ಆ ಭಕ್ತಂಗೆ ಲಿಂಗವೇ ಪ್ರಾಣ; ಆ ಲಿಂಗಕ್ಕೆ ಗುರುವೇ ಪ್ರಾಣ; ಆ ಗುರುವಿಂಗೆ ಜಂಗಮವೇ ಪ್ರಾಣ ನೋಡಾ. ಅದೇನುಕಾರಣವೆಂದರೆ: ಆ ನಿತ್ಯ ನಿರಂಜನ ಪರವಸ್ತುವೆ ಘನ ಚೈತನ್ಯವೆಂಬ ಜಂಗಮವು ನೋಡಾ. ಆ ಪರಮ ಜಂಗಮದಿಂದ ನಿಃಕಲ ಗುರುಮೂರ್ತಿ ಉದಯವಾದನು ನೋಡಾ. ಆ ನಿಃಕಲ ಗುರುಮೂರ್ತಿಯಿಂದ ಆದಿಮಹಾಲಿಂಗವು ಉದಯವಾಯಿತ್ತು ನೋಡಾ. ಆ ಆದಿಮಹಾಲಿಂಗದಿಂದ ಮೂರ್ತಿಗೊಂಡನು ಭಕ್ತನು. ಆ ಗುರುವಿಂಗೆ ಆ ಲಿಂಗಕ್ಕೆ ಆ ಭಕ್ತಂಗೆ ಆ ಜಂಗಮ ಪ್ರಸಾದವೇ ಪ್ರಾಣ ನೋಡಾ. ಇದು ಕಾರಣ: ಭಕ್ತನಾದರೂ ಲಿಂಗವಾದರೂ ಗುರುವಾದರೂ ಜಂಗಮ ಪ್ರಸಾದವ ಕೊಳ್ಳಲೇಬೇಕು. ಜಂಗಮ ಪ್ರಸಾದವ ಕೊಳ್ಳದಿದ್ದರೆ ಆತ ಗುರುವಲ್ಲ
ಅದು ಲಿಂಗವಲ್ಲ; ಆತ ಭಕ್ತನಲ್ಲ ನೋಡಾ. ಆ ಶೈವ ಪಾಷಂಡಿಯ ಕೈಯ ಪಡೆದುದು ಉಪದೇಶವಲ್ಲ; ಆತನಿಂದ ಪಡೆದುದು ಲಿಂಗವಲ್ಲ. ಆ ಲಿಂಗವ ಧರಿಸಿಪ್ಪಾತ ಭಕ್ತನಲ್ಲ. ಅವ ಭೂತಪ್ರಾಣಿ ನೋಡಾ. ಇದುಕಾರಣ: ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬಾತನೆ ಶಿವಭಕ್ತನು. ಆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳ್ಳದಿದ್ದರೆ ಅವ ಭವಿಗಿಂದಲು ಕರಕಷ್ಟ ನೋಡಾ. ಆ ಭವಭಾರಿಯ ಮುಖ ನೋಡಲಾಗದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.