ಉದಕದ ಕೊಡನ ಹೊತ್ತಾಡುವ ಗೊರವಿತಿಯ ಕೈಯಲ್ಲಿ ಕಂಕಣ
ಉಲಿವ ಗೆಜ್ಜೆ ಚರಣದಲ್ಲಿ. ಉರಿಯ ಗೊರವನ ನೆರೆವ ಭರವಸದಿಂದ ಬಂದಿರಲು ಬಹಳ ಮುಳ್ಳಡ್ಡಲಾದವಲ್ಲಾ ! ಕಂಕಣದುಲುಹು ನಂದಿ
ಕಣ್ಣುದೆರೆದಾ ಮುಳ್ಳಳಿಯಲು ಕಾಡುಗಿಚ್ಚೆದ್ದು ಕರಡವ ಸುಟ್ಟಂತೆ ಪ್ರಾಣಗುಣ ಪ್ರಧ್ವಂಸಕಂಗೆ ಅನ್ಯೋನ್ಯ ಭಾವತ್ರಯವುಂಟೆ ? ಶರಣಲಿಂಗಕ್ಕೆ ಸಂದಿಲ್ಲ ಗುಹೇಶ್ವರಾ.