟ್ಟು, ತಣ್ಣಗಿರಲು ಯತ್ನಿಸಿದರು. ನೇರವಾಗಿ ಕುಳಿತಿರಲಾರದೆ ಸ್ವಲ್ಪ ಕುಗ್ಗಿ, ಒಣಗಿಹೋಗಿದ್ದ ತುಟಿಗಳನ್ನು ನಾಲಿಗೆಯಿಂದ ಸವರಿದರು.
ಮಾಸ್ತರ ಮೌನವನ್ನು ಕಂಡು ಜಮೀನ್ದಾರರಿಗೆ, ತಮ್ಮ ಮಾತು ಪರಿಣಮಕಾರಿಯಾಯಿತೆಂಬ ಅಭಿಪ್ರಾಯ ಹೆಚ್ಚು ದೃಢವಾಯಿತು. ಅವರು ಊಳಿಗದವನನ್ನು ಕರೆದು ಚಹ ತರಲು ಹೇಳಿದರು. ಮಾಸ್ತರ ಸುಖದುಃಖ ವಿಚಾರಿಸುತ್ತ ಅವರೆಂದರು:
"ಶಾಲೆಯಲ್ಲಿ ನೀವು ಇರೋದಕ್ಕೆ ಎಲ್ಲಾ ಅನುಕೂಲವಾಗಿದೆಯೋ?"
"ಇದೆ" ಎಂದು ಮಾಸ್ತರು ಉತ್ತರ ಕೊಟ್ಟರು. ಸ್ವರ ಕ್ಷೀಣವಾಗಿತ್ತು
"ಬೇಕಾದರೆ ಆ ಹಿತ್ತಿಲಲ್ಲೇ ಒಂದಿಷ್ಟು ತರಕಾರಿ ಬೆಳೆಸ್ಬಹುದು. ನಮ್ಮ ರೈತರಿಗೆ ಹೇಳ್ತೇನೆ ಬಂದು ಕೆಲಸ ಮಾಡ್ತಾರೆ."
"ಅಯ್ಯೋ ಬೇಡಿ! ಒಬ್ಬನಿಗೆ ಎಷ್ಟು ಬೇಕು? ಈ ಊರಲ್ಲಿ ತರಕಾರಿಗೇನು