ಕನ್ನಡಿಗರ ಕರ್ಮ ಕಥೆ/ಆತ್ಮಹತ್ಯೋಪಕ್ರಮ ಬಾದಶಹನ ಪತ್ರವು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೨೧೨-೨೧೮

೨೩ನೆಯ ಪ್ರಕರಣ

ಆತ್ಮಹತ್ಯೋಪಕ್ರಮ

ರಣಮಸ್ತಖಾನನು ತನ್ನನ್ನು ಬಂದು ಕೂಡಿದ್ದರೂ ಆತನ ತಾಯಿಯು ಆತನ ಮನಸ್ಸನ್ನು ಎಲ್ಲಿ ತಿರುಗಿಸುವಳೋ ಎಂಬ ಭಯವು ರಾಮರಾಜನ ಮನಸ್ಸಿನೊಳಗಿಂದ ಹೋಗಿದ್ದಿಲ್ಲ. ಮೆಹರ್ಜಾನಳು ತಾನು ಸ್ವತಃ ಆ ಕೆಲಸವನ್ನು ಮಾಡಲಿಕ್ಕೆ ಪ್ರವೃತ್ತಳಾಗದಿದ್ದರೂ, ತನ್ನ ವೃದ್ದದಾಸಿಯಾದ ಮಾರ್ಜೀನೆಯ ಮುಖಾಂತರ ಆ ಕಾರ್ಯವನ್ನು ಆಕೆಯು ಮಾಡಿಸಬಹುದೆಂದು ಆತನು ತರ್ಕಿಸಿದ್ದನು. ಮೆಹರ್ಜಾನಳು ಈ ಕಾರ್ಯಕ್ಕೆ ಉಪಕ್ರಮಿಸುವ ಮೊದಲೇ ತಾನು ಒಮ್ಮೆ ಕುಂಜವನಕ್ಕೆ ಹೋಗಿ ಮೆಹರ್ಜಾನಳನ್ನು ಒಲಿಸಿಕೊಳ್ಳಬೇಕೆಂದು ಆತನು ನಿಶ್ಚಯಿಸಿದನು. ತಾನು ವೇಷಾಂತರದಿಂದ ಇಂದಿನ ರಾತ್ರಿಯೇ ಕುಂಜವನಕ್ಕೆ ಹೋಗಿ, ರಣಮಸ್ತಖಾನನು ನನ್ನನ್ನು ಮಾಸಾಹೇಬರ ಕಡೆಗೆ ಕಳಿಸಿರುವದರಿಂದ, ನನಗೆ ಅವರ ದರ್ಶನ ಮಾಡಿಸಿರೆಂದು ಕಾವಲುಗಾರರಿಗೆ ಹೇಳಿ ತನ್ನ ಕಾರ್ಯವನ್ನು ಸಾಧಿಸಬೇಕೆಂದು ಆ ರಾಯನು ಯೋಚಿಸಿದನು. ಮಗನು ಏನೋ ಹೇಳಿಕಳಿಸಿರುವನೆಂದು ತಿಳಿದು ಮೋಹದಿಂದ ಮೆಹರ್ಜಾನಳು ನನ್ನನ್ನು ಕಂಡೇ ಕಾಣುವಳು. ಈ ಹಂಚಿಕೆಯಿಂದ ಆಕೆಯ ಬಳಿಗೆ ಹೋಗಿ, ಬಹು ಗುಪ್ತ ಸುದ್ದಿಯೆಂಬ ನೆವದಿಂದ ಏಕಾಂತದ ಪ್ರಸಂಗವನ್ನು ಒದಗಿಸಿಕೊಂಡು, ಆ ಮೇಲೆ ಮೆಹರ್ಜಾನಳಿಗೆ ತನ್ನ ಗುರುತು ಮಾಡಿಕೊಡಬೇಕೆಂದು ಎಣಿಕೆ ಹಾಕಿದನು. ಮೋಹಾಂಧನೂ, ವಿವೇಕಭ್ರಷ್ಟನೂ ಆದ ರಾಮರಾಜನು ಹೀಗೆ ಯೋಚಿಸಿ ತನ್ನ ನಿತ್ಯ ಕೃತ್ಯಗಳನ್ನು ಮಾಡುವದಕ್ಕಾಗಿ ಏಳುತ್ತಿರಲು, ದ್ವಾರರಕ್ಷಕನು ಬಂದು ಒಬ್ಬಗುಪ್ತಚಾರನು ತಮ್ಮನ್ನು ಕಾಣಲಿಕ್ಕೆ ಬಂದಿದ್ದಾನೆ ಆತನು “ಕೃಪಾ” ಎಂಬದು ಗುರುತಿನ ಶಬ್ದವಿರುತ್ತದೆಂದು ಸೂಚಿಸಲು ಹೇಳಿರುವನು, ಎಂದು ನುಡಿದನು. “ಕೃಪಾ” ಎಂಬ ಶಬ್ದವು ಕಿವಿಗೆ ಬಿದ್ದ ಕೂಡಲೆ ರಾಮರಾಜನು ಕ್ಷಣವಾದರೂ ವಿಳಂಬಮಾಡದೆ ಆ ಚಾರನನ್ನು ಕರೆಸಿಕೊಂಡು, ಏಕಾಂತದಲ್ಲಿ ಅತನನ್ನು ಕುರಿತು “ಏನು ಸುದ್ದಿಯನ್ನು ತಿಂದಿರುವೆ, ಬೇಗನೆ ಹೇಳು” ಎಂದು ಕೇಳಲು ಚಾರನು “ರಣಮಸ್ತಖಾನನು ಎಲ್ಲಿ ಇರುವನೆಂಬದವರು ಶೋಧ ಮಾಡುತ್ತ ಒಬ್ಬ ಮುಸಲ್ಮಾನ ಮುದುಕಿಯೂ, ಆಕೆಯ ಸಂಗಡ ಒಬ್ಬ ಮುಸಲ್ಮಾನ ಸೇವಕನೂ ಬಂದಿದ್ದಾರೆ. ಸದ್ಯಕ್ಕೆ ಅವರು ಊರ ಹೊರಗಿನ ಧರ್ಮಶಾಲೆಯಲ್ಲಿ ಇರುವರು” ಎಂದು ಹೇಳಿದನು. ಅದನ್ನು ಕೇಳಿದ ಕೂಡಲೆ ರಾಮರಾಜನು ಆ ಮುದುಕಿಯ ಲಕ್ಷಣವನ್ನು ಕೇಳಿಕೊಂಡು ಮಾರ್ಜೀನೆಯೇ ಬಂದಿರುವಳೆಂದು ತಿಳಿದು, ಆ ಚಾರನಿಗೆ- “ನೀನು ಇದೇ ಕಾಲಿನಲ್ಲಿ ತಿರುಗಿ ಹೋಗು. ಅವರಿಬ್ಬರನ್ನು ಇನ್ನು ಎರಡು ದಿನ ಧರ್ಮಶಾಲೆಯ ಹೊರಗೆ ಬಿಡಬೇಡೆಂದು ನಾನು ಹೇಳಿರುತ್ತೇನೆಂದು ಸುಬ್ರಹ್ಮಣ್ಯನಿಗೆ ತಿಳಿಸು; ಆತನು ಹಾಗೆ ಮಾಡಲಿಕ್ಕೆ ಒಂದು ಪಕ್ಷದಲ್ಲಿ ಹಿಂದುಮುಂದು ನೋಡಿದರೆ ಆತನಿಗೆ ಈ ಉಂಗರವನ್ನು ತೋರಿಸು. ಉಂಗುರವನ್ನು ಆತನಿಗೆ ಕೊಡಬೇಡ, ತಿರುಗಿ ತಕ್ಕೊಂಡುಬಾ, ಉಂಗುರವನ್ನು ನೋಡಿದ ಕೂಡಲೆ ಆತನು ಎಲ್ಲ ವ್ಯವಸ್ಥೆಯನ್ನು ಮಾಡುವನು, ನಿನಗೆ ಅವರ ಚಿಂತೆ ಬೇಡ, ನಡೆ ನಡೆ” ಎಂದು ಹೇಳಿ ಆತನನ್ನು ಕಳಸಿಕೊಟ್ಟನು. ಚಾರನು ಅತ್ತ ಹೋದ ಕೂಡಲೆ ರಾಮರಾಜನು ತನ್ನ ಮನಸ್ಸಿನಲ್ಲಿ- “ಒಟ್ಟಗೆ ನನ್ನದೊಂದು ತರ್ಕವು ನಿಜವಾದಂತಾಯಿತು. ಆಕೆಯು ಮಾರ್ಜೀನೆಯೇ ನಿಶ್ಚಯವು. ರಣಮಸ್ತಖಾನನಿಗೆ ಎಲ್ಲ ಸುದ್ದಿಯನ್ನು ಹೇಳುವದಕ್ಕಾಗಿ ತನ್ನೊಡೆಯಳ ಕಡೆಯಿಂದ ಬಂದಿರುವಳು. ಆಕೆಗೂ ರಣಮಸ್ತಖಾನನಿಗೂ ಭೆಟ್ಟಿಯಾಗದಂತೆ ವ್ಯವಸ್ಥೆಯನ್ನು ಮಾಡಿರುವೆನು. ಇನ್ನು ಇಂದೇ ರಾತ್ರಿ ನಾನು ಕುಂಜವನಕ್ಕೆ ಹೋಗಲೇಬೇಕು” ಎಂದು ಯೋಚಿಸಿ, ರಾತ್ರಿಯು ಯಾವಾಗ ಆದೀತೆಂದು ಆತನು ಉತ್ಸುಕತೆಯಿಂದ ಹಾದಿಯ ನೋಡಹತ್ತಿದನು. ಮೂವತ್ತು ವರ್ಷಗಳ ಹಿಂದೆ ಕುಂಜವನಕ್ಕೆ ರಾತ್ರಿಯಲ್ಲಿ ಹೋಗುವಾಗಿನ ಉತ್ಸುಕತೆಯ ಸ್ಮರಣವು ಈಗ ಆತನಿಗೆ ಆಯಿತು; ಆದರೆ ಆಗಿನ ಔತ್ಸುಕ್ಯದ ಕಾರಣವೂ, ಈಗಿನ ಔತ್ಸುಕ್ಯದ ಕಾರಣವೂ ಭಿನ್ನವಾಗಿದ್ದವೆಂಬದು ಸ್ಪಷ್ಟವು ಮೆಹೆರಜಾನಳನ್ನು ಕಂಡು ತನ್ನ ಅಪರಾಧವನ್ನು ಕ್ಷಮಿಸುವದಕ್ಕಾಗಿ ಆಕೆಯನ್ನು ಪ್ರಾರ್ಥಿಸಬೇಕೆಂದು ರಾಮರಾಜನು ನಿಶ್ಚಯಿಸಿದನು. ರಾತ್ರಿಯಾದ ಕೂಡಲೆ ಆತನು ಹಿಂದಿನಂತೆಯೇ ಸಂಗಡ ಯಾರನ್ನೂ ಕರಕೊಳ್ಳದೆ ಕುಂಜವನಕ್ಕೆ ಒಬ್ಬನೇ ಹೊರಟನು.

ಕುಂಜವನದ ಬಾಗಿಲ ಸನಿಯಕ್ಕೆ ಬರಲು, ಇಷ್ಟು ರಾತ್ರಿಯಲ್ಲಿ ತನ್ನನ್ನು ಕುಂಜವನದೊಳಗೆ ಬಿಡಲಿಕ್ಕಿಲ್ಲೆಂಬ ಶಂಕೆಯು ರಾಮರಾಜನಿಗೆ ಉತ್ಪನ್ನವಾಯಿತು. ಆದರೆ ಇಷ್ಟು ದೂರ ಬಂದು ಹಿಂದಿರುಗಿ ಹೋಗುವದು ನೆಟ್ಟಗಲ್ಲೆಂದು ತಿಳಿದು ವೇಷಾಂತರಿಸಿದ್ದ ಆತನು ಆದದ್ದಾಗಲೆಂದು ದ್ವಾರರಕ್ಷನನ್ನು ಕೂಗಿ ಕೂಗಿ ಎಬ್ಬಿಸಿದನು. ಕಾವಲುಗಾರನು ಅರನಿದ್ದೆಯಲ್ಲಿದ್ದದ್ದರಿಂದ, ಆತನು ಬಹಳ ಹೊತ್ತಿನವರೆಗೆ ರಾಮರಾಜನ ಕೂಗನ್ನು ಲೆಕ್ಕಿಸಲೇ ಇಲ್ಲ. ಕಡೆಗೆ- “ಯಾವನವನು? ರಾತ್ರಿಯಲ್ಲಿ ಕಿಟಿಕಿಟಿ ಹಚ್ಚಿರುತ್ತಾನೆ” ಎಂದು ಒಟಗುಟ್ಟಿ ಬಾಗಿಲು ತೆರೆದನು, ಆಗ ರಾಮರಾಜನು ಆತನಿಗೆ- “ರಣಮಸ್ತಖಾನನು ನನ್ನನ್ನು ಮಾಸಾಹೇಬರ ಕಡೆಗೆ ಕಳಿಸಿರುತ್ತಾರೆ. ಬಹಳ ಅವಸರದ ಕೆಲಸವಿರುತ್ತದಂತೆ. ನೀನು ಹೋಗಿ ಮಾಸಾಹೇಬರಿಗೆ ಸುದ್ದಿಯನ್ನು ತಿಳಿಸಿ, ಅವರಿಗೆ ನನ್ನ ಭೆಟ್ಟಿಯನ್ನು ಮಾಡಿಸು. ಅವರು ನಿದ್ದೆ ಹತ್ತಿ ಮಲಗಿದ್ದರೂ ಎಬ್ಬಿಸು. ಕೆಲಸವು ಬಹಳ ನಾಜೂಕು ಇರುತ್ತದೆ” ಎಂದು ಹೇಳಿದನು; ಆದರೆ ಕಾವಲುಗಾರನು ರಾಮರಾಜನ ಮಾತಿಗೆ ಒಪ್ಪಿಕೊಳ್ಳದೆ, “ಅಪರಾತ್ರಿಯು, ಎಲ್ಲಿ ಎಬ್ಬಿಸಲೆಂದು ಗೊಣಗುಟ್ಟಹತಿದನು. ಆತನು ರಾಮರಾಜನಿಗೆ- ಈಗ ನಾನು ಕಾವಲಿಗೆ ಒಬ್ಬನೇ ಇದ್ದೇನೆ. ಬಂಗಲೆಯೊಳಗೂ ಸೇವಕರು ಯಾರೂ ಇಲ್ಲ. ಎಲ್ಲ ಜನರು ದೊಡ್ಡ ಖಾನಸಾಹೇಬರ ಕಡೆಗೆ ಹೋಗಿದ್ದಾರೆ. ಆ ಮುದುಕಿಯೂ ಇಂದು ಎಲ್ಲಿಯೋ ಹೋಗಿಬಿಟ್ಟಿದ್ದಾಳೆ. ಇನ್ನು ಮಾಸಾಹೇಬರನ್ನು ಎಬ್ಬಿಸಲಿಕ್ಕೆ ಹೋಗಬೇಕಾದರೆ, ಅವರ ಕೋಣೆಯ ಬಾಗಿಲತನಕ ಹೋಗಬೇಕು ಈಗ ಯಾರು ಹೋಗುವರು ? ಈಗ ಆಗುವುದಿಲ್ಲ. ಮುಂಜಾನೆ ನೋಡೋಣವಂತೆ ಈಗ ಸರಿರಾತ್ರಿಯಾಗಿರುವದು” ಎಂದು ಒದರಾಡಹತ್ತಿದನು. ಆಗ ರಾಮರಾಜನು-ಛೇ, ಛೇ, ಹೀಗೆ ಮಾಡಿದರೆ ಹ್ಯಾಗೆ? ಖಾನಸಾಹೇಬರು ನನ್ನನ್ನು ಬುದ್ಧಿಪೂರ್ವಕವಾಗಿ ಇದಕ್ಕೆ ಕಳಿಸಿರುವರೇನು? ಹ್ಯಾಗಾದರೂ ಮಾಡಿ ಈ ದಿನ ರಾತ್ರಿಯೇ ಮಾಸಾಹೇಬರಿಗೆ ಸುದ್ದಿಯನ್ನು ಮುಟ್ಟಿಸಬೇಕೆಂದು ಅವರು ಹೇಳಿರುವರು. ಹ್ಯಾಗಾದರೂ ಮಾಡು, ನಾನು ಬಂದ ಸುದ್ದಿಯನ್ನಷ್ಟು ಮಾಸಾಹೇಬರಿಗೆ ಹಚ್ಚಿ ನಮ್ಮಿಬ್ಬರ ಭೆಟ್ಟಿಯನ್ನು ಮಾಡಿಸಬೇಕು. ನಿನ್ನ ಶ್ರಮವು ವ್ಯರ್ಥವಾಗಲಿಕ್ಕಿಲ್ಲ. ಎಂದು ಹಲವು ವಿಧವಾಗಿ ಹೇಳಿಕೊಳ್ಳಲು, ಆ ಕಾವಲುಗಾರನು ನಿರ್ವಾಹವಿಲ್ಲದೆ ರಾಮರಾಜನಿಗೆ-ಇಲ್ಲಿಯೇ ನೀನು ಬಾಗಿಲು ಕಾಯುತ್ತ ಇರೆಂದು ಗಟ್ಟಿಮುಟ್ಟಿಯಾಗಿ ಹೇಳಿ, ಆ ಬಾಗಿಲನವನು ಪುನಃ ಇಕ್ಕದೆ ಮಾಸಾಹೇಬರ ಬಂಗಲೆಯ ಕಡೆಗೆ ಹೊರಟು ಹೋದನು. ಇತ್ತ ರಾಮರಾಜನು ಒಂದೆರಡು ಕ್ಷಣ ಅಲ್ಲಿ ನಿಂತಿರಬಹುದು. ಅಷ್ಟರಲ್ಲಿ ಆತನ ದೃಷ್ಟಿಯು ಪುಷ್ಕರಣಿಯ ಕಡೆಗೆ ಹೋಗಲು, ಅತ್ತ ಕಡೆಗೆ ಹೋಗುವ ಇಚ್ಛೆಯು ಆತನಿಗೆ ಉತ್ಪನ್ನವಾದದ್ದರಿಂದ, ಆತನು ಯಾವ ವಿಚಾರವನ್ನೂ ಮಾಡದೆ ಅತ್ತ ಕಡೆಗೆ ಹೋಗಿಬಿಟ್ಟನು.

ಕುಂಜವನಕ್ಕೆ ಬಂದಬಳಿಕ ರಾಮರಾಜನ ಮನಸ್ಸು ಪುಷ್ಕರಣಿಯ ಕಡೆಗೆ ಎಳೆಯತಕ್ಕದ್ದೇ ಎಂಬುದು ಗೊತ್ತಾಗಿಹೋಗಿತ್ತು. ಆ ಪುಷ್ಕರಣಿಯ ದಂಡೆಯಲ್ಲಿ ಆತನು ತಾರುಣ್ಯದಲ್ಲಿ ಹಲವು ಸುಖಗಳನ್ನು ಭೋಗಿಸಿದ್ದರಿಂದಾಗಲಿ, ಪುಷ್ಕರಣಿಯಲ್ಲಿ ಅಂಥ ವಿಲಕ್ಷಣವಾದ ಆಕರ್ಷಣ ಶಕ್ತಿಯಿದ್ದದ್ದರಿಂದಾಗಲಿ ರಾಮರಾಜನು ಈವರೆಗೆ ಕುಂಜವನಕ್ಕೆ ಹೋದಾಗಲೆಲ್ಲ ಪುಷ್ಕರಣಿಗೆ ಹೋಗಿಯೇ ತೀರಿದ್ದನು. ಅದರಲ್ಲಿ ಈ ದಿನ ಹುಣ್ಣಿಮೆಯ ರಾತ್ರಿಯು. ಹಿಟ್ಟು ಚಲ್ಲಿದ ಹಾಗೆ ಬೆಳದಿಂಗಳು ಬಿದ್ದಿತ್ತು. ಹವೆಯು ಸ್ತಬ್ಧವಾಗಿತ್ತು. ಗಿಡದ ಎಲೆಗಳು ಮಿಸುಕುತ್ತಿದ್ದಿಲ್ಲ. ಪುಷ್ಕರಣಿಯ ಸ್ತಬ್ದವಾದ ಶುಭ್ರಜಲದಲ್ಲಿ ಒಂದಾದರೂ ತರಂಗವು ಕಣ್ಣಿಗೆ ಬೀಳುತ್ತಿದ್ದಿಲ್ಲ. ಆಕಾಶದಲ್ಲಿ ತಾರೆಗಳು ಚಂದ್ರಪ್ರಕಾಶದ ಯೋಗದಿಂದ ರಾಮರಾಜನ ಮೋಹವು ಮತ್ತಷ್ಟು ಹೆಚ್ಚಿತು. ಈ ಹೆಚ್ಚಿದ ಮೋಹದಲ್ಲಿ ಮೆಹರ್ಜಾನಳ ಅಪ್ರಾಪ್ತ ಸ್ಥಿತಿಯ ಯೋಗದಿಂದ ಉಂಟಾಗಿದ್ದ ಅಸಮಾಧಾನವು ಬೆರೆತು ಆತನಿಗೆ ಏನೂ ತೋಚದೆ ಆತನು ಪರಾಧೀನನಂತೆ ಪುಷ್ಕರಣಿಯ ದಂಡೆಯಲ್ಲಿ ಸಂಚರಿಸುತ್ತಿದ್ದನು. ತನ್ನನ್ನು ಕುಂಜವನದ ಕಾವಲುಗಾರನು ಹುಡುಕಬಹುದೆಂಬ ಎಚ್ಚರವು ಆತನಿಗೆ ಉಳಿದಿದ್ದಿಲ್ಲ. ಮೆಹರ್ಜಾನಳು ಏನು ಅಂದಾಳೆಂಬದನ್ನು ತಿಳಕೊಳ್ಳುವದಕ್ಕಾಗಿ ಆತನು ಬಾಗಿಲು ಕಾಯುತ್ತ ಇರುವುದನ್ನು ಬಿಟ್ಟು, ಪುಷ್ಕರಣಿಯ ಕಡೆಗೆ ಹೊರಟು ಬಂದುಬಿಟ್ಟಿದ್ದನು. ಪುಷ್ಕರಣಿಯ ದಂಡೆಯಲ್ಲಿರುವಾಗ ಮೆಹರ್ಜಾನಳಿಗೆ ಸಂಬಂಧಸಿದ ತನ್ನ ಹಿಂದಿನ ಮನೋಹರವಾದ ಇತಿಹಾಸವನ್ನು ಸ್ಮರಿಸುತ್ತ ಸ್ಮರಿಸುತ್ತ ಒಂದು ವೃಕ್ಷದ ಬುಡಕ್ಕೆ ಬಂದನು. ಅಲ್ಲಿಗೆ ಬಂದಕೂಡಲೆ ಆತನಿಗೆ ಏನೋ ನೆನಪಾದಂತಾಗಿ ಆತನು ಸ್ತಬ್ಧವಾಗಿ ನಿಂತುಕೊಂಡನು. ಹಿಂದಕ್ಕೆ ಮೂವತ್ತು ವರ್ಷಗಳ ಹಿಂದೆ ಆತನು ಅದೇ ಮರದ ಬುಡದಲ್ಲಿ ನಿಂತುಕೊಂಡು, ಮೆಹರ್ಜಾನಳು ಪುಷ್ಕರಣಿಯೊಳಗಿನ ನೌಕೆಯಲ್ಲಿ ಕುಳಿತು ಹಾಡುವ ಮನೋಹರ ಗಾಯನವನ್ನು ಕೇಳಿ, ತಾನು ಆ ಗಾಯನಕ್ಕೆ ಪ್ರತ್ಯುತ್ತರವಾಗಿ ಅದೇ ಮರದ ಬುಡದಲ್ಲಿ ನಿಂತು ಸಂಸ್ಕೃತ ಅಷ್ಟಪದಿಯನ್ನು ಅಂದಿದ್ದನು. ಆ ಸುಖಮಯ ಪ್ರಸಂಗದ ಚಿತ್ರವು ಈಗ ರಾಮರಾಜನ ಕಣ್ಣಿಗೆ ಕಟ್ಟಿತ್ತು. ಹೀಗೆ ಚಿತ್ರವು ಕಣ್ಣಿಗೆ ಕಟ್ಟಿರುವಾಗ ತಾನು ಪ್ರತ್ಯಕ್ಷ ಆ ಸುಖವನ್ನು ಭೋಗಿಸುವಂತೆ ಆತನಿಗೆ ಭಾಸವಾಯಿತು. ಹೀಗೆ ಸುಖವನ್ನು ಅನುಭವಿಸುತ್ತಿರುವಾಗ ಆತನ ಕಣ್ಣುಗಳಲ್ಲಿ ಒಮ್ಮೆಲೆ ನೀರು ತುಂಬಿದವು. ಬರಬರುತ್ತ ಆತನ ಕಣ್ಣೊಳಗಿಂದ ನೀರು ಧಾರಾಳವಾಗಿ ಸುರಿಯಹತ್ತಿದವು; ಮುಂದೆ ಆ ಕಣ್ಣೀರು ಸುರಿಯುವದು ನಿಂತು ಆತನ ಎದೆಯು ಧಸಕ್ಕೆಂದಿತು. ಮೆಹರ್ಜಾನಳೂ, ಆತನೂ ಪುಷ್ಕರಣಿಯ ಮಧ್ಯದಲ್ಲಿದ್ದ ಧ್ವಜಸ್ತಂಭದತ್ತ ಕಡೆಯಿಂದ ನೌಕೆಯಲ್ಲಿ ಕುಳಿತು ದಂಡೆಯ ಕಡೆಗೆ ಬರುವಾಗ ಮೆಹರ್ಜಾನಳು ನುಡಿದ ಶಬ್ದಗಳ ನೆನಪು ಈಗ ಆತನಿಗಾಗಿತ್ತು. ಹಾಗೆ ನೆನಪಾದದ್ದರಿಂದಲೇ ಆತನ ಆನಂದವು ನಷ್ಟವಾಗಿ ಆತನು ತನ್ನೊಳಗೆ- “ಆಗ ಹಾಗೆ ನಾವು ಮುಳುಗಿಹೋಗಿದ್ದರೆ ಏನಾಗುತ್ತಿತ್ತು ? ಈ ಮುಂದಿನ ಎಲ್ಲ ತೊಡಕುಗಳು ಉಂಟಾಗುತ್ತಿದ್ದಿಲ್ಲ. ಆಕೆಯೂ ನಾನು ಎಲ್ಲಿಯಾದರೂ ಒತ್ತಟ್ಟಿಗೆ ಸುಖದ ಶಿಖರವನ್ನೇರಿ, ಇಲ್ಲವೆಯಾರಿಗೆ ಗೊತ್ತು, ದುಃಖದ ಕೂಪದಲ್ಲಿ ಬಿದ್ದಿರುತ್ತಿದ್ದೆವು. ಏನೇ ಆಗಲಿ ನಾವಿಬ್ಬರು ಈ ಲೋಕದಿಂದ ಕೂಡಿಯೇ ಹೋಗಿದ್ದರೆ ನಮ್ಮಿಬ್ಬರ ಅಕೃತ್ರಿಮ ಪ್ರೇಮವನ್ನು ನೋಡಿ ಪರಮೇಶ್ವರನು ನಿಶ್ಚಯವಾಗಿ ನಮ್ಮನ್ನು ಏಕತ್ರವಾಗಿ ಇಡುತ್ತಿದ್ದನು.

ಹೀಗೆ ಏನೇನೋ ಅಲ್ಲಿಯ ಇಲ್ಲಿಯ ವಿಚಾರಗಳು ರಾಮರಾಜನ ಮನಸ್ಸಿನಲ್ಲಿ ಎಡತಾಕುತ್ತಿರಲು, ಆತನಿಗೆ ತಾನು ಕಾವಲುಗಾರನನ್ನು ಮೆಹರ್ಜಾನಳ ಕಡೆಗೆ (ಮಾಸಾಹೇಬರ ಕಡೆಗೆ) ಕಳಿಸಿಕೊಟ್ಟದ್ದು ನೆನಪಾಯಿತು. ಕೂಡಲೆ ಆತನ ಮನಸ್ಸು ಅತ್ತಕಡೆಗೆ ಹರಿಯಹತ್ತಿ, ಆತನು ತನ್ನ ಮನಸ್ಸಿನಲ್ಲಿ- “ಕಾವಲುಗಾರನು ಇಷ್ಟುಹೊತ್ತಿಗೆ ಮೆಹರ್ಜಾನಳನ್ನು ಕಂಡು ಅಲ್ಲಿಗೆ ಬಂದಿರಬಹುದಲ್ಲವೇ ? ಆತನು ನನ್ನ ಕುದುರೆಯು ಅಲ್ಲಿಯೇ ಇರುವದನ್ನು ನೋಡಿ ಅತ್ತಿತ್ತ ನನ್ನನ್ನು ಶೋಧಿಸುತ್ತಿರಬಹುದು. ಆದ್ದರಿಂದ ನಾನು ಅಲ್ಲಿಗೆ ಹೋಗತಕ್ಕದ್ದು, ಎಂದು ಯೋಚಿಸಿ, ನಾಲ್ಕು ಹೆಜ್ಜೆ ಮುಂದಕ್ಕೆ ಬಂದಿರಬಹುದು; ಅಷ್ಟರಲ್ಲಿ ಆತನಿಗೆ ಸ್ವಲ್ಪ ದೂರದಲ್ಲಿ ಯಾರೋ ಬರುತ್ತಿರುವಂತೆ ತೋರಿ, ಆತನು ಅಲ್ಲಿಯೇ ನಿಂತುಕೊಂಡನು. ಆತನು ದಿಟ್ಟಿಸಿ ನೋಡಲು, ಒಂದು ಶುಭ್ರ ವಸ್ತುವೇಷ್ಟಿತ ಮೂರ್ತಿಯು ಆತನ ಕಣ್ಣಿಗೆ ಬಿದ್ದಿತ್ತು. ಈ ಮೂರ್ತಿಯು ಯಾರಿರಬಹುದೆಂಬ ಶಂಕೆಯು ಲೇಶವಾದರೂ ಆತನಿಗಿದ್ದಿಲ್ಲ. ಈ ಮೂರ್ತಿಯು ತನ್ನ ಪ್ರಿಯ ಮೆಹರ್ಜಾನಳು, ಅಥವಾ ಈಗಿನ ಹೆಸರಿನಂತೆ ಮಾಸಾಹೇಬರು, ಎಂದು ಆತನು ನಿಶ್ಚಯಿಸಿದನು. ಹಿಂದಕ್ಕೆ ರಣಮಸ್ತಖಾನನ ಸಂಗಡ ಪುಷ್ಕರಣಿಯಲ್ಲಿ ಸಂಚರಿಸುತ್ತಿರುವಾಗ ಒಮ್ಮೆ ಅದೇ ಶುಭಮೂರ್ತಿಯನ್ನು ನೋಡಿದ್ದು ಆತನ ಸ್ಮರಣಕ್ಕೆ ಬಂದಿತು. ಇಷ್ಟು ರಾತ್ರಿಯಲ್ಲಿ ಈಕೆಯು ಇಲ್ಲಿಗೆ ಯಾಕೆ ಬಂದಿರಬಹುದೆಂದು ಆತನು ಆಲೋಚಿಸತೊಡಗಿದನು. ಕಾವಲುಗಾರನು ಹೇಳಿದ್ದರಿಂದ ಆಕೆಯು ಇಲ್ಲಿಗೆ ಬಂದಿರಬಹುದೋ, ಛೇ ಛೇ ಹಾಗೆ ಬರುವ ಸಂಭವವಿಲ್ಲ. ಆಕೆಯು ಕಾವಲುಗಾರನ ಮುಖಾಂತರ ತಾನಿದ್ದಲ್ಲಿಗೆ ನನ್ನನ್ನು ಕರೆಸಿಕೊಳ್ಳುತ್ತಿದ್ದಳು. ಇಲ್ಲವೆ ಮಗನ ಮೇಲಿನ ಸಂತಾಪವು ಕಡಿಮೆಯಾಗದೆ ಇದ್ದ ಪಕ್ಷದಲ್ಲಿ ನನ್ನನ್ನು ಕಾಣಲಿಚ್ಚಿಸದೆ “ಮಗನೂ ಬೇಡ. ಆತನು ಹೇಳಿಕಳಿಸಿದ ಸುದ್ದಿಯೂ ಬೇಡ” ಎಂದು ಆಕೆಯು ನಿರಾಕರಿಸಬಹುದಾಗಿತ್ತು. ಅಂದಬಳಿಕ ಈಕೆಯು ಇಲ್ಲಿಗೆ ಈಗ ಯಾಕೆ ಬಂದಿರಬಹುದು ? ಎಂಬ ವಿಚಾರದಲ್ಲಿ ರಾಮರಾಜನು ಮಗ್ನನಾಗಿದ್ದರೂ, ಆತನು ಆ ಶುಭಮೂರ್ತಿಯನ್ನು ಎವೆಯಿಕ್ಕದೆ ನೋಡುತ್ತಿದ್ದನು. ಇಷ್ಟು ರಾತ್ರಿಯಲ್ಲಿ ಈಕೆಯು ಇಲ್ಲಿಗೆ ಬಂದು ಏನು ಮಾಡುತ್ತಾಳೆಂಬದನ್ನು ನೋಡಿ, ಆಮೇಲೆ ಈಕೆಯ ಎದುರಿಗೆ ನಿಂತುಕೊಂಡು ತನ್ನ ಸಂಶಯವನ್ನು ದೂರಮಾಡಿಕೊಳ್ಳತಕ್ಕದ್ದು, ಎಂದು ಯೋಚಿಸಿದನು. ಇತ್ತ ಆ ಶ್ವೇತಮೂರ್ತಿಯು, ಅಥವಾ ಮಾಸಾಹೇಬರು ಪುಷ್ಕರಣಿಯ ತೀರದಲ್ಲಿ ನಿಂತು ತಟಸ್ಥವೃತ್ತಿಯಿಂದ ಜಲ ರಾಶಿಯನ್ನು ನೋಡತೊಡಗಿದರು. ಆ ಕಾಲದಲ್ಲಿ ಮಾಸಾಹೇಬರಿಗೆ ಅವರ ಆಯುಷ್ಯದೊಳಗಿನ ಇತಿಹಾಸವೆಲ್ಲ ನೆನಪಾಯಿತು. ತಾವು ಹಿಂದಕ್ಕೆ ರಾಮರಾಜನೊಡನೆ ನೌಕೆಯಲ್ಲಿ ಕುಳಿತು ದಂಡೆಯ ಕಡೆಗೆ ಬರುತ್ತಿವಾಗ ಆತನನ್ನು ಕುರಿತು- “ನಾನೂ ನೀವೂ ಒಮ್ಮೆಲೆ ಈ ಪುಷ್ಕರಣಿ ಮುಳುಗಿಹೋದರೆ ಎಷ್ಟು ನೆಟ್ಟಗಾದೀತಲ್ಲ” ಎಂದು ನುಡಿದದ್ದು ಈಗ ಅವರಿಗೆ ನೆನಪಾಯಿತು. ಮಹೆರಜಾನಳ ಆಯುಷ್ಯದಲ್ಲಿ ಸುಖದ ಪ್ರಸಂಗಗಳು ಮಿಂಚಿನಂತೆ ಹೊಳೆದು ಹೋಗಿ, ದುಃಖದ ಪ್ರಸಂಗಗಳಲ್ಲಿ ಈಗ ಬಹು ದಿವಸಗಳಿಂದ ಆಕೆಯು ಮುಳುಗಿಹೋದಂತೆ ಆಗಿತ್ತು, ಮಗನ ಕೈಯಿಂದ ರಾಮರಾಜನ ಸೇಡು ತೀರಿಸಿಕೊಳ್ಳಬೇಕೆಂದು ಆಕೆಯು ಹವಣಿಸುತ್ತಿರಲು, ಈಗ ಮಗನು ರಾಮರಾಜನನ್ನೇ ಕೂಡಿಬಿಟ್ಟಿದ್ದರಿಂದ ಆಕೆಗೆ ಜೀವನವು ಬೇಡಾಯಿತು. ಇನ್ನು ಹೋದಲ್ಲಿ ತನ್ನ ಅಪ್ರತಿಷ್ಠೆಯಾಗುವದೆಂದು ಆಕೆಯು ಭಾವಿಸಿದ್ದಳು. ಪುಷ್ಕರಣಿಯಲ್ಲಿ ಹಾರಿಕೊಂಡು ಪ್ರಾಣ ಕೊಡುವದೊಂದೆ ಉಪಾಯವು ಆಕೆಯು ಕೈಯೊಳಗಿದ್ದಂತೆಯಿತ್ತು. ಆ ಉಪಾಯದಿಂದ ತನ್ನ ದುಃಖವಿಮೋಚನೆ ಮಾಡಿಕೊಳ್ಳಬೇಕೆಂದು ಆಕೆಯು ಪುಷ್ಕರಣಿಗೆ ಬಂದಿದ್ದಳು. ತನ್ನ ಈ ಘೋರ ಕಾರ್ಯಕ್ಕೆ ವಿಘ್ನ ಒದಗುವದೆಂದು ತಿಳಿದು, ಆಕೆಯು ತನ್ನ ದಾಸಿಯಾದ ಮಾರ್ಜೀನೆಯನ್ನು ರಣಮಸ್ತಖಾನನ ಕಡೆಗೆ ಕಳಿಸಿಕೊಟ್ಟಿದ್ದಳು. ಈಗ ಮೆಹೆರಜಾನಳ ಪ್ರಾಣ ವಿಘಾತಕ ಕಾರ್ಯಕ್ಕೆ ವಿಘ್ನ ಮಾಡುವವರು ಯಾರೂ ಇದ್ದಿಲ್ಲ. ಆಕೆಯು ತನ್ನ ಅಂಗವಸ್ತ್ರವನ್ನು ಸಾವರಿಸಿಕೊಂಡು ಪರಮೇಶ್ವರನ ಜಪ ಮಾಡಹತ್ತಿದಳು. ಆಮೇಲೆ ಮುಸಲ್ಮಾನ ಧರ್ಮದ ಪದ್ಧತಿಯಂತೆ ನಮಾಜು ಮಾಡಹತ್ತಿದಳು. ಇದನ್ನೆಲ್ಲ ನೋಡುತ್ತ ರಾಮರಾಜನು ಸ್ತಬ್ಧವಾಗಿ ಮರೆಗೆ ನಿಂತುಕೊಂಡಿದ್ದನು. ಈ ಪ್ರಸಂಗದಲ್ಲಿ ತಾನು ಒಮ್ಮೆಲೆ ಮುಂದಕ್ಕೆ ಹೋಗಿ “ಪ್ರಿಯ ಮೆಹೆರಜಾನ” ಎಂದು ಸಂಬೋಧಿಸಿ, ಆಕೆಯನ್ನು ಅಪ್ಪಿಕೊಳ್ಳಬೇಕೆಂದು ಆತನು ಎಷ್ಟೋ ಸಾರೆ ಯತ್ನಿಸಿದನು; ಆದರೆ ಆತನ ಕಾಲುಗಳೇ ಏಳಲಿಲ್ಲ ! ಎಷ್ಟೋ ಸಾಹಸದ ಕಾರ್ಯಗಳನ್ನು ಮಾಡಿದ ರಾಮರಾಜನಿಗೆ, ಇಷ್ಟು ಕೆಲಸ ಮಾಡುವ ಧೈರ್ಯವು ಮಾತ್ರ ಆಗಲಿಲ್ಲ. ಈಗ ಅಪ್ಪಿಕೊಳ್ಳೋಣ. ಇನ್ನೊಂದು ಕ್ಷಣದ ಮೇಲೆ ಅಪ್ಪಿಕೊಳ್ಳೋಣ, ಎಂದು ಹಾದಿಯನ್ನು ನೋಡುತ್ತ ನಿಂತುಕೊಂಡಿದ್ದನು. ಈಕೆಯ ಈ ನಮಾಜು ಆತ್ಮಹತ್ಯೆಯ ಪೂರ್ವಚಿಹ್ನವೆಂಬುದು ರಾಮರಾಜನಿಗೆ ಗೊತ್ತಾಗಲಿಲ್ಲ. ಆಕೆಯ ಮುಖಚರ್ಯವೂ ಆತನಿಗೆ ಕಾಣುತ್ತಿದ್ದಿಲ್ಲ. ಕೇವಲ ಮನೋಮಯ ಸಾಕ್ಷಿಯಿಂದಲೇ ಈಕೆಯು ಮೆಹೆರಜಾನಳೆಂದು ಆತನು ತಿಳಕೊಂಡಿದ್ದನು; ಮತ್ತು ಆಕೆಯ ಕಡೆಗೆ ನೋಡುತ್ತ ಆತನು ಈಗ ಮುಂದಕ್ಕೆ ಹೋಗಲೇನು, ಇನ್ನಿಷ್ಟು ನಿಂತು ಮುಂದಕ್ಕೆ ಹೋಗಲೇನು, ಎಂದು ವಿಚಾರಿಸುತ್ತಿದ್ದು; ಆದರೆ ಒಂದು ಹೆಜ್ಜೆಯನ್ನಾದರೂ ಇಡುವದು ಆತನಿಂದಾಗಲಿಲ್ಲ.

ಇತ್ತ ಮಾಸಾಹೇಬರು ನಮಾಜು ಮಾಡಿದ ಮೇಲೆ ಒಮ್ಮೆಲೆ ಅವರ ಮನಸಿಗೆ ಒಂದು ಪ್ರಕಾರದ ಕ್ರಾಂತಿಯು ಉತ್ಪನ್ನವಾಯಿತು. ಪುಷ್ಕರಣಿಯಲ್ಲಿ ಹಾರಿಕೊಂಡು ಪ್ರಾಣವನ್ನರ್ಪಿಸಬೇಕೆಂಬ ಅವರ ನಿಶ್ಚಯವೂ ಸ್ಥಿರವಾಯಿತು ಅವರು ತಮ್ಮ ಮೈಮೇಲಿನ ಚಾದರವನ್ನು ತೆಗೆದು ಒಗೆದರು. ಬಳಿಕ ತಮ್ಮ ಉಟ್ಟ ಸೀರೆಯನ್ನು ನೆಟ್ಟಗೆ ಮಾಡಿಕೊಂಡು- “ಅಲ್ಲಹೋವನ್ನು ಗಟ್ಟಿಯಾಗಿ ಮಾಡುತ್ತ, ಒಮ್ಮೆಲೆ ಅವರು ಪುಷ್ಕರಣಿಯಲ್ಲಿ ಹಾರಿಕೊಂಡರು. ಕೂಡಲೇ ರಾಮರಾಜನು ಅವರ ಬೆನ್ನ ಹಿಂದೆಯೇ ಹಾರಿಕೊಂಡನೆಂದು ಹೇಳಲವಶ್ಯವಿಲ್ಲ.


****