ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ ಎನ್ನ ತನ್ನಂತೆ ಮಾಡಿತ್ತಾಗಿ
ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ. ಮತ್ತೆ ಅನ್ಯವಿಚಾರವನೆಂತೂ ಅರಿಯೆನು. ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು ನಿಮ್ಮ ಮರೆಹೊಕ್ಕೆನಾಗಿ
ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು ? ಗುಹೇಶ್ವರನ ಸಾಕ್ಷಿಯಾಗಿ ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ. ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೊಡಾ ಚೆನ್ನಬಸವಣಾ