ಒಡಲಗುಣಧರ್ಮವನು ಬಿಡದೆ ನಡೆವನ್ನಕ್ಕ ಎಡೆವರಿಯದ ಪೂಜೆಯನವರೆತ್ತ ಬಲ್ಲರು ? ಉದಯದಲಾದ ಪೂಜೆ ಅಸ್ತಮಾನದಲೆಂಜಲೆಂಬರು ಇಂತೆಂಬ ಭಂಗಿತರ ಮುಖವ ನೋಡಲಾಗದು. ಅಗ್ನಿಯೆಂಜಲನುಂಡು ಲಿಂಗದಲ್ಲಿ ಸಯವನರಸುವ ಭಂಗಿತರನೇನೆಂಬೆ ಕೂಡಲಚೆನ್ನಸಂಗಮದೇವಾ.