ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ
ಬಯಸುವ ಬಯಕೆ ಕೈಸಾರಿದಂತೆ
ಬಡವ ನಿಧಾನವನೆಡಹಿ ಕಂಡಂತೆ
ನಾನರಸುತ್ತಲರಸುತ್ತ ಬಂದು ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ. ಎನ್ನ ಅರಿವಿನ ಹರುಹ ಕಂಡೆ ನೋಡಾ. ಎನ್ನ ಒಳಹೊರಗೆ ಎಡೆದೆರಹಿಲ್ಲದೆ ಥಳಥಳಿಸಿ ಬೆಳಗಿ ಹೊಳೆವುತಿಪ್ಪ ಅಖಂಡಜ್ಯೋತಿಯ ಕಂಡೆ ನೋಡಾ ! ಕರುಹಳಿದ ಕರಸ್ಥಲದ ನಿಬ್ಬೆರಗಿನ ನೋಟದ ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ ಗುಹೇಶ್ವರಾ