ಕಂಚಿನ ಯುಗ : ಪುರ್ವಶಿಲಾಯುಗ, ನವಶಿಲಾಯುಗ ಸಂಸ್ಕೃತಿಗಳ ಅನಂತರ ರೂಢಿಗೆ ಬಂದ ಸಂಸ್ಕೃತಿಯನ್ನು ಸೂಚಿಸುವ ಯುಗ, ತವರ ಮತ್ತು ತಾಮ್ರಗಳ ಮಿಶ್ರಲೋಹವಾದ ಕಂಚಿನಿಂದ ಮಾಡಿದ ಆಯುಧೋಪಕರಣಗಳ ಬಳಕೆ ಪ್ರಧಾನವಾಗಿದ್ದುದರಿಂದ ಈ ಯುಗಕ್ಕೆ ಕಂಚಿನ ಯುಗವೆಂದು ಹೆಸರು. ಈ ಕಾಲದಲ್ಲೂ ಕಲ್ಲಿನಾಯುಧಗಳು ಬಳಕೆಯಲ್ಲಿ ಮುಂದುವರಿಯುತ್ತಿದ್ದವು. ಈ ಸಂಸ್ಕೃತಿಯ ಮೊದಲ ಹಂತದಲ್ಲಿ ಶುದ್ಧವಾದ ತಾಮ್ರದಿಂದ ಮಾಡಿದ ಮತ್ತು ಕಲ್ಲಿನ ಆಯುಧೋಪಕರಣಗಳು ರೂಢಿಯಲ್ಲಿದ್ದುದರಿಂದ, ಆ ಕಾಲವನ್ನು ತಾಮ್ರ ಶಿಲಾಯುಗವೆಂದು ಪುರಾತತ್ತ್ವಜ್ಞರು ಕರೆದಿದ್ದಾರೆ. ಮೆಸೊಪೊಟೇಮಿಯದ ಪ್ರಾಗೈತಿಹಾಸಿಕ ಯುಗಕ್ಕೆ ಸೇರಿದ ಹಲಾಫ್ ಸಂಸ್ಕೃತಿಯಲ್ಲೂ (ಪ್ರ.ಶ.ಪು. 4000 ವರ್ಷಗಳ ಸು.) ಇರಾನಿನಿಂದ ಸೈಲೀಷಿಯದವರೆಗಿನ ಸಮಕಾಲೀನ ಸಂಸ್ಕೃತಿಗಳಲ್ಲೂ ಮೊದಲ ಬಾರಿಗೆ ತಾಮ್ರ ಉಪಯೋಗಿಸಲ್ಪಟ್ಟಿತು. ಪ್ರ.ಶ.ಪು. 4ನೆಯ ಸಹಸ್ರಮಾನದಲ್ಲಿ ಲೋಹಗಾರಿಕೆ ಬಹಳ ಮುಂದುವರಿದು ಅನೇಕ ರೀತಿಯ ಆಯುಧೋಪಕರಣಗಳು ಬಳಕೆಗೆ ಬಂದು ಮೆಸೊಪೊಟೇಮಿಯದಲ್ಲಿ ನಗರೀಕರಣ ಕಾರ್ಯ ಆರಂಭವಾಯಿತು. ಪ್ರ.ಶ.ಪು. 2000 ವರ್ಷಗಳ ಸುಮಾರಿನಲ್ಲಿ ಮಧ್ಯ ಪ್ರಾಚ್ಯದ ಎಲ್ಲೆಡೆಗಳಲ್ಲೂ ಯುರೋಪಿನ ನವಶಿಲಾಯುಗ ಸಂಸ್ಕೃತಿನೆಲೆಗಳಲ್ಲೂ ತಾಮ್ರದ ಉಪಯೋಗ ರೂಢಿಗೆ ಬಂತು. ಈ ಮೊದಲ ಹಂತದ ಸಂಸ್ಕೃತಿಗಳನ್ನು ತಾಮ್ರಯುಗೀನ ಸಂಸ್ಕೃತಿಯೆಂದು ಕರೆಯಬಹುದಾದರೂ ಬಹುತೇಕ ವಿದ್ವಾಂಸರು ಇದನ್ನು ಕಂಚಿನ ಯುಗದ ಸಂಸ್ಕೃತಿಗಳ ಮೊದಲ ಹಂತವೆಂದು ಪರಿಗಣಿಸುತ್ತಾರೆ. ತಾಮ್ರದೊಂದಿಗೆ ತವರ ಅಥವಾ ಸೀಸವನ್ನು ಮಿಶ್ರಮಾಡಿ ತಯಾರಿಸಿದ ಕಂಚಿನ ಉಪಯೋಗ ಪ್ರ.ಶ.ಪು. 2000ಕ್ಕೂ ಮೊದಲು ಎಲ್ಲೂ ಕಂಡುಬಂದಿಲ್ಲ. ಅನಂತರವೂ ಹಲವು ಶತಮಾನಗಳ ಕಾಲ ಇದರ ಬಳಕೆ ಕಡಿಮೆಯಾಗಿತ್ತು. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ರೂಢಿಗೆ ಬಂದರೂ ಪ್ರ.ಶ.ಪು. 3ನೆಯ ಸಹಸ್ರಮಾನದಲ್ಲಿ ಏಷ್ಯ ಮೈನರ್, ಗ್ರೀಸ್, ಮೆಸೊಪೊಟೇಮಿಯ ಮತ್ತು ಭಾರತಗಳ ಮುಂದುವರಿದ ನಾಗರಿಕತೆಗಳಲ್ಲಿ ಕಂಚಿನ ಉಪಯೋಗ ವಿಶೇಷವಾಗಿ ಕಂಡುಬರುತ್ತದೆ.

ಮೊದಲಿಗೆ ಪ್ರಾಕೃತಿಕವಾಗಿ ತಾಮ್ರದೊಂದಿಗೆ ತವರ ಅಥವಾ ಸೀಸ ಮಿಶ್ರಣವಾಗಿ ಕಂಚಾಗಿದ್ದಿರಬಹುದು. ಪ್ರ.ಶ.ಪು. 3ನೆಯ ಸಹಸ್ರಮಾನದಲ್ಲಿ ತವರದ ನಿಕ್ಷೇಪಗಳ ಪತ್ತೆಯಾದ ಅನಂತರ ಉದ್ದೇಶಪುರ್ವಕವಾಗಿ ತಯಾರಿಸಿದ ಕಂಚಿನ ಬಳಕೆ ರೂಢಿಗೆ ಬಂದಿರಬೇಕು. ಮೊದಲಿಗೆ ಅನಟೋಲಿಯದ (ಈಗಿನ ಟರ್ಕಿ) ಪ್ರದೇಶದಲ್ಲಿ ಇಂಥ ಕಂಚಿನ ಆಯುಧಗಳು ಉಪಯೋಗದಲ್ಲಿದ್ದವು. ಪ್ರಾಕ್ತನ ಜಗತ್ತಿನಲ್ಲಿ ತವರವನ್ನು ವಿಶೇಷವಾಗಿ ಒದಗಿಸುತ್ತಿದ್ದ ಇಂಗ್ಲೆಂಡಿನ ಕಾರ್ನ್‌ವಾಲ್ ಪ್ರಾಂತ್ಯದ ನಿಕ್ಷೇಪಗಳು ಪ್ರ.ಶ.ಪು. 2ನೆಯ ಸಹಸ್ರಮಾನದಲ್ಲಿ ಕಂಡುಹಿಡಿಯಲ್ಪಟ್ಟು ಬಳಕೆಗೆ ಬಂದುವು. ಈ ರೀತಿ ಸು. 2,000 ವರ್ಷಗಳ ಕಾಲ ಮೊದಲಿಗೆ ತಾಮ್ರ, ಅನಂತರ ಕಂಚಿನ ಬಳಕೆ ಪ್ರಮುಖವಾಗಿದ್ದು ಪ್ರ.ಶ.ಪು. 2ನೆಯ ಸಹಸ್ರಮಾನದಂತ್ಯದಿಂದ ಕಬ್ಬಿಣದ ಆವಿಷ್ಕಾರ ನಡೆದು ಕಬ್ಬಿಣದ ಯುಗ ಹುಟ್ಟಿಕೊಂಡಿತು.

ಈ ಕಾಲದಲ್ಲಿ ವ್ಯಾಪಾರ ಮತ್ತು ವೃತ್ತಿನಿಪುಣತೆಗಳು ಬೆಳೆದುಬಂದವು. ಲೋಹದ ಕೆಲಸಗಾರರು, ಅದಿರಿನ ನಿಕ್ಷೇಪಗಳನ್ನು ಅಗೆದು ತೆಗೆಯುತ್ತಿದ್ದವರು ತಮ್ಮ ಕಾರ್ಯಕ್ಷೇತ್ರಗಳಲ್ಲಿ, ನಿಷ್ಣಾತರಾಗಿದ್ದು ವ್ಯವಸಾಯಾದಿ ಆಹಾರಸಂಪಾದನ ಕಾರ್ಯದಲ್ಲಿ ಭಾಗವಹಿಸಬೇಕಾಗಿರಲಿಲ್ಲ. ತಮ್ಮ ಉತ್ಪನ್ನಗಳನ್ನು ರೈತರಿಗೊದಗಿಸಿ, ಅವರಿಂದ ಆಹಾರ ಅಥವಾ ಇತರ ವಸ್ತುಗಳನ್ನು ಅವರು ಪಡೆದುಕೊಳ್ಳುತ್ತಿದ್ದರು. ಈ ರೀತಿ ಅದಲುಬದಲು ವ್ಯಾಪಾರ ಬೆಳೆಯಿತು. ಅದಿರಿನಿಂದ ಲೋಹವನ್ನು ಬೇರ್ಪಡಿಸುವುದು ಮತ್ತು ಆವಶ್ಯಕವಾದ ಆಯುಧೋಪಕರಣಗಳನ್ನು ನಿರ್ಮಿಸುವುದು ಕುಶಲಕಲೆಗಳಾಗಿ ಬೆಳೆದುವು. ಆಯಾ ವೃತ್ತಿಗೆ ಸಂಬಂಧಿಸಿದ ಕುಶಲ ಕೆಲಸಗಾರರ ಸಂಘಗಳು ಹುಟ್ಟಿಕೊಂಡವು. ವೃತ್ತಿಸಂಬಂಧವಾದ ರಹಸ್ಯಗಳನ್ನು ಅವುಗಳ ಸದಸ್ಯರು ಜತನದಿಂದ ಕಾಪಾಡಿಕೊಳ್ಳುತ್ತಿದ್ದರು. ನವಶಿಲಾಯುಗದಲ್ಲಿ ಪ್ರತಿಯೊಂದು ಕುಟುಂಬ ಮತ್ತು ಪಂಗಡ ಸ್ವಯಂಪುರ್ಣವಾಗಿರುತ್ತಿದ್ದರೆ ಈ ಕಾಲದಲ್ಲಿ ಸಮಾಜದ ವ್ಯಕ್ತಿಗಳು ಪರಸ್ಪರಾವಲಂಬನೆಯಿಂದ ಜೀವಿಸುತ್ತಿದ್ದುದು ಮಾತ್ರವಲ್ಲ, ದೂರಪ್ರದೇಶಗಳಲ್ಲಿ ಉತ್ಪಾದಿಸುತ್ತಿದ್ದ ವಸ್ತುಗಳನ್ನು ವ್ಯಾಪಾರ ಮುಖೇನ ಪಡೆಯಬೇಕಾಗಿತ್ತು. ಪ್ರತಿಯೊಂದು ವೃತ್ತಿಯವರೂ ತಮಗೆ ಬೇಕಾದುದಕ್ಕಿಂತ ಹೆಚ್ಚಿನ ಉತ್ಪನ್ನಗಳನ್ನು ಇತರರಿಗೆ ನೀಡಿ ಅವರಿಂದ ಅವರ ಉತ್ಪನ್ನಗಳನ್ನು ತಾವು ಪಡೆಯುತ್ತಿದ್ದರು. ಇದರಿಂದ ಒಂದು ರೀತಿಯ ಸಹಕಾರೀ ಸಾಮಾಜಿಕ ಜೀವನ ರೂಢಿಗೆ ಬಂತು. ಈ ಯುಗದ ಮತ್ತೆರಡು ಬಹಳ ಮುಖ್ಯ ಆವಿಷ್ಕಾರಗಳೆಂದರೆ ವ್ಯವಸಾಯದ ಪ್ರಗತಿಗೆ ಸಾಧಕವಾಗಿದ್ದು ಎತ್ತುಗಳಿಂದ ಎಳೆಯಲ್ಪಡುತ್ತಿದ್ದ ನೇಗಿಲು ಮತ್ತು ವ್ಯಾಪಾರದ ಸಾಮಾನುಗಳನ್ನು ದೂರ ಪ್ರದೇಶಗಳಿಂದ ಸಾಗಿಸಲು ಅತ್ಯುಪಯುಕ್ತವಾದ ಗಾಡಿಯ ಚಕ್ರ. ಈ ಎರಡು ಶೋಧನೆಗಳಿಂದ ಜನಜೀವನ ರೀತಿಯಲ್ಲಿ ಕ್ರಾಂತಿಕಾರೀ ಬದಲಾವಣೆಗಳು ಸಂಭವಿಸಿ ಸಂಪದಭಿವೃದ್ಧಿಗೆ ಕಾರಣವಾಯಿತು. (ಬಿ.ಕೆ.ಜಿ.; ಎ.ವಿ.ಎನ್.)


       ಬೇರೊಂದು  (ಇಂಗ್ಲೆಂಡ್  ಲೇಖನದ ನಭಾಗ? )

ಪ್ರ.ಶ.ಪು. 2000 ವರ್ಷಗಳ ಅನಂತರ ಲೋಹಗಳು ಉಪಯೋಗಕ್ಕೆ ಬರಲಾರಂಭಿಸಿ ಕಂಚಿನ ಯುಗ ಪ್ರಾರಂಭವಾಯಿತೆನ್ನಬಹುದು. ಈ ಕಂಚಿನಯುಗದ ಪ್ರಾರಂಭ ಉತ್ತರ ಯುರೋಪಿನಿಂದ ಇಂಗ್ಲೆಂಡಿಗೆ ವಲಸೆ ಬರಲಾರಂಭಿಸಿದ ಬೆಲ್ ಬೀಕರ್ ಎಂದು ಹೆಸರಾಗಿರುವ ವಿಶಿಷ್ಟ ಸಂಸ್ಕೃತಿಯೊಂದರಿಂದ ಗುರುತಿಸಲ್ಪಡುತ್ತದೆ. ಕೆಂಟ್, ಸಸೆಕ್ಸ್, ವೆರ್ಸೆಕ್ಸ್, ಯಾರ್ಕ್ಷೈರ್, ಡಾರ್ಸೆಟ್ ಮುಂತಾದೆಡೆಗಳಲ್ಲಿ ಈ ಬೀಕರ್ ಎಂಬ ವಿಶಿಷ್ಟ ರೀತಿಯ ಜಾಡಿಗಳು ಈ ಜನರ ಸಮಾಧಿಗಳಲ್ಲಿ ಕಂಡುಬಂದಿವೆ. ಈ ಜನ ಬಿಲ್ಲು, ಹಿಡಿಯಿದ್ದ ಬಾಕು, ಈಟಿ ಮುಂತಾದ ತಾಮ್ರದ ಆಯುಧಗಳಲ್ಲದೆ, ಚಿನ್ನ, ತಾಮ್ರ ಮುಂತಾದ ಲೋಹಗಳ ಆಭರಣಗಳನ್ನು ಬಳಸುತ್ತಿದ್ದರು. ಇವರು ಯುರೋಪಿನ ಹಲವಾರು ಪ್ರದೇಶಗಳಲ್ಲಿ ದೊರಕುತ್ತಿರಬಹುದಾಗಿದ್ದ ಚಿನ್ನ, ತಾಮ್ರ, ಶಿಲಾರಾಳ (ಅಂಬರ್), ಜೈಟ್ (ಒಂದು ಬಗೆಯ ಕಲ್ಲಿದ್ದಲಿನಂತಹ ಖನಿಜ) ಮುಂತಾದವುಗಳನ್ನು ಹುಡುಕುತ್ತಾ ಬಂದವರು. ಇವರು ಇಂಗ್ಲೆಂಡ್, ಯುರೋಪ್ ಮತ್ತಿತರ ಪ್ರದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಬೆಳೆಸಿಕೊಂಡರು. ಆದ್ದರಿಂದ ಇತರ ಸಂಸ್ಕೃತಿಗಳ ಸಂಪರ್ಕವೂ ಹೆಚ್ಚಿತು. ಈ ಕಾರಣಗಳ ದೆಸೆಯಿಂದ ಪ್ರ.ಶ. ಪು. 1600-1400 ವರ್ಷಗಳ ಮಧ್ಯಕಾಲದಲ್ಲಿ ಸುಪ್ರಸಿದ್ಧವಾದ ಸ್ಟೋನ್ ಹೆಂಜ್, ವೆಸ್ಸಿಕ್ಸಿನಲ್ಲಿ ನಿರ್ಮಿತವಾಯಿತು (ನೋಡಿ- ಸ್ಟೋನ್-ಹೆಂಜ್). ಕಂಚಿನ ಯುಗದ ಮಧ್ಯಹಂತದಲ್ಲಿ (ಪ್ರ.ಶ.ಪು. 1400-5000) ಶಾಂತಿಯುತವಾದ ಸಂಸ್ಕೃತಿ ಕ್ರಮೇಣ ಬೆಳೆಯಿತು. ವಿಲ್ಟ್ಷೈರ್ ಪ್ರದೇಶದಲ್ಲಿ ಉದ್ದವಾದ ಮಣ್ಣಿನ ದಿಬ್ಬಗಳ ಕೆಳಗೆ ಶವಸಂಸ್ಕಾರ ಮಾಡುತ್ತಿದ್ದ ಆ ಕಾಲದ ಜನ ಕಂಚಿನ ಆಯುಧಗಳನ್ನು ಉಪಯೋಗಿಸುತ್ತ, ಪಶುಪಾಲನೆಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿದ್ದರು. ಡೆವೆರೆಲ್ ರಿಂಬುರಿಯೆಂದು ಹೆಸರಾಗಿರುವ ಈ ಸಂಸ್ಕೃತಿಯಲ್ಲಿ ಚಪ್ಪಟೆಯಾದ ಸಮಾಧಿಗಳ, ಶವಜಾಡಿಗಳ ಸ್ಮಶಾನಗಳ ಜೊತೆಗೆ ಕಲ್ಲಿನ ವರ್ತುಲಸಮಾಧಿಗಳೂ ಬಳಕೆಗೆ ಬಂದವು. ಕಂಚಿನ ಯುಗದ ಸಂಸ್ಕೃತಿಯ ಕಡೆಯ ಹಂತದಲ್ಲಿ (ಪ್ರ.ಶ.ಪು. 900-500) ಯುರೋಪಿನೊಡನೆ ವ್ಯಾಪಾರ ಪುನರಾರಂಭವಾಯಿತು ಮತ್ತು ಮುಂದಿನ ಹಂತದಲ್ಲಿ ವ್ಯವಸಾಯ ಮತ್ತು ಗ್ರಾಮೀಣ ಕೈಗಾರಿಕೆಗಳು ಬೆಳೆಯಲು ಕಾರಣವಾಯಿತು. ಈ ಹಂತದ ಕೊನೆಗಾಲದಲ್ಲಿ ವಿಲ್ಟ್ಷೈರಿನಲ್ಲಿ ಕಬ್ಬಿಣದ ಉಪಯೋಗ ಕಂಡುಬಂದಿದೆ. ಇದೇ ಸಮಯದಲ್ಲಿ ಕೆಲ್ಟಿಕ್ ಜನಾಂಗಗಳು ಇಂಗ್ಲೆಂಡಿಗೆ ಬರಲಾರಂಭಿಸಿದುವು.