ಅಚೇತನವಪ್ಪ ಶಿಲಾಮಯಲಿಂಗವು, ಸಚೇತನವಪ್ಪ



Pages   (key to Page Status)   


ಅಚೇತನವಪ್ಪ ಶಿಲಾಮಯಲಿಂಗವು
ಸಚೇತನವಪ್ಪ ಭಕ್ತನ ಭವರೋಗವನೆಂತು ಕಳೆಯಬಲ್ಲುದು ? ಎಂಬ ಬರುಮಾತಿನ ಮಾನವರ ಮಾತ ಕೇಳಲಾಗದು. ಅದೇನು ಕಾರಣವೆಂದಡೆ
ಮಿಸುನಿಯಿಂದುಂಟಾದ ಕಟಕ ಮಕುಟಾದಿ ತೊಡವುಗಳು ಮಿಸುನಿಯಲ್ಲದೆ ಮತ್ತೊಂದು ರೂಪಾಗಬಲ್ಲುದೆ ಹೇಳಾ ? ಅದುಕಾರಣ_ಧರೆಯ ಕಠಿಣಾಂಗವಾದ ಶಿಲೆಯಲ್ಲೂ ಶಿವಾಂಶವಿರ್ಪುದು ಸಹಜವೆಂದರಿತು ಶ್ರೀಗುರು
ಶಾಸ್ತ್ರಸಮ್ಮತವಾದ ಶಿಲಾಮಯಲಿಂಗದಲ್ಲಿ ವ್ಯಕ್ತವಾಗುವಂತೆ ಶಿವಕಲೆಯ ಪ್ರತಿಷಿ*ಸಿ
ಇಷ್ಟಲಿಂಗವಾಗಿ ಮಾಡಿ ಶಿಷ್ಯನ ಕರಕಮಲಕ್ಕೆ ಕರುಣಿಸಿಕೊಟ್ಟು
ಆ ನಿರಾಕಾರವಪ್ಪ ಪರಬೊಮ್ಮವೆ ತಿಳಿದುಪ್ಪ ಬಿಳಿದುಪ್ಪವಾದಂತೆ ಸಾಕಾರವಾಗಿ ನಿನ್ನ ಕರಕಮಲಕ್ಕೆ ಬಂದಿರ್ಪುದು. `ಯದ್ಭಾವಸ್ತದ್ಭವತಿ ಎಂಬ ಪ್ರಮಾಣವುಂಟಾಗಿ
ಇದನಿನ್ನು ಸದ್ಭಾವದಿಂದರ್ಚಿಸೆಂದು ಅಪ್ಪಣೆಯಿತ್ತನು. ಈ ಮರ್ಮವನರಿಯದೆ ಮನಬಂದಂತೆ ಮಾತಾಡುವ ಮನುಜರ ಹುಳುಗೊಂಡದಲ್ಲಿಕ್ಕದೆ ಮಾಣ್ಬನೆ ನಮ್ಮ ಕೂಡಲಚೆನ್ನಸಂಗಮದೇವ ?