ಇನ್ನು ಪ್ರತ್ಯಾಹಾರದ ಭೇದವೆಂತೆನೆ : ಯೋಗಾಭ್ಯಾಸವ ಮಾಡುವಲ್ಲಿ ಆಲಸ್ಯವಾದ ಮಂದಸ್ವರೂಪವಾದ ಅತಿ ಉಷ್ಣವಾದ ಅತಿ ಶೀತಲವಾದ ಅತಿ ಕಟುವಾದ ಅತಿ ಆಮ್ಲವಾದ ಅಪವಿತ್ರವಾದ ಅನ್ನಪಾನಂಗಳಂ ಬಿಟ್ಟು
ಯೋಗೀಶ್ವರರಿಗೆ ಸ್ವೀಕರಿಸಲು ಯೋಗ್ಯವಾದ ಗೋದುವೆ ಶಾಲಿ ಜವೆ ಹೆಸರು ಹಾಲು ತುಪ್ಪ ಜೇನುತುಪ್ಪ ಮುಂತಾದ ಪವಿತ್ರ ಅನ್ನಪಾನಂಗಳು ಬಹು ಬಹುಳವಲ್ಲದೆ
ಬಹು ಸೂಕ್ಷ್ಮವಲ್ಲದೆ
ಸುಪ್ರಮಾಣದಲ್ಲಿ ಸ್ವೀಕರಿಸುವುದೆ ಪ್ರತ್ಯಾಹಾರವೆನಿಸುವುದು. ಅಂತುಮಲ್ಲದೆ ಬಾಹ್ಯಾರ್ಥಂಗಳಲ್ಲಿ ಎರಗುವ ಚಿತ್ತಮಂ ಹೃದಯಾಕಾಶದಲ್ಲಿ ನಿಲಿಸುವುದೆ ಪ್ರತ್ಯಾಹಾರವು. ಮತ್ತೆ ಹೃದಯಸ್ಥಾನದಿಂ ಚಲಿಸುವ ಮನಮಂ ಮರಳಿ ಮರಳಿ ಅಲ್ಲಿಯೇ ಸ್ಥಾಪಿಸುವುದೇ ಪ್ರತ್ಯಾಹಾರವಯ್ಯಾ ಅಖಂಡೇಶ್ವರಾ.