ಎನ್ನಂತರಂಗದ ಆತ್ಮನೊಳಗೆ ಅಂಗವಿಲ್ಲದ ಅನಾಮಯನ ನೋಡಿ ಕಂಡೆನಯ್ಯ. ಆ ಪುರುಷನ ಮುಟ್ಟಿ ಹಿಡಿದು
ದರುಶನ ಸ್ವರುಷನವ ಮಾಡಿ ಕೂಡಿ ನೆರೆದಿಹೆನೆಂದರೆ ಚಿತ್ತ ಮನಕ್ಕೆ ಅಗೋಚರವಾಗಿಪ್ಪನಯ್ಯ. ಈ ಪುರುಷನ ಚಾರಿತ್ರ ವಿಪರೀತ ವಿಸ್ಮಯವಾಗಿದೆ ನೋಡಾ. ಆತನ ರೂಪು ಲಾವಣ್ಯ ಯುಕ್ತಿ ವಿಧಾನವ ಏನೆಂದುಪಮಿಸುವೆನಯ್ಯ? ಉಪಮಾತೀತ ಅವಿರಳಾತ್ಮಕ ಚಿದ್ರೂಪ ಕಾಣಿಭೋ. ಕೆಂಜೆಡೆಯ ಭಾಳನೇತ್ರಂ ರಂಜಿಪ ರವಿಕೋಟಿತೇಜದಿಂದುರವಣಿಸುತ್ತಿದಾನೆ ನೋಡಾ. ಕಂಜಪದಯಗಳದೊಳು ಹೊಳವುತ್ತಿದಾನೆ ನಂಜುಗೊರಳಭವ ಕಾಣಿಭೋ. ಭವರೋಗವೈದ್ಯ
ಭವಹರ
ಎನ್ನ ತಂದೆ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನು
ಎನ್ನ ಹೃದಯದಲ್ಲಿ ಕಂಡು
ಮನೋಭಾವದಲ್ಲಿ ಆರಾದ್ಥಿಸುತ್ತಿರ್ದೆನಯ್ಯ.