ಆಜ್ಞಾಚಕ್ರದ ದ್ವಿದಳ ಪದ್ಮದಲ್ಲಿ ಅವಿರಳ ಸುಜ್ಞಾನ ಪೀಠದೊಳಗೆ ಅಮೃತಮಯ ಲಿಂಗವ ಕಂಡೆನು ನೋಡಾ. ಆ ಲಿಂಗ ಸಂಗದಿಂದ ಉತ್ಪತ್ತಿ ಸ್ಥಿತಿ ಪ್ರಳಯವ ಗೆಲಿದು ನಿತ್ಯ ನಿರಂಜನ ಪ್ರಸಿದ್ಧ ಪ್ರಸಾದಿಯಾದೆನು ಕಾಣಾ. ಆ ಪ್ರಸಿದ್ಧ ಪ್ರಸಾದವೆ ಒಂದೆರಡಾಗಿ ಎರಡು ಮೂರಾಗಿ ಮೂರು ಆರಾಗಿ ಆರು ಮೂವತ್ತಾರಾಗಿ ಮೂವತ್ತಾರು ಇನ್ನೂರಹದಿನಾರಾಗಿ ಆ ಇನ್ನೂರ ಹದಿನಾರರ ಬೆಳಗು ಪಿಂಡಾಂಡದಲ್ಲಿ ಪರಿಪೂರ್ಣವಾಗಿ ಸದಾ ಸನ್ನಿಹಿತವಾಗಿಪ್ಪುದು. ನಿಮ್ಮ ಶರಣ ಸಂಗನ ಬಸವಣ್ಣ ಮೊದಲಾದ ಪ್ರಮಥರಿಗೆ ಸಾಧ್ಯವಲ್ಲದೆ ಅಜ ಹರಿ ಸುರ ಮನು ಮುನಿಗಳಿಗೆ ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.