ಆರಿಗೆ ಮಾಡಬಹುದಯ್ಯಾ ಸದ್ಭಕ್ತಿಯೆಂಬುದನು ಬಸವಣ್ಣಂಗಲ್ಲದೆ ? ಆರಿಗೆ ತಿಳಿವುದಯ್ಯಾ ಶಿವಜ್ಞಾನದ ಸೆರಗು ಬಸವಣ್ಣಂಗಲ್ಲದೆ ? ನಿರಾಳದ ಸಿಂಹಾಸನದ ಮೇಲೆ ನಿರವಯ ಬಂದೆರಗಿದಡೆ ಆ ನಿರಾಕಾರ ಪದಾರ್ಥವನರ್ಪಿಸಿ
ಪ್ರಸನ್ನತೆಯ ಪಡೆದ ಬಸವಣ್ಣನು ! ಸಾಕಾರಸಿಂಹಾಸನದ ಮೇಲೆ ಮೂರ್ತಿಗೊಂಡ ಸಂಗಮನಾಥ ಮುನಿದೆದ್ದು ಹೋದಡೆ; ತನುವಿನೊಳಗೆ ತನುವಾಗಿ ಹೊಕ್ಕು ಮನದೊ?ಗೆ ಮನವಾಗಿ
ಭಾವದೊಳಗೆ ಭಾವವಾಗಿ ವೇದಿಸಿ ಶಿವಶರಣರ ಮನದ ಕಂದುಕತ್ತಲೆಯ ಕಳೆದು
ತನ್ನತ್ತ ತಿರುಗಿ ಪ್ರಸನ್ನತೆವಡೆದ_ ಇಂತೀ ಉಭಯ ನಿರ್ಣಯದಲ್ಲಿ ನಿಸ್ಸೀಮನಾದ ಬಸವಣ್ಣ. ಕೂಡಲಚೆನ್ನಸಂಗಮದೇವರ ಶರಣ ಬಸವಣ್ಣಂಗೆ ತ್ರಿಜಗದೊಳಗೆ ಆರನೂ ಸರಿ ಕಾಣೆನು.