ಇಷ್ಟಲಿಂಗದ ಮುಖವಾವುದು? ಪ್ರಾಣಲಿಂಗದ ಮುಖವಾವುದು? ಭಾವಲಿಂಗದ ಮುಖವಾವುದು ಎಂದರೆ ಹೇಳಿಹೆ ಕೇಳಿರಣ್ಣ: ಇಷ್ಟಲಿಂಗದ ಮುಖವೈದು: ಪ್ರಾಣ ವಾಯುಗಳ ಮುಖವನೆಯ್ದಿ ಪ್ರಾಣಲಿಂಗವೆನಿಸಿಕೊಂಡಿತ್ತು. ಭಾವವನೆಯ್ದಿ ಭಾವಲಿಂಗವೆನಿಸಿಕೊಂಡಿತ್ತು. ಒಂದೇ ಲಿಂಗ ತನುತ್ರಯಂಗಳಲ್ಲಿ ಇಷ್ಟ ಪ್ರಾಣ ಭಾವ ರೂಪಕವಾಗಿಪ್ಪುದು. ಜೀವತ್ರಯಂಗಳಲ್ಲಿ ಮಂತ್ರ ಜ್ಞಾನ ಧ್ಯಾನ ರೂಪಕವಾಗಿಪ್ಪುದು. ಅವಸ್ಥಾನತ್ರಯಂಗಳಲ್ಲಿ ಸತ್ಕಿ ್ರಯಾಚರಣೆ ತದ್ವಾಸನೆ ತಲ್ಲೀಯ್ಯವಾಗಿಪ್ಪುದು. ಮಲತ್ರಯಂಗಳಲ್ಲಿ ಸ್ವಯ ಚರ ಪರ ರೂಪಕವಾಗಿಪ್ಪುದು. ಈಷಣತ್ರಯಂಗಳಲ್ಲಿ ಲಿಂಗ ಪ್ರೇಮರತಿಗೆ ಸಕಲಸಾಧನಂಗಳಾಗಿ ಮಾಯಾಭ್ರಾಂತಿಯನು ನಿಭ್ರಾಂತಿಯೆನಿಸಿ ಶುದ್ಧ ಪ್ರಭಾ ಪರಿಪೂರ್ಣ ಲಿಂಗ ತಾನೆ ಪ್ರಸನ್ನ ಪ್ರಸಾದ ರೂಪಕನಾಗಿರುತಿರ್ದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.