ಉದಕದೊಳಗಣ ವಿಕಾರ ಪವನನಿಂದಲ್ಲದೆ
ಉದಕ ಸಹಜಬೀಜವೆಂದರಿಯಬಹುದೆ ? ದೇಹ ಪ್ರಪಂಚಂಗಳು ವಾಯುವಿಂದಲ್ಲದೆ
ದೇಹದಲ್ಲಿ ಬೇರೊಂದು ಗುಣವನರಸುವರೆ ? ಮಂಜಿನ ಗುರಿಯ ಬಿಸಿಲ ಅಂಬಿನಲ್ಲಿ ಎಚ್ಚಡೆ
ಕರ ಹೊಸತಾಯಿತ್ತಲ್ಲಾ ! ಸಹಜದ ನಿಲವು ಜೀವ ಪರಮಾತ್ಮನೆಂದು ಎರಡನು ನುಡಿಯಲಿಲ್ಲ. ಬೇರೆ ನೆನೆವ ಮನ ತಾನೆಯಾಗಿ ತೆರಹಿಲ್ಲದ ಘನ. ಗಗನದ ಸೂರ್ಯ ಜಲದಲ್ಲಿ ತೋರುವಂತೆ
ಹಲವು ರವಿಯೆಂದು ಮತ್ತೆಣಿಸಲುಂಟೆ ? ಒಳಹೊರಗು ಎಂದೆನ್ನದೆ ಮುಟ್ಟಿಯೂ ಮುಟ್ಟದಿಪ್ಪ
ಬಯಲೊಳಡಗಿದ ನಿರಾಳವನು ಕೇಳುವ ಕೀರುತಿಯಲ್ಲ ನೋಡುವ ಮೂರುತಿಯಲ್ಲ ಪರಿಪೂರ್ಣ ಪರಂಜ್ಯೋತಿ ನಿರ್ಗುಣ ಮಹಿಮ. ಭಾವವಿಲ್ಲದ ಶಬ್ದವನು ಕೇಳಬಲ್ಲವನೊಬ್ಬನೆ
ಕೂಡಲಚೆನ್ನಸಂಗಮದೇವರಲ್ಲಿ ಪ್ರಭುವೆ ನೀನೆ ಬಲ್ಲೆ.