ಆಧಾರಾದಿ ಷಡುಚಕ್ರಂಗಳು ಇವಕ್ಕೆ ವಿವರ: ಆಧಾರಸ್ಥಾನದಲ್ಲಿ ಚತುರ್ದಳ ಪದ್ಮವಿಹುದು ಅದು ಸುವರ್ಣವರ್ಣ ಅದಕ್ಕೆ ಅಕ್ಷರ ವಶಷಸ ಎಂಬ ನಾಲ್ಕಕ್ಷರ
ಅಧಿದೈವ ಬ್ರಹ್ಮನು. ಸ್ವಾಧಿಷ್ಠಾನ ಸ್ಥಾನದಲ್ಲಿ ಷಡ್ದಳ ಪದ್ಮವಿಹುದು
ಅದು ಕಪ್ಪುವರ್ಣ ಅದಕ್ಕೆ ಅಕ್ಷರ ಬಭಮಯರಲ ಎಂಬ ಷಡಕ್ಷರ
ವಿಷ್ಣು ಅಧಿದೈವ. ಮಣಿಪೂರದ ಸ್ಥಾನದಲ್ಲಿ ದಶದಳ ಪದ್ಮವಿಹುದು
ಅದು ಕೆಂಪುವರ್ಣ ಅದಕ್ಕೆ ಅಕ್ಷರ ಡಢಣ ತಥದಧನ ಪಫ ಎಂಬ ದಶ ಅಕ್ಷರ
ರುದ್ರನಧಿದೈವ. ಅನಾಹತಸ್ಥಾನದಲ್ಲಿ ದ್ವಾದಶದಳದ ಪದ್ಮವಿಹುದು
ಅದು ನೀಲವರ್ಣ
ಅದಕ್ಕೆ ಅಕ್ಷರ ಕಖಗಘಙ ಚ ಛ ಜಝಞ ಠ ಎಂಬ ದ್ವಾದಶ ಅಕ್ಷರ ಅದಕ್ಕೆ ಮಹೇಶ್ವರ ಅಧಿದೈವ. ವಿಶುದ್ಧಿಸ್ಥಾನದಲ್ಲಿ ಷೋಡಶದಳ ಪದ್ಮವಿಹುದು
ಅದು ಸ್ಪಟಿಕವರ್ಣ ಅದಕ್ಕೆ ಅಕ್ಷರ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ ಎಂಬ ಷೋಡಶಾಕ್ಷರ
ಅದಕ್ಕೆ ಸದಾಶಿವ ಅಧಿದೈವ. ಆಜ್ಞಾಸ್ಥಾನದಲ್ಲಿ ದ್ವಿದಳದ ಪದ್ಮವಿಹುದು. ಅದು ಮಾಣಿಕ್ಯವರ್ಣ
ಅದಕ್ಕೆ ಅಕ್ಷರ `ಹಕ್ಷ ಎಂಬ ದ್ವಯಾಕ್ಷರ. ಅದಕ್ಕೆ ಮಹಾಶ್ರೀಗುರು ಅಧಿದೈವ. ಅಲ್ಲಿಂದ ಮೇಲೆ ಬ್ರಹ್ಮರಂಧ್ರಸ್ಥಾನದಲ್ಲಿ ಸಹಸ್ರದಳ ಪದ್ಮವಿಹುದು. ಅದು ಹೇಮವರ್ಣ ಅಲ್ಲಿಗೆ ಓಂಕಾರವೆಂಬ ಅಕ್ಷರ ಪರಂಜ್ಯೋತಿ ಪರಬ್ರಹ್ಮ ಅದು ಅನಂತಕೋಟಿ ಸೂರ್ಯಪ್ರಕಾಶವಾಗಿ ಬೆಳಗುತ್ತಿಹುದು. ಅಲ್ಲಿಗೆ ಅಧಿದೈವ ಶ್ರೀಗುರು ಮೂರ್ತಿಯೇ ಕರ್ತನು. ಇಂತೀ ಷಟ್ ಚಕ್ರಂಗಳಂ ತಿಳಿದು ಪರತತ್ವದಲ್ಲಿ ಇರಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.