ಎನ್ನ ಮನಸ್ಸು ಹೊನ್ನು ಹೆಣ್ಣು ಮಣ್ಣ ನೆನನೆನೆದು ನಿಮ್ಮ ನೆನಯಲೊಲ್ಲದು ನೋಡ. ಎನ್ನ ಕಾಯ ನಿಮ್ಮ ಮುಟ್ಟದೆ ಸಂಸಾರಕರ್ಮವನೆ ಮಾಡುತ್ತಿಪ್ಪುದು ನೋಡ. ಎನ್ನ ಪ್ರಾಣ ನಿಮ್ಮ ಮುಟ್ಟದೆ ಪ್ರಪಂಚೆನೊಳಗೇ ಮುಳುಗುತ್ತಿಪ್ಪುದು ನೋಡ. ಎನ್ನ ಭಾವ ನಿಮ್ಮ ಭಾವಿಸಿ ಭ್ರಮೆಯಳಿಯದೆ
ಸಂಸಾರ ಭಾವನೆ ಸಂಬಂಧವಾಗಿ ಮುಂದುಗಾಣದೆ
ಮೋಕ್ಷಹೀನನಾಗಿರ್ದೆನಯ್ಯ. ಸುರಚಾಪದಂತೆ ತೋರಿ ಅಡಗುವ ಅನಿತ್ಯ ತನುವನು ನಿತ್ಯವೆಂದು
ನಿರುತವೆಂದು ವೃಥಾ ಹೋಯಿತ್ತು ಎನ್ನ ವಿವೇಕ. ಸಂಸಾರದಲ್ಲಿ ಸವೆಸವೆದು ಅವಿವೇಕಿಯಾದೆನಯ್ಯ. ಎನ್ನ ಅವಿವೇಕವ ಕಳೆದು
ಶಿವತತ್ವವಿವೇಕವನಿತ್ತು ಕರುಣಿಸಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.