ಇನ್ನು ತಾರಕಯೋಗದ ಲಕ್ಷಣಮಂ ಪೇಳ್ವೆನೆಂತೆನೆ : ಮಂತ್ರಯೋಗ ಲಯಯೋಗ ಹಠಯೋಗಕ್ಕೆ ಉತ್ತರೋತ್ತರ ವಿಶಿಷ್ಟವಾದ ರಾಜಯೋಗವೇ ಸಾಂಖ್ಯಯೋಗವೆಂದು ತಾರಕಯೋಗವೆಂದು ಅಮನಸ್ಕಯೋಗವೆಂದು ಮೂರು ಪ್ರಕಾರವಾಗಿರ್ಪುದು. ಆ ಮೂರರೊಳಗೆ ಮೊದಲು ಸಾಂಖ್ಯಯೋಗವೇ ತತ್ವಜಾÕನರೂಪವಪ್ಪುದರಿಂದೆ
ಆ ತತ್ವಂಗಳೆಂತೆನೆ : ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವಂಗಳಿಂದೆ ಜನಿತಮಾದ ವಾಗಾದಿ ಕರ್ಮೇಂದ್ರಿಯಂಗಳೈದು
ಶಬ್ದಾದಿ ವಿಷಯಂಗಳೈದು
ಶ್ರೋತ್ರಾದಿ ಜಾÕನೇಂದ್ರಿಯಂಗಳೈದು
ಪ್ರಾಣಾದಿ ವಾಯುಗಳೈದು
ಜೀವನಗೂಡಿ ಮಾನಸಾದಿ ಅಂತಃಕರಣಂಗಳೈದು
ಇಂತೀ ಪಂಚವಿಂಶತಿ ತತ್ವಂಗಳು ನಾನಲ್ಲ
ಅವು ನನ್ನವಲ್ಲವೆಂದು ವಿಭಾಗಿಸಿ ಕಳೆದು
ಪರಾತ್ಪರವಾದ ಪರಶಿವಬ್ರಹ್ಮವೆ ನಾನೆಂದು ತಿಳಿವುದೇ ಸಾಂಖ್ಯಯೋಗ ನೋಡಾ ಅಖಂಡೇಶ್ವರಾ.