ಪ್ರ.ಶ.ಪು. 6ನೆಯ ಶತಮಾನದ ಗ್ರೀಕ್ ಕವಿ. ಹೆಚ್ಚಾಗಿ ಭಾವಗೀತೆ ಗಳನ್ನು ಬರೆದಿದ್ದಾನೆ. ಉಪಲಬ್ಧವಾಗಿರುವ ಅವನ ಗೀತೆಗಳ ವಸ್ತು ಹೆಚ್ಚಾಗಿ ರಾಜಕೀಯ, ಪ್ರೇಮ, ಯುದ್ಧ, ಕುಡಿತ,-ಇವುಗಳಿಗೆ ಸಂಬಂಧಿಸಿವೆ. ಅಂದಿನ ಆಡುಭಾಷೆಯಾದ ಈಯೋಲಿಕ್ ಅನ್ನೇ ತನ್ನ ಗೀತೆಗಳಲ್ಲಿ ಬಳಸಿದ. ಬರೆವಣಿಗೆಯಲ್ಲಿ ಆವೇಗಪರತೆ ಪ್ರಧಾನವಾಗಿದ್ದರೂ ರಮ್ಯತೆಯಿದೆ. ಇವನು ಶ್ರೀಮಂತನಾಗಿದ್ದರೂ ಗ್ರೀಸ್ನ ನಿರಂಕುಶ ಪ್ರಭುಗಳ ವೈರತ್ವಕ್ಕೆ ಪಕ್ಕಾದ ಇವನು ಸ್ಯಾಫೊವಿನ ಒಡನಾಡಿಯಾಗಿದ್ದನೆಂಬ ಐತಿಹ್ಯವಿದೆ. ಆಲ್ಕೇಯಿಕ್ ವೃತ್ತ ಮಾದರಿಗಳೆಂದು ಹೆಸರು ಪಡೆದು ಮುಂದಿನ ಅನೇಕ ಗ್ರೀಕ್ ಕವಿಗಳಿಗೂ ಹೊರೇಸನಿಗೂ ಮಾದರಿಯಾಗುವಂತಹ ಕಾವ್ಯರಚನಾವಿಧಾನ ಇವನಿಂದ ಪ್ರಾರಂಭ ವಾಯಿತು. ಪ್ರತಿಯೊಂದು ಪದ್ಯಕ್ಕೂ ನಾಲ್ಕು ಸಾಲುಗಳು; ಅವುಗಳಲ್ಲಿ ಹನ್ನೊಂದು ಉಚ್ಚಾರಾಂಶಗಳುಳ್ಳ (ಸಿಲಬಲ್) ಮೊದಲ ಎರಡು ಸಾಲುಗಳೂ ಒಂಬತ್ತು ಮತ್ತು ಹತ್ತು ಉಚ್ಚಾರಾಂಶಗಳುಳ್ಳ ಇರುವ ಮೂರು, ನಾಲ್ಕನೆಯ ಸಾಲುಗಳು ಇರುವುದು ಅದರ ವಿಶಿಷ್ಟಾಂಶವಾಗಿದೆ.