ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೧೧-೨೧

೨ನೆಯ ಪ್ರಕರಣ

ಎಲ ! ಇದೇನು ?

ಈ ಮೇರೆಗೆ ರಾಮರಾಜನು ತರುಣಿಗೆ ಹೇಳಿ ಮತ್ತೊಂದು ಕಡೆಗೆ ಹೊರಟುಹೋಗಲು, ಇತ್ತ ಆ ತರುಣಿಯ ಮನೆಯವರು ಬಹಳ ಹೊತ್ತಾದರೂ ತಮ್ಮ ಪ್ರಿಯ ಮೆಹರ್ಜಾನಳು ಬಾರದಿರುವದನ್ನು ನೋಡಿ ಚಟಪಡಿಸಿ, ಅವರಲ್ಲಿ ಒಬ್ಬಿಬ್ಬರು ಲಗುಬಗೆಯಿಂದ ಹೊಳೆಯ ದಂಡೆಗೆ ಬಂದರು. ಅಲ್ಲಿ ಒಂದು ಭಯಂಕರವಾದ ಹುಲಿಯು ಬಿದ್ದಿತು. ಅದನ್ನು ನೋಡಿ ಅವರು ಬೆದರುತ್ತ ಬೆದರುತ್ತ ಮುಂದಕ್ಕೆ ಹೋಗಿ ನಾಲ್ಕೂ ಕಡೆಗೆ ನೋಡಿದರು. ಆಗ ದೂರದಲ್ಲಿ ಒಂದು ತುಬಾಕಿಯೂ, ಒಂದು ಸತ್ತುಬಿದ್ದ ಕುರಿಯೂ, ಗಿಡದ ಮೇಲೆ ಮಂಜಿಕೆಯೂ ಅವರ ಕಣ್ಣಿಗೆ ಬಿದ್ದವು. ಇವನ್ನೆಲ್ಲ ನೋಡಿ ಅವರು ತಮ್ಮ ಮೆಹರ್ಜಾನಳ ಗತಿಯು ಹೀಗೆಯೇ ಆಯಿತೆಂದು ನಿರ್ಧರಿಸಲಾರದಾದರು. ಹುಲಿಯ ಭಯದಿಂದ ಮೆಹರ್ಜಾನಳು ಹೊಳೆಯಲ್ಲಿ ಬಿದ್ದಿರಬಹುದೆಂದು ತರ್ಕಿಸಿ, ಒಮ್ಮೆ ಅವರು ಹೊಳೆಯಲ್ಲಿ ಧುಮುಕಿ ಶೋಧಮಾಡಿದರು. ಮತ್ತೊಮ್ಮೆ ಅವರ ಮನಸ್ಸಿಗೆ, ಮೆಹರ್ಜಾನಳು ಎಲ್ಲಿಯಾದರೂ ಓಡಿಹೋಗಿರಬಹುದೆಂದು ವಿಚಾರವು ಹೊಳೆಯಿತು, ಆದರೆ ಮೆಹರ್ಜಾನಳನ್ನು ಹುಲಿಯು ಹಿಡಿದಂತೆ ಮಾತ್ರ ಅವರಿಗೆ ತೋರಲಿಲ್ಲ. ಯಾಕೆಂದರೆ ಮೆಹರ್ಜಾನಳ ಶರೀರದ ಇಲ್ಲವೆ ಶರೀರದ ಮೇಲಿನ ವಸ್ತ್ರಾಭರಣಗಳ ಗುರುತಿನ ಗಂಧವು ಸಹ ಅಲ್ಲಿ ಅವರಿಗೆ ತೋರುತ್ತಿದ್ದಿಲ್ಲ. ಹೊಳೆಯಲ್ಲಿ ಗೊತ್ತುಹತ್ತದ್ದರಿಂದ ಆಕೆಯು ಅರಣ್ಯದಲ್ಲಿ ಓಡಿಹೋಗಿ ಎಲ್ಲಿಯಾದರೂ ಅಡಗಿಕೊಂಡು ಕುಳಿತಿರಬಹುದೆಂದು ತರ್ಕಿಸಿ ಅವರು ಮೆಹರ್ಜಾನಳನ್ನು ಹೆಸರುಗೊಂಡು ಕೂಗಿ ಕೂಗಿ ಹುಡುಕಹತ್ತಿದರು. ಅಷ್ಟರಲ್ಲಿ ಕತ್ತಲೆಯಾಯಿತು ; ಮೆಹರ್ಜಾನಳ ಗೊತ್ತು ಹತ್ತಲಿಲ್ಲ. ಅತ್ತ ಅವರು ಇಳಕೊಂಡ ಸ್ಥಳದಲ್ಲಿ ಹೆಂಗಸರು ಒಂದೇ ಸಮನೆ ಆಕ್ರೋಶ ಮಾಡುತ್ತಲಿದ್ದರು. ಅವರನ್ನು ಬಿಟ್ಟು ಬಹಳ ಹೊತ್ತು ಹುಡುಕುವದು ಅವರಿಗೆ ಸರಿದೋರಲಿಲ್ಲ. ಆದ್ದರಿಂದ ಅವರು ತಾವು ಇಳಕೊಂಡ ಸ್ಥಳಕ್ಕೆ ಹೋಗಿಬಿಟ್ಟರು. ಅವರ ಸಂಗಡ ಮೆಹರ್ಜಾನಳು ಬಾರದಿರುವದನ್ನು ನೋಡಿ, ಹೆಂಗಸರು ಮತ್ತಷ್ಟು ಆಕ್ರೋಶ ಮಾಡತೊಡಗಿದರು. ಆಗ ಗಂಡಸರು ಅವರಿಗೆ ಸಿಟ್ಟುಮಾಡಿ ಸಮಾಧಾನಗೊಳಿಸಿ ಸುಮ್ಮನಿರಿಸಿದರು. ಅವರೊಳಗೆ ಮೆಹರ್ಜಾನಳ ಶೋಧದ ವಿಷಯವಾಗಿ ಬಹಳ ಚರ್ಚೆಯು ನಡೆಯಿತು. ಕೆಲವರಿಗೆ ಮೆಹರ್ಜಾನಳ ಶೋಧವಾಗುವದು ಅಶಕ್ಯವಾಗಿ ತೋರಿದ್ದರಿಂದ ಅವರು ಮುಂದಕ್ಕೆ ಸಾಗೋಣವೆಂದು ಹೇಳಿದರು. ಆದರೆ ಅವರಲ್ಲಿ ಒಬ್ಬ ದೃಢ ಸ್ವಭಾವದ ಪ್ರೌಢ ಸ್ತ್ರೀಯು-ಹಾಗೆ ಹೋಗುವದು ಸರಿಯಲ್ಲ. ನಾವು ಸಮೀಪದಲ್ಲಿರುವ ಮುದಗಲ್ಲಿಗೆ ಹೋಗಿ ಅಲ್ಲಿ ಶೋಧಮಾಡೋಣ ಹಿಂದಿನಿಂದ ಪಶ್ಚಾತ್ತಾಪ ಪಡುವದಕ್ಕಿಂತ ಈಗಲೇ ಆದಷ್ಟು ಶ್ರಮಪಟ್ಟು ಹುಡುಕುವದು ಯೋಗ್ಯವು. ಎಂದು ಹೇಳಿದಳು. ಕಡೆಗೆ ಆಕೆಯ ಮಾತೂ ಎಲ್ಲರಿಗೂ ಸಮರ್ಪಕವಾಗಿ ತೋರಿ ಅವರೆಲ್ಲರು ಮರುದಿನ ಬೆಳಗಾದಕೂಡಲೆ ಮುದಗಲ್ಲಿಗೆ ಹೋಗಿ, ಅಲ್ಲಿ ಮೆಹರ್ಜಾನಳ ಶೋಧವನ್ನು ನಡೆಸಿದರು.

ಇತ್ತ ರಾಮರಾಜನು ತನ್ನ ಆ ಸುಂದರ ತರುಣಿಯ, ಅಂದರೆ ಮೆಹರ್ಜಾನಳ ಮನೆಯವರ ಶೋಧಕ್ಕಾಗಿ ತನ್ನ ಸಂಗಡ ಒಬ್ಬ ಮನುಷ್ಯನನ್ನು ಕರಕೊಂಡು ಅವರು ಇಳಿದ ಸ್ಥಳಕ್ಕೆ ಹೊರಟನು. ರಾಮರಾಜನ ಸಂಗಡ ಬಂದ ಮನುಷ್ಯನ ಮೈಬಣ್ಣವು ಎಣ್ಣೆಯಲ್ಲಿ ಅದ್ದಿದ ನೀರಲ ಹಣ್ಣಿನಷ್ಟು ಕಪ್ಪಾಗಿತ್ತೆಂದು ಹೇಳಬಹುದು; ಆದರೆ ಆತನ ಕಣ್ಣುಗಳು ಬಹು ಹೊಳಪುಳ್ಳವಾಗಿದ್ದು, ಕೃಷ್ಣಸರ್ಪದ ಕಣ್ಣುಗಳಂತೆ ಅವು ಭಯಂಕರವಾಗಿದ್ದವು. ಅವರು ಆ ಇಳಿದ ಸ್ಥಳಕ್ಕೆ ಹೋಗಿ ಎಡಬಲದಲ್ಲಿ ವಿಚಾರಿಸಲು, ನಿನ್ನೆ ಇಲ್ಲಿ ಇಳಕೊಂಡವರು ಇಂದು ಮಂಜಾನೆ ಮುದಗಲ್ಲಿಗೆ ಹೋದರೆಂಬ ಸುದ್ದಿಯು ಹತ್ತಿತು. ಕೂಡಲೆ ಅವರು ಮುದಗಲ್ಲಿಗೆ ಬಂದು ಶೋಧಮಾಡಹತ್ತಿದರು. ರಾಮರಾಜನು ಶೋಧಮಾಡುವ ಕ್ರಮವನ್ನು ಮೊದಲೇ ಗೊತ್ತು ಮಾಡಿದ್ದನು. ಆ ಜನರನ್ನು ಮೊದಲು ದೂರದಿಂದ ನೋಡಿ ಅವರೊಳಗಿನ ಮಾರ್ಜೀನೆಯೆಂಬ ಸ್ತ್ರೀಯನ್ನು ಮಾತ್ರ ಬೇರೆ ಕರೆದು ಭೆಟ್ಟಿಯಾಗಬೇಕೆಂದು ಆತನು ತನ್ನ ಸೇವಕನಾದ ಆ ಧನಮಲ್ಲನಿಗೆ ಹೇಳಿದ್ದನು. ಧನಮಲ್ಲನು ಏನು ಹಂಚಿಕೆ ಮಾಡಿದನೋ ಏನೋ, ಆತನು ಮಾರ್ಜೀನೆಯನ್ನು ರಾಮರಾಜನ ಎದುರಿಗೆ ತಂದು ನಿಲ್ಲಿಸಿದನು. ಆಗ ರಾಮರಾಜನು ಮಾರ್ಜೀನೆಯನ್ನು ಕುರಿತು-ಮಾರ್ಜೀನೇ, ನಿನ್ನ ಮಗಳು ನೆಟ್ಟಗಿದ್ದಾಳೆ. ಆಕೆಯ ಬಳಿಗೆ ನೀನು ಹೋಗಬೇಕೆಂದು ಇಚ್ಛಿಸುತ್ತಿದ್ದರೆ, ಇಗೋ ಈ ಮನುಷ್ಯನ ಸಂಗಡ ನಡೆ. ನಿನ್ನ ಮಗಳ ಹೇಳಿಕೆಯಿಂದಲೇ ನಾವು ನಿನ್ನನ್ನು ಹುಡುಕುತ್ತಿದ್ದೆವು. ಎರಡನೆಯವರಿಗ್ಯಾರಿಗಾದರೂ ಈ ಸುದ್ದಿಯನ್ನು ನೀನು ಹೇಳಿದರೆ, ನಿನ್ನ ಮಗಳ ಉಗುರು ಸಹ ನಿನ್ನ ಕಣ್ಣಿಗೆ ಬೀಳಲಿಕ್ಕಿಲ್ಲ, ಎಂದು ಹೇಳಲು, ಆ ವೃದ್ದ ಮಾರ್ಜೀನೆಯು ರಾಮರಾಜನ ತೇಜಸ್ಸನ್ನು ನೋಡಿ ಆತನ ಮಾತುಗಳನ್ನು ಕೇಳಿ ಮೊದಲು ಬೆದರಿದಳು. ಆಮೇಲೆ ಆಕೆಯು ಸ್ವಲ್ಪ ಧೈರ್‍ಯತಾಳಿ, ಮನಸ್ಸಿನಲ್ಲಿ,-ಈ ಗೌಡ ಬಂಗಾಲೀ ವಿದ್ಯೆಯು ಏನಿರುತ್ತದೆಂಬುದನ್ನು ಒಮ್ಮೆ ನೋಡಿಬಿಡೋಣ. ನನ್ನಂಥ ವೃದ್ದ ಸ್ತ್ರೀಗೆ ಯಾರಿಂದ ಏನಾಗಬೇಕಾಗಿದೆ ? ಒಮ್ಮೆ ಮೆಹರ್ಜಾನಳು ನನ್ನ ಕಣ್ಣಿಗಾದರೂ ಬೀಳಲಿ, ಆಮೇಲೆ ನೋಡೋಣವಂತೆ, ಎಂದು ಯೋಚಿಸಿ,- “ನಾನು ಈ ಕರಿಯ ಮನುಷ್ಯನ ಕೂಡ ಹೋಗುವೆನು” ಎಂದು ರಾಮರಾಜನಿಗೆ ಹೇಳಿದಳು. ಆಗ ರಾಮರಾಜನು-ಈ ಕರಿಯ ಮನುಷ್ಯನು ಮೂಕನಿರುತ್ತಾನೆ. ಈತನಿಗೆ ಮಾತಾಡಲಿಕ್ಕೆ ಬರುವುದಿಲ್ಲ: ಈತನ ಹೆಸರು ಧನಮಲ್ಲ ಎಂದು ಹೇಳಿ, ಕೂಡಲೆ ಎರಡು ಕುದುರೆಗಳನ್ನು ತಂದು ನಿಲ್ಲಿಸಲು, ಒಂದರ ಮೇಲೆ ಮಾರ್ಜೀನೆಯೂ, ಮತ್ತೊಂದರ ಮೇಲೆ ಧನಮಲ್ಲನೂ ಕುಳಿತುಕೊಂಡು ನಡೆದರು. ಧನಮಲ್ಲನು ಮೂರು ಸಂಜೆಗೆ ಮಾರ್ಜೀನೆಯನ್ನು ಕುಂಜವನಕ್ಕೆ ಮುಟ್ಟಿಸಿದನು. ಅಲ್ಲಿ ರಾಮರಾಜನು ಅವರಿಗೆ ಭೇಟ್ಟಿಯಾಗಲು, ಅವರು ಮೂವರು ಕೂಡಿ ಮೆಹರ್ಜಾನಳಿರುವ ಮಂದಿರವನ್ನು ಹೊಕ್ಕರು.

ಆಗ ಮೆಹರ್ಜಾನಳು, ಬಗೆಬಗೆಯಾಗಿ ಆಲೋಚಿಸುತ್ತ ಕುಳಿತುಕೊಂಡಿದ್ದಳು, ಅಷ್ಟರಲ್ಲಿ, ರಾಮರಾಜನು ತಾನು ಆಡಿದಂತೆ ಮಾರ್ಜೀನೆಯನ್ನು ಕರಕೊಂಡು ಬಂದದ್ದನ್ನು ನೋಡಿ ಆ ಸುಂದರಿಯು ಸಂತೋಷಪಟ್ಟಳು. ರಾಮರಾಜನ ಸೌಂದರ್ಯದ ವಿಷಯವಾಗಿ ಆಕೆಯಲ್ಲಿ ಆದರವು ಉತ್ಪನ್ನವಾಯಿತು. ಇದನ್ನು ಚಾಣಾಕ್ಷನಾದ ರಾಮರಾಜನು ಅರಿತು. ಆಕೆಯನ್ನು ಕುರಿತು ಫಾರ್ಸಿ ಭಾಷೆಯಿಂದ-ನನ್ನ ಕೆಲಸವಾಯಿತು. ಅಪ್ಪಣೆಯಂತೆ ನಡೆದುಕೊಂಡಿದ್ದೇನೆ. ಎಂದು ಹೇಳಿದನು. ಆಗ ರಾಮರಾಜನ ಮೇಲೆ ಮನಸ್ಸು ಕೂತಿದ್ದ ಮೆಹರ್ಜಾನಳ ಇಚ್ಛೆಯಿಲ್ಲದಿದ್ದರೂ, ಆಕೆಯ ಕಟಾಕ್ಷವು ರಾಮರಾಜನ ಮೇಲೆ ಧುಮುಕಿ ಆತನನ್ನು ಗಾಸಿಗೊಳಿಸಿತು. ಕೂಡಲೆ ಆಕೆಯ ಮುಗುಳು ನಗೆಯು ಪಳಕ್ಕನೆ ಮಿಂಚಿ, ಮೊದಲೇ ಗಾಸಿಯಾಗಿದ್ದ ರಾಮರಾಜನ ಹೃದಯವನ್ನು ಜುಮ್ಮೆಂದು ನಡುಗಿಸಿತು ! ಹೀಗೆ ಕಂಪಿತ ಹೃದಯದ ರಾಮರಾಜನು ಏನೋ ಒಂದು ಕೆಲಸದ ನೆವದಿಂದ ಹೊರಗೆ ಹೋಗುವವನಂತೆ ಅಲ್ಲಿಂದ ಹೊರಟುಹೋದನು. ಆಗ ವೃದ್ದ ಮಾರ್ಜೀನೆಯು ಆ ತರುಣ ತರುಣಿಯರ ಪ್ರೇಮಬಂಧನ ನಾಟಕದ ಈ ಪ್ರಥಮಾಂಕವನ್ನು ನೋಡಿ ಆಶ್ಚರ್‍ಯಪಟ್ಟಳು. ಒಂದೆಂದರೆ ಒಂದೇ ದಿವಸದಲ್ಲಿ ಆದ ಸಹವಾಸದಿಂದ ಆ ಇಬ್ಬರು ತರುಣಿವಾರ ರಸೈಕ್ಯದ ಆರಂಭವಾದದ್ದನ್ನು ನೋಡಿ ಆಕೆಗೆ ಸಮಾಧಾನವಾಗಲಿಲ್ಲ. ಪ್ರೇಮಬಂಧನದಲ್ಲಿ ಇಷ್ಟು ಆತುರವು ಕೆಲಸದ್ದಲ್ಲವೆಂದು ಆಕೆಗೆ ತೋರಿದ್ದು ಸಹಜವು. ಕುಲೀನ ಮುಸಲ್ಮಾನ ಮನೆತನದ ಮೆಹರ್ಜಾನಳು ತಿರಸ್ಕರಣೀಯವಾದ ಹಿಂದುವನ್ನು ಹೀಗೆ ಪ್ರೀತಿಸಹತ್ತಿದ ಕಾರಣವು ತಿಳಿಯದಾಯಿತು. ಆಕೆಯು ಮೆಹರ್ಜಾನಳನ್ನು ಕುರಿತು-ಬೇಟಾ, ಮೆಹರ್ಜಾನ, ಕಾಫರರೆನಿಸುವ ಹಿಂದೂ ಜನರು ಮುಸಲ್ಮಾನ ಕುಲೀನ ಸ್ತ್ರೀಯರ ಪ್ರೀತಿಗೆ ಪಾತ್ರರಾಗುವ ಕೌತುಕದ ಸಂಗತಿಯನ್ನು ನಾನು ಕೇಳಿರುವೆನು ; ಆದರೆ ಇದು ನಿನಗೆ ನಿಜವಾಗಿ ತೋರುವುದೋ ? ನಮ್ಮೆಲ್ಲರನ್ನು ಅಗಲಿ ನೀನು ಇಲ್ಲಿಗೆ ಹೇಗೆ ಬಂದೆ ? ನಿನ್ನ ಎಲ್ಲ ಪರಿವಾರವನ್ನು ಬಿಟ್ಟು ನನ್ನೊಬ್ಬಳನ್ನೇ ನೀನು ಕರೆಸಿದ ಕಾರಣವೇನು ? ನನಗೆ ಆ ತರುಣ ಹಿಂದುವು ಭೆಟ್ಟಿಯಾದಾಗಿನಿಂದ ಇಲ್ಲಿಯವರೆಗೆ ನಡೆದ ವಿಲಕ್ಷಣ ಸಂಗತಿಗಳ ಮೇಲಿಂದ ನನ್ನ ಮನಸ್ಸಿನಲ್ಲಿ ಇಲ್ಲದ ಕಲ್ಪನೆಗಳು ಬರುತ್ತಿವೆ. ಆದರೆ ಭೇಟಾ ಮೆಹರ್ಜಾನ, ನೀನು ನನಗೆ ಹೊಟ್ಟೆಯ ಮಗಳಿಗಿಂತಲೂ ಪ್ರಿಯಳಾಗಿರುತ್ತೀ. ನಡೆದ ಸಂಗತಿಯನ್ನು ಮರೆಮಾಚದೆ ಹೇಳು. ಎಂದು ನುಡಿಯಲು, ಮೆಹರ್ಜಾನಳು ಮೊದಲಿನಿಂದ ಕಡೆತನಕ ನಡೆದ ಯಾವತ್ತು ಸಂಗತಿಗಳನ್ನು ಮಾರ್ಜಿನೆಯ ಮುಂದೆ ಹೇಳಿದಳು. ಅದನ್ನು ಕೇಳಿ ಮಾರ್ಜಿನೆಯು ರಾಮರಾಜನ ಸದ್ಗುಣ-ಸೌಜನ್ಯಗಳಿಗಾಗಿ ಕೆಲಮಟ್ಟಿಗೆ ಸಮಾಧಾನಪಟ್ಟರೂ, ಆ ತರುಣನು ಪಾಪಪುಣ್ಯದ ಭಯವಿಲ್ಲದೆ, ಹಿಂದೂ ಜನರ ಶೀಲಕ್ಕೆ ವಿರುದ್ದವಾಗಿ ಯವನ ತರುಣಿಯನ್ನು ಬಲಾತ್ಕಾರದಿಂದ ಅಪಹರಿಸಿದ್ದನ್ನು ಸ್ಮರಿಸಿ, ತರುಣನ ಮನಸಿನ ಪವಿತ್ರತೆಯ ವಿಷಯವಾಗಿ ಆಕೆಯು ಶಂಕಿಸಿದಳು ; ಆದರೆ ಹಾಗೆ ತಾನು ಶಂಕಿಸಿದ ಲಕ್ಷಣವನ್ನು ಮಾತ್ರ ಹೊರಗೆ ತೋರಗೊಡದೆ, ಆಕೆಯು ಮೆಹರ್ಜಾಣಳಿಗೆ-ಬೇಟಾ ಮೆಹರ್ಜಾನ, ಸರ್ಮಾಧಾನತಾಳು ನಾನು ರಾಮರಾಜನನ್ನು ಏಕಾಂತದಲ್ಲಿ ಕಂಡು, ಆಮೇಲೆ ನಿನಗೆ ಹೇಳುವೆನು. ಅಲ್ಲಿಯವರೆಗೆ ನಿನ್ನ ಹೃದಯದ ಗಾಂಭೀರ್ಯವನ್ನು ಕಳಕೊಳ್ಳಬೇಡ. ಎಂದು ಹೇಳಿದಳು!

ತರುಣನಾದ ರಾಮರಾಜನು ಮೆಹರ್ಜಾನಳ ಮನಸ್ಸನ್ನು ಒಲಿಸಿಕೊಳ್ಳುವುದಕ್ಕಾಗಿ ಅತ್ಯಂತ ಆತುರನಾಗಿದ್ದನು. ಮಾರ್ಜೀನೆಯನ್ನು ಒಡಂಬಡಿಸಿದರೆ ತನ್ನ ಕಾರ್‍ಯವು ಅನಾಯಾಸವಾಗಿ ಆಗುವುದೆಂದು ತಿಳಿದು ಆತನು ಏಕಾಂತದಲ್ಲಿ ಆಕೆಯನ್ನು ಕರೆಸಿಕೊಂಡನು. ಹೀಗೆ ಅವನು ತನ್ನನ್ನು ಕರೆಸಿಕೊಳ್ಳಬಹುದೆಂದು ಮಾರ್ಜೀನೆಯು ಮೊದಲೇ ತರ್ಕಿಸಿದ್ದಳು. ರಾಮರಾಜನು ತಟ್ಟನೆ ಮಾರ್ಜೀನೆಯನ್ನು ಕುರಿತು ಮಾರ್ಜೀನೆ, ಮೆಹರ್ಜಾನಳು ನಡೆದ ಸಂಗತಿಯನ್ನೆಲ್ಲ ನಿನ್ನ ಮುಂದೆ ಹೇಳಿರಬಹುದು. ಆಕೆಗೆ ನನ್ನ ಹೃದಯವನ್ನು ಒಪ್ಪಿಸಿರುವೆನು. ಆಕೆಯ ಹೊರತು ನನ್ನ ಪ್ರಾಣವು ನಿಲ್ಲುವ ಹಾಗಿಲ್ಲ. ಆಕೆಯ ಸಲುವಾಗಿ ನನ್ನ ಪ್ರಾಣವನ್ನು ಗಂಡಾಂತರಕ್ಕೆ ಗುರಿಮಾಡಿ ಪಾರಾಗಿರುವೆನು : ಆದ್ದರಿಂದ ಮೆಹರ್ಜಾನಳು ನನ್ನ ಪ್ರತಾಪದ ಫಲವಾಗಿರುವಳು. ಮಾರ್ಜೀನೇ ನೀನೇ ಹೇಳು ; ಮುಸಲ್ಮಾನರು ಬಹುಜನ ಹಿಂದೂ ಕುಲೀನ ತರುಣಿಯರನ್ನು ಅಪಹರಿಸಿ, ಸರ್ವಸಾಧಾರಣ ಸ್ತ್ರೀಯರಂತೆ ಅವರನ್ನು ನಡೆಸಿಕೊಳ್ಳುತ್ತಿರಲು, ನಾನು ಮೆಹರ್ಜಾನಳನ್ನು ಪ್ರಾಣೇಶ್ವರಿಯೆಂದು ಸ್ವೀಕರಿಸಿ ಜನ್ಮವಿರುವತನಕ ಆಕೆಯನ್ನು ಪ್ರಾಣೇಶ್ವರಿಯೆಂತಲೇ ಭಾವಿಸಿ ನಡೆದುಕೊಂಡರೆ ತಪ್ಪೇನು ? ಯಾವ ಮುಸಲ್ಮಾನ ಸರದಾರನು ಹಿಂದೂ ತರುಣಿಯರನ್ನು ಅಪಹರಿಸುವ ವಿಷಯದಲ್ಲಿ ಇಷ್ಟು ಸೌಜನ್ಯವನ್ನು ತೋರಿಸಿರಬಹುದು ? ಬಲಾತ್ಕಾರದಿಂದ ನಿಜವಾದ ಪ್ರೇಮೋದಯವಾಗದು ; ಆದ್ದರಿಂದ ಸ್ವಸಂತೋಷದಿಂದಲೇ ಮೆಹರ್ಜಾನಳು ನನ್ನ ಮನೋದಯವನ್ನು ಪೂರ್ಣ ಮಾಡುವಂತೆ ನೀನು ಯತ್ನಿಸತಕ್ಕದ್ದು. ಎಂದು ಬಡಬಡ ಮಾತಾಡಿ ಬಿಡಲು, ಮಾರ್ಜೀನೆಯು ಮುಗುಳುನಗೆ ನಗುತ್ತ-ಮಹಾರಾಜ, ನಿಮ್ಮ ಸೌಜನ್ಯವನ್ನೂ ಸದ್ಗುಣವನ್ನೂ ಮೆಹರ್ಜಾನಳು ನನ್ನ ಮುಂದೆ ವರ್ಣಿಸಿದ್ದಾಳೆ. ನೀವಂತೂ ಆಕೆಯನ್ನು ಪ್ರಾಣೇಶ್ವರಿಯ ಪದವಿಗೇರಿಸಿ, ಆಕೆಗಿಂತ ಒಂದು ಹೆಜ್ಜೆಯನ್ನು ಮುಂದಕ್ಕೆ ಇಟ್ಟಿರುತ್ತೀರಿ. ನೀವಿಬ್ಬರೂ ತರುಣರಿರುವದರಿಂದ ಒಂದೆರಡು ದಿನದ ಸಹವಾಸದಲ್ಲಿ ಪರಸ್ಪರರ ವಿಷಯವಾಗಿ ನೀವು ವಹಿಸಿದ ಸದಭಿಪ್ರಾಯದ ಬಗ್ಗೆ ನನಗೆ ಸಂಶಯವು ಉತ್ಪನ್ನವಾಗುತ್ತದೆ. ಕನ್ನಡ ವೀರರೇ, ನಿಜವಾದ ಪ್ರೇಮವು ಬಹುಜನರ ಹೃದಯದಲ್ಲಿ ಅವರ ಜನ್ಮದೊಳಗೆ ಉದಯವಾಗುತ್ತಿರುವುದಿಲ್ಲ. ಅಂಥ ಪ್ರೇಮವು ಸುದೈವದಿಂದ ನಿಮ್ಮಬ್ಬರ ಹೃದಯದಲ್ಲಿರದಿದ್ದರೆ, ಅದನ್ನು ಅಯೋಗ್ಯ ಸ್ಥಾನದಲ್ಲಿಟ್ಟು ನೀವಿಬ್ಬರೂ ಹಿಂದಿನಿಂದ ಪಶ್ಚಾತ್ತಾಪ ಪಡಬೇಡಿರೆಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಮಹಾರಾಜ ಮೆಹರ್ಜಾನಳು ಅಬಲೆಯು, ಮೇಲೆ ಅಪ್ರಬುದ್ಧಳೂ ವ್ಯವಹಾರ ಜ್ಞಾನವಂತು ಆಕೆಗೆ ಇರುವುದೇ ಇಲ್ಲ. ಆಕೆಯು ಬೆಳ್ಳಗಿದ್ದದ್ದನ್ನೆಲ್ಲ ಹಾಲೆಂದು ತಿಳಿಯುವಳು ಆದರೆ ನಿಮ್ಮ ಮಾತು ಹಾಗಲ್ಲ. ನೀವು ಪುರುಷರು, ಮೇಲೆ ಪ್ರಬುದ್ಧರು : ಚಿಕ್ಕಂದಿನಲ್ಲಿ ಓದಿ ಬರೆದು, ಪ್ರಾಯದಲ್ಲಿ ರಾಜಕಾರಣಾದಿ ಕಾರಣಗಳಿಂದ ವ್ಯವಹಾರ ಜ್ಞಾನವನ್ನು ಪಡೆದವರು. ಅಂದಬಳಿಕ ಯೋಗ್ಯಾಯೋಗ್ಯಗಳ ವಿಚಾರವನ್ನು ನೀವು ಸಮಾಧಾನದಿಂದ ಮಾಡತಕ್ಕದ್ದು; ಹೀಗಿರಲು, ವಿವಾಹ ವಿಷಯದಲ್ಲಿ ಅತ್ಯಂತ ಅವಶ್ಯವಾಗಿರುವ ಸಾವಧಾನವನ್ನು ತಾಳದೆ, ಮೆಹರ್ಜಾನಳಿಗಿಂತಲೂ ನೀವು ಚಂಚಲರಾಗಿರುವಿರಲ್ಲ ! ನೀವು ಹಿಂದುಗಳು: ಮೆಹರ್ಜಾಣಳು ಮುಸಲ್ಮಾನಳು. ನಿಮ್ಮಿಬ್ಬರ ವಿವಾಹವಾಗಬೇಕಾದಲ್ಲಿ ನಿಮ್ಮ ಧರ್ಮದಂತೆ ನೀವು ಮೆಹರ್ಜಾನಳನ್ನು ಹಿಂದುವಾಗಿ ಮಾಡಿಕೊಳ್ಳಬೇಕಾಯಿತಲ್ಲವೆ ? ಇದು ತೀರ ಆವಶ್ಯಕವಾಗಿರುವುದಿಲ್ಲ? ಅದೂ ಇರಲಿ, ಧರ್ಮಾಧರ್ಮದ ಮಾತು ಒತ್ತಟ್ಟಿಗಿಟ್ಟು ಸ್ವಾಭಾವಿಕ ಪ್ರೇಮದಿಂದ ಮೆಹರ್ಜಾನಳ ಕೈ ಹಿಡಿಯುತ್ತೇನೆಂದು ನೀವು ಅನ್ನುತ್ತಿದ್ದರೆ : ನಿಮ್ಮ ವಿಷಯವಾಗಿ ಮೆಹರ್ಜಾನಳಲ್ಲಿ ಸ್ವಭಾವಿಕವಾದ ಪ್ರೇಮವು ಎಲ್ಲಿರುತ್ತದೆ ? ಸ್ವಾಭಾವಿಕ ಪ್ರೇಮವೆಂದರೆ, ರೂಪ, ಯೌವನ, ಐಶ್ವರ್ಯ, ಅಧಿಕಾರ, ಕೃತಜ್ಞತೆ ಮುಂತಾದ ಬಾಹ್ಯ ಕಾರಣಗಳೇನೂ ಇಲ್ಲದೆ ತಾನಾಗಿ ಉಂಟಾಗುವ ಪ್ರೇಮವು! ಇಂಥ ಹೊರಗಿನ ಕಾರಣಗಳಿಂದುಂಟಾಗುವ ಸಹೇತುಕ ಪ್ರೇಮಕ್ಕಿಂತ ಸ್ವಾಭಾವಿಕ ಪ್ರೇಮದ, ಅಂದರೆ ನಿರ್ಹೇತುಕ ಪ್ರೇಮದ ಯೋಗ್ಯತೆಯು ಹೆಚ್ಚಿನದು; ಯಾಕೆಂದರೆ, ಸೌಂದರ್ಯಾದಿ ಕಾರಣಗಳಿಂದುಂಟಾದ ಪ್ರೇಮವು, ಕಾರಣಗಳು ನಷ್ಟವಾದ ಕೂಡಲೆ ನಷ್ಟವಾಗುತ್ತದೆ; ಆದರೆ ಸ್ವಾಭಾವಿಕ ಪ್ರೇಮವು ಹಾಗೆ ನಷ್ಟವಾಗುವುದಿಲ್ಲ. ಈ ಸ್ವಾಭಾವಿಕ ಪ್ರೇಮಕ್ಕೆ ಉದಾಹರಣವನ್ನು ಕೊಡುವದು ನನಗಂತು ಶಕ್ಯವಿಲ್ಲ. ಸತ್ಪುರುಷರು ಮಾತ್ರ ಜಗತ್ತಿನ ಮೇಲೆ ಇಂಥ ಪ್ರೇಮ ಮಾಡುವರೆಂದು ತಿಳಿದಿರುವೆನು.

ಮಹಾರಾಜ ಈ ಜಗತ್ತಿನಲ್ಲಿರುವ ದಂಪತಿಗಳು ವಿವಾಹವೆಂಬ ಕಾರಣದಿಂದ ಪ್ರೇಮವನ್ನು ಸಂಪಾದಿಸಿ, ಆ ಕಾರಣವು, ಅಂದರೆ ವೈವಾಹಿಕ ಬಂಧನವು ಸ್ಥಿರವಾಗಿರುವವರೆಗೆ ಒತ್ತಾಯದಿಂದಾದರೂ ಪರಸ್ಪರ ಪ್ರೇಮವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನಿಮ್ಮ ಹಿಂದುಗಳಲ್ಲಿ ಬ್ರಾಹ್ಮಣರೊಳಗೆ ವೈವಾಹಿಕ ಬಂಧನವು ಮರಣಪರ್ಯಂತರ ದೃಢವಾಗಿರುವುದರಿಂದ ಬ್ರಾಹ್ಮಣ ದಂಪತಿಗಳು ಪರಸ್ಪರ ಪ್ರೇಮವನ್ನು ಮರಣಪರ್ಯಂತರ ಕಾಯ್ದುಕೊಳ್ಳುವುದು ಹೆಚ್ಚು. ಆದರೆ ವೈವಾಹಿಕ ಬಂಧನವು ಶಿಥಿಲವಾಗಿರುವ ಜನರಲ್ಲಿ ಹೀಗೆ ಆ ದಂಪತಿಗಳ ಪ್ರೇಮವು ಸ್ಥಿರವಾದದ್ದು ಕಂಡುಬರುವದು ಕಡಿಮೆ. ಆದ್ದರಿಂದ ಪ್ರೇಮದ ಉತ್ಪತ್ತಿಗೆ ಸೌಂದರ್‍ಯಾದಿ ಬೇರೆ ಕಾರಣಗಳಿಗಿಂತ ವಿವಾಹವೆಂಬ ಕಾರಣವು, ಅತ್ಯಂತ ಪವಿತ್ರವಾದ ಕಾರಣದಿಂದಲೇ ವಿವಾಹಪದ್ಧತಿಯು ಸುಧಾರಿಸಿದ ಜನಾಂಗಗಳಿಗೆಲ್ಲ ಮಾನ್ಯವಾಗಿರುತ್ತದೆ. ಅಂಥ ಪವಿತ್ರ ವೈವಾಹಿಕ ಬಂಧನಕ್ಕೆ ವಿಧರ್ಮಿಗಳಾದ ನೀವಿಬ್ಬರು ಅಯೋಗ್ಯರಾಗಿರುವದರಿಂದ, ನೀವಿಬ್ಬರೂ ಈ ಹಾದಿಯನ್ನು ಬಿಡಬೇಕೆಂದು ನಾನು ಸ್ಪಷ್ಟವಾಗಿ ಹೇಳುವೆನು. ಮೆಹರ್ಜಾನಳು ನಿಮ್ಮ ವಿಷಯದ ಕೃತಜ್ಞತೆ. ನಿಮ್ಮ ಸುಸ್ವರೂಪ, ಸೌಜನ್ಯ-ಸದ್ಗುಣ, ತಾರುಣ್ಯ ಇವುಗಳ ಮೂಲಕ ನಿಮ್ಮನ್ನು ಪ್ರೀತಿಸುವಳಲ್ಲದೆ, ನಿಮ್ಮ ವಿಷಯದ ಸ್ವಾಭಾವಿಕ ಪ್ರೇಮವು ಆಕೆಯಲ್ಲಿರುವುದಿಲ್ಲ. ಹಿಂದುವಾದ ನಿಮ್ಮನ್ನು ಅಂಗೀಕರಿಸಲಿಕ್ಕೆ ಆ ಯವನ ತರುಣಿಯು ಮನಃಪೂರ್ವಕವಾಗಿ ಅಸಮ್ಮತಿಸಿದಳು. ಇನ್ನು ಆಕೆಯು ನಿಮ್ಮ ಕೈಯಲ್ಲಿ ಸಿಕ್ಕಿರುವುದರಿಂದ ನೀವು ಬೇಕಾದದ್ದು ಮಾಡಬಹುದು. ಪ್ರಸಂಗವಶಾತ್ ನೀವು ಆಕೆಯ ವಿಷಯವಾಗಿ ಕೃತಘ್ನರಾದರೆ ಅಥವಾ ಸೌಜನ್ಯ-ಸದ್ಗಣಗಳನ್ನು ಕಳೆದುಕೊಂಡರೆ, ಬಹಳ ಹೇಳುವದೇನು, ನೀವು ಮದುಕರಾದರೆ ಸಹ ಆಕೆಯ ಪ್ರೇಮವು ನಿಮ್ಮ ಮೇಲೆ ಉಳಿಯುವುದೋ ಇಲ್ಲವೋ ನಾನು ಹೇಳಲಾರೆನು! ಯಾಕೆಂದರೆ ವೈವಾಹಿಕ ಬಂಧನವಿಲ್ಲದ ನಿಮ್ಮ ಪ್ರೇಮದ ಐಕ್ಯಕ್ಕೆ ವ್ಯಭಿಚಾರದ ದೋಷವು ತಟ್ಟುವುದರಿಂದ, ನೀವಿಬ್ಬರೂ ಜಗತ್ತಿನಲ್ಲಿ ಅಪಕೀರ್ತಿಗೂ, ದುಃಖಕ್ಕೂ ಕಾರಣರಾದೀರಿ ! ಮಹಾರಾಜ, ಸ್ವಲ್ಪ ವಿಚಾರ ಮಾಡಿರಿ. ಮೆಹರ್ಜಾನಳು ನಿಮ್ಮ ಸೌಜನ್ಯ-ಸದ್ಗುಣಗಳ ಅನುಭವವನ್ನು ನಿಮ್ಮ ಕೃತಿಯಿಂದ ಸದ್ಯದ ಮಟ್ಟಿಗಾದರೂ ಪಡೆದಿರುವಳು; ಆದರೆ ಆಕೆಯ ತಾರುಣ್ಯ ಸೌಂದರ್ಯಗಳ ಹೊರತು ಆಕೆಯ ಗುಣಗಳನ್ನು ನೀವೇನು ತಿಳಿದಿರುವಿರಿ ? ಅಂದ ಬಳಿಕ ಕೇವಲ ತಾರುಣ್ಯ-ಸೌಂದರ್ಯಗಳಿಗೆ ಮರುಳಾದ ನೀವು ಮೆಹರ್ಜಾನಳಿಗಿಂತ ಸುಂದರಿಯೂ, ತರುಣಿಯೂ ಆದ ಮತ್ತೊಬ್ಬ ಸ್ತ್ರೀಯು ಲಭಿಸಿದಾಗ, ಮೆಹರ್ಜಾನಳನ್ನು ನೀವು ನಿಶ್ಚಯವಾಗಿ ನಿರಾಕರಿಸುವಿರಿ ! ಹೀಗಿರಲು, ನಿಮ್ಮ ವಿಚಾರವು ಯೋಗ್ಯವೆಂದು ನಾನು ಹ್ಯಾಗೆ ಒಪ್ಪಿಕೊಳ್ಳಲಿ ! ಮೆಹರ್ಜಾನಳು ಹೊಟ್ಟೆಯ ಮಗಳಿಗಿಂತಲೂ ನನಗೆ ಹೆಚ್ಚಿನವಳಲ್ಲವೇ ? ಮುಸಲ್ಮಾನರು ಹಿಂದೂ ತರುಣಿಯರನ್ನು ಅಪಹರಿಸಿದರೆಂದು ನೀವು ಹೇಳುತ್ತೀರಿ ; ಆದರೆ ಧರ್ಮಿಷ್ಠರಾದ ಯಾವ ಮುಸಲ್ಮಾನರೂ ಅದನ್ನು ನೀತಿಯೆಂದು ಭಾವಿಸುವುದಿಲ್ಲ? ಹೀಗಿರಲು, ಸಗಣಿಯನ್ನು ಸಗಣಿಯಿಂದ ತೊಳೆದು ಶುದ್ಧ ಮಾಡಲಿಕ್ಕೆ ಹೋಗುವವರ ಹಾಗೆ ನೀವು ಈಗ ಮಾಡಬಾರದು. ನೀವು ಕೊಟ್ಟ ಮುಸಲ್ಮಾನರ ನೀಚ ಕೃತಿಯ ಉದಾಹರಣೆಯನ್ನು ನಾನು ಕಿವಿಯಿಂದ ಕೂಡ ಕೇಳಲಾರೆನು! ಮಹಾರಾಜ, ಕೈಯಲ್ಲಿ ಕಡ್ಡಿಯನ್ನು ಕೊಟ್ಟು ಹೇಳುತ್ತೇನೆ ! ಮೆಹರ್ಜಾನಳ ಹೃದಯವನ್ನು ಪರೀಕ್ಷಿಸದೆ ಆಕೆಯನ್ನು ನಿಮ್ಮ ಪ್ರಾಣೇಶ್ವರಿಯನ್ನಾಗಿ ಸರ್ವಥಾ ಮಾಡಿಕೊಳ್ಳಬೇಡಿರಿ, ಪಠಾಣರು ಪ್ರಸಂಗಬಂದರೆ ಕೃಷ್ಣಸರ್ಪಕ್ಕೆ ಸಮಾನರು; ಆದ್ದರಿಂದ ಮೆಹರ್ಜಾನಳನ್ನು ಕೃಷ್ಣಸರ್ಪವೆಂದು ಭಾವಿಸಿರಿ. ಪ್ರಸಂಗದಲ್ಲಿ ನೀವು ಕೃತಘ್ನರಾದರೆ ಆಕೆಯು ಎಂದಿಗೂ ಡಂಕು ಬಿಡಲಿಕ್ಕಿಲ್ಲ ! ಮಹಾರಾಜರೆದುರಿನಲ್ಲಿ ಇಷ್ಟು ಮಾತಾಡುವ ಯೋಗ್ಯತೆಯು ನನ್ನದಲ್ಲ ; ಯಾರೊ ನಿಮ್ಮ ಗುರುಗಳೇ ನನ್ನ ಮುಖದಿಂದ ಈ ಮಾತುಗಳನ್ನು ಆಡಿಸುತ್ತಾರೆಂದು ತಿಳಿದು, ನನ್ನನ್ನು ಕ್ಷಮಿಸಿರಿ !

ಈ ಮೇರೆಗೆ ಮಾರ್ಜೀನೆಯು ತತ್ವಜ್ಞಾನಿಯಂತೆ ಪ್ರೇಮದ ಸ್ವರೂಪವನ್ನು ಅಸ್ಖಲಿತವಾಗಿ ಪ್ರತಿಪಾದಿಸಿದ್ದನ್ನು ನೋಡಿ ರಾಮರಾಜನು ಬೆರಗಾದನು. ಆತನು ಪಿಟ್ಟೆಂದು ಮಾತಾಡದೆ ಮಾರ್ಜೀನೆಯನ್ನು ಎವೆಯಿಕ್ಕದೆ ನೋಡಹತ್ತಿದನು. "ಯಾರೊ ನಿಮ್ಮ ಪೂಜ್ಯ ಗುರುಗಳೇ ನನ್ನ ಮುಖದಿಂದ ಈ ಮಾತುಗಳನ್ನು ಆಡಿಸುತ್ತಾರೆಂದು ತಿಳಿಯಿರಿ" ಎಂದು ಆಕೆಯು ಆಡಿದ ಮಾತುಗಳನ್ನು ಕೇಳಿ, ಆತನಿಗೆ ನನ್ನ ಸದ್ಗುರುಗಳ ನೆನಪಾಯಿತು. ಔಪಚಾರಿಕವೇ ಆಗಲೊಲ್ಲದೇಕೆ, ಸಮಾಗಮ ಮಾಡಿದ ರಾಮರಾಜನಿಗೆ ಮಾರ್ಜೀನೆಯ ಉಪದೇಶವು ಸಮರ್ಪಕವಾಗಿ ತೋರಿತು ಇನ್ನು ಮೇಲೆ ಮೆಹರ್ಜಾನಳ ಗೊಡವೆಗೆ ಹೋಗದೆ, ಮಾರ್ಜೀನೆಯೊಡನೆ ಆಕೆಯನ್ನು ಆಕೆಯ ಬಳಗದವರ ಬಳಿಗೆ ಕಳಿಸಿಬಿಡಬೇಕೆಂದು ಆತನು ಮಾಡಿದನು ಮತ್ತು ಮಾರ್ಜೀನೆಯ ಮುಂದೆ ಹಾಗೆ ತಟ್ಟನೆ ನುಡಿಯಬೇಕೆನ್ನುತ್ತಿದ್ದನು. ಅಷ್ಟರಲ್ಲಿ ಮೆಹರ್ಜಾನಳ ಸುಂದರ ರೂಪವು ಆತನ ಕಣ್ಣಿಗೆ ಕಟ್ಟಿ, ಆತನ ಮನಸ್ಸು ಚಂಚಲವಾಯಿತು. ತಾನು ಮೆಹರ್ಜಾನಳನ್ನು ಕುದುರೆಯ ಮೇಲೆ ಅಡ್ಡಹಾಕಿಕೊಂಡು ಬರುವಾಗ ತನ್ನ ಶರೀರಕ್ಕಾದ ಆಕೆಯ ಸುಖಸ್ಪರ್ಶದ ಸ್ಮರಣವೂ, ಆಕೆಯ ಸುಂದರವಾದ ಅವಯವಗಳ ದರ್ಶನದಿಂದಾದ ಆನಂದದ ಸ್ಮರಣವೂ, ಆಕೆಯ ಕುಂಜವನಕ್ಕೆ ಬಂದಬಳಿಕ ತನ್ನ ಮಾತಿಗೆ ಅರ್ಧಮರ್ಧ ಒಪ್ಪಿಕೊಂಡಂತೆ ಮಾಡಿದ್ದರ ನೆನಪೂ ಆತನಿಗಾಗಿ, ಆತನ ಚಂಚಲ ಮನಸ್ಸು ದೂಷಿತವಾಗುತ್ತಾಗುತ್ತ ಕಡೆಗೆ ಅದರೊಳಗಿನ ವಿವೇಕವು ನಷ್ಟವಾಗಹತ್ತಿತ್ತು. ಪ್ರಿಯ ವಾಚಕರೇ "ಬಲವಾನಿಂದ್ರಿಯಗ್ರಾಮೋ ವಿದ್ವಾಂಸಮಪಿ ಕರ್ಷತಿ" ಎಂಬ ಮಹಾತ್ಮರ ಉಕ್ತಿಯಂತೆ ಇಂದ್ರಿಯಗಳ ಸಮೂಹವು ವಿದ್ವಂಸನನ್ನಾದರೂ [ವಿದ್ವಾಂಸನ ಮನಸ್ಸನ್ನಾದರೂ] ಜಗ್ಗಿಕೊಳ್ಳುತ್ತದೆಂಬ ಮಾತು ಸುಳ್ಳಲ್ಲ. ತುಂಬಿ ಹೊರಸೂಸುವ ಪ್ರಾಯದ ಸೊಕ್ಕಿನಲ್ಲಿ ನಾವು ಮನಸ್ಸಿಗೆ ಹೊರಚಾಳಿಯನ್ನು ಒಮ್ಮೆ ಹಚ್ಚಿಬಿಟ್ಟರೆ, ಆ ಖೋಡಿ ಮನ್ನಸ್ಸು ಅಸುಗೊಳ್ಳದೆ, ತಕ್ಕ ಪ್ರಸಂಗ ಒದಗಿದಾಗೆಲ್ಲ ನಮ್ಮನ್ನು ಎಳೆದೆಳೆದು ಗಾಸಿಮಾಡುತ್ತದೆಂಬುದನ್ನು ಪ್ರಾಯಸ್ಥರಾದ ನಿಮ್ಮಲ್ಲಿ ಬಹುಜನರು ಮನಸ್ಸಿನಲ್ಲಿಯಾದರೂ ಒಪ್ಪಿಕೊಳ್ಳಬಹುದೆಂದು ಅನುಭವದಿಂದ ಹೇಳಬಹುದಾಗಿದೆ ! ಆದ್ದರಿಂದ ಪರನಾರೀ ಸೋದರರಾಗುವಂತೆ ಪ್ರತಿಯೊಬ್ಬ ತರುಣನೂ ಅವರ ಹಿತಚಿಂತಕರು ಮೊದಲೇ ಜಾಗರೂಕರಾಗಿ ಅತ್ಯಂತ ನಿಗ್ರಹದಿಂದ ಆಚರಿಸತಕ್ಕದ್ದು ಇರಲಿ. ರಾಮರಾಜನು ಹಾಗೆ ನಿಗ್ರಹದಿಂದ ನಡೆಯದೆ, ಮನಸ್ಸನ್ನು ಹರಿಬಿಟ್ಟಿದ್ದರಿಂದ ಎಂಥ ಘನವಾದ ಸಾಮ್ರಾಜ್ಯದ ಲಯಕ್ಕೆ ಕಾರಣನಾದನೆಂಬುದನ್ನು ಈ ಕಾದಂಬರಿಯಲ್ಲಿ ಬರೆಯುವ ದುಃಖದ ಪ್ರಸಂಗವು ನಮಗೊದಿಗಿದೆ ! ರಾಮರಾಜನ ಎಟ್ಟಿಮನಸ್ಸು ಮಾರ್ಜೀನೆಯ ಸದ್ಬೋಧಕೆ ಬಗ್ಗಲಿಲ್ಲ; ಪಾಪ ಪುಣ್ಯದ ವಿಚಾರವನ್ನು ಲೆಕ್ಕಿಸಲಿಲ್ಲ. "ವಿನಾಶಕಾಲೇ ವಿಪರೀತ ಬುದ್ಧಿ:" ಎಂಬಂತೆ ಆ ತರುಣ ಸರದಾರನು ಮಾರ್ಜೀನೆಯನ್ನು ಕುರಿತು ಉದ್ಧಾಮತನದಿಂದ-”ಮಾರ್ಜೀನೆ, ಇಷ್ಟೊಂದು ಪಾಂಡಿತ್ಯವನ್ನು ತೋರಿಸುವದಕ್ಕಾಗಿ ತಾನು ನಿನ್ನನ್ನು ಕರೆಸಲಿಲ್ಲ. ನೀನೂ ನಿಮ್ಮ ಮೆಹರ್ಜಾನಳೂ ಈಗ ನನ್ನ ಕೈಯಲ್ಲಿ ಸಿಕ್ಕಿರುತ್ತೀರೆಂಬುದನ್ನು ಚೆನ್ನಾಗಿ ನೆನಪಿನಲ್ಲಿಡು. ಮುಯ್ಯಕ್ಕೆ ಮುಯ್ಯವೆಂಬಂತೆ ಮುಸಲ್ಮಾನರ ದುರಾಚಾರದ ಸೇಡು ತೀರಿಸಿಕೊಳ್ಳುವದಕ್ಕಾಗಿ, ನಾನು ಮೆಹರ್ಜಾನಳನ್ನು ನನ್ನ ಮನಸ್ಸಿಗೆ ಬಂದಂತೆ ನಡೆಸಿಕೊಳ್ಳುವವನೇ ಸರಿ; ಮೆಹರ್ಜಾನಳು ನನ್ನ ಮಾತಿಗೆ ಅರ್ಧ ಸಮ್ಮತಿಯನ್ನು ಕೊಟ್ಟಂತಾಗಿರುತ್ತದೆ. ಹೀಗಿರಲು ನೀನು ನಡುವೆ ಕಲ್ಲು ಹಾಕಿದರೆ ನಿಮ್ಮ ಪರಿಣಾಮನೆಟ್ಟಗಾಗಲಿಕ್ಕಿಲ್ಲ. ನನ್ನ ಕಾರ್ಯಕ್ಕೆ ಅನುಕೂಲವಾಗುವ ಮನಸ್ಸು ನಿನಗಿಲ್ಲದಿದ್ದರೆ ನೀನು ಸುಮ್ಮನಾದರೂ ಇರು, ನನ್ನನ್ನು ಬೋಧಿಸಿದಂತೆ ಮೆಹರ್ಜಾನಳನ್ನು ಬೋಧಿಸುವ ಗೊಡವಿಗೆ ಹೋಗಬೇಡ. ಮಾರ್ಜೀನೇ, ತಿಳಿದು ನೋಡು ನಿನ್ನ ಬೋಧವು ನಮ್ಮಂಥ ತರುಣರಿಗೆ ತಕ್ಕದ್ದೇ ? "ಸೂಳೆ ಮುಪ್ಪಾಗಿ ಜೋಗತಿಯಾದಳೆಂಬಂತೆ" ನಿಮ್ಮಂಥ ದಿನ ಹೋದ ಹೆಂಗಸರಿಗೆ ಪ್ರಸಂಗವಶಾತ್ ನಮ್ಮಂಥ ತರುಣರ ಮುಂದೆ ಇಲ್ಲದ ಪಾಂಡಿತ್ಯವನ್ನು ತೋರಿಸಲಿಕ್ಕೆ ಈ ಬೋಧವು ತಕ್ಕದಾಗಿರುತ್ತದೆ!! ನೀನು ಬೋಧಿಸಿದಂತೆ ನಮ್ಮ ಮೆಹರ್ಜಾನಳು ನನ್ನನ್ನು ಬೋಧಿಸಿದ್ದರೆ ನಾನು ಒಪ್ಪುತ್ತಿದ್ದೆನು. ಆಕೆಯು ನಾನು ಕೇಳಿದ್ದಕ್ಕೆ ಸುಮ್ಮನಿದ್ದು ಅರ್ಧ ಸಮ್ಮತಿಯನ್ನು ತೋರಿಸಿರುತ್ತಾಳೆ. ಬಹಳ ಮಾತುಗಳೇನು ? ನಾನಿದ್ದೇನೆ, ಮೆಹರ್ಜಾನಳಿದ್ದಾಳೆ. ಆ ಸುಂದರಿಯು ಒಪ್ಪಿಕೊಂಡರೇ ನಾನು ಆಕೆಯ ಪಾಣಿಗ್ರಹಣ ಮಾಡಿ, ಅವಳನ್ನು ನನ್ನ ಪ್ರಾಣೇಶ್ವರಿಯನ್ನಾಗಿ ಮಾಡಿಕೊಳ್ಳುವೆನು. ಆಮೇಲೆ ನನ್ನನ್ನು ಹೀಗೆ ಬೋಧಿಸಿದ ಬಗ್ಗೆ ನಿನಗೇ ಪಶ್ಚಾತ್ತಾಪವಾದೀತು. ಹೋಗು. ನನ್ನ ಸಿಟ್ಟಿನ ಮಾತುಗಳನ್ನು ಮನಸಿಗೆ ಹಚ್ಚಿಕೊಳ್ಳದೆ, ಮೆಹರ್ಜಾನಳು ನನಗೆ ಅನುಕೂಲಳಾಗುವಂತೆ ಮಾಡು, ಎಂದು ಹೇಳಿ, ರಾಮರಾಜನು ಮಾರ್ಜೀನೆಯನ್ನು ಮನೆಗೆ ಕಳಿಸಿಬಿಟ್ಟನು.

ರಾಮರಾಜನು ಮಾರ್ಜಿನೆಯನ್ನು ಹೀಗೆ ಬೆದರಿಸಿ ಕಳಿಸಿದರೂ ಆ ಸ್ಪಷ್ಟಮಾತಿನ ಹೆಣ್ಣುಮಗಳು ಮೆಹರ್ಜಾನಳ ಮನಸ್ಸನ್ನು ಎಲ್ಲಿ ತಿರುಗಿಸುವಳೋ ಎಂದು ಆತನು ಶಂಕಿಸುತ್ತಲಿದ್ದನು. ರಾಮರಾಜನು ಹುಟ್ಟಾ ಚತುರನು, ಕಾರ್ಯಸಾಧಕನು. ಆತನು ಮೆಹರ್ಜಾನಳ ಮನಸ್ಸು ಮೋಹಿಸುವಂಥ ಹಲವು ಹಂಚಿಕೆಗಳನ್ನು ಮೊದಲೇ ಮಾಡಿದ್ದನು ಆತನ ಸೂಚನೆಯಂತೆ ಆತನ ವೃದ್ದ ದಾಸಿಯು ರಾಮರಾಜನ ಗುಣಗಳನ್ನೂ, ಪರಾಕ್ರಮವನ್ನೂ, ವೈಭವವನ್ನು ಉಪ್ಪುಕಾರ ಹಚ್ಚಿ ಮೆಹರ್ಜಾನಳ ಮುಂದೆ ಹೇಳಿದ್ದಳು. ಯುದ್ಧದಲ್ಲಿ ಅದ್ಭುತ ಪರಾಕ್ರಮವನ್ನು ತೋರಿಸಿ ವಿಜಯನಗರದ ಕೃಷ್ಣದೇವರಾಜರಿಂದ ಉಚಿತವಾಗಿ ಸಂಪಾದಿಸಿದ ಪದಾರ್ಥಗಳು ಇವೆಂದು ಹರಳುಕಲ್ಲಿನ ಅನೇಕ ದಿವ್ಯಾಲಂಕಾರಗಳನ್ನು ಆಕೆಗೆ ಆ ದಾಸಿಯು ತೋರಿಸಿದ್ದಳು. ಅಂಥ ಅಲಂಕಾರಗಳನ್ನು ಮೆಹರ್ಜಾನಳು ಈವರೆಗೆ ನೋಡಿದ್ದಿಲ್ಲವೆಂದು ಹೇಳಬಹುದು. ಆಗ ವಿಜಯನಗರದ ರಾಜರ ಐಶ್ವರ್ಯ ಸಂಪನ್ನನಾದ ಪ್ರಭುವಿನ ಪ್ರೀತಿಯ ಸರದಾರನೆಂದ ಬಳಿಕ, ರಾಮರಾಜನ ಸಂಗ್ರಹದಲ್ಲಿ ಉತ್ತಮೋತ್ತಮ ಅಲಂಕಾರಗಳಿದ್ದದ್ದೇನು ಆಶ್ಚರ್ಯವಲ್ಲ. ದಾಸಿಯು ರಾಮರಾಜನ ಒಂದೊಂದು ಪರಾಕ್ರಮದ ಕೃತಿಗಳನ್ನು ಕಥೆ ಮಾಡಿ ಹೇಳಿದಳು; ಅದರಂತೆ ಹಿಂದೂ ಧರ್ಮದ ಹಲವು ಸುಂದರಿಯರು ರಾಮರಾಜನನ್ನು ಲಗ್ನವಾಗಲಿಚ್ಛಿಸಿ ನಿರಾಶೆಪಟ್ಟದ್ದನ್ನು ಬಗೆಬಗೆಯಾಗಿ ಬಣ್ಣಿಸಿದಳು; ಹಾಗೆಯೇ ಆ ಚತುರದಾಸಿಯು, ಇಂಥ ಸುಂದರ ತರುಣನ ಕೈ ಹಿಡಿದ ಸುಂದರಿಯು ಪುಣ್ಯವಂಥಳೇ ಸರಿಯೆಂದು ಮೆಹರ್ಜಾನಳಿಗೆ ಸ್ಪಷ್ಟವಾಗಿ ಹೇಳಿದಳು ಮೊದಲೇ ರಾಮರಾಜನಿಗೆ ಮರುಳಾಗಿದ್ದ ಮೆಹರ್ಜಾನಳ ಮನೋಭೂಮಿಯಲ್ಲಿ ಉತ್ಪನ್ನವಾಗಿದ್ದ ಪ್ರೇಮಾಂಕುರವು, ತಾರುಣ್ಯವೆಂಬ ಗೊಬ್ಬರದಿಂದಲೂ ರಸಭರಿತ ವರ್ಣನವೆಂಬ ಜಲಸೇಚನದಿಂದಲೂ ಪರಿಪುಷ್ಟವಾಗಿ ಭರದಿಂದ ಬೆಳೆಯಹತ್ತಿತು. ಈ ಸ್ಥಿತಿಯಲ್ಲಿ ರಾಮರಾಜನ ಸುಂದರ ಮೂರ್ತಿಯು ಆಕೆಯ ಮನಸ್ಸಿನಲ್ಲಿ ನೆಲೆಸಲು, ತದೇಕ ಧ್ಯಾನವೆಂಬ ಗೆಯ್ತದಿಂದ ಆ ಪ್ರೇತವೃಕ್ಷವು ಫಲಿಸಿ ರಾಮರಾಜನ ಪ್ರಾಪ್ತಿ ರೂಪವಾದ ಫಲವು ಬಹು ಸ್ವಾದಿಷ್ಟವಾಗಿ ಆ ಮೆಹರ್ಜಾನಳಿಗೆ ತೋರಹತ್ತಿತು! ಮೆಹರ್ಜಾನಳ ಮನಸ್ಥಿತಿಯು ಅಲ್ಪಾವಕಾಶದಲ್ಲಿ ಇಷ್ಟು ರೂಪಾಂತರ ಹೊಂದಿದ್ದು ಆಶ್ಚರ್ಯವಲ್ಲ ತರುಣರ ಮನಸ್ಸಿನ ಪ್ರಭಾವವೇ ಅಂತಹದಿರುತ್ತದೆ! ಅದರಲ್ಲಿ ಬಿತ್ತಿದ ಬೀಜವು ಅಷ್ಟು ಬೇಗ ಫಲಿಸುತ್ತದೆ ! ತರುಣರಿಗೆ ಬಲುಬೇಗ ಸಿಟ್ಟು ಬರಲಿಕ್ಕೂ, ಅವರು ಬಲು ಬೇಗ ನಗಲಿಕ್ಕೂ ಬಹುಬೇಗ ಅಳಲಿಕ್ಕೂ. ಮನಸ್ಸಿಗೆ ಬಂದಕೂಡಲೆ ಅವರು ಯಾವದೊಂದು ಕಾರ್‍ಯಕ್ಕೆ ತಟ್ಟನೆ ಕೈ ಹಾಕಲಿಕ್ಕೂ ಇದೇ ಕಾರಣವು. ಏರಿಕೆಯ ರಕ್ತದ ತರುಣರ ಸ್ಥಿತಿಯು ಹೀಗೆಯೇ ಸರಿ. ಅವರಿಗೆ ಪ್ರಯತ್ನದ ಫಲವು ಮಾತ್ರ ಕಣ್ಣಿಗೆ ಕಟ್ಟುತ್ತದಲ್ಲದೆ, ಪ್ರಯತ್ನದಲ್ಲಿಯ ತೊಂದರೆಗಳು ಕಾಣುವುದಿಲ್ಲ. ಈ ನಿಯಮಕ್ಕನುಸರಿಸಿ ಮೆಹರ್ಜಾನಳು ರಾಮರಾಜನ ಇಚ್ಛೆಯಂತೆ ನಡೆದುಕೊಳ್ಳಲು ಆತುರ ಪಡುತ್ತಿದ್ದಳು. ಇಂಥ ಸ್ಥಿತಿಯಲ್ಲಿ ಮಾರ್ಜೀನೆಯು ಅವಳ ಬಳಿಗೆ ಬಂದು ರಾಮರಾಜನು ಆಡಿದ ಮಾತುಗಳನ್ನು ಹೇಳಿದಳು. ಅವುಗಳನ್ನು ಕೇಳಿ ಮೆಹರ್ಜಾನಳಿಗೆ ವ್ಯಸನವಾಗುವುದರ ಬದಲು ಆನಂದವಾಯಿತು; ಯಾಕೆಂದರೆ ಆಕೆಗೆ ರಾಮರಾಜನು ಬೇಕಾಗಿದ್ದನು. ಆಕೆಯು ಮುಗುಳು ನಗೆ ನಗುತ್ತ ಮಾರ್ಜೀನೆಗೆ-ಮಾರ್ಜೀನೇ. ನೀನು ಅವರಿಗೆ ಸಿಟ್ಟು ಬರುವಂತೆ ಯಾಕೆ ಮಾತಾಡಿದೆ ? ನಾನು ಮನಸ್ಸಿನಿಂದ ಅವರನ್ನು ವರಿಸಿದ್ದೇನೆ. ಪಠಾಣ ತರುಣಿಯರು ಒಬ್ಬ ಪುರುಷನಲ್ಲಿ ಮನಸನ್ನಿಟ್ಟ ಬಳಿಕ, ಅನ್ಯ ಪುರುಷರನ್ನು ಪಿತೃಸಮಾನರೆಂತಲೇ ತಿಳಿಯುವರು ! ನನಗೆ ಹಿಂದೂವೇ ಪತಿಯಾಗಬೇಕೆಂದು ಅಲ್ಲಾನ ಸಂಕೇತವಿದ್ದಂತೆ ತೋರುತ್ತದೆ ! ಏನೇ ಇರಲಿ ರಾಮರಾಜನು ನನ್ನ ಪತಿಯು, ಅವರು ನನ್ನ ಪ್ರಾಣೇಶ್ವರರು. ಅವರನ್ನಗಲಿ ನಾನು ಒಂದು ಕ್ಷಣವಾದರೂ ಇರಲಾರೆನು ! ನೀನು ಹ್ಯಾಗಾದರೂ ಮಾಡಿ ಅವರ ಸಿಟ್ಟು ಇಳಿಸಿ, ಅವರು ಪ್ರೇಮದಿಂದ ನನ್ನ ಪಾಣಿಗ್ರಹಣ ಮಾಡುವಂತೆ ಮಾಡು ! ಅನ್ನಲು ಬೆಪ್ಪಾಗಿ ಕುಳಿತುಕೊಂಡಿದ್ದ ಸರಳಮನಸ್ಸಿನ ಆ ಮಾರ್ಜೀನೆಯ ಮುಖದಿಂದ, “ಎಲ! ಇದೇನು ?” ಎಂಬ ಶಬ್ದವು ತಟ್ಟನೆ ಹೊರಟಿತು !! ಪ್ರಿಯತರುಣ ವಾಚಕರೇ. ಎಚ್ಚರಿಕೆ ಸಿಕ್ಕಸಿಕ್ಕ ಬೀಜಗಳು ನಿಮ್ಮ ಮನೋಭೂಮಿಯಲ್ಲಿ ಬಿತ್ತದಂತೆ ನೀವು ಜಾಗರೂಕರಾಗಿರತಕ್ಕದ್ದು ! ಇಲ್ಲದಿದ್ದರೆ ಮೆಹರ್ಜಾನ-ರಾಮರಾಜರಂತೆ ನೀವು ವಿವೇಕ ಭ್ರಷ್ಟರಾದೀರಿ !!!


****