ಎಗ್ಬರ್ಟನ ಮರಣಾನಂತರ ಡೇನರು ಇಂಗ್ಲೆಂಡಿನ ಮೇಲೆ ದಾಳಿ ಮಾಡಿದರು. ಇವರು ಸ್ಕಾಂಡಿನೇವಿಯದವರು. ಇವರು ಇಂಗ್ಲೆಂಡನ್ನು ಕೊಳ್ಳೆಹೊಡೆದರು; ಥೇಮ್ಸ್ ನದಿಯನ್ನು ದಾಟಿದರು. ಆಲ್ಫ್ರೆಡ್ ಡೇನರನ್ನು ಸೋಲಿಸಿದ. ಈತನ ಕೀರ್ತಿ ಅಪಾರವಾಗಿತ್ತು. ಇಂಗ್ಲೆಂಡಿನ ಸಂಸ್ಕೃತಿಗೆ ಈತನ ಕಾಣಿಕೆ ಮಹತ್ತರವಾದದ್ದು. ಈತನ ಕಾಲದಲ್ಲಿ ಲ್ಯಾಟಿನ್ ಭಾಷೆಯಿಂದ ಆಂಗ್ಲ ಭಾಷೆಗೆ ಅನೇಕ ಪುಸ್ತಕಗಳು ಭಾಷಾಂತರವಾದವು. ಈತನ ಕಾಲದಲ್ಲಿದ್ದ ಬೀಡ್ ಎಂಬ ಪಾದ್ರಿ ಮೊದಲ ಬಾರಿಗೆ ಇಂಗ್ಲೆಂಡಿನ ಚರಿತ್ರೆ ರಚಿಸಿದ. ಇವನ ದೂರದರ್ಶಿತ್ವಕ್ಕೆ ಒಂದು ನಿದರ್ಶನವೆಂದರೆ ಆ್ಯಂಗ್ಲೊ-ಸ್ಯಾಕ್ಸನ್ ಕ್ರಾನಿಕಲ್. ಇತಿಹಾಸ ರಚನೆಗೆ ಆಧಾರ ದೃಷ್ಟಿಯಿಂದ ಇದು ಮೊದಲ ಮೈಲಿಗಲ್ಲಾಗಿದೆ (ಆಲ್ಫ್ರೆಡ್-ಮಹಾಶಯ).
ಈತನ ಮಗನಾದ ಎಡ್ವರ್ಡನ ಕಾಲದಲ್ಲಿ ಡೇನರ ರಾಜ್ಯ ಪುಡಿಪುಡಿಯಾಯಿತು. ವೆಸೆಕ್ಸ್ ರಾಜ್ಯಕ್ಕೆ ಡೇನರು ಸಾಮಂತರಾದರು. ಈತನ ಕಾಲದ ಮಹತ್ತ್ವದ ಘಟನೆಯೆಂದರೆ ಹೇಸ್ಟಿಂಗ್ಸ್ ಕದನ. ಎಡ್ವರ್ಡ್ ಬಲಹೀನನಾಗಿದ್ದ. ಅದರ ಲಾಭವನ್ನು ಶ್ರೀಮಂತರು ಪಡೆಯಲು ಯತ್ನಿಸಿದರು. ನಾರ್ಮಂಡಿಯ ವಿಲಿಯಮ್ ಸುಸಜ್ಜಿತ ಸೇನೆಯೊಂದಿಗೆ ಸ್ಯಾಕ್ಸನರ ಮೇಲೆ ದಾಳಿ ಮಾಡಿದ. ಸ್ಯಾಕ್ಸನರ ದೊರೆ ಹೆರಾಲ್ಡ್ ರಣರಂಗದಲ್ಲಿ ಸತ್ತ. 1066ರಲ್ಲಿ ವಿಲಿಯಮ್ ಎಂಬುವನು ದಿ ಕಾಂಕರರ್ ಎಂಬ ಬಿರುದು ಧರಿಸಿ ಪಟ್ಟವೇರಿದ. ಈತ ನಾರ್ಮನ್ ದೊರೆ.