ಅಯ್ಯಾ ನಿಮ್ಮ ನಿಜಾಚರಣೆಯ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಯ್ಯಾ ನಿಮ್ಮ ನಿಜಾಚರಣೆಯ ನಿಲುಕಡೆಯ ಭವಪಾಶಪ್ರಾಣಿಗಳೆತ್ತ ಬಲ್ಲರಯ್ಯಾ ? ಅದೆಂತೆಂದಡೆ
ಲೋಕದಲ್ಲಿ ದೃಷ್ಟವುಂಟು. ಅಯ್ಯಾ ಕುರಿ ಬಲ್ಲುದೆ ರಸದಾಳಿ ಕಬ್ಬಿನ ಸ್ವಾದವ ? ಶುನಿ ಬಲ್ಲುದೆ ಕಲ್ಪವೃಕ್ಷವ ? ದಂಷ್ಟ್ರಿ ಬಲ್ಲುದೆ ಕಾಮಧೇನುವ ? ಗಾರ್ದಭ ಬಲ್ಲುದೆ ಚಿಂತಾಮಣಿಯ ? ನರಿ ಬಲ್ಲುದೆ ಗಜಭದ್ರವ ? ಕಾಗೆ ಬಲ್ಲುದೆ ಪರಮಾಮೃತವ ? ಅಂಧಕ ಬಲ್ಲನೆ ಕನ್ನಡಿ ಬಿಂಬ ಮೊದಲಾಗಿ ಅನಂತ ಚಿತ್ರವಿಚಿತ್ರಂಗಳ ? ಬಧಿರ ಬಲ್ಲನೆ ಪ್ರಣವೋಂ ನಾದ ಮೊದಲಾದ ದಶನಾದಗಳ ? ಷಂಡ ಬಲ್ಲನೆ ರತಿಸಂಯೋಗವ ? ತೊತ್ತು ಬಲ್ಲಳೆ ರಾಜಭೋಗವ ? ಹೇಡಿ ಬಲ್ಲನೆ ರಣಧೀರತ್ವವ ? ದರಿದ್ರ ಬಲ್ಲನೆ ನವರತ್ನಂಗಳ ? ಬೆಸ್ತ ಬಲ್ಲನೆ ಅಂದ? ಮೊದಲಾದ ಅಷ್ಟಭೋಗಂಗಳ ? ಮೂಢ ಬಲ್ಲನೆ ಶಿವಕವಿತ್ವವ ? ಕಾಮಿ ಬಲ್ಲನೆ ಶಿವಯೋಗದ ಸುಖವ ? ರೋಗಿ ಬಲ್ಲನೆ ರಂಭಾರಸವ ? ಗೂಗಿ ಬಲ್ಲುದೆ ಚಿತ್ಸೂರ್ಯನ ಬೆಳಗ ? ಇಂತೆಂದುದಾಗಿ
ಲೋಕದ ದೃಷ್ಟದಂತೆ
ಹೊನ್ನು ಹೆಣ್ಣು ಮಣ್ಣು ಅನ್ನ ನೀರು ವಸ್ತ್ರ ಆಭರಣ ವಾಹನವೆಂಬ ಅಷ್ಟಮಲಂಗಳಲ್ಲಿ
ಅಷ್ಟಕಾಮವಿಕಾರದಿಂದ
ಮಾಯಾಪಾಶಬದ್ಧಮಲದಲ್ಲಿ ಬಿದ್ದು ತೊಳಲುವ ಜಡಜೀವಿಗಳೆತ್ತ ಬಲ್ಲರಯ್ಯ ನಿಮ್ಮ ಸರ್ವಾಚಾರಸಂಪತ್ತಿನಾಚರಣೆಯ ? ನಿಜಸುಖದ ರಾಜಾಧಿರಾಜ ಶಿವಯೋಗದ ನಿಲುಕಡೆಯ ಕೂಡಲಚೆನ್ನಸಂಗಮದೇವಾ ?