ಅಯ್ಯಾ ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ_ ಆಕಾಶ ಪ್ರಕಾಶವಿಲ್ಲದಂದು
ಸಾಕ್ಷಿ ಸಭೆಗಳಿಲ್ಲದಂದು ಸಚರಾಚರವೆಲ್ಲ ರಚನೆಗೆ ಬಾರದಂದು; ಆಧಾರದೊಳಗಣ ವಿಭೂತಿಯನೆ ತೆಗೆದು
ಭೂಮಿಯ ನೆಲೆಗೊಳಿಸಿ (ಸೆ?) ಪಂಚಾಶತ್‍ಕೋಟಿ ವಿಸ್ತೀರ್ಣ ಭೂಮಂಡಲಕ್ಕೆ ಸುತ್ತಿ ಹರಿದವು ಸಪ್ತಸಾಗರಂಗಳು. ಎಂಬತ್ತಾರು ಕೋಟಿಯ (ಯುಂ?) ತೊಂಬತ್ತೇಳುಲಕ್ಷ ಕಾಲ ಭವನ ಮಂಡಲಕ್ಕೆ ಉದಯ ಬ್ರಹ್ಮಾಂಡ. ಅರುವತ್ತಾರು ಕೋಟಿ ತಾರಾಮಂಡಲವೆಂದೆಡೆ
ಬೆಳಗಿ ತೋರಿದ ಹನ್ನೆರಡು ಜ್ಯೋತಿಯ ನಿಲಿಸಿ ತೋರಿದ ಹದಿನಾಲ್ಕು ಭುವನವ_ ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ ಚೌರಾಸಿಲಕ್ಷ ಜೀವರಾಶಿಗಳಿಗೆ ರಾಶಿವಾಳ ತಾನಾಗಿ ಸಕಲದ ಅಳಿವಿನ ಉಳಿವಿನ ನಿಜದ ನಿಲವ ನೋಡಿ ಕಂಡೆನು. ಗುಹೇಶ್ವರಾ
ನಿಮ್ಮ ಶ್ರೀಪಾದಕೆ ನಮೋ ನಮೋ ಎನುತಿರ್ದೆನು.