ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೂತನ ಶಿಲಾಯುಗ

ನೂತನ ಶಿಲಾಯುಗದಲ್ಲಿ ಇಂಗ್ಲೆಂಡಿನಲ್ಲಿ ಕಂಡುಬರುವ ಸಂಸ್ಕೃತಿಗಳಲ್ಲಿ ಮೊದಲನೆಯದು ವಿಂಡ್ಮಿ ಸಂಸ್ಕೃತಿ. ಪ್ರ.ಶ.ಪು. 3500ರ ಸುಮಾರಿನಲ್ಲಿ ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಬಳಕೆಗೆ ಬಂದ ಈ ಸಂಸ್ಕೃತಿ ಕಾಲದಲ್ಲಿ ಆಹಾರೋತ್ಪಾದನೆ ಪ್ರಾರಂಭವಾಗಿ ವ್ಯವಸಾಯ ಮುಖ್ಯ ವೃತ್ತಿಯಾಯಿತು. ದಕ್ಷಿಣಭಾಗದಲ್ಲಿ ವಿರಳವಾಗಿದ್ದ ಕಾಡುಪ್ರದೇಶಗಳಲ್ಲಿ ಗೋದಿ ಮತ್ತು ಬಾರ್ಲಿ ಬೆಳೆಗಳನ್ನು ರೂಢಿಸುವುದಲ್ಲದೆ ಆಡು, ಕುರಿ, ಹಂದಿಗಳನ್ನು ಸಾಕುತ್ತಿದ್ದರು. ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಬಿಲ್ಲುಬಾಣಗಳ ಸಹಾಯದಿಂದ ಬೇಟೆಯಾಡುತ್ತಿದ್ದರು. ಬಯಲು ಪ್ರದೇಶದಲ್ಲಿ ಆಯತಾಕಾರದ ಮನೆಗಳಲ್ಲಿ ಸರೋವರ ತೀರಗಳಲ್ಲಿ ವಾಸಿಸುತ್ತಿದ್ದರು. ತಮ್ಮ ದನಗಳಿಗೆ ದೊಡ್ಡಿಗಳನ್ನು ನಿರ್ಮಿಸುತ್ತಿದ್ದರು. ಇವರ ಸಮಾಧಿ ಮತ್ತು ವಾಸಸ್ಥಳಗಲ್ಲಿ ಒರಟಾದ ಹೆಣ್ಣುದೇವತೆಗಳ ಗೊಂಬೆಗಳು ದೊರೆತಿದ್ದು, ಇವರು ಮಾತೃದೇವತೆಯನ್ನು ಪೂಜಿಸುತ್ತಿದ್ದರೆಂಬುದನ್ನು ಸೂಚಿಸುತ್ತದೆ. ಸ್ವಲ್ಪಕಾಲಾನಂತರ ಪಶ್ಚಿಮ ದಿಕ್ಕಿನಿಂದ ಬೃಹತ್ ಶಿಲಾಸಮಾಧಿಗಳ ಉಪಯೋಗ ಪ್ರಮುಖವಾಗಿದ್ದ ನೂತನ ಶಿಲಾಯುಗ ಸಂಸ್ಕೃತಿ ವೇಲ್ಸ್, ಸ್ಕಾಟ್ಲೆಂಡ್ ಮತ್ತು ಪಶ್ಚಿಮ ಇಂಗ್ಲೆಂಡ್ ಪ್ರದೇಶಗಳಲ್ಲಿ ಪ್ರಬಲವಾಯಿತು. ಕಾಟ್ಸ್ವಲ್ಡ್, ವಿಲ್ಟ್ಷೈರ್, ಆವ್ಬರಿ, ಸಾಮರ್ಸೆಟ್ ಮೊದಲಾದ ಪ್ರದೇಶಗಳಲ್ಲಿ ಹರಡಿದ ಈ ಸಂಸ್ಕೃತಿಯಲ್ಲಿ ಸಾಮುದಾಯಿಕವಾದ ದೊಡ್ಡಕಲ್ಲುಗಳಿಂದ ನಿರ್ಮಿತವಾದ ಸಮಾಧಿಗಳು ರೂಪಾಂತರಗಳಲ್ಲಿ ಉಪಯೋಗಕ್ಕೆ ಬಂದವು. ವ್ಯವಸಾಯ, ಪಶುಪಾಲನೆ, ಕಾಡುಗಳನ್ನು ಕಡಿಯುವುದು, ಮಣ್ಣಿನ ಪಾತ್ರೆಗಳ ನಿರ್ಮಾಣ ಇವರ ಮುಖ್ಯ ವೃತ್ತಿಗಳಾಗಿದ್ದವು. ನೂತನಶಿಲಾಯುಗ ಸಂಸ್ಕೃತಿಗಳೆಂದು ಕರೆಯಲ್ಪಡುವ ಈ ಸಂಸ್ಕೃತಿಗಳು ಅಲ್ಲಲ್ಲಿ ಕಂಡುಬರುತ್ತವೆ. ಪೀಟರ್ ಬರೋ ಸಂಸ್ಕೃತಿಯೆಂದು ಹೆಸರಾದ ಈ ಸಂಸ್ಕೃತಿಯಲ್ಲಿ ಬೇಟೆಗಾರಿಕೆ, ಮೀನು ಹಿಡಿಯುವಿಕೆ ಮುಂತಾದ ಆಹಾರ ಸಂಗ್ರಹಣ ಪದ್ಧತಿಗಳು ಆಹಾರೋತ್ಪಾದನಾ ಪದ್ಧತಿಯೊಂದಿಗೆ ಮುಂದುವರಿದವು. ಥೇಮ್ಸ್ ನದೀ ಕಣಿವೆ, ಈಸ್ಟ್ ಆಂಗ್ಲಿಯ, ಸಸೆಕ್ಸ್, ಬ್ರೈಟನ್ ಮತ್ತು ವೆಸಿಕ್ಸ್ ಪ್ರದೇಶಗಳಲ್ಲಿ ಈ ಸಂಸ್ಕೃತಿಯ ಕುರುಹುಗಳು ಕಂಡುಬಂದಿವೆ. ಇದೇ ಗುಂಪಿಗೆ ಸೇರಿದ ಮತ್ತೊಂದು ಸಂಸ್ಕೃತಿಯನ್ನು ಸ್ಕರಬ್ರೇ ಸಂಸ್ಕೃತಿಯೆಂದು ಕರೆಯುತ್ತಾರೆ. ಈ ಸಂಸ್ಕೃತಿಗಳ ಕಾಲ ಸು. ಪ್ರ.ಶ.ಪು. 3000 ಎಂದು ನಿರ್ದೇಶನ ಮಾಡಲಾಗಿದೆ.