Pages   (key to Page Status)   


ಅಯ್ಯಾ
ಷೋಡಶದಳ ಕಮಲದ ಮಧ್ಯದಲ್ಲಿ ನೆಲಸಿರ್ಪ ಅನಾದಿ ನಿಷ್ಕಲಂಕ ಜ್ಯೋತಿರ್ಮಯ ಪರಶಿವಲಿಂಗದೇವಂಗೆ ಕ್ರಿಯಾಶಕ್ತಿಸ್ವರೂಪವಾದ ಚಿತ್‍ಪೃಥ್ವಿಹೃದಯಮಧ್ಯದಲ್ಲಿ ನೆಲಸಿರ್ಪ ಪರಿಣಾಮಜಲವ ಚಿದ್ಭಾಂಡದೊಳಗೆ ಪರಿಣಾಮಪಾವಡದಿಂದ ಶೋಧಿಸಿ
ಗುರು ಚರ ಪರ ಸ್ವರೂಪವಾದ ಜಂಗಮಮೂರ್ತಿಗಳ ಮೊಳಕಾಲ ಪರಿಯಂತರ ಪ್ರಕ್ಷಾಲನವ ಮಾಡಿ
ಉಳಿದುದಕದಿಂದ ಉಭಯಪಾದಕಮಲವನು ಅಡಿಪಾದವ ಮೂರು ವೇಳೆ
ಅಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದಂತಹ ಗುರುಪಾದೋದಕವ ಭಾಂಡಭಾಜನದಲ್ಲಿ ತುಂಬಿ
ಕರಕಮಲದಲ್ಲಿ ಅನಾದಿ ನಿಷ್ಕಲಂಕ ಜ್ಯೋತಿರ್ಮಯ ಇಷ್ಟಮಹಾಲಿಂಗದೇವನ ಮೂರ್ತವ ಮಾಡಿಸಿಕೊಂಡು ಪಂಚರಸಯುಕ್ತವಾದ ಆವುದಾದಡೆಯೂ ಒಂದು ಕಾಷ*ದಿಂದ ಹಸ್ತಪಾದಮುಖಂಗಳಲ್ಲಿ ಸ್ಥಾಪಿಸಿರುವ ಐವತ್ತೆರಡು ನಖದಂತ ಪಂಕ್ತಿಗಳ ತೀಡಿ
ನೇತ್ರ ಮೊದಲಾದ ಲಿಂಗದವಯವಂಗ? ಪ್ರಕ್ಷಾಲಿಸಿ
ಕಟಿಸ್ನಾನ ಕಂಸ್ನಾನ ಮಂಡೆಸ್ನಾನ ಮೊದಲಾದ ತ್ರಿವಿಧಲಿಂಗಸ್ನಾನವ ಮಾಡಿ
ಪಾವುಗೊರಡ ಮೆಟ್ಟಿ
ಪಾವಡವಾಗಲಿ
ಪರ್ಣಾಸನವಾಗಲಿ ದರ್ಭೆ ಬೆತ್ತ ಮೊದಲಾದಸನದಲ್ಲಿ ಮೂರ್ತವ ಮಾಡಿ ಗುರುಪಾದೋದಕದೊಳಗೆ ಭಸ್ಮ ಗಂಧ ಪುಷ್ಪ ಮಂತ್ರವ ಸ್ಥಾಪಿಸಿ
ಪಂಚಾಮೃತವೆಂದು ಭಾವಿಸಿ ಅನಾದಿ ನಿಷ್ಕಲಂಕ ಜ್ಯೋತಿರ್ಮಯ ಇಷ್ಟಮಹಾಲಿಂಗದೇವಂಗೆ ಲೀಲಾಮಜ್ಜನವ ಮಾಡಿಸಿ
ಕ್ರಿಯಾಚಾರದಲ್ಲಿ ದಹಿಸಿದ ವಿಭೂತಿಯಲ್ಲಿ ಗುರುಪಾದೋದಕ ಲಿಂಗಪಾದೋದಕ ಮಂತ್ರಸಂಬಂಧವಾದ ಚಿದ್ಭಸಿತವ ಸ್ನಾನ ಧೂಲನ ಧಾರಣಂಗಳ ಮಾಡಿ
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳೊಳಗೆ ಲಿಂಗಾಣತಿಯಿಂದ ಬಂದುದ ಸಮರ್ಪಿಸಿ
ಕ್ರಿಯಾಗುರುಲಿಂಗಜಂಗಮದ ತೀರ್ಥಪ್ರಸಾದವಾದಡೆಯೂ ಸರಿಯೆ ಜ್ಞಾನಗುರುಲಿಂಗಜಂಗಮದ ತೀರ್ಥಪ್ರಸಾದವಾದಡೆಯೂ ಸರಿಯೆ
ಆ ಕ್ರಿಯಾಜ್ಞಾನಗುರುಲಿಂಗಜಂಗಮದ ಮಹಾತೀರ್ಥವ ಆ ಗುರುಲಿಂಗಜಂಗಮಕ್ಕೆ ಸಮರ್ಪಿಸಿ
ಆಮೇಲೆ ತಳಿಗೆಬಟ್ಟಲಲ್ಲಿ ಕಡುಬು ಕಜ್ಜಾಯ ಹೋಳಿಗೆ ಹುಗ್ಗಿ ಗುಗ್ಗರಿ ಬೆಳಸೆ ಅಂಬಲಿ ತುಂಬೆಸೊಪ್ಪು ಮೊದಲಾದ ಶಾಕಪಾಕಾದಿಗಳ
ಕ್ಷೀರ ದಧಿ ನವನೀತ ತಕ್ರ ಘೃತ ಕಬ್ಬಿನ ಹಾಲು ಎಳೆ ಅಗ್ಗಿಣಿ ಪನ್ನೀರು ಮೊದಲಾದ ಸಮಸ್ತದ್ರವ್ಯಂಗಳ ಭಾಜನದಲ್ಲಿ ಸ್ಥಾಪಿಸಿ ಹಸ್ತಸ್ಪರ್ಶನವ ಮಾಡಿ
ಆ ಕ್ರಿಯಾಜ್ಞಾನ ಗುರುಲಿಂಗಜಂಗಮ ಪ್ರಸಾದವಾದಡೆಯೂ ಸರಿಯೆ
ಮತ್ತಾ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ತಾನಾ ಪರಿಣಾಮ ಪಾದೋದಕ ಪ್ರಸಾದದಲ್ಲಿ ಸಂತೃಪ್ತನಾದಾತನೆ ನಿಮ್ಮ ಅಚ್ಚಶರಣನಲ್ಲದೆ ಉಳಿದ ನಾಹಂ ಭ್ರಮೆಯಿಂದ ತೊಳಲುವ ಬಡಜೀವಿಗಳೆತ್ತ ಬಲ್ಲರಯ್ಯಾ ನಿಮ್ಮ ನಿಜಾಚರಣೆಯ ವಿಚಾರದ ಪರಿಣಾಮವ
ಕೂಡಲಚೆನ್ನಸಂಗದೇವಾ ?