ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಧ್ಯ ಪ್ಲಿಸ್ಟೋಸೀನ್ ಯುಗ

ಮಧ್ಯ ಫ್ಲಿಸ್ಟೊಸೀನ್ ಯುಗದಲ್ಲಿ ಇಂಗ್ಲೆಂಡಿನ ಅನೇಕ ಪ್ರದೇಶಗಳಲ್ಲಿ ಕೈಗೊಡಲಿ ಸಂಸ್ಕೃತಿಯ ಆಯುಧಗಳು ಬಳಕೆಯಲ್ಲಿದ್ದವು. ಸ್ವಾನ್ಸ್ಕೂಂಬಿನ ಮಾನವಪಳೆಯುಳಿಕೆಗಳ ಜೊತೆಯಲ್ಲಿ ಕೈಗೊಡಲಿಗಳು ದೊರೆತಿವೆ. ಈ ಕೈಗೊಡಲಿಗಳು ಅಷೂಲಿಯನ್ ಹಂತಕ್ಕೆ ಸೇರಿದವು. ಬಹುಶಃ ಈ ಕಾಲದಲ್ಲೇ ಥೇಮ್ಸ್ ನದಿ ದಡದಲ್ಲಿ ಕ್ಲಾಕ್ಟನ್ ಆನ್ ಸೀ ಎಂಬಲ್ಲೂ ಮತ್ತಿತರ ಪ್ರದೇಶಗಳಲ್ಲೂ ಕ್ಲಾಕ್ಟೋನಿಯನ್ ರೀತಿಯ ಚಕ್ಕೆ ಕಲ್ಲಿನಾಯುಧಗಳು ದೊರಯುತ್ತವೆ. ಹಿಮಾಚ್ಛಾದಿತ ಕಾಲದಲ್ಲಿ ಶೀತ ಹವಾಗುಣ ಪ್ರಬಲವಾಗಿದ್ದಾಗ ಬೆಚ್ಚನೆಯ ಹವೆಗೆ ಹೊಂದಿಕೊಂಡಿದ್ದ ಕೈಗೊಡಲಿ ನಿರ್ಮಿಸುತ್ತಿದ್ದ ಮಾನವರು ಯುರೋಪ್ ಆಫ್ರಿಕಗಳ ದಿಕ್ಕಿನಲ್ಲಿ ಹಿಂತಿರುಗಿದಾಗ ಆ ಪ್ರದೇಶಗಳಲ್ಲಿ ಈ ಚಕ್ಕೆ ಕಲ್ಲಿನಾಯುಧಗಳ ಸಂಸ್ಕೃತಿ ಹರಡಿ ಪ್ರಬಲವಾಯಿತು. ಈ ಮೇಲಿನ ಸಂಸ್ಕೃತಿಗಳು ಸುಮಾರು ಪ್ರ.ಶ.ಪು.5 ಲಕ್ಷದಿಂದ 2 ಲಕ್ಷ ವರ್ಷಗಳವರೆಗೂ ರೂಢಿಯಲ್ಲಿದ್ದವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯ ಪ್ಲಿಸ್ಟೊಸೀನ್ ಯುಗದ ಅಂತ್ಯಭಾಗದಲ್ಲಿ ಇಂಗ್ಲೆಂಡಿನ ಸಪೋಕ್ ಪ್ರದೇಶಕ ಹೈ ಲಾಡ್್ಜ ಮುಂತಾದೆಡೆಗಳಲ್ಲಿ ಕೈಗೊಡಲಿ ಮತ್ತು ಕ್ಲಾಕ್ಟೋನಿಯನ್ ಎರಡರ ಮಿಶ್ರಸಂಸ್ಕೃತಿಗಳು ಬಳಕೆಯಲ್ಲಿದ್ದವು. ಮಾನವ ನಾಗರಿಕತೆಯ ಮುಂದಿನ ಹಂತಗಳಲ್ಲಿ ಕಂಡುಬರುವ ಮತ್ತು ಅದರ ಅಭಿವೃದ್ಧಿಗೆ ಬಹುಮಟ್ಟಿಗೆ ಕಾರಣವಾಗಿರುವ ಈ ಬೇರೆ ಬೇರೆ ಸಂಸ್ಕೃತಿಗಳ ಮಿಶ್ರಣಕಾರ್ಯ ಈ ಯುಗದಲ್ಲಿ ಪ್ರಾರಂಭವಾಗಿರುವುದು ಗಮನಾರ್ಹ. ಬಹುಶಃ ಈ ರೀತಿಯ ಮಿಶ್ರಸಂಸ್ಕೃತಿಗಳು ಸುಮಾರು ಒಂದು ಲಕ್ಷ ವರ್ಷಕಾಲ ಇಂಗ್ಲೆಂಡಿನಲ್ಲಿ ಬಳಕೆಯಲ್ಲಿದ್ದಂತೆ ತಿಳಿದುಬರುತ್ತದೆ.