Pages   (key to Page Status)   


ಇನ್ನು ಆಸನದ ಭೇದವೆಂತೆಂದೊಡೆ: ಒಂದು ಹಿಮ್ಮಡದಿಂ ಯೋನಿಸ್ಥಾನವನೊತ್ತಿ
ಮತ್ತೊಂದು ಹಿಮ್ಮಡಮಂ ಮೇಢ್ರದ ಮೇಲಿರಿಸಿ
ಏಕಚಿತ್ತನಾಗಿ ಋಜುಕಾಯನಾಗಿ
ಭ್ರೂಮಧ್ಯದಲ್ಲಿ ದೃಷ್ಟಿಯುಳ್ಳಾತನಾಗಿಹುದೇ ಸಿದ್ಧಾಸನವೆನಿಸುವುದು. ಎರಡು ತೊಡೆಗಳ ಮೇಲೆ ಎರಡು ಪಾದಂಗಳ ಮೇಲುಮುಖವಾಗಿರಿಸಿ
ಎರಡು ಕರತಳಂಗಳನು ನಡುವೆ ಮೇಲುಮುಖವಾಗಿರಿಸಿ
ರಾಜದಂತಗಳನಡುವೆ ರಸನಾಗ್ರವನಿಟ್ಟು
ನಾಸಾಗ್ರದೃಷ್ಟಿಯಿಂದಿಹುದೆ ಪದ್ಮಾಸನವೆನಿಸುವುದು. ಎರಡು ತೊಡೆ ಕಿರಿದೊಡೆಗಳ ಸಂದಿಗಳಲ್ಲಿ ಎರಡು ಪಾದಂಗಳನಿರಿಸಿ
ಋಜುಕಾಯನಾಗಿಹುದೇ ಸ್ವಸ್ತಿಕಾಸನವೆನಿಸುವುದು. ಮೇಢ್ರದ ಮೇಲೆ ಎಡದ ಹಿಮ್ಮಡವನಿರಿಸಿ
ಅದರ ಮೇಲೆ ಬಲದ ಹಿಮ್ಮಡವನಿರಿಸಿ
ಋಜುಕಾಯನಾಗಿಹುದೆ ಮುಕ್ತಾಸನವೆನಿಸುವುದು. ಬಲದ ಹಿಮ್ಮಡಮಂ ಎಡದ ಪೊರವಾರಿನೊಳಿಟ್ಟು ಎಡದ ಹಿಮ್ಮಡಮಂ ಬಲದ ಪೊರವಾರಿನೊಳಿಟ್ಟು ಜಾನುಗಳೆರಡನು ಗೋಮುಖಾಕಾರಮಂ ಮಾಳ್ಪುದೇ ಗೋಮುಖಾಸನವೆನಿಸುವುದು. ಈ ಸಕಲ ಆಸನಗಳಿಂದೆ ಯೋಗಮಂ ಸಾಧಿಸುವುದೇ ಆಸನಯೋಗ ನೋಡಾ ಅಖಂಡೇಶ್ವರಾ.