ಉಮರನ ಒಸಗೆ (1930)
by ಉಮರ್ ಖಯ್ಯಾಮ್, translated by ಡಿ.ವಿ.ಗುಂಡಪ್ಪ
ಉಮರ್ ಖಯ್ಯಾಮ್90898ಉಮರನ ಒಸಗೆ1930ಡಿ.ವಿ.ಗುಂಡಪ್ಪ

ಉಮರ್ ಖಯ್ಯಾಮ್

ಮುನ್ನುಡಿ

ಉಮರ್ ಖಯಾಮ್ ಕವಿಯ ಪಾರಸೀ ಭಾಷೆಯಲ್ಲಿ ಬರೆದ ಪ್ರಸಿದ್ದವಾದ “ರುಬಾಯಿ-ಯಾತ" ಕಾವ್ಯದ ಪದ್ಯಗಳಲ್ಲಿ ಎಡ್ವರ್ಡ್ ಫಿಟ್ಸ್-ಜೆರಲ್ಡನು ಕೆಲವನ್ನಾರಿಸಿಕೊಂಡು, ಅವುಗಳ ಭಾವದನ್ನು ಇಂಗ್ಲಿಷ್ ಪದ್ಯಗಳಲ್ಲಿ ಅನುವಾದಿಸಿರುವನು. ಸಂಗರ ಭಾವಾನುವಾದದ ಛಾಯೆಯನ್ನು ಕನ್ನಡಿಗರಿಗೆ ತೋರಿಸಬೇಕೆಂಬುದು ಈ ಪ್ರಬಂಧದ ಉದ್ದೇಶ.

⁠ಇದನ್ನು ನಾನು ಬರೆದು ಇಲ್ಲಿಗೆ ಮೂರು ವರ್ಷಗಳ ಮೇಲೆ ಆಗಿದೆ. ಈಚೆಗೆ, ೧೯೨೮ನೆಯ ಜುಲೈ ತಿಂಗಳಿನ "ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆ"ಯಲ್ಲಿ, ಉಮರ್-ಫಿಟ್ಸ್‌ಜೆರಲ್ಡರ ಕೃತಿಯ ೫೦ ಪದ್ಯಗಳ ಅನುವಾದವು ಶ್ರೀಮಾನ್ ಗೋವಿಂದ ಪೈ ಅವರ ಲೇಖಣಿಯಿಂದ ಬಂದು ಪ್ರಕಟವಾಗಿದೆ. ಅದರ ಬಂಧದಲ್ಲಿ ಪಂಡಿತ ಸಾಧ್ಯವಾದ ಬಿಕ್ಕಟ್ಟಿರುವುದಲ್ಲದೆ, ಪಾರಸೀ ಇಂಗ್ಲಿಷ್ ಭಾಷೆಗಳ ಮೂಲ ಗ್ರಂಥಗಳಲ್ಲಿರುವಂಥ ಪ್ರಾಸ ಸಂಪತ್ತೂ ಇದೆ, ಈ ಗುಣಗಳಿಲ್ಲದ ಬರೆವಣಿಗೆ ನನ್ನದು. ಹಾಲೋಗರವಿದ್ದರೂ ಅದರ ನಡುವೆ ಹುಳಿಮಜ್ಜಿಗೆಯೂ ಒಂದೊಂದು ವೇಳೆ ಕೊಂಚ ರುಚಿಸಬಹುದಲ್ಲವೆ ?

⁠ಇದಕ್ಕಾಗಿ ಕ್ಷಮೆ ಕೇಳಿಕೊಳ್ಳುವ ಭಾರವು ನನ್ನದೊಬ್ಬನದೇ ಆಗಿಲ್ಲ. ಇಂಥಾ ಭಾರವನ್ನು ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘವು ನನ್ನೊಡನೆ ಭಾಗಮಾಡಿಕೊಂಡಿರುವುದು ಇದೇ ಮೊದಲನೆಯ ಸಲವಲ್ಲ, ಈ ಪದ್ಯಗಳನ್ನು "ಪ್ರಬುದ್ಧ ಕರ್ಣಾಟಕ" ಪತ್ರಿಕೆಯಲ್ಲಿ ಪ್ರಕಟ ಪಡಿಸಿರುವುದ ಕ್ಕಾಗಿ ಆ ಸಂಘದ ಅಧಿಕಾರಿಗಳಿಗೆ ಮಾತ್ರವೇ ಅಲ್ಲದೆ, ಇತರ ರೀತಿಗಳಲ್ಲಿಯೂ ನನಗೆ ಪ್ರೋತ್ಸಾಹ ಸಹಾಯಗಳನ್ನು ಕೊಟ್ಟರುವುದಕ್ಕಾಗಿ ಅವರಲ್ಲೊಬ್ಬರಾದ ನನ್ನ ಮಿತ್ರರು ಶ್ರೀ ಮಾನ್ ಎ. ಆರ್. ಕೃಷ್ಣಶಾಸ್ತ್ರಿಗಳವರಿಗೆ ನನ್ನ ಮನಃಪೂರ್ವಕವಾದ ವಂದನೆಗಳು ಸಲ್ಲತಕ್ಕುವಾಗಿವೆ.

⁠ಈ ಪುಸ್ತಕದ ವಿಶೇಷ ಆಕರ್ಷಣೆಯು ಇದರ ಚಿತ್ರಗಳ ಸೌಂಧರ್ಯದಲ್ಲಿರತಕ್ಕುದು. ಇವುಗಳನ್ನೊದಗಿಸಿರುವವರು ಮೂವರು ಮಹಾಶಯರು : ಕರ್ಣಾಟಕ ಶಿಲ್ಪವೈಭವ ಪ್ರಕಾಶಕರೂ ನನ್ನ ಮಿತ್ರರೂ ಆದ ಶ್ರೀಮಾನ್ ಜಿ. ವೆಂಕೋಬರಾಯರವರ, ಉಮರನ ಭಾವಚಿತ್ರವನ್ನೂ , ಮುಖಪತ್ರದ ಚಿತ್ರವನ್ನೂ ತಯಾರುಮಾಡಿಕೊಟ್ಟಿದ್ದಾರೆ. ಬೊಂಬಾಯಿ ಪಟ್ಟಣದ "ಟೈಮ್ಸ್ ಆಫ಼್ ಇಂಡಿಯಾ" (The Times of India) ಎಂಬ ಪ್ರಸಿದ್ದ ಇಂಗ್ಲಿಷ್ ವೃತ್ತ ಪತ್ರಿಕೆಯ ಅಧಿಪತಿಗಳು ತಮ್ಮ ಸುಂದರಗಳಾದ ವಾರ್ಷಿಕ ಸಂಚಿಕೆಗಳಲ್ಲಿ ಪ್ರಚುರವಾಗಿರುವ ಮೂರು ಚಿತ್ರಪಟಗಳ ಪಡಿಯಚ್ಚನ್ನು ತಯಾರುಮಾಡಿಸಿ ಉಪಯೋಗಿಸಿಕೊಳ್ಳಲು ಅನುಮತಿ ಕೊಟ್ಟಿದ್ದಾರೆ. ಬೊಂಬಾಯಿ ಪಟ್ಟಣದಲ್ಲಿರುವ ಉಮರ್ ಕಾವ್ಯಾಭಿಮಾನಿಗಳಾದ ಶ್ರೀಮಾನ್ ಜೆ. ಇ. ಸಕ್ಲತ್‌ವಾಲ (Mr. J. E. Saklatwalla) ಮಹಾಶಯರು ತಮ್ಮ ಬಳಿ ಇರುವ ಚಿತ್ರಗಳನ್ನು ತೋರಿಸಿ ಅವುಗಳಲ್ಲಿ ಕೆಲವನ್ನು ಉಪಯೋಗಿಸಿಕೊಳ್ಳಲು ನನಗೆ ಅನುಮತಿ ಕೊಟ್ಟಿದ್ದಾರೆ; ಇವುಗಳಲ್ಲಿ ಎರಡನ್ನು ತೆಗೆದುಕೊಂಡಿದೆ. ಈ ಮೂವರ ಉಪಕಾರಗಳೂ ನನ್ನ ಅತ್ಯಂತ ಕೃತಜ್ಞತೆಯನ್ನು ಸಂಪಾದಿಸಿರತಕ್ಕುವು.

ಪ್ರಮೋದೂತ ಸಂ|| ಯುಗಾದಿ,

ಏಪ್ರಿಲ್, ೧೯೩೦.

ಡಿ. ವಿ. ಜಿ.

RUSKIN ON FITZGERALD'S "OMAR"

ಸಂಪಾದಿಸಿ

A letter written (by Ruskin) from Chamouni will serve to introduce a literary incident of some interest :- (To Mrs. John Simon)“ September 27.... Did John tell you of the delightful Eastern poem I've got, of eleventh century ? There's such a jolly stanza out of it :-

“Then to the rolling Heav'n itself I cried,
Asking. What Lamp had Destiny to guide
Her little Children stumbling in the Dark ?
And ' A blind understanding,' Heaven replied."

Ruskin, it will be seen, had got hold of Fitz- gerald's Omar Khayyam, which had made a fugitive first appearance in 1859. A transcript of the whole poem exists in one of his note-books; very deep and lovely,” he thought it. In September 1863 he addressed a letter to The Translator of the Rubaiyat of Omar -a letter of enthusiastic admiration, one may surmise from Fitzgerald's characteristic reference to it: a sudden fit of Fancy, I suppose, which he is subject to."-Life of Ruskin by E. T. Cook, Volume II (1860-1900), pp. 64-65.

ಉಮರ್ ಖಯ್ಯಾಮ್

ಸಂಪಾದಿಸಿ

"ಉಮರ್ ಖಯ್ಯಾಮ್” ಕವಿಯು ಸರಿಯಾ ದೇಶದವನು. ಆತನ ಜನ್ಮ ಸ್ಥಲವು ಮೊರಾಸಾನ್ ಪ್ರಾಂತದ ನೀಷಾಪೂರ್ ಎಂಬ ಪಟ್ಟಣ.

ಆತನ ಜೀವಿತ ಕಾಲವು ಸುಮಾರು ಕ್ರಿಸ್ತ ಶಕ ೧೦೧೫- ೧೦೨೦ರೊಳಗಿನ ಒಂದು ವರ್ಷದಿಂದ ೧೧೨೩ರ ವರೆಗೆಂದು ಗೊತ್ತಾಗಿದೆ.

ಉಮರಸ ಪೂರಾ ಹೆಸರು- "ಘಿಯಾತ್ ಉದ್ ದೀನ, ಅಬುಲ್ ಫಾತ್ ಉಮರ್ ಇಬನ್ ಇಬ್ರಾಹಿಂ ಅಲ್ ಖಯ್ಯಾಮಿ” -ಎಂದು. "ಖಯ್ಯಾಮ್" ಎಂಬುದು ಮನೆತನದ ಹೆಸರು. ಆ ಮಾತಿಗೆ ಗುಡಾರ ಮಾಡುವವನು ಎಂದರ್ಥವಂತೆ.

ಆತನ ಜೀವಿತ ಚರಿತ್ರೆಯ ಮುಖ್ಯ ವಿವರಗಳಾವುವೂ ನಿಷ್ಕರ್ಷೆಯಾಗಿ ತಿಳಿದುಬಂದಿಲ್ಲ. ಆತನನ್ನು ಕುರಿತ ಕಥೆಗಳು ಮಾತ್ರ ಕೆಲವು ಪ್ರಚಾರದಲ್ಲಿವೆ,

ಉಮರನ ವಿದ್ಯಾ ಗುರುವು ಇಮಾಂ ಮೊವಾಫಕ್ ಎಂಬಾತನು. ಈತನಿಗೆ ನಿಜ಼ಾಮ್-ಉಲ್-ಮುಲ್ಕ್ ಮತ್ತು ಹಸನ್-ಇಬನ್-ಸಬ್ಬಾ ಎಂಬ ಇನ್ನಿಬ್ಬರು ಶಿಷ್ಯರಿದ್ದರು. ಈ ಮೂವರು ಸಹಪಾಠಿಗಳಲ್ಲಿ ಹಸನ್ನನು ಒಂದು ದಿನ ಮಿಕ್ಕಿಬ್ಬರನ್ನು ಕುರಿತು- ನಮ್ಮ ಇಮಾಂ ಗುರುಗಳಿಂದ ಶಾಸ್ತ್ರೋಪದೇಶ ಪಡೆದವರು ಅದೃಷ್ಟಶಾಲಿಗಳಾಗುವರೆಂದು ಜನರು ಹೇಳುತ್ತಾರಲ್ಲವೆ ? ಒಂದು ವೇಳೆ ನಾವು ಮೂವರೂ ಒಂದೇ ರೀತಿಯಾಗಿ ಭಾಗ್ಯ ಪಡೆಯದಿದ್ದರೂ, ನಮ್ಮಲ್ಲೊಬ್ಬನಾದರೂ ಮಹತ್ಪದವಿಗೆ ಬರು ವುದು ಖಂಡಿತವೆಂದು ನಾವು ನಂಬಬಹುದು. ಹಾಗೆ ನಡೆದಾಗ ಅವನು ಮಿಕ್ಕಿಬ್ಬರ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇ”. ??? ಎಂದು ಕೇಳಿದನಂತೆ. ಅವರು-ನೀನು ಹೇಳಿದಂತೆ ಉತ್ತರಕೊಡಲು, ಅವನು- ಹಾಗಾದರೆ ಉನ್ನತ ದೆಶೆಗೆ ಬಂದ ವನು ತನ್ನ ಹಳೆಯ ಸಹಪಾಠಿಗಳನ್ನು ತನಗಿಂತ ಕೀಳೆನ್ನಿಸದಂತೆ, ಅವರಿಗೆ ತನ್ನ ಐಶ್ವರ್ಯದಲ್ಲಿ ಸಮ ಭಾಗವನ್ನು ಹಂಚಿಕೊಡ ಬೇಕು?' ಎಂದು ತೀರ್ಮಾನಕೊಟ್ಟನು. ಅವರಿಬ್ಬರೂ ಇದ ಕೊಪ್ಪಿ, ಭಾಷೆ ಪ್ರತಿಭಾಷೆಗಳನ್ನು ಕೊಟ್ಟು ತೆಗೆದುಕೊಂಡರು.

ಆಮೇಲೆ ಕೆಲವು ವರ್ಷಗಳಾದ ಬಳಿಕ ನಿಜಾಮ್ -ಉಲ್- ಮುಲ್ಕನಿಗೆ ಮೊರಾಸಾನ್ ಸಂಸ್ಥಾನದ ಸುಲ್ತಾನನ ಬಳಿ ವಜೀರ್ (ಮಂತ್ರಿ)) ಪದವಿ ದೊರೆಯಿತು. ಹಸನ್ನನು ಇದನ್ನು ಕೇಳಿದ ಕೂಡಲೆ ಆತನಲ್ಲಿಗೆ ಹೋಗಿ, ಹಳೆಯ ವಾಖ್ಯಾನವನ್ನು ನಡಿಸಿ ಕೊಡಬೇಕೆಂದನು. ವಜೀರನು ಅದನ್ನು ಗೌರವಿಸಿ, ಹಸನ್ನನಿಗೆ ಒಂದು ದೊಡ್ಡ ಅಧಿಕಾರವನ್ನು ಕೊಡಿಸಿದನು. ಆದರೆ ಅವನು ಇದರಿಂದ ತೃಪ್ತನಾಗದೆ, ತನ್ನ ಉಪಕಾರಿಯ ವಿರೋಧಿಗಳೊಡನೆ ಸೇರಿಕೊಂಡು, ಆತನಿಗೆ ಹಾನಿ ತರಬೇಕೆಂದು ಒಳಸಂಚು ನಡಿಸು ವವನಾದನು. ಈ ಕೃತ್ರಿಮವು ಕೈಗೂಡುವುದಕ್ಕೆ ಮುಂಚೆಯೇ ಹೇಗೋ ಅದು ಪ್ರಕಟವಾಗಲು, ಹಸನು ಅಧಿಕಾರ ಭ್ರಷ್ಟ ನಾಗಿ, ಕಡೆಗೆ ಒಂದು ಕೊಲೆಪಾತಕರ ಗುಂಪಿಗೆ ನಾಯಕನೆನ್ನಿಸಿ ಕೊಂಡು, ಅಪಯಶಸ್ಸಿಗೀಡಾದನು.

ನಮ್ಮ ಉಮರನೂ ಹಸನ್ನನಂತೆಯೇ ತನ್ನ ಬಾಲ್ಯ ಸ್ನೇಹಿತನ ಬಳಿಗೆ ಹೋಗಿ, ಹಿಂದಿನ ಪ್ರತಿಜ್ಞೆಯನ್ನು ಆತನ ಜ್ಞಾನ ಕಕ್ಕೆ ತಂದನು. ಆದರೆ ಇವನ ಬೇಡಿಕೆಯ ಬಗೆ ಬೇರೆ :-"ನಿನ್ನ ಆಧಿಪತ್ಯದ ನೆರಳಿನಲ್ಲಿ ಒಂದು ಮೂಲೆಯಲ್ಲಿ ಕುಳಿತು, ಜ್ಞಾನದ ಸೌಖ್ಯವನ್ನು ಜನರಲ್ಲಿ ಹರಡುತ್ತಾ, ನಿನ್ನ ಶ್ರೇಯಸ್ಸನ್ನು ಬಯಸುತ್ತಿರಬೇಕೆಂಬುದೇ ನನ್ನ ಆಶೆ, ಇದಕ್ಕವಕಾಶ ಮಾಡಿ ಕೊಡುವುದೇ ನಿನ್ನಿಂದ ನನಗೆ ಆಗಬೇಕಾದ ಮಹೋಪಕಾರ.” ಉಮರನ ಈ ಕವಿ ಸಹಜವಾದ ಕೋರಿಕೆಯನ್ನು ಕೇಳಿ, ಅಧಿಕಾರ ಬಿರುದುಗಳನ್ನು ಕೊಡಿಸುವೆನೆಂದು ಎಷ್ಟು ಹೇಳಿದರೂ ಆತನು ಅದಕ್ಕೊಡಂಬಡದಿರಲು, ನಿಚಾಮರ್-ಉಲ್-ಮುಲ್ಕನು ಆತನ ಜೀವನಕ್ಕೆ ಸಾಕಾಗುವಷ್ಟು ವರ್ಷಾಶನವನ್ನು ರಾಜ್ಯದ ಬೊಕ್ಕಸದಿಂದ ಕೊಡುವಂತೆ ಏರ್ಪಡಿಸಿದನು. ಇದನ್ನು ಉಮರನು ಅಂಗಿಕರಿಸಿ ತೃಪ್ತನಾಗಿ, ಗ್ರಂಥ ವ್ಯಾಸಂಗಕ್ಕೂ ತಮ್ಮ ವಿಚಾರಕ್ಕೆ ತನ್ನ ಜೀವಿತವನ್ನು ತೆತ್ತನು.

ಆತನು ಮೊದಲು ಜ್ಯೋತಿಶ್ಯಾಸ್ತ್ರದ ಸೂಕ್ಷಾಂಶಗಳನ್ನ ತತ್ಸಂಬಂಧವಾದ ಗಣಿತ ವಿವರಗಳನ್ನೂ ಶೋಧಿಸಲು ಮನಸ್ಸು ಮಾಡಿ, ಅರಬ್ಬಿ ಭಾಷೆಯಲ್ಲಿ ಬೀಜಗಣಿತ (ಆಲ್ಜಿಬ್ರಾ) ಗ್ರಂಥವೊಂದನ್ನು ಬರೆದರು. ಈ ಶಾಸ್ತ್ರದ ಸಮಸ್ಯೆಗಳಿಗೆ, ರೇಖಾಗಣಿತದ (ಜ್ಯಾಮೆಟ್ರಿ) ಶಂಕು ವಿಭಜನೆಯ ಕ್ರಮ (ಕೊನಿಕ್ ಸೆಕ್ಷನ್ಸ್)ಗಳಿಂದ ಸಮಾಧಾನ ಕೊಡುವ ವಿಧಾನವನ್ನು ಕಂಡುಹಿಡಿದುದು ಉಮರನ ವಿಶೇಷ ಕೌಶಲವೆಂದು ತಿಳಿದವರು ಹೇಳುತ್ತಾರೆ. ಹೀಗೆ ಆತನ ಗಣಿತ ಪ್ರಜ್ಞೆಯ ಕೀರ್ತಿಯು ಬೆಳೆಯುತ್ತಿರಲು, ಸುಮಾರು ಕಿಸ್ತ ವರ್ಷ ೧೦೭೪ರಲ್ಲಿ ಆ ದೇಶದ ಸುಲ್ತಾನ್ ಮಲ್ಲಿಕ್ ಷಹನು ಅಲ್ಲಿಯ ಸಂಚಾಂಗ ಪದ್ದತಿಯನ್ನು ಪರಿಷ್ಕಾರಗೊಳಿಸುವ ಕಾರ್ಯವನ್ನು ಈತನಿಗೊಪ್ಪಿಸಿದನು. ಈತನು ಆಗ ನಡೆಯಿಸಿದ ತಿದ್ದು ಪಾಟುಗಳು ತಾರೀಖ್ ಇ ಮಲಿಕ್ ಷಾಹಿ ” ಎಂಬ ಹೆಸರಿನಲ್ಲಿ ಕ್ರಿಸ್ತ ವರ್ಷ ೧೦೭೪ರ ಮಾರ್ಚಿ ೧೫೪ರಿಂದ ರೂಢಿಗೆ ಬಂದವು. ಉಮರನ ಬೀಜಗಣಿತ ಗ್ರಂಥದ ಭಾಗಗಳು ಫ್ರೆಂಚ್ ಜರ್ಮನ್ ಮೊದಲಾದ ಐರೋಪ್ಯ ಭಾಷೆಗಳಲ್ಲಿ ತರ್ಜುಮೆಯಾಗಿವೆ. ಉಮರನ ಗಣಿತ ನೈಪುಣ್ಯದ ಖ್ಯಾತಿಯು ಹೀಗೆ ದೊಡ್ಡದಾದರೂ, ಅದಕ್ಕೂ ಮರೆ ಕಟ್ಟುವಷ್ಟು ದೊಡ್ಡದು ಆತನ ಕವಿತ್ವ ಚಾತುರ್ಯದ ಖ್ಯಾತಿ. ಆತನ ಕಾವ್ಯವು "ರುಬಾ-ಯಿ" ಎಂಬ ಛಂದಸ್ಸಿನ ಪದ್ಯಗಳಾಗಿ, "ರುಬಾಯ್ಯಾತ್" ಎಂಬ ಹೆಸರಿನಿಂದ ಪ್ರಸಿದ್ದವಾಗಿದೆ. "ರುಬಾ-ಯಿ" ಪದ್ಯವು ನಾಲ್ಕು ಪಾದಗಳುಳ್ಳುದು. ಇವುಗಳಲ್ಲಿ ಮೊದಲನೆಯ, ಎರಡನೆಯ ಮತ್ತು ನಾಲ್ಕನೆಯ ಪಾದಗಳ ಅಂತ್ಯಾಕ್ಷರಗಳು ಒಂದೇ ಪ್ರಾಸದವು, ಮೂರನೆಯ ಪಾದದಲ್ಲಿ ಪ್ರಾಸವಿರಬೇಕಾದ ನಿಯಮವಿಲ್ಲ. "ರುಬಾಯ್ಯಾತ್" ಕಾವ್ಯಕ್ಕೆ ಸೇರಿದುವೆಂಬ ಸುಮಾರು ೫೦೦ ಪದ್ಯಗಳು ಈಗ ಪ್ರಚಾರದಲ್ಲಿವೆ. ಕಾವ್ಯದ ಸಮಗ್ರ ಸಂಖ್ಯೆಯೆಷ್ಟೋ, ಮತ್ತು ಈಗ ಪ್ರಚಾರದಲ್ಲಿರುವವುಗಳಲ್ಲಿ ನಿಜವಾಗಿಯ ಉಮರನವೇ ಆದವುಗಳೆಷ್ಟೋ ನಿಶ್ಚಯಿಸುವುದು ಕಷ್ಟ. ಈ ಕಾವ್ಯದಲ್ಲಿ ಉಮರನು ಮಾನವ ಜೀವನದ ಒಳತತ್ತ್ವವನ್ನು ಕುರಿತು ವಿಚಾರಮಾಡತೊಡಗಿ, ತನ್ನ ಅಂತರಂಗದ ಆಲೋಚನೆಗಳನ್ನೂ, ಭಾವಗಳನ್ನೂ, ಅಭಿಲಾಷೆಗಳನ್ನೂ, ಸಂಶಯಗಳನ್ನ ಸರಸ ವಚನಗಳಿಂದ ತೋರಿಸಿದ್ದಾನೆ. ಈತನ ತತ್ತ್ವ ನಿರ್ಣಯವನ್ನು ಕುರಿತು ಒಂದೆರಡು ವಾಕ್ಯಗಳನ್ನು ಬೇರೆಯಾಗಿ ಬರೆಯುವುದು ಅನುಕೂಲ. ಇಲ್ಲಿ ಆತನ ಸುತ್ತುಮುತ್ತಲಿದ್ದ ಸನ್ನಿವೇಶಗಳೆಂತಹವೆಂಬುದನ್ನು ಸಂಕ್ಷೇಪವಾಗಿ ಗಮನಕ್ಕೆ ತಂದುಕೊಳ್ಳಬಹುದು.

ಉಮರನ ಕಾಲಕ್ಕೆ ಕಾವ್ಯ ವ್ಯಾಸಂಗವು ಆ ದೇಶಕ್ಕೆ ಹೊಸ ಸಂಗತಿಯೇನೂ ಆಗಿರಲಿಲ್ಲ. ಅಂದಿಗೆ ಬಹು ಹಿಂದಿನಿಂದಲೂ ಪಾರಸೀಕರಲ್ಲಿ ಸಾಹಿತ್ಯವೂ ಲಲಿತ ಕಲೆಗಳೂ ಬೆಳೆದು ಬಂದಿದ್ದುವು. ಉಮರನ ಸಮಯದ ಸರಿಸುಮಾರಿಗೆ ಅಲ್ಲಿ ಫಿರ್ದೌಸಿ ಎಂಬ ಮಹಾಕವಿಯು ಪ್ರಖ್ಯಾತನಾಗಿದ್ದನು. ಸರಸತೆಯಂತೆಯೇ ತತ್ತ್ವಜಿಜ್ಞಾಸೆಯೂ ಆ ದೇಶದವರಿಗೆ ಪೂರ್ವದಿ೦ದ ಬಂದಿತ್ತು. ಉಮರನ ವೇಳೆಗೆ ಮಹಮ್ಮದೀಯ ಮತವು ಅಲ್ಲಿ "ಸೂಫಿ" ಎಂಬ ಏಕಾಂತೋಪಾಸನೆಯ ರೂಪವನ್ನು ತಾಳಿತ್ತು. ಮಹಮ್ಮದ ಗುರುವು ಬೋಧಿಸಿದ್ದ ಧರ್ಮದ ಜೊತೆಗೆ ಕ್ರೈಸ್ತರ ವಿರಕ್ತಿಭಾವವನ್ನೂ, ಬೌದ್ದರ ಆತ್ಮ ನಿಗ್ರಹ ತತ್ತ್ವವನ್ನೂ ಸೇರಿಸಿಕೊಂಡು, ಜೀವ ಸ್ವರೂಪ ವಿಚಾರದಲ್ಲಿ ಬೌದ್ಧರ ಮತ್ತು ಗ್ರೀಕರ ಮತಗಳನ್ನು ಮಹಮ್ಮದೀಯ ಮತದೊಡನೆ ಸಮನ್ವಯಪಡಿಸಿಕೊಳ್ಳುವ ಪ್ರಯತ್ನದ ಫಲಿತಾಂಶವೇ ಈ "ಸೂಫಿ" ಮತವೆಂದು ಕೆಲವರು ಹೇಳುತ್ತಾರೆ. "ಸೂಫಿ" ಸಿದ್ಧಾಂತವು ವೇದಾಂತಕ್ಕೆ ಸರಿಹೋಗುತ್ತದೆ ಎಂದು ಇನ್ನು ಕೆಲವರ ಅಭಿಪ್ರಾಯ. ಏವಂ ಚ, ಉಮರನ ದಿವಸದ ಹಿಂದೆಯೇ ಇಂಡಿಯಾ, ಪ್ಯಾಲೆಸ್ಟೈನ್, ಗ್ರೀಸ್ ಮೊದಲಾದ ದೇಶಗಳ ಮತ ಮತಾಂತರಗಳ ಜ್ಞಾನವು ಪರ್‍ಸಿಸಯಕ್ಕೆ ಸಂಚಾರ ಮಾಡಿ, ಅಲ್ಲಿಯ ವಿಚಾರಪರ ಜನರ ಮಸ್ಸಿನಲ್ಲಿ ನೂತನ ಭಾವನೆಗಳನ್ನು ಹುಟ್ಟಿಸಲು ಮೊದಲು ಮಾಡಿತ್ತೆಂಬುದು ಸ್ಪಷ್ಟವಾಗಿದೆ. ಇದರ ಪರಿಣಾಮವಾದ "ಸೂಫಿ" ದರ್ಶನವು ಪ್ರಬಲಿಸುತ್ತಿದ್ದ ಕಾಲದವನು ಉಮರ್. ಆತನು "ಸೂಫಿ" ಮತದವನೇ ಎಂದು ಬಹುಮಂದಿ ಬರೆದಿದ್ದಾರೆ. ಈ ನೂತನ ಮಾರ್ಗದವರಿಗೂ ಕೇವಲ ಮಹಮ್ಮದ ಸಂಪ್ರದಾಯವೊಂದನ್ನೇ ಹಿಡಿದಿದ್ದ ಪುರಾತನ ಮಾರ್ಗದವರಿಗೂ ಆ ಕಾಲದಲ್ಲಿ ವಾದ ವಿವಾದಗಳು ಬೆಳೆದು, ದೇಶದಲ್ಲಿ ಆಧ್ಯಾತ್ಮಿಕ ಪ್ರಶ್ನೆಗಳೂ ಸಂದೇಹಗಳೂ ಹೆಚ್ಚಾಗಿರಬೇಕು.

ಆಗಿನ ರಾಜಕೀಯ ಸಂದರ್ಭಗಳೂ ಸಮಾಧಾನಕರವಾದವುಗಳೇನೂ ಆಗಿರಲಿಲ್ಲ. ಅರಬ್ಬಿ ದೇಶದವರು ಪರ್‍ಸಿಯದೊಡನೆ ಯುದ್ಧ ಮಾಡಿ ಅದನ್ನು ಒಡೆದು ದುರ್ಬಲಪಡಿಸಿದ್ದರು. ಪರ್ಸಿಯ ದೊಳಗೆ ಅನೇಕ ಸಂಸ್ಥಾನಗಳಿದ್ದುವಲ್ಲದೆ, ಅವುಗಳ ರಾಜರುಗಳಲ್ಲಿ ಪರಸ್ಪರ ವೈರಗಳೂ, ಅವರ ಅಣ್ಣತಮ್ಮಂದಿರುಗಳಲ್ಲಿ ಜಗಳಗಳೂ, ಅವರವರ ಪರಿವಾರಗಳಲ್ಲಿ ಒಳಸಂಚು ಪಿತೂರಿಗಳೂ ನಡೆಯುತ್ತಿರಲಾಗಿ, ಈ ಅವ್ಯವಸ್ಥೆಯ ಕಳವಳವು ದೇಶವನ್ನಾವರಿಸಿತ್ತು.

ಈ ಮೂರು ಬಗೆಯ ಸಂದರ್ಭಗಳ ಗುರುತುಗಳು ಉಮರನ ಕೃತಿಯಲ್ಲಿ, ಸರಸ ವಿದ್ಯಾಭಿಮಾನ, ಜೀವನ ತಮ್ಮ ವಿಚಾರವ್ಯಾಕುಲ, ರಾಜ್ಯ ವೈಭವ ಜುಗುಪ್ಸೆ--ಇವುಗಳ ಸೂಚನೆಗಳ ರೂಪದಲ್ಲಿ ಕಾಣಬರುತ್ತವೆ. ಅದು ಜನ ಮನೋಭಾವದ ವ್ಯತ್ಯಾಸ ಕಾಲದಲ್ಲಿ ಹುಟ್ಟಿದ ಕಾವ್ಯ.

ಉಮರನು ವಿಸ್ತಾರವಾಗಿ ದೇಶಾಟನೆ ಮಾಡಿದ್ದನು; ಅರೇಬಿಯಾ, ಸಿರಿಯಾ, ಮೆಸೊಪೊಟೇಮಿಯಾ ದೇಶಗಳ ರಾಜಾಸ್ಥಾನಗಳನ್ನ ಪಂಡಿತ ಮಂಡಲಿಗಳನ್ನೂ ನೋಡಿದ್ದನು ; ಮಹಮ್ಮದೀಯರ ಪ್ರಸಿದ್ಧ ಪುಣ್ಯ ಸ್ಥಲವಾದ "ಮೆಕ್ಕಾ" ಕ್ಷೇತ್ರಕ್ಕೂ ಯಾತ್ರೆ ಮಾಡಿದ್ದನು. ಆದರೆ ಆತನು ನಿಜವಾದ ಭಕ್ತಿಯಿಂದ ಅಲ್ಲಿಗೆ ಹೋಗಿದ್ದನೋ, ನೋಟ ನೋಡುವ ಕುತೂಹಲದಿಂದ ಮಾತ್ರವೇ ಹೋಗಿದ್ದನೋ, ಅಥವಾ ತನ್ನ ಕಾವ್ಯದಲ್ಲಿ ಸಂಪ್ರದಾಯನಿಷ್ಠರನ್ನು ಕುರಿತ ಆಕ್ಷೇಪಣೆಯಿದ್ದ ಕಾರಣ, ಅವರು ತನ್ನ ಮೇಲೆ ನಾಸ್ತಿಕನೆಂಬ ದೂರನ್ನು ಹೊರಿಸಿ ಶಿಕ್ಷೆ ಮಾಡಿಸಿಯಾರೆಂಬ ಭೀತಿಯಿಂದ, ಆ ಅಪವಾದವನ್ನು ತಳ್ಳುವುದಕ್ಕಾಗಿ ಯಾತ್ರಿಕನಂತೆ ನಟಿಸಿ ಅಲ್ಲಿಗೆ ಹೋಗಿದ್ದನೋ ಎಂಬ ವಿಚಾರವು ಚರ್ಚಾಸ್ಪದವಾಗಿದೆ.

ಉಮರನ ಮತವಿಷಯದ ಅಭಿಪ್ರಾಯಗಳು ಆತನ ಸಮಾಜದ ಪೂರ್ವಾಚಾರ ಪಂಡಿತರಿಗೆ ಅಸಮ್ಮತಗಳಾಗಿದ್ದುವೆಂಬುದೇನೋ ಖಂಡಿತ. ಆತನ ಕಾವ್ಯವನ್ನು ಅವರು ಚಾರ್ವಾಕ ಕೃತಿಯೆಂದು ಅಲ್ಲಗಳೆದರು. ನಮ್ಮ ದೇಶದಲ್ಲಿ ಪಂಡಿತರಾಜನೆಂದು ಪ್ರಸಿದ್ದನಾಗಿರುವ ಜಗನ್ನಾಥ ಕವಿಯನ್ನು ವ್ರಾತ್ಯನೆಂದು ವೈದಿಕರು ದೂಷಿಸಿ ಬಹಿಷ್ಕರಿಸಿದ್ದರೆಂದು ಕಥೆಯಿಲ್ಲವೆ ? ಪೂರ್ವ ಸಮಯವರ್ತಿಗಳಾದವರು ಇತರರ ವಿಷಯದಲ್ಲಿ ಎಷ್ಟು ಕರುಣೆ ವಿನಯಗಳನ್ನು ತೋರಿದರೂ, ತಮ್ಮ ದಾರಿಯನ್ನು ತುಳಿಯಲಾರದವರ ವಿಷಯದಲ್ಲಿ ಮಾತ್ರ ಸ್ವಲ್ಪವೂ ಸಹನೆ ಕನಿಕರಗಳನ್ನು ತೋರಲಾರರು. ಈ ಕಾರಣದಿಂದ ಉಮರನ ಕಾವ್ಯಕ್ಕೆ ಆತನ ಕಾಲದ ಆ ದೇಶದ ವಿದ್ವದ್ಗೋಷ್ಠಿಯಲ್ಲಿ ಮನ್ನಣೆ ದೊರೆಯದೆ ಹೋಯಿತು.

ಆದರೆ ಸಾಮಾನ್ಯ ಜನದ ಮನಸ್ಸು ಮತ ಚರ್ಚೆಯ ಭೇದಾಂಶವೊಂದನ್ನೇ ಲೆಕ್ಕದಲ್ಲಿಟ್ಟುಕೊಂಡಿರುವುದಿಲ್ಲ. ಯುಕ್ತಿಯುಕ್ತವಾದ ನುಡಿಯನ್ನು ಕೇಳಿದೊಡನೆಯೇ ಅದು, ಭೇದ ವಿವರಗಳನ್ನು ಮರೆತು, ಕುತೂಹಲದಿಂದ ಆಲಿಸುವುದು. ಹೀಗೆ ಉಮರನ ಸ್ವತಂತ್ರ ವಿಚಾರದ ರೀತಿಯು ಸಾಮಾನ್ಯ ಜನಕ್ಕೆ ಇಷ್ಟವೇ ಆಯಿತು. ಕ್ರಮೇಣ ಆತನ ಕಾವ್ಯವು ಲೋಕಪ್ರಿಯವಾಗಿ, ಇತರ ಕವಿಗಳಿಗೆ ನೂತನ ಮಾರ್ಗ ಪ್ರದರ್ಶಕವೂ ಆಯಿತು. ಉಮರನ ತರುವಾಯ ವಿಖ್ಯಾತರಾದ ಹಾಫೀಸ್ ಮುಂತಾದ ಕವಿಗಳು ಬಹು ಮಟ್ಟಿಗೆ ಉಮರನ ಅನುಯಾಯಿಗಳೇ ಎಂದು ತಿಳಿದವರು ಹೇಳಿದ್ದಾರೆ.

ಉಮರನು ಒಂದು ಶತಮಾನ ಪೂರ್ತಿಯಾಗಿ ಜೀವಿಸಿದಂತೆ ಕಾಣುತ್ತದೆ. ಆತನು ಸದಾ ಸಂತುಷ್ಟಚಿತ್ತನಾಗಿದ್ದು, ಸಂತೋಷದಿಂದ ಅವತಾರ ಮುಗಿಸಿಕೊಂಡನೆಂಬುದಕ್ಕೆ ದೃಷ್ಟಾಂತವಾದ ಕಥೆಯೊಂದಿದೆ. ಆತನು ಒಂದು ದಿನ ಒಂದು ತೋಟದಲ್ಲಿ ಖ್ವಾಜಾ ನಿಜಾಮಿ ಎಂಬ ತನ್ನ ಶಿಷ್ಯನೊಡನೆ ಮಾತನಾಡುತ್ತಿದ್ದ ಕಾಲದಲ್ಲಿ -- "ಎಲ್ಲಿ ಉತ್ತರ ದಿಕ್ಕಿನ ಗಾಳಿಯು ಗುಲಾಬಿ ಹೂಗಳನ್ನು ತಂದು ಅಂಜಲಿಯೆರಚುವುದೋ ಅಂಥಾ ಸ್ಥಳದಲ್ಲಿ ನನ್ನ ಸಮಾಧಿಯಿರುವುದು" ಎಂದು ಹೇಳಿದ್ದನಂತೆ. ಕೆಲವು ವರ್ಷಗಳ ಮೇಲೆ ಖ್ವಾಜಾ ನಿಜಾಮಿಯು ನೀಷಾಪುರಕ್ಕೆ ಹೋಗಿ ತನ್ನ ಗುರುವಿನ ಗೋರಿಯನ್ನು ಹುಡುಕಿ ನೋಡಲು, ಅದು ಒಂದು ತೋಟದ ಹೊರಗಡೆ, ಆವರಣದ ಗೋಡೆಯ ಪಕ್ಕದಲ್ಲಿ, ತೋಟದ ಗಿಡಗಳ ಕೊಂಬೆಗಳು ಹರಡಿ ಉದಿರಿಸಿದ್ದ ಹೂಗಳ ರಾಶಿಯ ಹೊದಿಕೆಯ ಕೆಳಗೆ ಅವಿತುಕೊಂಡಿದ್ದುದನ್ನು ಕಂಡನಂತೆ.

ಉಮರನ ಕಾವ್ಯದಲ್ಲಿ ಇದೇ ಬಗೆಯ ಮನೋಹರತೆಯು ಪ್ರತಿಫಲಿಸಿರುವುದರಿಂದಲೇ ಅದು ಸಕಲ ಜನ ವರ್ಗಗಳ ಆದರಣೆಯನ್ನೂ ಪಡೆದಿದೆ. ಅದು ಇಂಗ್ಲಿಷ್, ಫ್ರೆಂಚ್, ಜರ್‍ಮನ್, ರಷ್ಯನ್ ಮೊದಲಾದ ಅನೇಕ ಐರೋಪ್ಯ ಭಾಷೆಗಳಿಗೆ, ಒಂದೊಂದರಲ್ಲಿಯೂ ಅನೇಕ ಮಂದಿ ವಿದ್ವದ್ರಸಿಕರಿಂದ, ಪದ್ಯರೂಪಗಳಲ್ಲಿಯೂ ಗದ್ಯರೂಪಗಳಲ್ಲಿಯೂ ಪರಿವರ್ತಿತವಾಗಿದೆ. ನಮ್ಮ ದೇಶದ ಮೊಗಲಾಯಿ ಪಾದಷಹರಲ್ಲಿ ಅತ್ಯಂತ ಪ್ರಖ್ಯಾತನಾದ ಅಕ್ಷರ್‌ ಚಕ್ರವರ್ತಿಗೆ ಉಮರನ ಕಾವ್ಯವು ಅತಿ ಪ್ರಿಯವಾಗಿತ್ತೆಂದು ತಿಳಿದುಬಂದಿದೆ. ಹೆಚ್ಚು ಮಾತೇಕೆ ? ಸಕಲ ಭೂಮಂಡಲದ ಅತ್ಯುತ್ತಮ ಕಾವ್ಯರತ್ನ ಸಂಗ್ರಹಾಲಯದಲ್ಲಿ ಮೊದಲು ಗಣ್ಯವೆನಿಸುವವುಗಳ ಪೈಕಿ ಉಮರನ ಕೃತಿಯೊಂದೆಂದು ಸಹೃದಯರಾದ ಪಂಡಿತರು ಹೇಳಿದ್ದಾರೆ. "ಭಗವದ್ಗೀತೆ","ಬೈಬಲ್", ಗ್ರೀಕ್ ನಾಟಕಗಳು, ಷೇಕ್ಸ್‌ಪಿಯರಿನ ನಾಟಕಗಳು ಮೊದಲಾದ ಹತ್ತು ಹನ್ನೆರಡು ಗ್ರಂಥಗಳನ್ನು ಬಿಟ್ಟರೆ, ಉಮರನ ಕಾವ್ಯದ ಸಂಬಂಧದಲ್ಲಿ ಹುಟ್ಟಿರುವಷ್ಟು ವ್ಯಾಖ್ಯಾನಗಳೂ ಪ್ರಬಂಧಗಳೂ ಪ್ರಪಂಚದ

ಮತ್ತಾವ ಕಾವ್ಯದ ವಿಷಯದಲ್ಲಿಯೂ ಆಗಿಲ್ಲವೆಂದು ಹೇಳಬಹುದು. ಈ ಉಮರ-ಸಾಹಿತ್ಯವು ಇನ್ನೂ ಬೆಳೆಯುತ್ತಿದೆ.




ಫಿಟ್ಸ್-ಜೆರಲ್ಡ್

ಫಿಟ್ಸ್-ಜೆರಲ್ಡ್

ಸಂಪಾದಿಸಿ

ಆಂಗ್ಲ ಪ್ರಪಂಚಕ್ಕೆ ಉಮರ ರಸಾಯನವನ್ನು ದೊರಕಿಸಿ ಕೊಟ್ಟವನು ಎಡ್ವರ್ಡ್ ಫಿಟ್ಸ್-ಜೆರಲ್ಸ್ ಎಂಬ ವಿದ್ವತ್ಕವಿ.

ಈತನು ಕ್ರಿಸ್ತ ವರ್ಷ ೧೮೦೯ರ ಮಾರ್ಚಿ ೩೧ರಲ್ಲಿ ಹುಟ್ಟಿ ೧೮೮೩ರ ಜೂನ್ ೧೪ರಲ್ಲಿ ಮೃತನಾದನು.

⁠ಇಂಗ್ಲೆಂಡಿನ ಸಫಕ್ ಜಿಲ್ಲೆಯ ಒಂದು ಗ್ರಾಮವು ಈತನ ಜನ್ಮಸ್ಥಲ. ಈತನ ತಂದೆ ಜಮೀನ್‌ದಾರ. ಆತನ ಮಕ್ಕಳೆಂಟು ಮಂದಿಯಲ್ಲಿ ಏಳನೆಯವನು ಎಡ್ವರ್ಡ್ ಫಿಟ್ಸ್-ಜೆರಲ್ಡ್. ಇವನು ಐದು ವರ್ಷದವನಾಗಿರುವಾಗ ಇವರ ತಂದೆ ಪ್ಯಾರಿಸ್ ನಗರದಲ್ಲಿ ಒಂದು ಮನೆ ಮಾಡಿ, ಪ್ರತಿವರ್ಷವೂ ಕೆಲವು ತಿಂಗಳುಗಳ ಕಾಲ ಸಂಸಾರ ಸಹಿತವಾಗಿ ಅಲ್ಲಿರುತ್ತಿದ್ದನು. ಹನ್ನೆರಡನೆಯ ವರ್ಷದಲ್ಲಿ ಫಿಟ್ಸ್-ಜೆರಲ್ಡ್‌ನಿಗೆ ಪಾಠಶಾಲಾ ಪ್ರವೇಶವಾಯಿತು. ಹದಿನೇಳನೆಯ ವರ್ಷದಲ್ಲಿ ಅವನು ಪ್ರಸಿದ್ದವಾದ ಕೇಂಬ್ರಿಡ್ಜ್ ಪಟ್ಟಣದ ವಿಶ್ವವಿದ್ಯಾಪೀಠವನ್ನು ಆಶ್ರಯಿಸಿ, ನಾಲ್ಕು ವರ್ಷಗಳ ತರುವಾಯ (೧೮೩೦) ಅಲ್ಲಿಯ ಪಟ್ಟ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದನು. ಮೊದಲಿನಿಂದಲೂ ಅವನಿಗೆ ಕಾವ್ಯಪಾಠದಲ್ಲಿ ಅನನ್ಯವಾದ ಅಭಿರುಚಿ. ಮೊದಲಿನಿಂದಲೂ ಅವನಿಗೆ ಏಕಾಕಿಯಾಗಿದ್ದುಕೊಂಡು ದೊಡ್ಡ ಭಾವನೆಗಳಲ್ಲಿ ಮಗ್ನನಾಗಿರುವುದು ಅಭ್ಯಾಸ.

⁠ವಿಶ್ವವಿದ್ಯಾಲಯದಲ್ಲಿಯೂ ಪಾಠಶಾಲೆಯಲ್ಲಿಯೂ ಆತನ ಸಹಾಧ್ಯಾಯಗಳಾಗಿದ್ದವರಲ್ಲಿ ಅನೇಕರು ಕಾಲಕ್ರಮದಲ್ಲಿ ಪ್ರಸಿದ್ಧಿಗೆ ಬಂದರು. ಅವರ ಪೈಕಿ ಅನೇಕರು ಆತನಿಗೆ ಆಗಿನಿಂದಲೂ ಸ್ನೇಹಿತರಾಗಿದ್ದರು. ಇಂಥವರಲ್ಲಿ ಮೊದಲು ಗಣ್ಯರಾಗತಕ್ಕ ವರು ಮಹಾಕವಿಯಾದ ಲಾರ್ಡ್ ಟೆನ್ನಿಸನ್ ಮತ್ತು ಮಹಾ ಕಾದಂಬರೀ ಕರ್ತನಾದ ಥ್ಯಾಕರೆ. ಆ ಕಾಲದ ಪ್ರಖ್ಯಾತ ಗದ್ಯ ಕವಿಯಾದ ಕಾರ್ಲೈಲನೂ ಫಿಟ್ಸ್ ಜೆರಲ್ಡಿನ ಮಿತ್ರವರ್ಗಕ್ಕೆ ಸೇರಿದ್ದನು.

⁠ವಿದ್ಯಾರ್ಜನೆ ಮುಗಿದ ಬಳಿಕ ಫಿಟ್ಸ್-ಜೆರಲ್ಡನು ಯಾವ ಉದ್ಯೋಗಕ್ಕೂ ಕೈಹಚ್ಚಲಿಲ್ಲ. ದ್ರವ್ಯದ ಮೇಲೆಯೂ ಪ್ರತಿಷ್ಠೆಯ ಮೇಲೆಯೂ ಆತನ ಮನಸ್ಸು ಹೋಗಲೊಪ್ಪಲಿಲ್ಲ. ಪಿತ್ರಾರ್ಜಿತ ವಾದ ಜಮೀನಿನ ಮೇಲೆ ನೆಲಸಿ,-ಉಮರನಂತೆ-ಅಲ್ಲಿಯ ಆಡಂಬರವಿಲ್ಲದ ಸಾಮಾನ್ಯ ಸುಖದಿಂದ ಸಂತೃಪ್ತನಾಗಿ, ಕಾವ್ಯೋ ಪಾಸನೆಯಲ್ಲಿ ಕಾಲಕ್ಷೇಪಮಾಡಬೇಕೆಂಬುದೇ ಆತನಿಗೆ ಸಹಜ ವಾದ ಆಶೆಯಾಗಿತ್ತು. ಶಾಂತವಾದ ಹಸಿರುಗಾವಲು, ಕೋಮಲ ವಾದ ಹೂಗಳ ತೋಟ, ಮೃದುವಾದ ಪಕ್ಷಿ ಕೂಜಿತ, ಗುಣಾ ಢ್ಯರೂ ಸರಸಿಗಳೂ ಆದ ನಾಲೈದು ಮಂದಿ ಆಪ್ತಸ್ನೇಹಿತರ ಪ್ರೇಮ, ಕೆಲವು ಸದ್ಯಂಥಗಳಲ್ಲಿ ಅಭಿನಿವೇಶ-ಇವಿಷ್ಟಕ್ಕಿಂತ ಹೆಚ್ಚಿನದಾವುದೂ ಜೀವಿತ ಸೌಖ್ಯಕ್ಕೆ ಬೇಕಾಗಿಲ್ಲವೆಂದು ಆತನು ಮೊದಲಿನಿಂದಲೂ ಭಾವಿಸಿದ್ದನು.

⁠ನಲವತ್ತೇಳನೆಯ ವರ್ಷದಲ್ಲಿ ಆತನು ಮದುವೆ ಮಾಡಿ ಕೊಂಡನು. ಕೈಹಿಡಿದಾಕೆಯು ಆತನಲ್ಲಿ ಪ್ರೀತಿ ಗೌರವಗಳುಳ್ಳವ ಳಾಗಿದ್ದಳು. ಆದರೆ ಜೀವಿತ ಚರ್ಯೆಯ ವಿವರಗಳ ವಿಷಯದಲ್ಲಿ ಆಕೆಯ ಸ್ವಭಾವವು ಬೇರೆ ಬಗೆಯದಾಗಿತ್ತು. ಜನರಲ್ಲಿ ವಿಶೇಷ ವಾಗಿ ಹೋಗೊಣ ಬರೋಣ, ಸಮಾಜದಲ್ಲಿ ಗಣ್ಯತೆಯನ್ನು ಅಪೇಕ್ಷಿಸೋಣ, ನೆರೆಹೊರೆಯವರ ನಡೆನುಡಿಗಳನ್ನೂ ಉಡುಪು ತೊಡುಪುಗಳನ್ನೂ ಪ್ರಮಾಣವಾಗಿಟ್ಟುಕೊಂಡು ಅದಕ್ಕೆ ಕಟ್ಟು ಬಿದ್ದಿರೋಣ ಈ ತೆರನಾದುದು ಆಕೆಯ ಮನೋವೃತ್ತಿ, ಜನದ ಗೊಂದಲವನ್ನು ದೂರದಲ್ಲಿ ಬಿಟ್ಟಿರೋಣ, ಯಾವ ಬಗೆಯಲ್ಲೂ ಹೆರರ ಬಾಯಿಗೆ ಸಿಕ್ಕದೆ ಇರೋಣ, ತನ್ನ ಅಂತರಂಗದಲ್ಲಿ ವಿಚಾರ ಮಾಡಿ ಅಲ್ಲಿ ಉಚಿತತೋರಿದಂತೆ ನಡೆದುಕೊಳ್ಳೋಣ ಈ ತೆರ ನಾದುದು ಆತನ ಮನೋವೃತ್ತಿ, ಒಂದುಕಡೆ ಸಂಪ್ರದಾಯ ದಾಸ್ಯ, ಇನ್ನೊಂದು ಕಡೆ ಸ್ವಾತಂತ್ರ್ಯ ಪ್ರೀತಿ. ಇವೆರಡೂ ಒಂದ ಕ್ಕೊಂದು ಒಗ್ಗುವುದು ಕಷ್ಟವೆಂದು ಕೆಲವು ತಿಂಗಳುಗಳಲ್ಲಿಯೇ ಆ ದಂಪತಿಗಳ ಅನುಭವಕ್ಕೆ ಬಂದಿತು. ಹೇಗಾದರೂ ತಮ್ಮ ಸ್ವಭಾವ ಗಳನ್ನು ತಿದ್ದಿಕೊಂಡು ಪರಸ್ಪರ ಸಹ್ಯವಾಗಬೇಕೆಂದು ಅವರಿಬ್ಬರೂ ಅನೇಕ ಪ್ರಯತ್ನಗಳನ್ನು ಮಾಡಿ ನೋಡಿದರು. ತಮ್ಮ ವಾಸಸ್ಥಲ ವನ್ನು ಬದಲಾಯಿಸಿದರು ; ಉಭಯರಿಗೂ ಸ್ನೇಹಿತರಾಗಿದ್ದವರ ಸಹಾಯವನ್ನು ಬೇಡಿದರು. ಆದರೂ ಮನಸ್ಸಿಗೆ ಮುಜುಗರ ವನ್ನುಂಟುಮಾಡುವ ಸಂದರ್ಭಗಳು ತಪ್ಪಲಿಲ್ಲ. ಕಡೆಗೆ ಅವರು ಬೇರೆಯಾಗಿರುವುದೇ ಲೇಸೆಂದು ನಿಶ್ಚಯಿಸಿ ಪ್ರತ್ಯೇಕವಾದರು. ಮತ್ತೆ ಅವರು ಸೇರಲೇ ಇಲ್ಲ. ಆದರೂ ಅವರ ಅನ್ನೋನ್ಯ ವಿಶ್ವಾ ಸವು ಎಂದಿನಂತೆ ಇತ್ತು. ಕಾಗದಗಳ ಮೂಲಕವೂ ಮಿತ್ರರ ಮೂಲಕವೂ ಅವರು ಪರಸ್ಪರ ಸಮಾಚಾರಗಳನ್ನು ತಿಳಿದು ಕೊಳ್ಳುತ್ತಿದ್ದರು.

⁠ಫಿಟ್ಸ್-ಜೆರಲ್ಡನು ಏಕಾಂತ ಸೇವಿ, ಒಬ್ಬಂಟಿಗನಾಗಿ ಗದ್ದೆ ತೋಟ ಕಾಡುಗಳಲ್ಲಿ ಸಂಚಾರ ಮಾಡುವುದು, ಇಷ್ಟವಾದಾಗ ಪರಿಚಿತರಾದ ಹಳ್ಳಿಯ ಜನರೊಡನೆ ಮಿತವಾಗಿ ಮಾತನಾಡು ವುದು, ಸಮುದ್ರದಲ್ಲಿ ತಾನೇ ದೋಣಿ ನಡಿಸಿಕೊಂಡು ಹೋಗು ವುದು, ಸುತ್ತಮುತ್ತಲಿನ ಸೃಷ್ಟಿ ಸೌಂದರ್ಯವನ್ನು ನೋಡುತ್ತ ಕಾಲನಿಯಮವಿಲ್ಲದೆ ಮನದಿಂದ ಕುಳಿತಿರುವುದು, ಮನಸ್ಸು ಬಂದಾಗ ಓದುವುದು, ಎಂದೋ ಒಂದು ದಿನ ತಾನಾಗಿ ಪ್ರವೃತ್ತಿ ಯುಂಟಾದಾಗ ಬರೆಯುವುದು,-ಇವೆ ಫಿಟ್ಸ್-ಜೆರನ ಉಳಿದ ಚರಿತ್ರೆಯ ಮುಖ್ಯ ಸಂಗತಿಗಳು. ಆತನು ಮಾಂಸಾಹಾರವನ್ನು ವರ್ಜಿಸಿದ್ದನು ; ಉಡುಪಿನ ವಿಷಯದಲ್ಲಿಯ ಉದಾಸೀನನಾ ಗಿದ್ದನು. ಎಲ್ಲ ಬಾಹ್ಯ ನಿರ್ಬಂಧಗಳನ್ನೂ ಸಾಧ್ಯವಾದಷ್ಟು ಮಟ್ಟಿಗೆ ತೊರೆದು, ಆತ್ಮಾರಾಮನಾಗಿ ಬಾಳಿದ ಕವಿ ಆತನು. ⁠ಆತನ ಗ್ರಂಥ ರಚನೆಯನ್ನು ಕುರಿತು ಹೇಳುವುದಕ್ಕೆ ಮುಂಚೆ ನಾವು ಗಮನಕ್ಕೆ ತಂದುಕೊಳ್ಳಬೇಕಾದ ಅಂಶವೊಂದಿದೆ. ಆತನು ಯಶಸ್ಸಂಪಾದನೆಗಾಗಿಯಾಗಲಿ ಅಥವಾ ಲೋಕ ಪ್ರಬೋಧೆಗೆಂದೇ ಆಗಲಿ ಪುಸ್ತಕ ಬರೆಯಹೊರಟವನಲ್ಲ, ಆತನು ಲೇಖಣಿ ಹಿಡಿದುದು ಕೇವಲ ತನ್ನ ಎದೆಯ ಹೊರೆಯನ್ನು ಇಳಿಸಿ ಕೊಳ್ಳುವುದಕ್ಕಾಗಿ, ಅದರಿಂದ ಇತರರಿಗೆ ಸಂತೋಷವೂ ಜ್ಞಾನ ವಿಕಾಸವೂ ಆಗುವುದು ಆತನ ಉದ್ದೇಶ ಮಹಿಮೆಯಿಂದಲ್ಲ, —ಆನುಷಂಗಿಕವಾಗಿ, ನೆಲದಲ್ಲಿ ಬಿದ್ದ ಬೀಜವು ಮೊಳೆಯುವುದೂ, ಚೆನ್ನಾಗಿ ಬೆಳೆದ ಗಿಡದಲ್ಲಿ ಹೂ ಹೊರಡುವುದೂ ಲೋಕೋಪಕಾರ ಮಾಡಬೇಕೆಂಬ ಅವುಗಳ ಪ್ರತಿಜ್ಞೆಯಿಂದಲ್ಲ ; ಮೊಳೆಯದಿದ್ದರೆ ಬೀಜಕ್ಕೆ ಅನ್ಯಥಾ ಗತಿಯಿಲ್ಲ; ಹೂ ಬಿಡದಿದ್ದರೆ ಗಿಡಕ್ಕೆ ಬೇರೆ ವಿಧಿಯಿಲ್ಲ. ಹಾಗೆಯೇ, ಓದಿ ಚಿಂತಿಸಿ ಪ್ರತಿಭೆಯುಳ್ಳುದಾಗಿರುವ ಮನಸ್ಸಿಗೆ ಅದು ಯಾವುದಾದರೊಂದು ಬಗೆಯಲ್ಲಿ ಹೊರಕ್ಕೆ ಬಂದ ಹೊರತು ಸಮಾಧಾನವಿರದು. ಅದನ್ನು ಸಂಪೂರ್ಣವಾಗಿ ಒಳಗೆ ತಡೆದಿಡುವುದು ಯಾರಿಗೂ ಸಾಧ್ಯವಿಲ್ಲ. ಅದು ಹರಿದು ಬರಲು ಹೊರಗಣ ಪ್ರೇರಣೆಗಳಾಗಲಿ ಶಾಸನಗಳಾಗಲಿ ಬೇಕಿಲ್ಲ. ಹೀಗೆ ನೈಜವಾಗಿ, ಕರ್ತೃವಿನ ಅಂತರಂಗದೊಳಗಿನ ಆವೇಶದ ಪ್ರವಾಹ ವಾಗಿ, ಕೇವಲ ಆತನ ಹೃದಯಭಾರ ಪರಿಹಾರಕ್ಕಾಗಿ ಬಂದಿರು ವುವೇ ಈ ಲೋಕದ ಮಹಾ ಕೃತಿಗಳು. ಫಿಬ್ಬೆರನವು ಈ ಜಾತಿಯವು. ಆತನು ತನ್ನ ಅಂತರಂಗದ ಅನುಭವಗಳಲ್ಲಿ ಯಾವುದನ್ನು ತಡೆದಿಡುವುದು ಸಂಪೂರ್ಣವಾಗಿ ಸಾಧ್ಯವಿಲ್ಲದೆ ಹೋಯಿತೋ ಅದನ್ನು ಮಾತ್ರ ಮಾತುಗಳಲ್ಲಿ ರೂಪುಗೊಳಿಸಿ ರುವನು. ಆತನು ಕೀರ್ತಿಕಾಮನೆಯಿಲ್ಲದವನಾದುದರಿಂದಲೂ ; ಆತನ ಗುಣದೋಷ ವಿವೇಚಕ ದೃಷ್ಟಿಯು ಇತರರಲ್ಲಿದ್ದುದಕ್ಕಿಂತ ಸೂಕ್ಷ್ಮವಾದುದಾದುದರಿಂದಲೂ ; ಮೇಲಾಗಿ, ಎಷ್ಟು ಹೆಚ್ಚಾಗಿ ಬರೆಯುವುದು ಸಾಧ್ಯವೋ ಅಷ್ಟನ್ನೂ ಬರೆಯೋಣ ಎಂಬ ಪ್ರವೃತ್ತಿ ಗಿಂತ, ಎಷ್ಟು ಕೊಂಚವಾಗಿ ಬರೆದರೆ ಸಾಕೊ ಅಷ್ಟು ಮಾತ್ರವೇ ಬರೆಯೋಣ ಎಂಬ ನಿವೃತ್ತಿಭಾವವೇ ಆತನಿಗೆ ವಿಶೇಷವಾಗಿದ್ದುದ ರಿಂದಲೂ ಆತನು ಮಾಡಿಟ್ಟಿರುವ ಕೆಲಸವು, ಆತನಿಗಿಂತ ಹೆಚ್ಚು ಪ್ರತಿಭಾವಂತರೇನೂ ಅಲ್ಲದ ಇತರ ಕೆಲವರು ಮಾಡಿರುವ ಕೆಲಸ ಕ್ಕಿಂತಲೂ, ಗಾತ್ರದಲ್ಲಿ ಚಿಕ್ಕದಾಗಿ ಕಾಣುತ್ತದೆ. ಅವರು ಪ್ರಸಿದ್ಧಿಗೆ ಹತ್ತುತ್ತಿರಲು ಆತನು ಅದನ್ನು ನೋಡಿ ಅವರೊಡನೆ ಸ್ಪರ್ಧೆಮಾಡದೆ ಸಂತೋಷಿಸಿ, ತನಗೆ ತನ್ನ ಅಪ್ರಸಿದ್ದಿಯೇ ಸರಿಯೆಂದೆಣಿಸಿದ್ದನು.

⁠ಫಿಟ್ಸ್-ಜೆರಲ್ಡನು ಭಾಷಾಂತರಕರ್ತನ ವೇಷವನ್ನು ಧರಿ ಸಿರುವ ಸ್ವತಂತ್ರ ಕವಿ. ಆತನ ಗ್ರಂಥಗಳಲ್ಲಿ ಮುಖ್ಯವಾದುವು ಯಾವುವೆಂದರೆ:-

(೧) ಕ್ಯಾಲ್ಡೆರಾನ್ ಎಂಬ ಸ್ಪ್ಯಾನಿಷ್ ಕವಿಯ ನಾಟಕಗಳ ಇಂಗ್ಲಿಷ್ ಅನುವಾದ ;
(೨) ಅಯಸ್ಕಿಲಸ್ ಎಂಬ ಗ್ರೀಕ್ ಮಹಾಕವಿಯ ಕೆಲವು ನಾಟಕಗಳ ಇಂಗ್ಲಿಷ್ ಅನುವಾದ ;
(೩) ಕೆಲವು ಪಾರಸೀಕ ಕೃತಿಗಳ ಇಂಗ್ಲಿಷ್ ಅನುವಾದ ;
(೪) ಕೆಲವು ಕಲ್ಪಿತಸಂಭಾಷಣೆಗಳು ಮತ್ತು ಸೂಕ್ತಿಗಳು;
(೫) ಬಂಧು ಮಿತ್ರರಿಗೆ ಬರೆದ ಕಾಗದಗಳು.

⁠ಇವುಗಳಲ್ಲಿ, ಕಾಗದಗಳ ಸಂಪುಟವು ಇಂಗ್ಲಿಷ್ ವಿದ್ವದ್ರಸಿಕರ ವಿಶೇಷವಾದ ಮೆಚ್ಚುಗೆಯನ್ನು ಸಂಪಾದಿಸಿದೆ. ಅದರಲ್ಲಿ ಫಿಟ್ಸ್-ಜೆರಲ್ಡನು ನಾನಾ ಕವಿಗಳ ಮತ್ತು ಕಾವ್ಯಗಳ ಗುಣಾವ ಗುಣಗಳನ್ನು ಪ್ರಾಸ್ತಾವಿಕವಾಗಿ ಸರಳ ಶೈಲಿಯಲ್ಲಿ ಸೂಚಿಸಿರುವ ನಲ್ಲದೆ, ತನ್ನ ಮನೋಭಾವಗಳನ್ನೂ ಸಂಕಟಗಳನ್ನೂ ತೋರಿ ಸಿರುವನು. ಆತನು ಎಂತಹ ಆದ್ರ್ರ ಹೃದಯನು, ಎಂತಹ ಕಾವ್ಯ ರಸಜ್ಞನು, ಎಂತಹ ನಿಷ್ಕಪಟಿ, ಎಂತಹ ಮೃದು ಹಾಸ್ಯನಿಪುಣನು, ಎಂತಹ ಸಾತ್ವಿಕನು ಮತ್ತು ಶಾಂತಿ ಪ್ರಿಯನು-ಎಂಬುದು ಆ ಕಾಗದಗಳನ್ನೋದುವವರ ಮನಸ್ಸಿಗೆ ವಿವರವಾಗಿ ಹೊಳೆಯು ಇದೆ. ಅವು ಪ್ರಕಟನೆಗಾಗಿ ಬರೆದ ಕಾಗದಗಳಲ್ಲ. ಆದುದರಿಂದ ಅವನ್ನು ಆತನ ಸ್ವಭಾವದ ಯಥಾರ್ಥ ದರ್ಪಣವೆಂದು ಭಾವಿಸಬಹುದು.

⁠ಆತನ ಅನುವಾದಗಳು ತರ್ಜುಮೆಗಳಲ್ಲ, –ಪ್ರತಿಪದ ಭಾಷಾಂತರಗಳಲ್ಲ. ಮಹಾಕವಿಗಳ ಕಾವ್ಯ ನಾಟಕಗಳ ವ್ಯಾಸಂಗದಿಂದ ಆತನ ಮನಸ್ಸಿನಲ್ಲಿ ಎಂತೆಂತಹ ಭಾವನಾ ವಿಶೇಷಗಳು ಪ್ರತಿ ಫಲಿಸಿದುವೋ ಅವುಗಳ ಮೂರ್ತ ಸ್ವರೂಪವೇ ಫಿಟ್ಸ್-ಜೆರಲ್ಡನ ಅನುವಾದಗಳು. ಎಂದರೆ, ಆತನ ಕೃತಿಗಳಲ್ಲಿ ಮೂಲ ಕವಿಗಳ ಸಾಮಗ್ರಿಯ ಜೊತೆಗೆ ಆತನ ಸ್ವಂತ ಅಂಶವೂ ಸೇರಿದೆ. ಆತನು ಸುಮ್ಮನೆ "ಫೋಟೋ" ಎತ್ತಿದವನಲ್ಲ; ತಾನು ಆರಿಸಿದ ವಸ್ತುವಿಗೆ ಸ್ವಹಸ್ತದಿಂದಲೂ ಸ್ವಲ್ಪ ಬಣ್ಣಕಟ್ಟಿ, ಆಮೇಲೆ ಅದರ ಪ್ರತಿಬಿಂಬವನ್ನು ರೇವಾವಿವರಗಳೊಡನೆ ನಮ್ಮ ಮುಂದೆ ತಂದಿರಿಸಿದ್ದಾನೆ. ಆತನ ಸ್ವಂತ ಕಲ್ಪನಶಕ್ತಿಯ ಅದ್ಭುತವಾದುದಾದಕಾರಣ, ಕೆಲಸದಿಂದ ಆ ಅನುವಾದಗಳು – ಮೂಲ ಗ್ರಂಥಗಳ ವಿಕಾರಗಳಾಗುವುದಕ್ಕೆ ಪ್ರತಿಯಾಗಿ, ಅವುಗಳಲ್ಲಿ ಕಾಣಬಾರದ ಒಂದು ಹೊಸ ಸೌಂದರ್ಯದಿಂದ ಶೋಭಿಸುತ್ತವೆ.

⁠ಫಿಟ್ಸ್-ಜೆರಲ್ಡನಿಗೆ ಪರ್ಸಿಯಾ ಮೊದಲಾದ ಪ್ರಾಚ್ಯ ದೇಶಗಳ ಸಾಹಿತ್ಯದಲ್ಲಿ ಆಸಕ್ತಿಯುಂಟಾದುದು ಬಾಲ್ಯದಲ್ಲಿಯೇ, ಆಗ ಆತನ ನೆರೆಯಲ್ಲಿ ವಾಸವಾಗಿದ್ದ ಮೇಜರ್ ಮೂರ್ ಎಂಬಾತನು ಇಂಡಿಯಾ ದೇಶದಲ್ಲಿ ಉದ್ಯೋಗಮಾಡಿದ್ದವನು, ಈತನು ಈ ದೇಶಗಳ ಭಾಷೆಗಳನ್ನೂ ಮತಾಚಾರಗಳ ವಿಚಿತ್ರಗಳನ್ನೂ ಕುರಿತು ಫಿಟ್ಸ್-ಜೆರಲ್ಡ್ ಹುಡುಗನಿಗೆ ಆಗಾಗ ಕಥೆ ಹೇಳುತ್ತಿದ್ದನು. ದೊಡ್ಡವನಾದ ಮೇಲೆ (ಸುಮಾರು ೧೮೪೬ರಲ್ಲಿ) ಫಿಟ್ಸ್-ಜೆರಲ್ಡನಿಗೆ ಇ. ಬಿ. ಕೊವೆಲ್ ಎಂಬ ಪ್ರಾಚ್ಯ ಭಾಷಾ ಪಂಡಿತನ ಸ್ನೇಹ ಲಭಿಸಿತು. ಕೊವೆಲ್ ಪಂಡಿತನು ೧೮೫೫ರಿಂದ ೧೮೬೪ರ ವರೆಗೂ ಕಲ್ಕತ್ತೆ ಯಲ್ಲಿ ಪ್ರೊಫೆಸರ್ ಆಗಿದ್ದು, ಆಗ ಸಂಸ್ಕೃತ ಭಾಷಾ ಜ್ಞಾನವನ್ನು ಹೆಚ್ಚಾಗಿ ಸಂಪಾದಿಸಿ, ಆ ಬಳಿಕ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ದಲ್ಲಿ ಸಂಸ್ಕೃತ ಬೋಧಕನಾದನು. ಆತನಿಗೆ ಪಾರಸೀ ಅರಬ್ಬೀ ಭಾಷೆಗಳ ಪರಿಚಯವೂ ಚೆನ್ನಾಗಿತ್ತು. ಈತನ ಮೂಲಕ ಫಿಟ್ಸ್-ಜೆರಲ್ಡನಿಗೆ ಉಮರನ ಮತ್ತು ಇತರ ಪಾರಸೀ ಕವಿಗಳ ಪರಿಚಯವು ದೊರೆಯಿತು.

⁠ಫಿಟ್ಸ್-ಜೆರಲ್ಡನ ಪಾರಸೀ ಅನುವಾದಗಳಲ್ಲಿ ಜಾಮೀ ಕವಿಯ "ಸಲಾಮಾನ್ ಮತ್ತು ಅಬ್ಬಾಲ್" ಎಂಬುದು ಮೊದಲು (೧೮೫೬) ಪ್ರಕಟವಾದುದು ; ಅತ್ತರ್ ಕವಿಯ "ಪಕ್ಷಿ ಪರಿಷತ್ತು" ಎಂಬುದು ಕಡೆಯದು ; ಇವೆರಡರ ನಡುವಿನದು ಉಮರನ "ರುಬಾಯ್ಯಾತ್". ಇದು ಫಿಟ್ಸ್-ಜೆರಲ್ಡನ ಪಾರಸೀ ಅನುವಾದಗಳಲ್ಲಿ ಮಾತ್ರವೇ ಅಲ್ಲ, ಆತನ ಎಲ್ಲ ಕೃತಿಗಳಲ್ಲಿಯೂ ಅತ್ಯಂತ ಪ್ರಸಿದ್ಧವಾದುದು. ಆತನು ಇನ್ಯಾವುದನ್ನೂ ಬರೆಯದೆ ಇದ್ದಿದ್ದರೂ, ಆತನ ಕೀರ್ತಿಯನ್ನು ಶಾಶ್ವತವಾಗಿ ಸ್ಥಾಪಿಸಲು ಇದೊಂದೇ ಸಾಕಾಗಿರುತ್ತಿತ್ತು. ಇದು ಉಮರನ ಕಾವ್ಯದ ಆದ್ಯಂತ ರೂಪವಲ್ಲ ; ಅದರಲ್ಲಿ ಒಂದು ನೂರರಷ್ಟು ಪದ್ಯಗಳನ್ನು ಮಾತ್ರ ಫಿಟ್ಸ್-ಜೆರಲ್ಡನು ಆರಿಸಿಕೊಂಡು ಅವುಗಳಿಂದ ಭಟ್ಟಿಯಿಳಿಸಿ ತೆಗೆದ ಸಾರ.

⁠ಫಿಟ್ಸ್-ಜೆರಲ್ಡನು "ರುಬಾಯ್ಯಾತಿ"ನ ತನ್ನ ಇಂಗ್ಲಿಷ್, ಛಾಯಾನುವಾದವನ್ನು ಪ್ರಕಟನೆಗೆಂದು ೧೮೫೮ರಲ್ಲಿ ಒಂದು ಮಾಸ ಪತ್ರಿಕೆಗೆ ಕಳುಹಿಸಿದನು. ಒಂದು ವರ್ಷವಾದರೂ ಆ ಪತ್ರಿಕೆಯವರು ಅದನ್ನು ಪ್ರಕಟಿಸದಿರಲು, ೧೮೫೯ರಲ್ಲಿ ಆತನು ಅದನ್ನು ಅವರಿಂದ ಹಿಂದಕ್ಕೆ ತರಿಸಿಕೊಂಡು, ತಾನೇ ಪುಸ್ತಕ ರೂಪದಲ್ಲಿ ೨೫೦ ಪ್ರತಿ ಅಚ್ಚು ಮಾಡಿಸಿ ಪ್ರಕಟಪಡಿಸಿದನು. ಬಹುಕಾಲ ಆ ಪುಸ್ತಕವನ್ಯಾರೂ ಲಕ್ಷಿಸಲಿಲ್ಲ. ಕಡೆಗೆ ಪುಸ್ತಕದ ಅಂಗಡಿಯವನು ಅದು ಮಾರಲಾರದ ಸರಕೆಂದು, ಅದರ ಬೆಲೆಯನ್ನು ಐದು ಷಿಲಿಂಗಿನಿಂದ ಒಂದು ಪೆನ್ನಿಗೆ ಇಳಿಸಿ, ಅದರ ಕಟ್ಟುಗಳನ್ನು ಒಂದು ಮೂಲೆಯಲ್ಲಿ ಹಾಕಿದ್ದನು. ಬಹುಕಾಲದಮೇಲೆ ಒಂದು ದಿನ ರೊಸೆಟ್ಟಿ ಎಂಬ ಕವಿಯ ದೃಷ್ಟಿ ಹೇಗೋ ಅಕಸ್ಮಾತ್ತಾಗಿ ಅದರ ಮೇಲೆ ಬಿತ್ತು. ಆತನು ಅದನ್ನೋದಿ ನೋಡಿ, ತನ್ನ ಸ್ನೇಹಿತನಾದ ಸ್ವಿನ್‌ಬರ್ನ್ ಕವಿಯ ಗಮನಕ್ಕೆ ತಂದನು. ಈತನು ಅದ ರಿಂದ ಮೋಹಿತನಾಗಿ, ಅದರ ಪ್ರತಿಗಳನ್ನು ಕೊಂಡು ತನ್ನ ಮಿತ್ರರಲ್ಲಿ ಹಂಚಿದನು. ಹೀಗೆ ಅದರ ಪ್ರಚಾರವು ಮೊದಲಾಗಿ, ಇದ್ದ ಪ್ರತಿಗಳೆಲ್ಲವೂ ಮಾರಿ, ಕಡೆಗೆ ಅದರ ಬೆಲೆ ಪ್ರತಿಯೊಂದಕ್ಕೆ ೨೧ ಷಿಲಿಂಗಿಗೆ ಏರಿತು. ಲೋಕ ಪ್ರಸಿದ್ದವಾಗತಕ್ಕ ಯೋಗ್ಯತೆಯುಳ್ಳ ಗ್ರಂಥವು ಮೊದಮೊದಲು ತಿರಸ್ಕಾರಕ್ಕೆ ಗುರಿಯಾಗಿ, ಆಮೇಲೆ ಒಂದು ಕೇವಲ ಆಕಸ್ಮಿಕ ಸಂಗತಿಯಿಂದ ಪುರಸ್ಕಾರವನ್ನು ಪಡೆಯಿತೆಂಬ ಈ ಕಥೆಯು, ಕಾವ್ಯ ಪ್ರಪಂಚದಲ್ಲಿ ಕೂಡ "ಪುಣ್ಯೆರ್ಯಶೋ ಲಭ್ಯತೇ” ಎಂಬ ವಚನಕ್ಕೆ ಅವಕಾಶವುಂಟೆಂದು ತೋರಿಸುತ್ತದೆ. ಫಿಟ್ಸ್-ಜೆರನ "ರುಬಾಯ್ಯಾತು” ಒಂಬತ್ತು ವರ್ಷದ ಮೇಲೆ ಎರಡನೆಯ ಸಾರಿ ಮುದ್ರಿತವಾಯಿತು. ಆತನು ಸಾಯುವುದಕ್ಕೆ ಮುಂಚೆ ಅದು ಇನ್ನೆರಡಾವರ್ತಿ ಪ್ರಕಟನೆಯನ್ನು ಪಡೆಯಿತು. ಅಲ್ಲಿಂದೀಚೆಗೆ ಅದು ನೂರಾರು ಆಕಾರಗಳಲ್ಲಿ, ಚಿತ್ರಪಟಗಳೊಡನೆಯ ಅಲಂಕಾರಗಳೊಡನೆಯೂ ದೇಶ ವಿದೇಶಗಳಲ್ಲಿ ಬಗೆಬಗೆಯಾಗಿ ಪ್ರಚುರವಾಗಿ, ಸರಸಿಗಳ ಮನೆಗೆ ಬಂದು ಆಭರಣಪ್ರಾಯವಾಗಿದೆ. ಫಿಟ್ಸ್-ಬೆರಲ್ಡನ ಕೃತಿಯನ್ನನುಕರಿಸಿ ಆತನ ಶೈಲಿಯಲ್ಲಿ, ಆತನ ಧಾಟಿಯಲ್ಲಿ, ಬರೆಯಲು ಪ್ರಯತ್ನಿಸಿದವರೂ ಇದ್ದಾರೆ. ಆತನ ಲಘು ಲಲಿತ ಹಾಸ್ಯಭರಿತವಾದ ವಾಕ್ಯಗಳನ್ನು ಅವಲಂಬಿಸಿ, ಇತರ ವಿಷಯಗಳಿಗೆ ಅವುಗಳನ್ನೇ ಸಾಧ್ಯವಾದ ಮಟ್ಟಿಗೆ ಅನ್ವಯಮಾಡಿ ಬರೆದಿರುವ ವಿಕಟಾನುಕರಣ ('ಪ್ಯಾರಡಿ')ಗಳೂ ಎಷ್ಟೋ ಇವೆ. ಹೀಗೆ ಬಹು ರೀತಿಗಳಲ್ಲಿ ಲೋಕಪ್ರಿಯವಾದ ಕಾವ್ಯ ಫಿಟ್ಸ್-ಜೆರನದು.

⁠ಫಿಟ್ಸ್-ಜೆರಲ್ಡನಿಗೆ ತಾನು ಮಾಡಿದ ಕೆಲಸದಿಂದ ತೃಪ್ತಿ ಪಡೆಯುವುದು ಸುಲಭವಾಗಿರಲಿಲ್ಲ. ನಸನಸೆಯ ಸ್ವಭಾವ ಆತನದು ಎಷ್ಟು ನಯದ ಕೆಲಸವನ್ನು ಮಾಡಿದ್ದರೂ ಅದನ್ನು ಆತನು ಇನ್ನೂ ತಿದ್ದುತ್ತಲೇ ಇರುವನು. ಉಮರ್ ಅನುವಾದವು ಗಾತ್ರದಲ್ಲಿ ಸಣ್ಣದಾದರೂ ಅನೇಕ ವರ್ಷಗಳ ಶ್ರಮದಿಂದ ಸಿದ್ಧವಾದುದು. ಅದು ಆತನ ಜೀವಿತ ಕಾಲದಲ್ಲಿ ಪುನರ್ಮುದ್ರಿತವಾದ ಮೂರುಬಾರಿಯೂ ಹೊಸ ಹೊಸದಾಗಿ ತಿದ್ದುಪಾಟುಗಳನ್ನು ಪಡೆಯಿತು.

⁠ಫಿಟ್ಸ್-ಜೆರಲ್ಡನು ಅನುವಾದವೆಂದು ಹೆಸರಿಟ್ಟು ಬರೆದ ಕಾವ್ಯಗಳಲ್ಲಿ ತನ್ನ ಸ್ವಂತದ ಅಂಶಗಳನ್ನು ಯಥೇಷ್ಟವಾಗಿ ಸೇರಿಸಿರುವನೆಂದು ಮೇಲೆ ಹೇಳಿದೆಯಲ್ಲವೆ ? ಇದಕ್ಕೆ "ರುಬಾಯ್ಯಾತ್" ಕಾವ್ಯವು ಮಿಕ್ಕೆಲ್ಲಕ್ಕಿಂತ ದೊಡ್ಡ ನಿದರ್ಶನವಾಗಿದೆ. ಮಾತೃಕಾ ಗ್ರಂಥದಲ್ಲಿ ಕಾಣಬಾರದಿರುವ ಅನೇಕ ಸಂಗತಿಗಳನ್ನು ಈತನು ತಾನೇ ಸೇರಿಸಿರುವನೆಂದು ಗ್ರಂಥ ವಿಮರ್ಶಕರನೇಕರು ತೋರಿಸಿಕೊಟ್ಟರು. ಆದರೂ ತನ್ನ ಪ್ರಬಂಧದ ಪುನರ್ಮುದ್ರಣ ಸಂದರ್ಭದಲ್ಲಿ ಫಿಟ್ಸ್-ಜೆರಲ್ಡನು ವಿಮರ್ಶಕರ ಮಾತಿನಂತೆ ಅವನ್ನು ತಿದ್ದಲಿಲ್ಲ. ಉಮರನ ಹೃದಯವೆಂತಹುದೆಂದು ತನಗೆ ತೋರಿಬಂದಿತೋ ಅದನ್ನು ಪುನರಾವಿರ್ಭಾವಮಾಡಿಸಿಕೊಡುವುದು ತನ್ನ ಕೆಲಸವೇ ಹೊರತು, ಅಕ್ಷರಕ್ಕಕ್ಷರ ಮಾತಿಗೆ ಮಾತು ಬದಲಿಡುವುದು ತನ್ನ ಕೆಲಸವಲ್ಲವೆಂದು ಆತನು ಭಾವಿಸಿದ್ದನು. ಕಿವಿಗೆ ಮಧುರವೂ ಗಂಭೀರವೂ ಆದ ಪದಗಳು, ಗಮನವನ್ನು ಹಿಡಿದು ನಿಲ್ಲಿಸಬಲ್ಲ ವಾಕ್ಯ ಚಮತ್ಕಾರ, ಪ್ರತ್ಯಕ್ಷಾರ್ಥಕ್ಕಿಂತ ಆಳವಾಗಿ ಮನಸ್ಸಿನೊಳಕ್ಕಿಳಿದು ನಿಂತು ಪದೇ ಪದೇ ಸ್ಮರಣೆಮಾಡಿಸಿ ಕೊಳ್ಳುವ ಧ್ವನಿತಾರ್ಥ–ಇವು ಫಿಟ್ಸ್-ಜೆರಲ್ಡನಿಂದಾಗಿರುವ ಉಮರನ ಪುನರವತಾರಕ್ಕೆ ಲೋಕ ಪ್ರೀತಿಯನ್ನು ಸಂಪಾದಿಸಿ ಕೊಟ್ಟಿರುವ ಗುಣಗಳು. ಈ ಕಾವ್ಯವು ರಸಿಕ ಪ್ರಪಂಚದಲ್ಲಿ ––ಗುಲಾಬಿಯ ಕೋಮಲತೆ, ಮಲ್ಲಿಗೆಯ ಲಾವಣ್ಯ, ಜಾಜಿಯ ಸೌಕುಮಾರ್ಯ––ಇವೆಲ್ಲವನ್ನೂ ಸೇರಿಸಿಕೊಂಡಿರುವ ಒಂದು ದಿವ್ಯ ಪುಷ್ಪಗುಚ್ಛವನ್ನು ಹೋಲುತ್ತದೆ.

ASQUITH ON FITZGERALD'S "OMAR"

ಸಂಪಾದಿಸಿ

To admire and delight in Omar, as he is presented to us by Fitzgerald, is one of those subtle bonds of sympathy which are constantly creating new ties of kinship, and new groups of association, among men who are moved by the art which belongs not to one age or country, but to all.......

Why is it that, from the moment the genius of Fitzgerald made him known to all who speak the English language, he has taken rank with the immortals whom no change of taste or fashion can dethrone ? I do not pretend to give a full answer to the question; but there are one or two considerations which are obvious. First, as regards form, apart from the strange fascination of the metre, there is within a narrow compass, in point of actual bulk, a wholeness and completeness in Omar which belongs only to the highest art.

Then, as regards substance, where else in literature has the littleness of man, contrasted with the baffling infinitude of his environment, and the resulting duty of serenity and acquiescence, been more brilliantly painted or more powerfully enforced ? Occasional Addresses by the Rt. Hon. H. H. Asquith (1893-1916), pp. 157-160. == ಉಮರನ ಉಪದೇಶ ==

ಉಮರನ ಕಾವ್ಯದ ವಿಷಯವಾವುದು-ಭಗವದ್ವಿಚಾರವೆ, ಭೋಗ ಪಶಂಸೆಯ, ಅಥವಾ ಬೇರೆ ಯಾವುದಾದರೊಂದು ಜೀವನ ನೀತಿಯೆ ? ಇದು ಚರ್ಚಾಸ್ಪದವಾದ ಪ್ರಶ್ನೆ.

ಸೂಫಿ ಮತದವರು ಕೆಲವರು ಈ ಕವಿಯು ತಮ್ಮ ತಮ್ಮ ಬೋಧಕರಲ್ಲೊಬ್ಬನೆಂದೂ, ಆತನ ನಿಜವಾದ ಉದ್ದೇಶವು ಕಾವ್ಯದ ಮಾತುಗಳಿಂದ ಪ್ರತ್ಯಕ್ಷವಾಗಿ ತೋರಿಬರುವುದಿಲ್ಲವೆಂದೂ, ಒಂದು ಸಂಕೇತ ರೀತಿಯಿಂದ ತಮ್ಮ ಸಿದ್ಧಾಂತವನ್ನು ನಿರೂಪಿಸಿರುವುದೇ ಆ ಕವಿತೆಯ ವಿಶೇಷವೆಂದೂ ಹೇಳುತ್ತಾರೆ. ವಿರಕ್ತಿಯನ್ನಭ್ಯಾಸ ಮಾಡಿ, ಅಂತರ್ಮುಖಿಯಾಗಿ, ಆತ್ಮಾನುಸಂಧಾನದ ಮೂಲಕ ಭಗವದನುಭವವನ್ನು ಸಂಪಾದಿಸಿಕೊಳ್ಳಬಹುದೆಂಬುದು ಸೂಫಿಯ ಮತ. ಮದ್ಯವೆಂದರೆ ಭಗವದುಪಾಸನೆಯ ಆನಂದ ; ಬಟ್ಟಲೆಂದರೆ ಮನುಷ್ಯ ಹೃದಯ ; ಅರವಟಿಗೆಯೆಂದರೆ ಸೂಫಿ ಯೋಗಿಗಳ ಗೋಷ್ಟಿ ; ಪ್ರಿಯೆಯೆಂದರೆ ಬುದ್ಧಿ ಅಥವಾ ಮನಸ್ಸು ; ಗಂಧರ್ವನೆಂದರೆ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವವನು- ಈ ರೀತಿ ಸಂಜ್ಞೆಗಳನ್ನರಿತುಕೊಂಡು ಓದಿದರೆ ತೋರಿಬರುವ ಗೂಢಾರ್ಥವೇ ಉಮರನ ಅಂತರಂಗವೆಂದೂ, ಮೇಲೆ ಕಾಣುವ ಸೃಷ್ಟಾರ್ಥವು ಒಂದು ನಟನೆಯೆಂದೂ ಸೂಫಿಗಳು ವಾದಿಸುತ್ತಾರೆ:

ಹೀಗೆ ಲೋಕಕ್ಕೆ ಪ್ರಿಯವಾಗಿರುವ ವಸ್ತುಗಳ ಸ್ಮರಣೆಯ ಮೂಲಕ ಲೋಕಕ್ಕೆ ಹಿತವಾಗುವ ತತ್ತ್ವಗಳನ್ನು ಮಹಾಕವಿಗಳು ತಿಳಿಸುವರೆಂಬ ಅಭಿಪ್ರಾಯವು ನಮ್ಮ ದೇಶದಲ್ಲಿಯೂ ಉಂಟು. ರಾಮಾಯಣ ಭಾರತಗಳಿಗೆ ಆಧ್ಯಾತ್ಮಿಕ ಪ್ರಪಂಚದ ಪರವಾಗಿ ಅರ್ಥ ಕಲ್ಪನೆ ಮಾಡಿ, ವೇದಾಂತ ರಹಸ್ಯಗಳನ್ನು ಪ್ರತಿಪಾದಿಸಲು ಎಷೆ ವ್ಯಾಖ್ಯಾನಗಳು ಪ್ರಯತ್ನಿಸಿವೆ. ಗೋಪಿಯರ ಋಷಿಗಳೆಂದೂ, ಅವರ ವಿರಹವಿಲಾಪಗಳು ಭಕ್ತಿಯ ಉತ್ಕಟದಶೆಯೆಂದೂ, ಗೋಪಾಲಕರು ಸಂಸಾರ ಬಂಧನಗಳೆಂದೂ, ವಸ್ತ್ರಗಳು ಅಹಂಕಾರ ಸ್ವರೂಪಗಳೆಂದೂ, ಕೃಷ್ಣಲೀಲೆಯೆಂಬುದು ಭಗವದನುಗ್ರಹ ರೀತಿಯೆಂದೂ ಹೇಳತಕ್ಕವರಿಲ್ಲವೆ ? ಈ ಬಗೆಯ ವ್ಯಾಖ್ಯಾನವು ಭಕ್ತಿ ಚಮತ್ಕಾರಗಳುಳ್ಳುದೇನೋ ಹೌದು. ಆದರೆ ಅದಕ್ಕೆ ಅವಶ್ಯವಾಗುವ ಬಲಾತ್ಕಾರದ ಶಬ್ದಾನ್ವಯಗಳನ್ನೂ ಅತಿಯುಕ್ತಿಗಳನ್ನೂ ನೋಡಿದರೆ, ಅದು ಕವಿಯ ನಿಜವಾದ ಹೃದಯವನ್ನು ತೋರಿಸುತ್ತದೆ ಎಂದು ನಂಬಿಕೆ ಹುಟ್ಟುವುದು ಕಷ್ಟ, ಕಾವ್ಯದಿಂದ ಸಹಜವಾಗಿ, ಸ್ಪಷ್ಟವಾಗಿ, ಸುಲಭವಾಗಿ ದೊರೆಯುವ ಅರ್ಥವು ಕವಿಯ ಮನಸ್ಸಿನಲ್ಲಿದ್ದುದೇ ಅಲ್ಲವೆಂದುವಾದಿಸುವುದು ಸಾಹಸವೇ ಸರಿ. ಪ್ರಕಾಶವಾಗಿ ಭೋಗವನ್ನೂ, ರಹಸ್ಯವಾಗಿ ವಿರಾಗವನ್ನೂ ಬೋಧಿಸುವುದರ ಪ್ರಯೋಜನವಾದರೂ ಏನೋ ತಿಳಿಯುವುದು ಕಷ್ಟ. ಒಳ್ಳೆಯ ಕಾವ್ಯವು ಮತ ಗ್ರಂಥವಾಗಿರಲೇಬೇಕೆಂಬ ನಿಯಮವು ಕಾವ್ಯ ಶಾಸ್ತ್ರದಲ್ಲಿಯೂ ಇಲ್ಲ, ಧರ್ಮಶಾಸ್ತ್ರದಲ್ಲಿಯೂ ಇಲ್ಲ. ಚಿತ್ತವಿಕಾಸ ವನ್ನುಂಟಾಗಿಸಿ, ಅದರ ಮೂಲಕ ಪರೋಕ್ಷವಾಗಿ ಒಂದು ಬಗೆಯ ಉತ್ತಮ ಆತ್ಮಸಂಸ್ಕಾರಕ್ಕೆ ದಾರಿ ಬಿಡಿಸುವುದು ಕಾವ್ಯದ ಕೆಲಸ, ಸ್ಪಷ್ಟಾರ್ಥವೇ ಈ ಕೆಲಸವನ್ನು ಮಾಡುತ್ತಿರುವಾಗ, ಗೂಢಾರ್ಥವನ್ನು ಹುಡುಕುವ ಕೈಶಕ್ಕೆ-ಅದೊಂದು ಬಗೆಯ ಕಸರತ್ತೆಂಬುದೊಂದಲ್ಲದೆ ಬೇರೆ ಫಲ ಕಾಣುವುದಿಲ್ಲ. ಉಮರನು ನಾಚಿಕೆ ಬಿಟ್ಟ ಚಾರ್ವಾಕನೆಂದೂ ಇಂದ್ರಿಯ ಸುಖಲೋಲುಪನೆಂದೂ ಹೇಳುವುದಕ್ಕೂ ಸ್ವಲ್ಪ ಕಾರಣವಿರುವಂತೆ ಒಂದೆರಡು ಕಡೆ ಕಾಣಬಹುದು. ಆದರೆ ಆ ಕಾರಣವೂ ಭ್ರಾಂತಿಯೇ ಎಂಬುದು ಕಾವ್ಯವನ್ನೊಟ್ಟಿಗೆ ತೆಗೆದುಕೊಂಡು ಪರಾಮರ್ಶಿಸುವವರಿಗೆ ಬೇಗನೆ ಗೋಚರವಾಗುವುದು. ಉಮರನು ಇಹಲೋಕದ ಋಷಿಗಳೆಂದೂ, ಅವರ ವಿರಹವಿಲಾಪಗಳು ಭಕ್ತಿಯ ಉತ್ಕಟದಶೆಯೆಂದೂ, ಗೋಪಾಲಕರು ಸಂಸಾರ ಬಂಧನಗಳೆಂದೂ, ವಸ್ತ್ರಗಳು ಅಹಂಕಾರ ಸ್ವರೂಪಗಳೆಂದೂ, ಕೃಷ್ಣಲೀಲೆಯೆಂಬುದು ಭಗವದನುಗ್ರಹ ರೀತಿಯೆಂದೂ ಹೇಳತಕ್ಕವರಿಲ್ಲವೆ ? ಈ ಬಗೆಯ ವ್ಯಾಖ್ಯಾನವು ಭಕ್ತಿ ಚಮತ್ಕಾರಗಳುಳ್ಳುದೇನೋ ಹೌದು. ಆದರೆ ಅದಕ್ಕೆ ಅವಶ್ಯವಾಗುವ ಬಲಾತ್ಕಾರದ ಶಬ್ದಾನ್ವಯಗಳನ್ನೂ ಅತಿಯುಕ್ತಿಗಳನ್ನೂ ನೋಡಿದರೆ, ಅದು ಕವಿಯ ನಿಜವಾದ ಹೃದಯವನ್ನು ತೋರಿಸುತ್ತದೆ ಎಂದು ನಂಬಿಕೆ ಹುಟ್ಟುವುದು ಕಷ್ಟ, ಕಾವ್ಯದಿಂದ ಸಹಜವಾಗಿ, ಸ್ಪಷ್ಟವಾಗಿ, ಸುಲಭವಾಗಿ ದೊರೆಯುವ ಅರ್ಥವು ಕವಿಯ ಮನಸ್ಸಿನಲ್ಲಿದ್ದುದೇ ಅಲ್ಲವೆಂದುವಾದಿಸುವುದು ಸಾಹಸವೇ ಸರಿ. ಪ್ರಕಾಶವಾಗಿ ಭೋಗವನ್ನೂ, ರಹಸ್ಯವಾಗಿ ವಿರಾಗವನ್ನೂ ಬೋಧಿಸುವುದರ ಪ್ರಯೋಜನವಾದರೂ ಏನೋ ತಿಳಿಯುವುದು ಕಷ್ಟ. ಒಳ್ಳೆಯ ಕಾವ್ಯವು ಮತ ಗ್ರಂಥವಾಗಿರಲೇಬೇಕೆಂಬ ನಿಯಮವು ಕಾವ್ಯ ಶಾಸ್ತ್ರದಲ್ಲಿಯೂ ಇಲ್ಲ, ಧರ್ಮಶಾಸ್ತ್ರದಲ್ಲಿಯೂ ಇಲ್ಲ. ಚಿತ್ತವಿಕಾಸ ವನ್ನುಂಟಾಗಿಸಿ, ಅದರ ಮೂಲಕ ಪರೋಕ್ಷವಾಗಿ ಒಂದು ಬಗೆಯ ಉತ್ತಮ ಆತ್ಮಸಂಸ್ಕಾರಕ್ಕೆ ದಾರಿ ಬಿಡಿಸುವುದು ಕಾವ್ಯದ ಕೆಲಸ, ಸ್ಪಷ್ಟಾರ್ಥವೇ ಈ ಕೆಲಸವನ್ನು ಮಾಡುತ್ತಿರುವಾಗ, ಗೂಢಾರ್ಥವನ್ನು ಹುಡುಕುವ ಕೈಶಕ್ಕೆ-ಅದೊಂದು ಬಗೆಯ ಕಸರತ್ತೆಂಬುದೊಂದಲ್ಲದೆ ಬೇರೆ ಫಲ ಕಾಣುವುದಿಲ್ಲ.

ಉಮರನು ನಾಚಿಕೆ ಬಿಟ್ಟ ಚಾರ್ವಾಕನೆಂದೂ ಇಂದ್ರಿಯ ಸುಖಲೋಲುಪನೆಂದೂ ಹೇಳುವುದಕ್ಕೂ ಸ್ವಲ್ಪ ಕಾರಣವಿರುವಂತೆ ಒಂದೆರಡು ಕಡೆ ಕಾಣಬಹುದು. ಆದರೆ ಆ ಕಾರಣವೂ ಭ್ರಾಂತಿಯೇ ಎಂಬುದು ಕಾವ್ಯವನ್ನೊಟ್ಟಿಗೆ ತೆಗೆದುಕೊಂಡು ಪರಾಮರ್ಶಿಸುವವರಿಗೆ ಬೇಗನೆ ಗೋಚರವಾಗುವುದು. ಉಮರನು ಇಹಲೋಕದ ಕ್ಷಣಿಕತೆಯನ್ನು ಮರೆತವನಲ್ಲ ; ಮನುಷ್ಯ ಜೀವಿತದ ವ್ಯತ್ಯಾಸಗಳನ್ನು ಕಾಣದವನಲ್ಲ; ವಿಶ್ವ ತತ್ತ್ವವನ್ನರಿಯಬೇಕೆಂಬ ಕುತೂಹಲ ವಿಲ್ಲದವನಲ್ಲ. ಇವುಗಳನ್ನೆಲ್ಲ ಅವನು ಅನುಭವಿಸಿ ದುಃಖ ಪಟ್ಟಿದ್ದಾನೆ. “ ಅಳಬೇಡ ; ನಗು"–– ಎಂದು ಅವನು ಹೇಳಿದರೂ, ಆ ಮಾತು ಹೊರಡುವುದು ಕೇಕೆ ಹಾಕುವ ಬಾಯಿಂದಲ್ಲ ; ಮರುಕದ ದನಿಯಿಂದ, ಭಯದಲ್ಲಿಯೂ ಶೋಕದಲ್ಲಿ ಇರುವಾಗ ನಾವೆಲ್ಲರೂ ಒಬ್ಬರೊಬ್ಬರಿಗೆ–– ಅದರಲ್ಲಿಯ ಹಿರಿಯರು ಕಿರಿಯರಿಗೆ ಹಾಗೆಯೇ ಹೇಳಿಕೊಳ್ಳುತ್ತೇವೆ. ಹಾಗೆ ಹೇಳತಕ್ಕನರಿಲ್ಲದಿದ್ದರೆ ಬದುಕು ಮುಂದಕ್ಕೆ ಸಾಗುವುದು ಹೇಗೆ? : ಎಷ್ಟೋ ಇವೆ.

ಈ ಒಂದು ಭಾವವನ್ನು ಸೂಚಿಸುವುದೇ ಉಮರನ ಆಶಯವೆಂದು ನನಗೆ ತೋರುತ್ತದೆ. ಜಗತ್ತಿನ ಮರ್ಮವೇನೆಂಬುದನ್ನು ಸೃಷ್ಟಿಕರ್ತನೇ ಬಚ್ಚಿಟ್ಟಿದ್ದಾನೆ ; ಅದನ್ನೆಷ್ಟು ಹುಡುಕಿದರೂ ಅದು ದೊರೆಯುವಂತಿಲ್ಲ ; ಅದಕ್ಕಾಗಿ ಶ್ರಮಪಟ್ಟವರೆಲ್ಲರೂ ಇನ್ನೂ ಕಾಣದವರಂತೆ ಕಾದಾಡುತ್ತಿದ್ದಾರೆ ; ಲೋಕದ ಏರ್ಪಾಟುಗಳಲ್ಲಿಯ ನಮ್ಮ ಕೈಯಿಂದ ತಿದ್ದಲಾಗದ ಹೆಚ್ಚು ಕಡಮೆಗಳು ಇವುಗಳನ್ನು ನೆನೆ ನೆನೆದು ಕೊರಗುತ್ತಾ ಆಯುಷ್ಯವನ್ನು ಕಳೆದುಬಿಡೋಣವೆ, ಅಥವಾ ಸಾಧ್ಯವಾದಷ್ಟು ಸಮಾಧಾನವನ್ನು ತಂದುಕೊಂಡು, ಇರುವುದನ್ನೇ ಈಶ್ವರ ಪ್ರಸಾದವೆಂದು ಭುಜಿಸಿ ಸಂತೋಷಪಡೋಣವೆ? ಎರಡನೆಯದೇ ಮೇಲಾದ ದಾರಿಯೆಂಬುದು ಉಮರನ ಮತ. ಆತನು ಅಪೇಕ್ಷಿಸುವುದು ಹೆಚ್ಚಿನ ಐಶ್ವರ್ಯವನ್ನಲ್ಲ. ಜನದ ಸಂದಣಿಯಿಲ್ಲದ ಒಂದು ನೆರಳಿನ ತಾವು ; ಪ್ರಾಣಾಧಾರವಾಗಿ ಸ್ವಲ್ಪ ಆಹಾರ ; ಬೇಸರವನ್ನು ಹೋಗಲಾಡಿಸಿ ಮನಸ್ಸಿನ ಉಲ್ಲಾಸವನ್ನು ಹೆಚ್ಚು ಮಾಡಲು ಎಲ್ಲರಿಗೂ ಸುಲಭವಾಗಿ ಸಿಕ್ಕುವ ದ್ರಾಕ್ಷಾರಸದ ಒಂದೆರಡು ಗುಟುಕು ; ಕೆಲವು ಸದ್ಗ್ರಂಥಗಳು; ಒಂದಿಷ್ಟು ಸಂಗೀತ ; ಒಬ್ಬ ಅನುರಾಗಿಣಿ-ಇಷ್ಟನ್ನೇ[] ಆತನು ಬಂಗುಸು ವುದು. ಈ ಬಯಕೆಯಲ್ಲಿ ದೋಷವೇನಿದೆ ? ನಮ್ಮ ಭಗವದ್ಗೀತೆಯಲ್ಲಿಯೇ :-

ಧರ್ಮಾSವಿರುದ್ಯೋ ಭೂತೇಷು ಕಾಮೋಸ್ಮಿ ಭರತರ್ಷಭ | ಎಂದು ಹೇಳಿದೆ.

ಸುಖಾಪೇಕ್ಷೆಯು ಪ್ರಾಣಿಮಾತ್ರಕ್ಕೆ ಸಹಜವಾದ ಗುಣ ; ಅದನ್ನು ಸಂಪೂರ್ಣವಾಗಿ ನಿಗ್ರಹಿಸುವುದು ಸಾಧ್ಯವೂ ಅಲ್ಲ, ಅವಶ್ಯವೂ ಅಲ್ಲ. ಹಾಗಾದ ಮೇಲೆ, ಅದಕ್ಕೆ ಉಪಕರಣವಾಗಿ ನಮ್ಮ ಪಾಲಿಗೆ ಬಂದ ಭೋಗ್ಯ ವಸ್ತುಗಳನ್ನು ಭೋಗಿಸದೆ ಬಿಡಬೇಕಾದುದೇಕೆ ? ಇದು ಉಮರನು ಕೇಳುವ ಪ್ರಶ್ನೆ, ಸುಖ ಸಂಪಾದನೆಗಾಗಿ ಅಕಾರ್ಯವನ್ನು ಮಾಡಬಹುದೆಂದು ಆತನು ಹೇಳಿಲ್ಲ. ಹೆಚ್ಚಿನ ಪ್ರಯಾಸವನ್ನಿಟ್ಟುಕೊಳ್ಳಬೇಡಿರೆಂದೇ ಆತನ ಉಪದೇಶ, ಆತನ ಭೋಗಸಾಮಗ್ರಿಯಲ್ಲಿ ಅಸಭ್ಯವಾದುದೆ ಒರಟಾದುದೂ ಯಾವುದೂ ಇಲ್ಲ. ಆತನ ಪಾನಕ ಲಘುವಾದ ದ್ರಾಕ್ಷಿಯ ರಸ; ಹುಚ್ಚು ಹುಟ್ಟಿಸುವ ಹೆಂಡವಲ್ಲ. ಆತನ ದೇಶದಲ್ಲಿ ದ್ರಾಕ್ಷಿಯು ನಮ್ಮ ದೇಶದಲ್ಲಿ ತೆಂಗಿನಮರದಂತೆ, ಅಥವಾ ಕಾಫಿಯಂತೆ, ಕಾವ್ಯಾಲಂಕಾರಕ್ಕಾಗಿ, ಒಂದು ಹಾಸ್ಯದ ಧ್ವನಿಯಲ್ಲಿ, ಅದನ್ನು ಆತನು ಕಳ್ಳೆಂದೂ ಮದ್ಯವೆಂದೂ ಉತ್ತೇಕ್ಷೆ ಮಾಡಿ ಪದೇ ಪದೇ ಕೊಂಡಾಡಿದ್ದಾನೆ ; ಅಷ್ಟೆ, ಜಗದ್ರಹಸ್ಯವು ಅಜೇಯವಾಗಿರುವ ವಿಷಯದಲ್ಲಿ ಕೊರತೆ, ಅತಿರ್ಕ ಕಠಿನವತಗಳ ವಿಷಯದಲ್ಲಿ ಹಾಸ್ಯ, ಬಹು ಪ್ರಯಾಸವಿಲ್ಲದೆ ಲಭ್ಯವಾಗುವ ಅಲ್ಪ ಸ್ವಲ್ಪ ಭೋಗಗಳಲ್ಲಿ ಸಂತೃಪ್ತಿ-ಇವು ಉಮರನ ಇಂಗಿತಾಂಶಗಳೆಂದು ನನ್ನ ಎಣಿಕೆ.


ನಮ್ಮ ಜೀವನವು ಸರಿಯಾಗಿ ನಡೆದು ಉತ್ತಮಪಡಬೇಕಾದರೆ, ನಾವು ಅದಕ್ಕೆ ಬೇಕಾದುದನ್ನು ಹುಡುಕಿ ಸಂಪಾದಿಸುವ ಪ್ರಯತ್ನವು ಎಷ್ಟು ಅವಶ್ಯವೋ, ಇರುವುದನ್ನು ಉಪಯೋಗಿಸಿ ಕೊಂಡು ಸಂತೋಷ ಪಡುವ ಮನಸ್ಸಮಾಧಾನವೂ ಅಷ್ಟು ಅವಶ್ಯ. ಸಂತೋಷಪಡಲಾರದವನಿಗೆ ಉತ್ಸಾಹ ಪ್ರಯತ್ನಗಳೆಲ್ಲಿಂದ ಬಂದಾವು? ನಮ್ಮ ಪುರಾತನರೂ "ಸಂತೋಷಂ ಜನಯೇ ತ್ಪ್ರಾಜ್ಞಃ" ಎಂದು ಹೇಳಿಲ್ಲವೆ? ಈ ಪ್ರಪಂಚದಲ್ಲಿ ನಮ್ಮನ್ನು ಕಾಡಿಸಿ ಅಳಿಸತಕ್ಕ ಸಂದರ್ಭಗಳು ಲೆಕ್ಕವಿಲ್ಲದಷ್ಟು ಇರುವುದು ನಿಜ , ಆದರೆ ಅದು ಹಾಗಿರುವುದೆಂಬ ಕಾರಣದಿಂದಲೇ-ಆ ಸಂದರ್ಭಗಳ ನಡುವೆ ನಮಗೆ ಸಂತೋಷ ಶಾಂತಿಗಳನ್ನುಂಟು ಮಾಡಬಲ್ಲ ಸಂದರ್ಭಗಳೂ ಕೆಲವು ಇರುವುವೆಂಬುದನ್ನು ನಾವು ಮರೆಯಬಾರದು. "ಈ ಜನ್ಮ ಸಾಕು" ಎಂದೇಕೆ ನರಳುವುದು ? ಸಾವು ಬರುವಾಗ ಬರಲಿ ; ಅದು ಬರುವವರೆಗೂ ಬದುಕೋಣ, ಆದಷ್ಟು ಚೆನ್ನಾಗಿ ಬದುಕೋಣ-ಇದೇ ಉಮರನ ಒಸಗೆ.

ತಾಪತ್ರಯದ ಗೋಳಾಟವೆಂದೆಂದಿಗೂ ಇದ್ದೇ ಇದೆ ; ಒಪ್ಪತ್ತಾದರೂ ಉಲ್ಲಾಸದಿಂದ ಇರೋಣ-ಎಂದು ಯಾರಿಗೆ ತಾನೆ ಒಂದೊಂದು ಸಲವಾದರೂ ಎನ್ನಿಸುವುದಿಲ್ಲ? ಇದರಲ್ಲಿ ಅಧರ್ಮವೇನೂ ಇಲ್ಲ; ಈ ಪ್ರವೃತ್ತಿಯ ಬೇರುಗಳು ಮಾನುಷ ಸ್ವಭಾವದಲ್ಲೇ ಅಡಗಿವೆ. ಹೀಗೆ ಸೃಷ್ಟಿ ಭಾಗವಾಗಿ, ಹೆರರಿಗೆ ಕೆಡುಕಾಗದೆ, ನಮ್ಮ ಚಿತ್ತಸ್ವಾಸ್ಥ್ಯಕ್ಕೆ ಸಾಧಕವಾಗುವ ಮಿತ ಸುಖಾಪೇಕ್ಷೆಯು ನಮ್ಮ ಸಾಮಾನ್ಯ ಧರ್ಮದ ಒಂದು ಮುಖ್ಯಾಂಗವೇ ಎಂದು ಹೇಳಬಹುದಲ್ಲವೆ? ಅದು ಧರ್ಮದ ಪರಿಪೂರ್ಣರೂಪವಲ್ಲದಿರಬಹುದು; ಆದರೆ ಧರ್ಮದ ಅನೇಕ ಪ್ರಕಾರಗಳಲ್ಲಿ ಅದೂ ಒಂದೆಂಬುದಕ್ಕೆ ಅಡ್ಡಿಯಿರದು. ಈ ಜೀವನ ನೀತಿಯ ಮೇಲ್ಮೆಯನ್ನೂ ಸೊಬಗನ್ನೂ ಮನಸೊಪ್ಪುವಂತೆ ತೋರಿಸುವುದೇ ಉಮರನ ಒಸಗೆ..

ಪಾರಸಿಕ ಹೃದಯಸಾಗರದಾಣಿ ಮುತ್ತುಗಳ
ನುಮ್ಮರಂ ಮುಳುಗಿ ತೆಗೆದೀಯಲೀ ಸರವ
ಫಿಟ್ಸ್-ಜೆರಲ್ಡಂ ಪೋಣಿಸಿತ್ತನಿದರಿಂದಕ್ಕೆ
ಕನ್ನಡದ ನುಡಿವೆಣ್ಗೆ ಸರಸದೊಂದೊಸಗೆ.


ಏಳೆನ್ನ ಮನದನ್ನೆ ! ನೋಡು, ಪೊಳ್ತರೆ ಬಂದು
ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸೆದು
ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು ;
ನಿದ್ದೆ ಸಾಕಿನ್ನೀಗ ಮುದ್ದಣಗಿ ಬಾರ.


ಮೂಡಲತ್ತಣ ಬೇಡನದೊ! ಸಾರಿ ಬಂದೀಗ,
ನೋಡು, ಸುಲ್ತಾನನರಮನೆಯ ಗೋಪುರಕೆ
ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ ;
ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ.


ಕನಸೊಂದ ಮುಂಜಾವದಲಿ ಕಂಡೆನೇನೆಂಬೆ
ನರವಟಿಗೆಯಿಂದೆ ಸದ್ದೊಂದಾದುದಿಂತು:
"ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ
ನಿಮ್ಮೊಡಲ ಜೀವರಸವಿವರದೀಮುನ್ನ.?"


ಹೊಸ ವರುಷವೀಗ ಹಳೆಯಾಸೆಗಳ ಬಲಿಸುತಿದೆ ;
ಜಾನಿಗಳ ಜೀವವೇಕಾಂತವೆಳಸುತಿದೆ ;
ಕೊಳದ ಕೆಲದಲಿ ತಳಿರ ಮರಲ ಸೊಂಪಮರುತಿದೆ;
ದ್ರಾಕ್ಷಿಯಲಿ ಮಾಣಿಕ್ಯ ರಸವು ಹೊಮ್ಮುತಿದೆ.


ಮಾಂದಳಿರ ಸವಿಯುಂಡು ಮೈಮರೆತ ಬುಲ್ಬುಲನು
ಚೆಲು ಗುಲಾಬಿಯ ನನೆಯನರಳಿಸ್ಕಲೆಂದು
ನಗು ನಗುತೆ ಕುಣಿದಾಡಿ ಪಾಡುತಿಹನಾಲೈಸು :
ಕಳ್ಳು, ಚೆಂಗಳ್ಳು ಸವಿಗಳ್ಳು ಕಳ್ಳೆನುತೆ.


ಬಾ, ತುಂಬು ಬಟ್ಟಲನು ; ಮಧುಮಾಸದಗ್ನಿಯಲಿ
ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು ;
ಆಯುವೆಂಬಾ ಪಕ್ಕಿ ಪಾಶ್ವ ದೂರವು ಕಿರಿದು ;
ಪಾರುತಿಹುದದು ನೋಡು ; ಬಾ, ಮನಸುಮಾಡು.


ಏಳು, ಬಾರೆನ್ನೊಡನೆ ನಾಡಗಡಿಯತ್ತಲಿಗೆ––
ಹುಲುಸುಹೊಲ ಮರಳಕಾಡೆರಡುಮೊಡವೆರೆದು,
ಸುಲ್ತಾನ್ ಗುಲಾಮರೆಂಬರ ಮರೆಯಿಪಾ ಬಳಿಗೆ––
ಅಲ್ಲಿ ನೀಂ ದೊರೆತನದ ಕಿರಿತನವ ಕಾಣ್ಬೆ.


ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು,
ರೊಟ್ಟಿಯೊಂದಿಸಿಕೊಂದು ಕುಡಿಕೆಯಲಿ ಮಧುವು,
ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ!
ಕಾಡಾದೊಡೇನದುವೆ ಸಗ್ಗ ಸುಖವೆನಗೆ.


ದೊರೆತನವದೆಷ್ಟು ಸೊಗವೆನ್ನು ತಿರುವರು ಪಲರು ;
ಸೊಗವು ಪರಲೋಕದೊಳಗೆನ್ನುವರು ಕೆಲರು ;
ಕೈಯ ರೊಕ್ಕವ ಕೊಂಡು ಕಡದ ಲೆಕ್ಕವನಳಿಸು ;
ಕೇಳು ದೂರದ ಮೃತ್ಯು ಭೇರಿಯಬ್ಬರವ.

೧೦
ನೋಡಾ ಗುಲಾಬಿ ತಾನರಳಿ ಸಾರುವುದಿಂತು:
"ಜಗದೊಳಕೆ ನಾಂ ಬಂದು ನಗು ನಗುತೆ ನಿಂತು,
ಬಿಗಿದಿರದೆ ಪಟ್ಟು ಚೀಲವನಿತ್ತ ಬಿಚ್ಚುತ್ತೆ
ಮಗ ಮಗಿಪ ನಿಧಿಯನೆಲ್ಲವನೆರೆಯುತಿಹೆನು."

೧೧
ಈ ಪುರಾತನ ಜೀರ್ಣ ಧರ್ಮಶಾಲೆಯೊಳಮಮ !
ಇರುಳು ಪಗಲುಗಳೆಂಬ ಬಾಗಿಲೆರಡರಲಿ
ಸುಲ್ತಾನರೇಸುಜನರಟ್ಟಹಾಸದಿ ಪೊಕ್ಕು
ಒಂದೆರಡು ತಾಸಿದ್ದು ನಿಲದೆ ತೆರಳಿದರು !

೧೨
ಜಾಂಷೆದನು ಹಿಗ್ಗಿ ಮೆರೆಯುತ್ತಿದ್ದ ಮಂಟಪದಿ
ಹಲ್ಲಿ ಹೆಗ್ಗಣಗಳಿಂದೆಸೆವುವೋಲಗದಿ !
ಮಲಗಿ ಬೈರಾಮ ವೀರನು ನಿದ್ರಿಸಿರ್ಪಲ್ಲಿ
ಕಾಡುಕತ್ತೆಗಳವನ ತಲೆಯ ತುಳಿಯುವುವು !

೧೩
ಮರೆಯದಿರು ; ನಮ್ಮ ಪೂರ್ವಿಕರು, ಸಂಮಾನಿತರು,
ಕಾಲ ವಿಧಿಗಳವರ್ಗೆ ಪೇಯಗಳ ನೀಯೆ,
ಸಂದನಿತನಾದರದಿ ಕುಡಿ ಕುಡಿದು ಬೇಡೆನದೆ,
ಅದು ಮುಗಿಯೆ, ಮೈದಣಿಯೆ, ಮಲಗಿ ಬಾಯ್ಬಿಗಿದರ್.

೧೪
ಪುಣ್ಯಗಳನಾರ್ಜಿಸಿದೆವೆಂಬ ಘನ ಚರಿತರುಂ
ಪತಿತರೆನ್ನಂತೆನಿಪ್ಪಲ್ಪ ಜಂತುಗಳುಂ
ಮಣ್ಣಹರದೊಂದೆ ತೆರದಲಿ ಬಳಿಕ ಜನರಾರು
ಮಾ ಗೋರಿಗಳ ತೆರೆಯರವರ ದರ್ಶನಕೆ.

೧೫
ಹಾ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ
ಮುಂದಿನಳುಕುಗಳ ತೊಲಗಿಸುವ ಬಟ್ಟಲನು
ತುಂಬಿ ನೀಡೆನಗೀಗ; "ನಾಳೆ"ಯೆಂಬೆಯೊ?–ನಾಳೆ
ಸೇರುವೆನು ನೂರ್ಕೋಟಿ ನಿನ್ನೆಗಳ ಜೊತೆಗೆ

೧೬
ಮಣ್ಣಿನೊಳಗಕಟ! ನಾನಿಳಿಯುವಂದಿನ ಮುನ್ನ
ಇನ್ನುಮುಳಿದಿಹ ದಿನವ ಬರಿದೆ ನೀಗುವುದೇಂ
ಮಣ್ಣೋಳಗೆ ಮಣ್ಣಾಗಿ ನನ್ನೊಡನೆ ಬೆರೆವುದೇಂ
ಮಧು ಗೀತ ಸತಿ ಗತಿಗಳೊಂದನರಿಯದೆಯೆ ?

೧೭
ಇಂದಿಗೆಂದಾಯಾಸಪಡುವಂಗವಂತಿರದೆ
ನಾಳೆಯಿನ್ನೇನೆಂದು ಕೇಳ್ವಂಗಮಿಂತು
ಕತ್ತಲೆಯ ಗೋಪುರದ ಗುರು ಸಾರ್ವನ್ : "ಎಲೆ ಮರುಳೆ !
ಇರದು ಸೊಗಮಿತ್ರ ನಿನಗಿರದದತ್ತಾನುಂ."

೧೮
ಪಂಡಿತರು ಶಾಸ್ತ್ರಿಗಳು ಸೂಕ್ಷ ಚತುರತೆಯಿಂದ
ಚರ್ಚಿಸಿಹರುಭಯಲೋಕಗಳ ಮರುಮಗಳ ;
ಅವರ ಪಾಡೇನಾಯ್ತು? ಉಳಿದರಂತವರೆಲ್ಲ,
ಮಣ್ಣು ಬಾಯನು ಮುಚ್ಚೆ, ಸೋತು ಮಲಗಿದರು.

೧೯
ಮುದಿ ಉಮ್ಮರನ ಕೂಡೆ ನಡೆ ; ಪಂಡಿತರನ್ನೆಲ್ಲ
ವಾದಿಸಲು ಬಿಡು ; ದಿಟವಿದೊಂದಿಹುದು ಕೇಳು:
ಬಾಳು ಅಳಿವುದೆ ದಿಟವು ; ಮಿಕ್ಕೆಲ್ಲ ಸಟೆಯೆ ಸರಿ;
ಒಮ್ಮೆ ಅರಳಿದ ಹೂವು ಬಾಡುವುದೆ ದಿಟವು.

೨೦
ಬಾಲ್ಯದಲಿ ತಾರ್ಕಿಕರ ತಾತ್ವಿಕರ ಸಭೆಗಳಿಗೆ
ಆದರದೊಳಾಂ ಸಾರಿ ವಾದಗಳ ಕೇಳಿ,
ಕಾದಾಟಕೆ ಕೊನೆಯೆಂದು ಕಾಣದೆಯಿರಲು
ಪೋದ ದಾರಿಯೋಳೆ ನಡೆಯುತ ಮರಳಿ ಬಂದೆಂ

೨೧
ಬಳಿಕ ನಾಂ ಜೀವನನದೃಶ್ಯಲೋಕಕೆ ಕಳುಪಿ
ಮುಂದೆ ಗತಿಯೇನೆಂದು ತಿಳಿದು ಬಾರೆನಲು,
ತಿರುಗಿಬಂದಾಜೀವವೆನಗುಸಿರಿತೀ ತೆರದಿ:
"ನಾಕ ನರಕಗಳೆರಡುಮಾನಲ್ಲದಾರು ?"

೨೨
ಇಷ್ಟ ಪೂರ್ತಿಯನರಿತ ಮೊಗದಸಕವದೆ ನಾಕ ;
ಕಷ್ಟವೆಂದಳುವವನ ನೆಳಲದುವೆ ನರಕ.
ಕತ್ತಲೆಯಿನಿತ್ಯವೆಲ್ಲರು ಹೊರಟು ಬಂದಿಹೆವು :
ಅತ್ತಲೇ ಸೇರುವೆವು ಮಗುಳಿತ್ತಣಿಂದೆ.

೨೩
ಈ ಜಗದಿ ನಾನಿಹುದದೇತಕೋ ತಿಳಿಯದಿರಹೆ
ನೆಲ್ಲಿಂದ ಬಂದೆನೆಲ್ಲಿಗೆ ಪೋಪೆನೆನುತ
ಬಗೆದು ಪೇಳ್ವವರಿಲ್ಲ; ಬರಿಯ ಮಾತಿಂದೇನು !
ಮಳೆಯವೋಲಿಳಿದಿಹೆನು; ಹಬೆಯುವೋಲ್ ಪರಿವೆಂ.

೨೪
ಬಿದಿಯೆನ್ನ ಕೇಳದೆಯೆ, ಎತ್ತಣಿಂದಲೋ ಬರಿಸಿ,
ಮತ್ತೆನ್ನ ಕೇಳದತ್ತಲಿಗೋ ಕಳಿಪುವುದೆ?
ಹಾ! ಒಂದು ಬಟ್ಟಲನು ತಾರಿಲ್ಲಿ ಮತ್ತೊಂದ
ನದರೊಳೀ ದುರುಳತೆಯ ನೆನಪ ಮುಳುಗಿಪೆನು.

೨೫
ಪಿಂದೆಸೆಯ ಬಾಗಿಲಿನ ಬೀಗಕ್ಕೆ ಕೈಯಿಲ್ಲ;
ಮುಂದೆಸೆಯ ತೆರೆಯೆತ್ತಿ ನೋಡಲಳವಲ್ಲ;
ಈಯೆಡೆಯೋಳೆರಡುದಿನ ನೀವು ನಾವೆಂಬ ನುಡಿ
ಯಾಡುವೆವು ; ಬಳಿಕಿಲ್ಲ ನೀವು ನಾವುಗಳು.

೨೬
ಇದರಿಂದೆ ನಾಂ ಕೊರಗಿ ನಭಕೊಮ್ಮೆ ಕೈಮುಗಿದು,
ಬಿದಿ ತನ್ನ ಪುಟ್ಟ ಮಕ್ಕಳ ನಡೆಯ ನಡಿಸೆ
ಈ ಕತ್ತಲೆಯೊಳಾವ ಬೆಳಕನಿರಿಸಿಹನೆನಲು,
"ಕುರುಡರಿವೆ"––ಎನುತಾಗಿರೆದುದಾಗಸವು.

೨೫
ಬಳಿಕ ನಾಂ ಬೇಸತ್ತು, ಜೀವರಸವನು ಬಯಸಿ
ಈ ತುಟಿಯನಾಮಣ್ಣು ಕುಡಿಕೆಗಾನಿಸಲು,
ಅದರ ತುಟಿಯಿದಕೆ ತತ್ತ್ವವನುಸಿರಿತೀ ತೆರದಿ:
"ಕುಡಿ, ಸತ್ತ ಬಳಿಕ ನೀನಿತ್ತ ಬರಲಾರೆ."

೨೮
ಇಂತೊರೆದ ಕುಡಿಕೆ ತಾಂ ಪಿಂತೊಂದು ಜನ್ಮದಲಿ
ಉಸಿರಿಡುತ ಕೂರ್ವೆಯಿಂ ಬಾಳ್ದುದಿರಬಹುದು ;
ಎನ್ನ ತುಟಿ ಸೋಂಕಿದಾ ತಣ್ಪುಳ್ಳ ನುಣ್ದುಟಿಯ
ದೆನಿಸು ಮುತ್ತು ಕೊಟ್ಟು, ಎನಿಸ ಕೊಂಡಿತ್ತೋ!

೨೯
ಈ ಗುಲಾಬಿಯ ಕೆಂಚದೆತ್ತಣದೋ! ಇದರ ಬೇ
ರೀಂಟಿತೇಂ ಚಲುವೆಯೋರ್ವಳ ರಕುತ ಕಣವ ?
ಈ ನದಿಯನಪ್ಪಿರುವ ಪಸುರೋ! ಪಿಂತಿತ್ತಳೆದ
ಬಿರಯಿಯೋರ್ವನ ತಲೆಯ ಪಾಗಿದಕೆ ಬೇರೇಂ?

೩೦
ಆಹ! ಅಂತಿರಬಹುದು. ಈ ಮಣ್ಣು ಹೊದ್ದಿಕೆಯೊ
ಳೆನಿಬರೋ ಹುದುಗಿಹರು ನಮಗೆಡೆಯ ಬಿಟ್ಟು;
ಅವರಂತೆ ನಾವಿಂದು ತಿರೆಯತಣವನುಂಡು,
ಮರೆಯಾಗಿ ಬಳಿಕಿದನು ಕಿರಿಯರ್ಗೆ ಬಿಡುವ೦.

೩೧
ಹಾ! ತುಂಬು ಬಟ್ಟಲನು. ಕಾಲವದು ತಾಂ ನುಣ್ಚಿ
ಕೈಗೆ ದೊರೆಯದೆ ಪರಿವ ಪರಿಯ ವಿವರಿಸಲೇಂ?
ನಿನ್ನೆ ಸತ್ತಿಹುದಿನ್ನು, ನಾಳೆ ಹುಟ್ಟದೆಯಿಹುದು;
ಇಂದು ಸೊಗವಿರಲವನು ನೆನೆದಳುವುದೇಕೆ?

೩೨
ಕವನದ ಸೋದೆಯ ನಾಮೀನಿಮಿಷ ಸವಿಯದಿರೆ
ಕರೆವುದಿನ್ನೊಂದು ನಿಮಿಷದಲಿ ಸುಡುಗಾಡು;
ರವಿಶಶಿಗಳೊಡುತಿಹರೆಲ್ಲ ಶೂನ್ಯೋದಯಕೆ;
ಸಾಗುತಿಹರಕಟ! ಬಾ, ಸೊಗವಡುವ ಬೇಗ.

೩೩
ಏಸುದಿನ, ಹಾ! ಏಸುದಿನ ಕೊನೆಯ ಕಾಣದಿಹ
ಈ ಘಾಸಿ ಆತರ್ಕಗಳ ಬವಣೆ ನಮಗೆ?
ಕೈಗೆ ಸಿಲುಕದ ಕಹಿಯ ಫಲವನೇನರಸುವುದು,
ಮುದವ ಕಣ್ಗಿಂಬಾದ ದ್ರಾಕ್ಷಿ ಬೀರುತಿರೆ ?

೩೫
ಸಖನೆ, ನೀ೦ ಬಹುದಿನದ ಪಿಂತೆನ್ನ ಮನೆಯೊಳಗೆ
ಪೊಸ ಮದುವೆಯೌತಣಕೆ ಬಂದಿರ್ದೆಯಲ್ತೆ?
ಒಣ ಬಂಜೆ ತರ್ಕ ವನಿತೆಯನಂದು ನಾಂ ತೊರೆದು
ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ.

೩೬
ಅಸ್ತಿ ನಾಸ್ತಿಗಳೆಂಬ ತತ್ತ್ವಗಳ ಬಿತ್ತರಿಸಿ
ಮೇಲು ಬೀಳುಗಳೆಂಬ ನಿಯಮಗಳ ತೋರ್ಪಾ
ಕಲೆಯ ನಾಂ ಕಲಿತೊಡಂ, ತಳವನಾಂ ಮುಟ್ಟಿರ್ಪ
ಕಲೆಯೊಂದದಾವುದೆನೆ–ಮಧು ದೈವ ಭಜನೆ.

೩೭
ಮೊನ್ನೆ ಸಂಜೆಯಲಿ ಮಧುವಾಟಿಕೆಯ ಬಾಗಿಲಲಿ
ಗಂಧರ್ವನೊರ್ವನೆನ್ನೆಡೆಗೈದಿ ನಗುತೆ
ತೋಳಿನಲಿ ತಳೆದಿರ್ದ್ದ ಪಾತ್ರೆಯನ್ನು ತೋರುತ್ತ
ಕುಡಿಯೆಂದು ಬೆಸಸಿದನು; ಕುಡಿಯಲದು ಮಧುವು.

೩೭
ಮಧುವೆಂಬನದುಭುತದ ತರ್ಕಯುಕುತಿಗಳಿಂದೆ
ಮತಗಳೆಪ್ಪತ್ತಾರ ಮುರಿವ ವಾಕ್ಚತುರಂ ;
ಜೀವಿತದ ಸೀಸವನು ನಿಮಿಷದೊಳೆ ಹೊನ್ನಂತೆ
ಮಾಟಗೈವಚ್ಚರಿಯ ರಸತಂತ್ರ ನಿಪುಣಂ.

೩೮
ವಾದಿಸುತ ಕಲಿತ ಜನರಿರಲಿ, ಬಿಡು ನೀನೆಲ್ಲ
ಕುದಿವ ಕದನಗಳೆನ್ನ ಬಳಿ ತಣ್ಣಗಿರಲಿ ;
ಈ ಗೊಂದಲದಲ್ಲೊಂದು ಮೂಲೆಯಲಿ ನೀ೦ ಕುಳಿತು
ನಿನ್ನ ನಾಡಿನ ಬಿದಿಯನಾಡಿಸದೆಗೆಡದೆ.

೩೯
ನೀ೦ ಕುಡಿವ ಮದಿರೆಯುಂ ನೀನೊತ್ತುವಧರಮುಂ
ಮಿಕ್ಕೆಲ್ಲ ಪುರುಳಂತೆ ಶೂನ್ಯಮೆಂಬೆಯೊ?–ಕೇಳ್,
ಅಂತಾದೊಡೇಂ? ನೀನೆ ಶೂನ್ಯನಪ್ಪವನಲ್ತೆ?
ಶೂನ್ಯತೆಯೆ ನಿನಗಿರಲ್ಕವುಗಳಿಂ ಕುಂದೇಂ?

೪೦
ಹೊರಗೊಳಗೆ ಮೇಲೆ ಕೆಳಗೆ ಕಂಡೊಡಂ
ಮಾಟಗಾರನ ನೆರಳ ಬೊಂಬೆಯಾಟವಿದು ;
ನೇಸರೆಂಬೊಂದು ದೀವಿಗೆಯ ನಡುವಣೊಳಿರಿಸಿ
ಬೊಂಬೆಗಳನದರ ಬಳಿ ಸುಳಿಸುವಂತಿಹುದು.

೪೧
ಪೊನಲ ತಡಿಯಲಿ ಪೊಸ ಗುಲಾಬಿ ನಗು ನಗುತಲಿರೆ
ಘನ ಖಯ್ಯಮನ ಕೂಡೆ ಚೆಂಗಳ್ಳ ಕುಡಿ, ಬಾ;
ಕರಿಯ ಕುಡಿತವ ಮುಂದೆ ಕಾಲನೊಡ್ಡಿದೊಡಂದು
ಪಿಂತೆಗೆಯದೆದೆಯುಡುಗದದನು ಕುಡಿ ನಗುತೆ.

೪೨
ಪಗಲಿರುಳ್ಗಳೆನಿಪ್ಪ ಪಗಡೆಹಾಸನು ಹಾಸಿ
ಮಾನಿಸರ ಕಾಯ್ದಳವೊಲಲ್ಲಿರಿಸಿ ಬಿದಿ ತಾ
ನಿಲ್ಲಲ್ಲಿ ನಿಲ್ಲಿಸುತ ಚಾಲಿಸುತ ಕೊಲ್ಲಿಸುತ
ಲಾಟವಾಡುತ ಬಳಿಕ ಪೆಟ್ಟಿಗೆಯೊಳಿಡುವಂ.

೪೩
ಆಡುವವನೆಸೆವಂತೆ ಬೀಳ್ವ ಚಂಡಿಗದೇಕೆ
ಆಟದೊಳಗಣ ಸೋಲು ಗೆಲವುಗಳ ಗೋಜು ?
ನಿನ್ನನಾರಿತ್ತಲೆಸೆದಿಹನೊ ಬಲ್ಲವನಾತ
ನೆಲ್ಲ ಬಲ್ಲವನವನು––ಬಲ್ಲನೆಲ್ಲವನು.

೪೪
ನಿಲದೆ ಚಲಿಸುವ ಬೆರಲದೊಂದು ಬರೆದು ಶಿರದಿ;
ಬರೆದು ಸರಿವುದು. ನಮ್ಮ ಬಕುತಿ ಯುಕುತಿಗಳು
ಪಿಂತದನು ಕರೆದಳಿಸಲಾರವರೆ ಬಂತಿಯನು ;
ನಿನ್ನ ಕಣ್ಣೀರೊಂದು ಮಾತನಳಿಯಿಸದು.

೪೫
ತೆವಳಿ ಬದುಕುತ ಸಾಯುತಿರುವೆ ಕವಿದಿರುವ
ಗಗನವೆಂಬೀ ಬೋರಲಿರುವ ಬೋಗುಣಿಗೆ
ಕೈಯೆತ್ತಿ ವರಕೆಂದು ಮೊರೆಯಿಟ್ಟು ಫಲವೇನು ?
ನಿನ್ನ ನನ್ನ ವೊಲೆ ಅದು ಕೈಸಾಗದಿಹುದು.

೪೬
ಇದು ನಿಸದವೆನಗೀಗ : ಪರತತ್ವದೀಪದಲಿ
ನಲುಮೆಯಾನುಂ ಮೇರೆಗೆ, ಮುನಿಸಾನುಮರಿಗೆ ;
ದೇಗುಲದೊಳದನರಸಿ ಕಾಣದಲೆವುದಕಿಂತ
ಮಧುಗೃಹದೊಳದರಿಂಬ ಮೂಸುವುದೆ ಲೇಸು.

೪೭
ಹಳ್ಳಕೊಳ್ಳಗಳಿಂದೆ––ಕಳ್ಳು ಹೆಂಡಗಳಿಂದೆ––
ಎನ್ನ ಹಾದಿಯೊಳೆಡವಿಬೀಳಿಸುವ ಬಿದಿಯೆ,
ನೀನೆನ್ನ ಮೇಲೆ ದುರಿತದ ಹೊರೆಯ ಹೊರಿಸಿಂತು
ಕರುಮ ಚಕ್ರದೊಳೆನ್ನ ಸಿಲುಕಿಪುದು ತರವೆ ?

೪೮
ಕೀಳು ಮಣ್ಣಿಂದೆ ನರಕುಲವ ನಿರವಿಸಿದವನೆ,
ಸಗ್ಗದೊಳಮಪ್ಸರೆಯರನು ನಿಲಿಸಿದವನೆ,
ನರನ ಮುಖವನು ಕಪ್ಪೆನಿಪ್ಪೆಲ್ಲ ಕಲುಷಕ್ಕ
ಮವನೊಳ್ ಕ್ಷಮಾವರವ ನೀಡು––ಮೇಣ್ ಬೇಡು.


೪೯
ಕೇಳು ರಂಜಾನ್ ಹಬ್ಬದಂತ್ಯದೊಳದೊಂದು ದಿನ,
ಶುಭ ಚಂದ್ರನನ್ನು ಮುದಿಸದಿರೆ, ಸಂಜೆಯಲಿ
ನಾನೋರ್ವ ಕುಂಬಾರನಂಗಡಿಯ ಬಳಿ ನಿಂತು
ಮಣ್ಣ ಮಾಟಗಳ ಸಾಲ್ಗಳ ನೋಡುತಿರ್ದೆಂ.

೫೦
ಅಚ್ಚರಿಯನೇನೆಂಬೆ ನಾ ಮಣ್ಣು ಜನರೊಳಗೆ
ಕೆಲರು ಮಾತಾಡುವರು, ಕೆಲರಾಡದವರು.
ಅವರೊಳಾತುರನೊರ್ವನಿಂತೊಮ್ಮೆ ಕೇಳಿದನು :
"ಕುಂಬಾರನಾರಯ್ಯ, ಕುಂಬ ತಾನಾರು?"

೫೧
ಇನ್ನೋರ್ವನಿಂತೆಂದನ್: "ಈ ನೆಲದ ಮಣ್ಣಿಂದೆ
ಎನ್ನೊಡಲನಿಂತೆಸಗಿ ಸೊಗಸುಗೊಳಿಸಿದವಂ
ಮರಳಿ ಮಣ್ಣೊಳಗೆನ್ನ ಬೆರೆವಂತೆ ಮಾಡಿದೊಡೆ
ಅಚ್ಚರಿಯದೇನದರೊಳದೆ ತಕ್ಕುದಲ್ತೆ?”

೫೨
ಮತ್ತೊರ್ವನಿಂತೊರೆದನ್: "ಅದನೊಪ್ಪೆನಾವನುಂ
ಸಂತಸದಿ ತಾಂ ಕುಡಿವ ಕುಡಿಕೆಯನ್ನು ಮುರಿಯಂ;
ಆದರದಿ ಜಾಳ್ಮೆಯಿಂದೊಡರಿಸಿದ ಬಟ್ಟಲನು
ಕೋಪದಿಂದೊಡೆವುದೇನದು ತಕ್ಕುದಲ್ಲಂ."

೫೩
ಮರುನುಡಿಯುನಾರುವಿದಕಾಡದಿರೆ ಮೇಣೊರ್ವ
ಸೊಟ್ಟುಗೊರಲಿನ ಜಾಣನಿಂತು ಬಾಯಿಟ್ಟಂ:
"ಎನ್ನ ಸೊಟ್ಟನು ನೋಡಿ ನಗುತಿರ್ಪರೆಲ್ಲರುಂ;
ಎನ್ನಪ್ಪ ಕುಂಬರಗೆ ಕೈನಡುಕಮೇನೋ!"

೫೪
ಬಳಿಕೊರ್ವನಿಂತುಸಿರಿದಂ: "ಜಗದ ಜನರೆಲ್ಲ
ರೆಮ್ಮ ಪುಟ್ಟಿಸಿದನೆಮ್ಮನೆ ಪರೀಕ್ಷಿಸುತೆ,
ಕೀಳೆನಿಸಿದವರ ತಾಂ ತುಳಿವನೆಂಬರದು ಸಟಿ ;
ಆತನೊಳ್ಳಿದನೆಲ್ಲದೊಳ್ಳಿತಾಗುವುದೈ."

೫೫
ಕಡೆಗೊರ್ವನಿಂತು ಬಿಸುಸುಯ್ದನಾ ಸಭೆಯೊಳಗೆ:
"ಒಣಗುತಿಹುದೆನ್ನೊಡಲು, ತಂದೆ ಮರೆತುದರಿಂ;
ರೂಢಿಯಾದಾ ರಸವ ತುಂಬಿರೆನ್ನೊಳು ಬೇಗ;
ಆ ಬಳಿಕ ಚೇತರಿಸಿಕೊಳಲಕ್ಕುಮೆನಗೆ."

೫೬
ಈ ತೆರದಿ ಘಟಜನಂ ಹರಟುತ್ತಲಿರಲಾಗ
ಳವರೊರ್ಳೊರ್ವಂ ಮೂಡುವಿಂದುವಂ ಕಾಣಲ್
ಒರ್ವನೋರ್ವನ ತಟ್ಟುತಿಂತೆಂದರ್: "ಅಣ್ಣಣ್ಣ!
ಅತ್ತ ಕೇಳಡ್ಡೆ ಹೊತ್ತವನು ಬಹ ಕಿರುಕು.”

೫೭
ಆಹ ! ದ್ರಾಕ್ಷಿಯನೆನ್ನ ಬಡಜೀವಕೀಂಟಿಸುತೆ
ಅದರಿನೀ ಹರಣಮುಡುಗಿದ ತನುವ ತೊಳೆದು
ಅದರೆಲೆಯಿನಿದಕೆ ಹೋದಕೆಯ ಹೊದಿಸಿ ನಲವಿಂದೆ
ತನಿಗಂಪುಟದೋಟದೊಳಗೆನ್ನ ಪೂಳಿರಿಸು.

೫೮
ಆ ಕುಳಿಯಿನೊಗೆದೆನ್ನ ಸೌರಭದ ಮುಗಿಲುಗಳ್
ಗಾಳಿಯೊಡವೆರೆದು ಹಬ್ಬುತ್ತಲಾ ಕಡೆಯೊಳ್
ದಾರಿ ನಡೆವೆಲ್ಲ ಭಕ್ತ ವಿರಕ್ತರನು ಕವಿದು
ಬೆರಗುವಡಿಸುತಲೆನ್ನ ಬದಿಯೊಳುರುಳಿಸಲಿ.

೫೯
ತಪಿಸಿ ನಾನೊಮ್ಮೊಮ್ಮೆ ಮರುಗಿಹೆನು ಪಾಪಿಯೆಂ
ದಾದೊಡೇನಾಗಳೆನ್ನರಿವೆನ್ನೊಳಿತೇಂ?
ಆ ವಸಂತನ ಹೆಂಪು, ಆ ಗುಲಾಬಿಯ ಸೋಂಪು, .
ಆ ಮಧುವಿನಿಂಸೆನ್ನ ತಪವನಳಿಸಿದುವು.

೬೦
ಮಧುವೆನ್ನ ಬೀಳಿಸಿತು ; ಮಧುನಿಂದೆ ಕೆಟ್ಟೆನಾ
ನಾದೊಡಂ ಶಂಕೆಯೊಂದಿಹುದು ಮನದೊಳಗೆ:
ಮಧುವ ಮಾರುವನು ತಾಂ ಕೊಳುವುದಾವುದೂ ಬಗೆಯ
ಲದು ಬೆಲೆಯೊಳವನ ಸವಿಸುರುಳಿಗರೆಸವನೇಂ?

ಪೋಪುದೆ ಗುಲಾಬಿಯೊಡನಯ್ಯೋ ! ಮಧುಮಾಸಮದು ;
ಮುಗಿವುದೇ ಯವ್ವನದ ಪರಿಮಳಿತಲಿಖಿತಂ!
ಒನದಿ ಪಾಡುವ ಬುಲ್ಬುಲಂಗಳಕ್ಕಟ ! ತಾವ
ದೆತ್ತಣಿಂ ಬಂದು ಮೇಣೆತ್ತ ಪೋದಪುವೋ ! ೬೧


ಹಾ! ಪ್ರಿಯಳೆ, ಬಿದಿಯೊಡನೆ ಸೇರಿ ನಾಮಿರ್ವರುಂ
ದುಃಖಮಯದೀ ಜಗದ ಬಾಳ ಮರುಮಗಳ
ಕಾಣುವಂತಾದೊಡಾಗಳಿದೆಲ್ಲಮಂ ಮುರಿದು
ಮನಕೊಪ್ಪುವಂತಿದನು ನಿರವಿಸುವೆಮಲ್ತೇ ? ೬೨

ಆಹ! ಕುಂದಿನಿಸಿಲ್ಲವೆಂದು, ನೀ ಬಾರ.
ಆಗಸದಿ ಕುಂದುವಡೆದಿಂದು ಪುಟ್ಟುತಿಹಂ
ಇನ್ನೇಸುದಿನವೆನ್ನ ಕಾಣ್ಬನವನೀ ವನದಿ?
ಬೇಗ ನಾನವನಿಂದೆ ಮರೆಯಾಗಿ ಪೋಪೆಂ. ೬೩

ಆಗಳೆನ್ನ ಸಮಾಧಿಯೆಡೆಗೈದಿ ಮೆಲುಮೆಲನೆ,
ನುಣ್ಚರದಿನೋಲವಿನಾ ಪಾಡುಗಳ ಪಾಡಿ,
ಮಧುರಸವನದರಮೇಲತಿಶಯದಿ ನೀ೦ ಸೂಸಿ,
ಬೋರಲಿದು ಮಧುವಿದ್ದ ಒಬ್ಬನು ದಯೆಯಿಂ. ೬೪



3850 29, ಬೆಂಗಳೂರು ಪ್ರೆಸ್, ಮೈಸೂರು ರೋಡು, ಬೆಂಗಳೂರು ಸಿಟಿ

  1. ಇವುಗಳೊಡನೆ ಸೇರಬಹುದಾದ ಮಕ್ಕಳಾಟದ ನಗುವಿನ ಸುಖವನ್ನು ಉಮರನೇ ಮರೆತನೋ, ಅಥವಾ ಫಿಟ್ಸ್ಜೆರಲ್ಪನೆ ಅರಿಯುನೋ !