ಕಡೆಯಲ್ಲಿ ಮೊದಲಲ್ಲಿ ಸುವರ್ಣವೊಂದಲ್ಲದೇ ಬೇರಿಲ್ಲ ಕಾಣಿರೋ. ಬಂಗಾರ ಪ್ರಕೃತಿಯಿಂದ ಬೇರಿಟ್ಟು ತೋರಿತ್ತು ಎಂದಡೆ ಬೇರಾಗಬಲ್ಲುದೆ ಅಯ್ಯ ಶುದ್ಧ ಪರಮಾತ್ಮ ತಾನೆ ಒಂದೆರಡಾಗಿ ಜೀವ ಪರಮನೆಂದು ತೋರಿತ್ತೆಂದಡೆ ಆವಾಗ ಜೀವ
ಆವಾಗ ಪರಮನೆಂಬ ಭೇದವನರಿಯದೆ ಅರೆ ಮರುಳಾದಿರಲ್ಲ. ದೇಹಭಾವದ ಉಪಾಧಿವುಳ್ಳನ್ನಕ್ಕರ ಜೀವನು; ದೇಹಭಾವದ ಉಪಾಧಿ ಶಿವಭಾವದಲ್ಲಿ ಅಳಿದ ಬಳಿಕ ಜೀವನೆಂಬವನು ಪರಮನೆಂಬವನು ತೀವಿ ಪರಿಪೂರ್ಣ ಪರವಸ್ತು ತಾನೇ ತಾನೆಂಬಾತ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೇ ಕಾಣಿರೋ.