ಕೇರಾಫ್ ಕಾಗದ
ಇವತ್ತಿನ ಟಪಾಲಿನಲ್ಲಿ ಒಂದು ಕಾಗದವಿತ್ತು. ಶೀಲಾ ಕೇರಾಫ್
ರಾಧಾ ಕೃಷ್ಣಯ್ಯ ಇತ್ಯಾದಿ....ಇತ್ಯಾದಿ. ಹುಡುಗರ ಹಸ್ತಾಕ್ಷರ ಇದ್ದ ಹಾಗಿತ್ತು.
ನಾನು-ರಾಧಾಕೃಷ್ಣಯ್ಯ-ಕನ್ನಡಕವೇರಿಸಿ ಪರೀಕ್ಷಿಸಿ ನೋಡಿದೆ. ನಮ್ಮೂರಿ
ನದೇ ಅಂಚೆ ಮುದ್ರೆ. ನನ್ನ ಮಗಳಿಗೆ ಪ್ರೇಮ ಪತ್ರ ಬಂದಿರಬಹುದು ಎಂದು
ಕೊಂಡಾಗ ನಗು ಬಂತು. ಮತ್ತೆ ಯೋಚನೆ.
ಒಂದು ಕ್ಷಣ "ಹುಂ" ಎನ್ನುತ್ತಾ ಅದನ್ನೆತ್ತಿಕೊಂಡೊಯ್ದು ಶೀಲಳ
ಮೇಜಿನ ಮೇಲಿರಿಸಿದೆ. ಮಗಳಿಗೆ ಬಂದ ಕಾಗದವನ್ನು ಕೂಡು ಒಡೆದು
ನೋಡುವ ಅಭ್ಯಾಸವಿಲ್ಲ ನನಗೆ.
ನನಗೇನೂ ವರ್ಷ ಐವತ್ತಾಯಿತು. ವಿಜ್ನಾನದ ಪ್ರಗತಿಯಲ್ಲಿ ವಿಶ್ವಾಸ
ವುಳ್ಳ ಇಪ್ಪತ್ತನೆ ಶತಮಾನದ, ನವನಾಗರಿಕ ನಾನು. ಎಂದು ಭಾವಿಸಿ
ಕೊಂಡು ಬೆಳೆದೇ ಮುಪ್ಪಿನ ಗೆಳೆತನ ಸಂಪಾದಿಸಿದ್ದೇನೆ. ಮಕ್ಕಳನ್ನು
ದೊಡ್ದವರನ್ನಾಗಿ ಮಾಡುವ ವಿಷಯದಲ್ಲಿ ತುಂಬ ಉದಾರ ಮನೊಭಾವ
ನನ್ನದು. ಹೀಗಿದ್ದರೂ ಆ ಕಾಗದ ಯಾಕೋ.......
ಮನಸ್ಸಿನಲ್ಲೊಂದು ಕಳವಳ. "ಛಿ! ಛಿ! ಪತ್ರವ್ಯವಹಾರದ ಸ್ವಾತಂ
ತ್ರ್ಯವೂ ಇಲ್ಲವೆ ಮಗಳಿಗೆ" ಎಂದು ನನ್ನನ್ನು ಸಂತೈಸಿಕೊಂಡೆ. ಆದರೆ
ಮರುಕ್ಷಣದಲ್ಲೇ..........ಹುಡುಗ ಎಂಥವನೋ ಏನೋ.......ಯಾರಾದರೊ ದುರ್ನಡತೆಯವನಾಗಿದ್ದರೆ,-ಪೋಲಿಯೋ ಖಿಲಾಡಿಯೋ....."ಛೆ! ಛೆ! ಅಂಥ
ವರ ಸಹವಾಸ ಶೀಲಾ ಮಾಡುತ್ತಾಳೆಯೆ?"
ಯಾಕೊ ಆ ಹಗಲೆಲ್ಲ ಮನಸ್ಸಿಗೆ ನೆಮ್ಮದಿ ಇರಲಿಲ್ಲ.
ಯಾವುದೋ ಹುಡುಗಿಯ ಮದುವೆಗೆ. ಹಾಗಾಗಿ, ಶೀಲಾ ಮತ್ತು ನನ್ನದೇ
ಕಾರಭಾರ ಮನೆಯಲ್ಲಿ.
ಐದು ಗಂಟೆಗೆ ಸ್ಟವ್ ಹಚ್ಚಿ ಕಾಫಿಗೆ ನೀರಿಟ್ಟೆ. ಆರೆಂಟು ಶಾಂಗ್ರಿಲಾ
ಬಿಸ್ಕತ್ತನ್ನು ಎತ್ತಿಹೊರಗಿರಿಸಿದೆ. ಐದು-ಇಪ್ಪತ್ತಕ್ಕೆ ಸರಿಯಾಗಿ ಕಾಲೇಜ್
ಬಸ್ ಕಾಣಿಸಿತು. ಇಳಿದು ಬಂದಳು ನನ್ನ ಶೀಲಾ.
"ತಡಿಯಣ್ಣ, ನಾನು ಡಿಕಾಕ್ಷನ್ ಇಳಿಸ್ತೀನಿ."
"ಎಲ್ಲಾ ರೇಡಿ ಆಗೋಯ್ತಮ್ಮ. ರೂಮಿಗೆ ಹೋಗು. ಸೀರೆ
ಬದಲಿಸ್ಕೋ. ವಾಕಿಂಗ್ ಹೋಗೋಣವಂತೆ. ಅಡುಗೆ ತಡವಾಗಿ ಮಾಡಿದ
ರಾಯಿತು.
"ಹೂನಣ್ಣ."
"ರೂಮಿಗೆ ಹೋಗು" ಎಂದೆ ಹೌದು. ರೂಮಿಗೆ ಹೋದಾಗ ಆ
ಕಾಗಾದ ಸಿಗುವುದು ಆಕೆಗೆ!
ನಾನು ಊಹಿಸಿದ್ದ ಹಾಗೆಯೇ ಹತ್ತು ನಿಮಿಷ ಹಿಡಿಯಿತು ಶೀಲಾ
ಹೊರಗೆ ಬರಲು. ಮುಖ? ಹೌದೋ ಅಲ್ಲವೋ ಅನ್ನುವ ಹಾಗೆ ಲಜ್ಜೆ
ಗೆಂಪಿಗೆ ತಿರುಗಿತ್ತು. ನೋಡಿಯೂ ನೋಡದವನ ಹಾಗೆ ಇದ್ದು ಕೊಂಡೆ.
ತಾನಾಗಿಯೇ ಮಗಳೇ ಹೇಳಬಹುದು ಎನ್ನುವ ಆಸೆ ನನಗೆ. ಆಕೆಯ
ಮೇಲಿನ ಪ್ರೀತಿಗೆ ನಾನೇ ಸರ್ವಾಧಕಾರಿ ಎಂದು ತಿಳಿದಿದ್ದೆ. ಗುಗ್ಗು ನಾನು.
ಆಧುನಿಕ ಎನ್ನಿಸಿಕೊಂಶಡರೂ ಎಂಥ ವಿಚಾರಗಳು ನೋಡಿ!
ಅಮೇರಿಕದಿಂದ ವಾಪಸು ಬಂದಿರುವ ಆಕೆಯ ಲೆಕ್ಚರರ್ ಒಬ್ಬರ
ವಿಷಯ ಮಾತಾಡಿದೆವು. ಹಿಸ್ಟರಿ ಪ್ರೊಫೆಸರರ ಕುರಿತಾದ ಕಿಂವದಂತಿ ಕಥೆ
ಒಂದು....ಚುನಾವಣೆ.........
ಮಾತನಾಡುತ್ತಾ, ಬಿಸ್ಕತ್ತು ಕಾಫಿ ಒಳಗೆ ಇಳಿದಿದ್ದುವು.
ಸಿದ್ಧವಾಗಿ ಬಂದಳು ಶೇಲಾ.
ಶೀಲಾ ಸುಂದರಿ. ಇಲ್ಲ, ತಪ್ಪು ತಿಳಿಯಬೇಡ. ತಂದೆ ಮಗಳ ವರ್ಣನೆ
ಮಾಡಬಾರದೆಂದು ಯಾವ ಶಾಸ್ತ್ರದಲ್ಲಿದೆ? ಇದು ಕುತೂಹಲದ ಹುಡು
ಗರಿಗಾಗಿ ಜಾಹಿರಾತು ಎಂದು ತಿಳಿಯಬಾರದು ಅಷ್ಟೆ!
ಗಂಭೀರವಾಗಿ ಇಬ್ಬರೂ ನಡೆದು ಹೋಗುವದು ನಮ್ಮ ಮಾಮೂಲಿನ
ವಣಕ್ಕೆ ಮುಖತಿರುವಿ, ಕುಳಿತ ಮೇಲೆ ಮಾತ್ರವೇ ಮಾತುಕತೆ.
ಆದರೆ ನಮ್ಮ ಹುಡುಗರೋ ! ನಾನು ಶೀಲಾ ನಡೆದು ಹೋಗುತ್ತಿ
ದ್ದರೆ, ನನ್ನನ್ನು ಯಾರೂ ಲಕ್ಷಿಸುವದೇ ಇಲ್ಲ. ಎಲ್ಲರೂ ಶೀಲಳನ್ನು ನೋಡು
ವವರೇ! ಅವರ ತುಂಟು ತುಟಿಗಳ ಕೃತಕ ಕಂಪನ, ಕಣ್ಣುಗಳ ಬಾಷೆ, ಕ್ಷಣಿಕ
ಹೃದಯ ಸ್ತಂಭನ - ಅಬ್ಬಬ್ಬ ! ಮೂವತ್ತು ವರ್ಷಗಳ ಹಿಂದೆ ನಾನೂ ನನ್ನ
ಓರಿಗೆಯವರೂ ರಸಿಕ ಶಿಖಾಮಣಿಗಳೆಂದು ಪ್ರಖ್ಯಾತರಾದವರು. ಆದರೆ
ಈಗಿನವರಷ್ಟು ಎದೆಗಾರಿಕೆ ಇರಲಿಲ್ಲವಪ್ಪ ನಮಗೆ !
ನಮ್ಮ ಶೀಲಾ ಪೆದ್ದು ಹುಡುಗಿ ಎಂತ ನಾನೆಂದೂ ತಿಳಿದವನಲ್ಲ.
ದೃಷ್ಟಿ ಹಾಯಿಸುವ ನೂರುಹುಡುಗರನ್ನೆಲ್ಲ ಕ್ಷಣಾರ್ಧದಲ್ಲೇ ತೂಗಿ ಅಳೆಯ
ಬಲ್ಲ ಸಾಮರ್ಥ್ಯವಂತೆ ಆಕೆ....
ಯೋಚನೆಗೆ ಮತ್ತೆ ತಡೆಯೊಡ್ಡಿತು, ಆ ಕಾಗದ. ನೋಡಿದಿರಾ,
ಶೀಲ ನನಗೆ ಹೇಳಲೇ ಇಲ್ಲ. ಆ ವಿಚಾರ; ಹೋಗಲಿ ಬಿಡಿ. ನನಗೂ
ಅದಕ್ಕೂ ಏನು ಸಂಬಂಧ? ಆಕೆಯ ಮೇಲೆ ನನಗೆ ವಿಶ್ವಾಸವಿಲ್ಲವೆ?
ಆದರೂ....ಆದರೂ....ಒಂದು ವೇಳೆ ಆ ಹುಡುಗ ಶುದ್ಧ ಲಫಂಗ
ನಾದರೆ? ಶೀಲೂ ಮೋಸ ಹೋದರೆ? ಕಲ್ಲನ್ನೇರಿ ಕುಳಿತಾಗ ಸೂರ್ಯ
ರಶ್ಮಿಯ ಹೊಂಬಣ್ಣ ಶೀಲಳ ಮುಖಕ್ಕೆ ಹೊಸ ಶೋಭೆ ತಂದಿತು.
ಎಷ್ಟೊಂದು ಉಲ್ಲಸಿತಳಾಗಿದ್ದಾಳೆ ಹುಡುಗಿ ! ಹುಂ. ಎಲ್ಲಿ ಅವಿತಿಟ್ಟಳೋ
ಆ ಕಾಗದಾನ ? ಜಂಪರಿನೊಳಗೆ ? ಹಾಸಿಗೆಯ ಕೆಳಗೆ ? ಪುಸ್ತಕದ....?
ಛೆ! ಆ ಬಗ್ಗೆ ಯೋಚಿಸಬಾರದೆಂದು ಮತ್ತೆ ಮನಸ್ಸು ಬಿಗಿ ಹಿಡಿದೆ.
............
" ಶೀಲಾ "
" ಹೂಂ? "
" ಏಳು ವರ್ಷದ ಹಿಂದೆ, ಅಕ್ಕನನ್ನೂ ನಿನ್ನನ್ನೂ ಇಲ್ಲೇ ಬಿಟ್ಟು
ನಾನೊಬ್ಬನೇ ಹಳ್ಳಿಗೆ ಹೋದದ್ದು ಹತ್ತಾರು ದಿನ, ಗೊತ್ತಾ? "
" ಓಹೋ....ಹತ್ತು ವರ್ಷ ಆಗ ನನಗೆ. "
" ಹೂಂ. ಅಲ್ಲಿ ಶಂಕ್ರಯ್ಯನ ಮನೆಯಲ್ಲಿದ್ದೆ. "
" ಹೂ೦. "
" ಅಲ್ಲೊ೦ದು ತಮಾಷೆಯಾಯ್ತು ಕಣೇ."
" ಹೇಳಣ್ಣ - ಹೇಳಣ್ಣ "
****
ರಾಧಾಕೃಷ್ಣಯ್ಯ ( ನಾನು ) ಹಳ್ಳಿಗೆ ಹೋದಾಗ, ಶಂಕ್ರಯ್ಯನ ಮನೆಗೆ
ಬೇರೆ ಯಾರೋ ಗೆಳೆಯರೂ ಬಂದಿದ್ದರು. ಏನೋ ಆಟದ ಸಾಮಾನು
ಏಜನ್ಸಿ ಇತ್ತಂತೆ ಅವರಿಗೆ.
ಯ್ಯನ ಹೊಸ ದೋಸ್ತಿಯಂತೆ ಆತ.
ಕ್ರಿಸ್ಮಸ್ ಹಬ್ಬದ ಕಾಲ ಆಗ. ತುಂಬ ಒಳ್ಳೆಯವಳು ಆ ಮಿತ್ರರ
ಮಗಳು. ಒಳ್ಳೆ ರಸಿಕ ಹುಡುಗಿ, ಹಳ್ಳಿಯವರ ಹಾಗೆಯೇ ಉಡುಪು ಬದ
ಲಾಯಿಸಿಕೊಂಡಳು ತಮಾಷೆಗೇಂತ. ಕಾಲೇಜು ಓದುವ ಹುಡುಗಿ
ಎಂದು ಯಾರೂ ಹೇಳುವ ಹಾಗಿರಲಿಲ್ಲ.
ಶಂಕರಯ್ಯನವರ ಮಗ ಗೋಪಾಲ ಆ ವರ್ಷವೆಲ್ಲಾ ಮನೆಗೆ ಬರದೆ
ಇದ್ದವನೂ ಆಗಲೇ ಬರಬೇಕೆ ? ಬಿ. ಎ. ಮುಗಿಸಿ ಕೆಲಸ ಸಿಗದೇ ಲಾಟರಿ
ಹೊಡೆಯುತ್ತಿದ್ದ ಮಹಾನುಭಾವ ಆತ !
ಬಂದವನು ಸುಮ್ಮನಿರುವುದುಂಟೆ ?
ಮನೆ ತುಂಬ ಸಾವಿರ ಮಾತಾಡುತ್ತಿದ್ದರು ಎಲ್ಲರೂ. ಆ ನಡುವೆ
ಅವರಿಬ್ಬರೂ ಹೇಗೆ ಬಿಡುವು ಮಾಡಿಕೊಂಡರೋ ?
" ಇಂಗ್ಲಿಷ್ ಬರತ್ತನಿಂಗೆ ? " ಎಂದು ಗೋಪಾಲ ಮೊದಲು
ಕೇಳಿದನಂತೆ.
" ಊಹು೦, " ಎಂದಳು ಹುಡುಗಿ.
" ಹೈಸ್ಕೂಲಿಗೂ ಹೋಗಿಲ್ಲಾನ್ನು "
" ಊಹೂ೦? "
" ಯಾಕೆ ? "
" ಬೇಡ ಅನ್ನಿಸಿತ್ತು, ಹಳ್ಳಿಯವರ ಜತೇಲೇ ಇರೋ ಆಸೆ ನಂಗೆ. "
ಎಂಥ ತುಂಟ ಶಿಖಾಮಣಿ ಆಕೆ ! ಗೋಪಾಲ ಹೊಲವೆಲ್ಲಾ ಸುತ್ತಾಡಿ
ಶದ ಶೂನ್ಯದತ್ತ ದೃಷ್ಟಿಹರಿಸಿದ.
ಅವನಿಗೊಂದು ಶಂಕೆ. " ಹಳ್ಳಿಯವರ ಜತೇಲೇಇರುವ ಆಸೆ " ಎಂದಳಲ್ಲ. ಎಲ್ಲಾದರೂ, ತಾನೊಬ್ಬ ಹಳ್ಳಿ ಮುಕ್ಕ ಅಂತ ಆಕೆ ಲೇವಡಿ
ಮಾಡಿರಬಹುದೆ ? ಥೂ - ಥೂ - ಅಷ್ಠುರಸಿಕತೆ ಎಲ್ಲಿಬಂತು ಅದಕ್ಕೆ ? ಆದರೂ
-ಅಬ್ಬ ಎಂಥ ಮಾಟಗಾತಿ !
ಸಮಸ್ಯೆ ಬಗೆಹರಿಯದೆ ಗೋಪಾಲ ಸಮಯ ಸಾಧಿಸಿ ಒಬ್ಬಳೇ
ಇದ್ದಾಗ ತಾಯಿಯ ಬಳಿಗೆ ಹೋದ.
" ಅವರು ಯಾರೇ ಅಮ್ಮ ? "
"ರಾಧಾಕೃಷ್ಣಯ್ಯ ಅಲ್ವೆನೋ. "
" ಅವರಲ್ಲವಮ್ಮ "
" ಮತ್ತೆ ? "
"ಆ ಇನ್ನೊಬ್ಬರು "
"ಇಲ್ಲ್ನೋಡು ಗೋಪು, ಆ ಹುಡುಗಿ ವಿಚಾರ ಕೇಳ್ತಿರೋದಾದ್ರೆ
ನಂಗೇನೂ ತಿಳಿಯದು. ಅವಳಪ್ಪ ಆಟದ ಸಾಮಾನಿನ ವ್ಯಾಪಾರ ಮಾಡ್ತಾ
ರಂತೆ. ಅವಳಮ್ಮ ಬಹಳ ಒಳ್ಳೆಯವಳು, ಇನ್ನೇನಪ್ಪಾ ? "
ಮತ್ತೆ ಗೋಪಾಲ ಹೊಂಚು ಹಾಕುತ್ತ ಕುಳಿತ. ಮಧ್ಯಾಹ್ನದ
ಹೊತ್ತು ಪಡಸಾಲೆಯಲ್ಲಿ ಆ ಹುಡುಗಿ - ಹೆಸರು ಗೌರಿ - ಒಬ್ಬಳೇ ಇದ್ಧಳು.
" ನಿಮ್ ಫಾದರ್ ಏನ್ಮಾಡ್ಕೊಂಡಿದಾರೆ ?
" ಆಟದ ಸಾಮಾನಿನ ವ್ಯಾಪಾರಿ. "
" ಮಾರಾಟ ಮಾಡೂದೆ ? "
ಗೌರಿ ನಕ್ಕು ಹೇಳಿದಳು :
" ಸುಲಭವಾಗಿ ಸಿಗ್ತೂಂತಂದ್ರೆ ಕೊಂಡ್ಕೋತೀವಿ ! "
ಗಿರ್ರಂದಿತು ಗೋಪುವಿನ ತಲೆ, ಹುಚ್ಚು ಹಿಡಿಯುವ ಸ್ಥಿತಿ ! ಕೊಂಡು
ಕೋತಾಳಂತೆ - ಹುಂ !
ಅಷ್ಟರಲ್ಲೇ ಪರಸ್ಪರ ಪ್ರೀತಿಗೆ ಶುರು. ಗೋಪಾಲ, ರಾಧಾಕೃಷ್ಣಯ್ಯನ
ಬಳಿ ಬಂದ. " ಮಾವಾ ನಿಮ್ಮನ್ನ ಒಂದು ಮಾತುಕೇಳಬೇಕೂಂತ. "
" ಹೊಡಿ ಬಾಣ "
" ನಮ್ಮ ಗೆಸ್ಟ್ ಇದಾರಲ್ಲಾ. ಅವರ ಹುಡುಗ ಏನ್ಮಾಡ್ಕೊಂಡಿದಾನೆ ? "
" ಹುಡುಗನೋ ಹುಡುಗಿನೋ ? "
" ಹೋಗಿ ಮಾವ, ಅವರ ಸನ್ನು ? "
" ಸನ್ನೇ ಇಲ್ಲವಪ್ಪ ಅವರಿಗೆ. ಮಗಮಗಳು ಎಲ್ಲಾ ಆಕೆ ಒಬ್ಬಳೇನೇ...
ಬಿ. ಎಸ್. ಸಿ. ಓದ್ತಾ ಇದಾಳೆ. ಫಸ್ಟ್ ಇಯರೂಂತ ಕಾಣುತ್ತೆ. "
" ಓ ! "
ರಾಧಾಕೃಷ್ಣಯ್ಯನಿಗೆ ನಗು ಬಂತು.
ಮತ್ತೆ ಇದೆಯಲ್ಲ - ಪ್ರೇಮದ ಘೋಷಣೆ; ಹಿರಿಯರು ಒಪ್ಪದೇ
ಹೋದರೆ, ಮಾವಿನ ತೋಪಿನ ಆಚೆಗೆ ಇದ್ದ ಈಜು ಕೊಳವೇ ಗತಿ - ಮುಳುಗಿ
ಸಾಯಲು - ಇತ್ಯಾದಿ, ಇತ್ಯಾದಿ.
ತುಂಬ ಸಿಟ್ಟಾದವರೆಂದರೆ ಶಂಕರಯ್ಯ. ಆ ಸಂಬಂಧದ ಬಗ್ಗೆ ತಾವೇ
ಮಾತಾಡಬೇಕು ಎಂದಿದ್ದರು ಅವರು ! ಅಷ್ಟರಲ್ಲೇ ಈ ಹುಡುಗ ಮುಂಡೇದೇ
ಹೀಗೆ ಮಾಡಿದರೆ ?
ರಾಧಾಕೃಷ್ಣಯ್ಯ ಶಂಕರಯ್ಯನಿಗೆ ಹೇಳಿದರು :
" ಸರಿಯಾಗಿದೆ ಸುಮ್ನಿರು. ನನ್ನ ನಿನ್ನ ಕಾಲದಲ್ಲಿ ಆಗ್ಲಿಲ್ಲಾಂತ,
ಈಗ ಈ ರೀತಿ ಆಗ್ಬಾರ್ದೆ? ಮ್ಯಾಚ್ ಸರಿಯಾಗಿದೆ. ಗೋಪೂಗೆ ಆ ಮಾವ
ಅವರ ಅಂಗ್ಡೀಲೇ ಕೆಲಸ ಕೊಡಿಸ್ತಾನೆ ! "
ಶಂಕರಯ್ಯ ಸಿಟ್ಟು ಬೆಂಕಿಯಾಗಿದ್ದರೂ ತಣ್ಣಗಾಗಿ ಹೋದರು.
" ಹೂ೦. ಇದೇ ನಿನ್ನ ತತ್ವಜ್ಞಾನ. ಇನ್ನು ಆರೇಳು ವರ್ಷ ಹೋಗಲಿ.
. ಶೀಲಾ ದೊಡ್ಡವಳಾಗಲಿ. ಆ ಮೇಲೆ ಗೊತ್ತಾಗುತ್ತೆ ! " ಎಂದರು.
" ಓಹೋ ! " ಎಂದು ನಕ್ಕರು ರಾಧಾಕೃಷ್ಣಯ್ಯ.
ಆಮೇಲೆ--
****
" ಏನು ಗೊತ್ತಾಯ್ತು ? "
" ಕಥೆ ಗೊತ್ತಾಯ್ತು. "
" ಕಥೇನಾ -- ? "
" ಹೂಂ ಕಥೆ . "
ನಾನು ತೆಪ್ಪಗಾಗಿ ಹೋದೆ. ನಿಜಕ್ಕೂ ಜಾಣೆ ನನ್ನ ಮಗಳು ಶೀಲಾ.
ನನ್ನ ಜಾಣತನದ ಬಗೆಗೂ ಹೆಮ್ಮೆ ಪಟ್ಟು ಕೊಳ್ಳುತ್ತಾ ಎಲ್ಲೋ ಬೆಟ್ಟ
ದಾಚೆ ಮರೆಯಾಗುತ್ತಿದ್ದ ಸೂರ್ಯನನ್ನು ನೋಡಿದೆ. ಒಂದು ಕ್ಷಣ ಎಲ್ಲವೂ
ಮರೆತುಹೋಯಿತು. ಶೀಲಾ ಕೇರಾಫ್ ರಾಧಾಕೃಷ್ಣಯ್ಯ ಎಂದು ಬಂದಿದ್ದ
ಕಾಗದ, ನನಗಾದ ಕಳವಳ, ಗೌರಿ - ಗೋಪಾಲರನ್ನು ಸೃಷ್ಟಿಸಿ ನಾನು ನಡೆಸಿದ
ಪ್ರಯೋಗ,.........
ಒಮ್ಮೆಲೆ ಸಮಾಧಿಗೆ ಭಂಗ ತಂದು ಶೀಲಾ ಹೇಳಿದಳು :-
"ಅಣ್ಣ ! ನಾಳೆ ಸಾಯಂಕಾಲ ಇಬ್ಬರು ಸ್ನೇಹಿತರನ್ನು ಕರೆದು
ಕೊಂಡು ಬರಲಾ ? "
" ಕೇಳೋದೇನು ? ಯಾವತ್ತಾದರೂ ಬೇಡ ಅಂದಿದ್ನೆ ನಾನು ? "
" ಆದರೂನೂ "
" ಓಹೋ ಖಾಸಗೀನೋ....ಸರೀನಮ್ಮ...ನಾಳೆ ನೀನೂ ಫ್ರೆಂಡ್ಸೂ
ಬರೂತ್ಲೂನೆ ವಾಕಿಂಗ್ ಹೊರಡ್ತೀನಿ. "
" ಅಣ್ಣ ! "
" ಏನು ? "
ಮಾತುಬರಲಿಲ್ಲ ಎರಡು ನಿಮಿಷ ಬಾಗಿ ಶೀಲೆಯ ಮುಂಗುರುಳು ನೇವ
ರಿಸಿದೆ. ಆಕೆ ನನ್ನೆದೆಯ ಮೇಲೆ ತಲೆಯೊರಗಿಸಿದಳು. ಎಂಥ ಲಜ್ಜೆ ಆ
ಹುಡುಗಿಗೆ ! ಹನಿಯಾಡುತ್ತಿತ್ತು ಆ ಕಣ್ಣುಗಳಲ್ಲಿ.
" ರಾಜ - ರಾಜಾಂತ ಅವನ ಹೆಸರು ರಾಜಗೋಪಾಲ. ಅವನ
ತಂಗೀನೂ ಬರ್ತಾಳೆ - ರಾಧಾ. ಅವನೇ ಕಾಗದ ಬರೆದಿರೋದು.... ಅಣ್ಣ !
ಅಣ್ಣ ! "
ಕರವಸ್ತ್ರಕ್ಕಾಗಿ ನಾನು ತಡವರಿಸಿದೆ. ಆಕೆಗೋಸ್ಕರ ಅಲ್ಲ. ನೋಯು
ತ್ತಿದ್ದ ವಯಸ್ಸಾದ ನನ್ನ ಕಣ್ಣುಗಳನ್ನು ಒತ್ತಿಕೊಳ್ಳುವುದಕ್ಕೇ ಅದು
ಬೇಕಾಗಿತ್ತು. !