ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ



Pages   (key to Page Status)   


ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ ಗರ್ಭದಲ್ಲಿ ಕಾಯವ ನಿಕ್ಷೇಪವಂ ಮಾಡಿದ ಬಳಿಕ ಕಾಲನ ಭಯವಿಲ್ಲ. ನೇತ್ರದಲ್ಲಿರ್ದ ಪ್ರಾಣಲಿಂಗದ ಮೇಲೆ ಮನವ ನಿಲಿಸಿದ ಬಳಿಕ ಕಾಮನ ಭಯವಿಲ್ಲ. ಏಕಾಂತ ಸ್ಥಾನವಾಗಿ
ಅಂತರಂಗದ ಭಾವ ಜ್ಯೋತಿರ್ಲಿಂಗದಲ್ಲಿ ಅರಿವು ಸಂಧಾನದಿಂ ಸಮರಸವಾಗಲು
ಕರ್ಮದ ಭಯವಿಲ್ಲ. ಈ ತ್ರಿಲಿಂಗ ಸಂಬಂಧದಿಂದ ಕಾಲಕಾಮಕರ್ಮವನೊತ್ತಿ ಮೆಟ್ಟಿ ನಿಲ್ಲದೆ
ವಿಷಯಸುಖಕ್ಕೆ ಮೆಚ್ಚಿ ಆ ಮೂವರ ಕಾಲ ಕೆಳಗೆ ಬಿದ್ದು
ಮಹಾದುಃಖಕ್ಕೊಳಗಾದರು
ನರರು. ಈ ವಿಷಯಗಾಳಿ ಸೋಂಕಲು ಹರಿ ಹತ್ತು ಭವವೆತ್ತಿದ. ಅಜ 21 ಭವವೆತ್ತಿ ಶಿರ ಕಳಕೊಂಡ. ಇಂದ್ರನ ಮೈ ಕೆಟ್ಟಿತ್ತು
ಚಂದ್ರ ಕ್ಷಯ ರೋಗಿಯಾದ. ದಿವಸೇಂದ್ರ ಕಿರಣ ನಷ್ಟವಾದ. ಮುನೀಂದ್ರರ್ನಷ್ಟವಾಗಿ ಮಡಿದರು. ಮನು ಮಾಂಧಾತರು ಮಂದಮತಿಗಳಾದರು. ದೇವ ದಾನವ ಮಾನವರು ಮಡಿದರು. ಇದ ನೋಡಿ ನಮ್ಮ ಶರಣರು
ವಿಷಯಗಾಳಿ ತಮ್ಮ ಸೋಕೀತೆಂದು ಶಾಂಭವಪುರದಲ್ಲಿಯೆ ನಿಂದು
ನಿರ್ವಿಷಯಾಸ್ತ್ರದಲ್ಲಿ ವಿಷಯಗಾಳಿಯ ಛೇದಿಸಿ ಜಯಿಸಿ ಅಕ್ಷಯ ಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.