ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, pages ೧೮೩–೧೯೧

೨೦ನೆಯ ಪ್ರಕರಣ

ದುಃಸ್ವಪ್ನವು

ವಾಚಕರು ಮಾಸಾಹೇಬರ ಇಲ್ಲಿಯವರೆಗಿನ ಆಚರಣೆಯನ್ನು ನೋಡಿರುವದರಿಂದ, ಅವರ ಯೋಗ್ಯತೆಯನ್ನು ಕುರಿತು ಹೆಚ್ಚಿಗೆ ಬರೆಯಲವಶ್ಯವಿಲ್ಲ. ಮಾಸಾಹೇಬರು ಒಮ್ಮೆ ನಿಶ್ಚಯ ಮಾಡಿದರೆಂದರೆ, ತಿರುಗಿ ಹಿಂದಕ್ಕೆ ಸರಿಯುತ್ತಿದ್ದಿಲ್ಲ. ತಮ್ಮ ಮಗನ ಕೃತಿಗಳನ್ನು ಗುಪ್ತರೀತಿಯಿಂದ ನೋಡಿ ಆತನ ಒಳಸಂಚಿನ ಸ್ವರೂಪವನ್ನು ತಿಳಿದುಕೊಳ್ಳಬೇಕೆಂದು ನಿಶ್ಚಯಿಸಿದ ಕೂಡಲೆ ಅವರು ರಣಮಸ್ತಖಾನನ ನಂಬಿಗೆಯ ಸೇವಕನಾದ ನಜೀರನ್ನು ಕರೆಯಿಸಿ ಆತನಿಂದ ಆಣೆಮಾಡಿಸಿ, ಆತನಿಗೆ ತಮ್ಮ ಆಣೆಯನ್ನಿಟ್ಟು ಆತನನ್ನು ಕುರಿತು, “ನಜೀರ, ನಾನು ಈಗ ಹೇಳುವ ಕೆಲಸವನ್ನು ರಣಮಸ್ತಖಾನನಿಗೆ ಗೊತ್ತಾಗಂತೆ ನೀನು ಮಾಡತಕ್ಕದ್ದು” ಎಂದು ಹೇಳಿದರು ಮಾಸಾಹೇಬರ ಮೇಲೆ ಎಲ್ಲ ಜನರ ಭಕ್ತಿಯು. ಅವರ ಆಜ್ಞೆಗಳನ್ನು ಪಾಲಿಸಲಿಕ್ಕೆ ಎಲ್ಲರೂ ಆತುರರು. ಬಹಳವೇಕೆ, ಅವರ ಅಪ್ಪಣೆಯನ್ನು ಪಾಲಿಸುವ ಪ್ರಸಂಗವು ಬರಬಹುದೋ ಎಂದು ಎಲ್ಲರೂ ಹಾದಿಯನ್ನೇ ನೋಡತ್ತಿದ್ದರೆಂದು ಹೇಳಬಹುದು. ಅಂದಬಳಿಕ ನಜೀರನು ಮಾಸಾಹೇಬರ ಅಪ್ಪಣೆಯನ್ನು, ಅದರಲ್ಲೂ ಅವರು ಆಣೆಯಿಟ್ಟು ಮಾಡಿದ ಅಪ್ಪಣೆಯನ್ನು ಈಗ ಹ್ಯಾಗೆ ಪಾಲಿಸದೆಯಿದ್ದಾನು ? ಆತನು ಸಾಹೇಬರನ್ನು ಕುರಿತು - “ಮಾಸಾಹೇಬರೇ, ತಾವು ಹೇಳಿದರೆ ಪ್ರಾಣವನ್ನರ್ಪಿಸಲಿಕ್ಕೂ ನಾನು ಸಿದ್ದನಿರುವಾಗ, ಉಳಿದ ಕೆಲಸಗಳ ಪಾಡೇನು ? ತಾವು ಹೇಳುವದೊಂದೇ ತಡ. ಇನ್ನು ಗೌಪ್ಯವಾಗಿಡುವ ಸಂಬಂಧದಿಂದ ಕೇಳಿದರೆ, ಈ ನಾಲಗೆಯು ಆ ಮಾತನ್ನು ಎಂದಿಗೂ ಉಚ್ಚರಿಸಲಿಕ್ಕಿಲ್ಲ. ಬೇಕಾದರೆ ನಿಮ್ಮ ನಂಬಿಕೆಗಾಗಿ ನನ್ನ ನಾಲಗೆಯನ್ನು ಕಿತ್ತು ಈಗ ನಿಮ್ಮ ಮುಂದೆ ಇಡುತ್ತೇನೆ” ಎಂದು ಹೇಳಿದನು. ನಜೀರನ ಈ ಮಾತುಗಳನ್ನು ಕೇಳಿ ಮಾಸಾಹೇಬರಿಗೆ ಬಹಳ ಸಂತೋಷವಾಯಿತು. ಅವರು ನಜೀರನಿಗೆ- “ನೀನು ಅಂಥ ಮನುಷ್ಯನೆಂತಲೇ ನಿನ್ನನ್ನು ಕರೆಸಿದ್ದೇನೆ. ಕೆಲಸವೇನು, ಬಹಳವಿಲ್ಲ. ಇಂದಿನ ರಾತ್ರಿಯಲ್ಲಿ ಅಥವಾ ನಾಳಿನ ರಾತ್ರಿಯಲ್ಲಿ ನಿಮ್ಮ ಒಡೆಯನು ಹೊರಬಿದ್ದ ಕೂಡಲೆ, ನೀನು ಆತನಿಗೆ ಗೊತ್ತಾಗದಂತೆ ಬೆನ್ನುಹತ್ತಿಹೋಗಿ ಆತನು ಯಾವ ದಿಕ್ಕಿಗೆ ಹೋಗುತ್ತಾನೆಂಬುದನ್ನು ನನಗೆ ಬಂದು ಹೇಳು. ಆತನು ಕುದುರೆಯು ಮೇಲಿಂದ ಹೋಗುವವನು, ನೀನು ಕಾಲಲ್ಲಿ ನಡೆದು ಹೋಗುವವನು; ಅದರಿಂದ ದಿಕ್ಕು ನೋಡಿಕೊಂಡು ಬರುವದರ ಹೊರತು ಹೆಚ್ಚಿನ ಕೆಲಸವೇನೂ ನಿನ್ನಿಂದ ಆಗಲಿಕ್ಕಿಲ್ಲ; ಕುದುರೆ ಹತ್ತಿ ಹೋಗುವಂತೆ ನಿನಗೆ ನಾನು ವ್ಯವಸ್ಥೆ ಮಾಡಿಕೊಡುತ್ತಿದ್ದನು. ಆದರೆ ರಾತ್ರಿಯಲ್ಲಿ ಅದು ರಣಮಸ್ತಖಾನನಿಗೆ ಗೊತ್ತಾಗದೆ ಹೋಗಲಿಕ್ಕಿಲ್ಲ. ಅದರಿಂದ ಕಾಲಿನಿಂದ ನಡೆದು ಹೋಗಲಿಕ್ಕೆ ಶಕ್ಯವಿದ್ದಮಟ್ಟಿಗೆ ನೀನು ನಡೆದುಹೋಗಿ, ದಿಕ್ಕನಷ್ಟು ತಿಳಿದುಕೊಂಡು ಬಾ, ಆಮೇಲೆ ಏನು ಮಾಡಬೇಕೆಂಬದನ್ನು ನಿನಗೆ ಹೇಳುತ್ತೇನೆ” ಎಂದು ಹೇಳಿದರು.

ನಜೀರನು ಮಾಸಾಹೇಬರ ಮಾತಿಗೆ ಸಂತೋಷದಿಂದ ಒಪ್ಪಿಕೊಂಡು ಹೋದನು; ಆದರೆ ಮಾಸಾಹೇಬರು ಅಷ್ಟಕ್ಕೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ ನಜೀರನು ಹೇಳುವ ಸುದ್ದಿಯು ನಿಜವೆಂಬುದನ್ನು ಬೇರೆ ಸಾಕ್ಷಿಯಿಂದ ಮನಗಾಣುವದು ಅವಶ್ಯವೆಂದು ತಿಳಿದು, ಅವರು ತಮ್ಮ ಸೇವಕರಲ್ಲಿ ನಂಬಿಗೆಯವನಾದ ಕರೀಮಬಕ್ಷನೆಂಬವನನ್ನು ಕರೆದು ಅವನಿಗೊಂದು ಕೆಲಸವನ್ನು ಒಪ್ಪಿಸಿದರು. ಆತನು ಈ ದಿನ ಸಂಜೆಗೇ ವಿಜಯನಗರದ ಅರ್ಧ ಹಾದಿಯ ಮೇಲೆ ಎಲ್ಲಿಯಾದರೂ ಕುಳಿತು, ರಣಮಸ್ತಖಾನನು ರಾತ್ರಿ ಆ ಹಾದಿಯಿಂದ ಹೋಗುವನೋ ಹೇಗೆಂಬದನ್ನು ತಿಳಿದು ಬಂದು ಮಾಸಾಹೇಬರಿಗೆ ಹೇಳಬೇಕಾಯಿತು. ಕರೀಮಬಕ್ಷನೂ ಮಾಸಾಹೇಬರ ಮಾತಿಗೆ ಸಂತೋಷದಿಂದ ಒಪ್ಪಿಕೊಂಡು, ಇಳಿಯ ಹೊತ್ತಾದ ಕೂಡಲೆ ವಿಜಯನಗರದ ಹಾದಿಯನ್ನು ಹಿಡಿದನು. ಇವರಿಬ್ಬರೂ ತಮ್ಮ ಮಾತಿಗೆ ಒಪ್ಪಿಕೊಂಡದ್ದಕ್ಕಾಗಿ ಮಾಸಾಹೇಬರಿಗೆ ಬಹಳ ಸಂತೋಷವಾಯಿತು. ಯಾವಾಗ ಹೊತ್ತು ಮುಳುಗೀತೆಂದು ಅವರು ಹಾದಿಯನ್ನು ನೋಡುತ್ತ ಕುಳಿತುಕೊಂಡರು. ಇಂದು ಅವರ ಜಪ-ತಪಗಳೆಲ್ಲ ಹಿಂದಕ್ಕೆ ಬಿದ್ದುವು. ಪುತ್ರದೇವನ ಮುಂದೆ ಯಾವ ದೇವರೂ ಸುಳಿಯದಾದರು! ಮಗನು ರಾಮರಾಜನ ಪಾಶದಲ್ಲಿ ಸಿಕ್ಕಿಕೊಂಡನೆಂದು ಅವರು ತಿಳಿದುಕೊಂಡು ಬಿಟ್ಟಿದ್ದರು. ಅದನ್ನು ಪರೀಕ್ಷಿಸಿ ನೋಡಲಿಕ್ಕೆ ಅವರು ಆತುರಪಡುತ್ತಲಿದ್ದರು. ಅವರ ಮನಸ್ಸು ಬಹಳ ಚಂಚಲವಾಯಿತು. ಅವರ ಮನಸ್ಸಿನ ಈ ಸ್ಥಿತ್ಯಂತರವು ಲೈಲಿಗೆ ಗೊತ್ತಾಯಿತು; ಆದರೆ ಕಾರಣವನ್ನು ಈಗೆಯೇ ಯಾಕೆ ಕೇಳಬೇಕು. ಸಂಜೆಗಿಂಜೆ ಮುಂದೆ ಮಾಸಾಹೇಬರನ್ನು ಕೇಳೊಣವೆಂದು ಆಕೆಯು ಸುಮ್ಮನೆಯಿದ್ದಳು. ಮುಂದೆ ಆಕೆಗೆ ಕೇಳಲಿಕ್ಕೆ ಆಸ್ಪದವೇ ದೊರೆಯಲಿಲ್ಲ. ಹೊತ್ತು ಮುಳುಗಿ ಸ್ವಲ್ಪ ರಾತ್ರಿಯಾದ ಕೂಡಲೆ ಮಾಸಾಹೇಬರ ಮನಸ್ಸಿಗೆ ಏನು ಹೊಳೆಯಿತೋ ಏನೋ, ಅವರು ಲೈಲಿಗೆ ಇಂದು ಹಗಲೆಲ್ಲ ಜಪಮಾಡಲಿಕ್ಕೆ ನನಗೆ ಅನುಕೂಲವಾಗಲಿಲ್ಲ; ಆದ್ದರಿಂದ ನಾನು ಈಗ ನನ್ನ ಕೋಣೆಯಲ್ಲಿ ಹೋಗಿ ಕುಳಿತುಕೊಳ್ಳುತ್ತೇನೆ. ನನ್ನನ್ನು ಕರೆಯಲಿಕ್ಕೆ ಇಲ್ಲವೆ ನನ್ನನ್ನೇನಾದರೂ ಕೇಳಲಿಕ್ಕೆ ನೀನು ಸರ್ವಥಾ ಬರಬೇಡ ಎಂದು ಹೇಳಿ, ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಕುಳಿತುಕೊಂಡುಬಿಟ್ಟರು ! ಆಯಿತು, ಲೈಲಿಯು ಸಂಜೆಯ ಮುಂದೆ ಕೇಳಬೇಕೆಂದಿದ್ದು ಅಲ್ಲಿಯೇ ಉಳಿಯಿತು. ಲೈಲಿಯು ಕೆಲಸ ಬೊಗಸೆಗಳನ್ನೆಲ್ಲ ತೀರಿಸಿಕೊಂಡು, ದಿನಾಲು ತಾನು ಮಲಗಿಕೊಳ್ಳುವ ಸ್ಥಳದಲ್ಲಿ ಬಂದು ಬಿದ್ದು ಕೊಂಡಳು. ಲೈಲಿಯಾದರೂ ಸಾಧಾರಣ ಮನುಷ್ಯಳಿದ್ದಿಲ್ಲ. ಆಕೆಯು ಬಹುಜನ ಸಾಧು-ಸತ್ಪುರುಷರ ಬಳಿಯಲ್ಲಿದ್ದವಳಾದದ್ದರಿಂದ ಸುಜ್ಞಳಿದ್ದಳು. ಆದರೆ ಸ್ವಲ್ಪ ಪುಕ್ಕ ಸ್ವಭಾವದವಳು. ಆಕೆಗೆ ಸಂಕೋಚ ಬಹಳ, ತಾನು ಮಾಸಾಹೇಬರನ್ನು ಚಿಕ್ಕಂದಿನಿಂದ ಎತ್ತಿ ಆಡಿಸಿದವಳಾಗಿದ್ದರೂ, ಅವರ ಮೇಲೆ ಹೊಟ್ಟೆಯ ಮಕ್ಕಳಿಗಿಂತ ಆಕೆಯು ಹೆಚ್ಚು ಪ್ರೀತಿಯನ್ನು ಮಾಡುತ್ತಿದ್ದರೂ, ಮಾಸಾಹೇಬರ ತೇಜಸ್ಸಿಗೆ ಆಕೆಯು ಅಂಜುತ್ತಿದ್ದಳು. ಪ್ರಸಂಗದಲ್ಲಿ ಒಮ್ಮೆ ಬಾಯಿಬಿಟ್ಟಳೆಂದರೆ ಮಾಸಾಹೇಬರ ಹಂಗು ಇಲ್ಲದೆ ನಿಜವಾದ ಸಂಗತಿಯನ್ನು ಸ್ಪಷ್ಟವಾಗಿ ಹೇಳಲಿಕ್ಕೆ ಲೈಲಿಯು ಹಿಂದುಮುಂದು ನೋಡುತ್ತಿದ್ದಿಲ್ಲ; ಆದರೆ ಎಲ್ಲ ಪ್ರಸಂಗದಲ್ಲಿ ದಿಟ್ಟತನನಿಂದ ಮಾಸಾಹೇಬರನ್ನು ಹಾಗೆ ತಟ್ಟನೆ ಕೇಳುವ ಧೈರ್ಯವು ಆಕೆಗೆ ಆಗುತ್ತಿದ್ದಿಲ್ಲ. ಮಾಸಾಹೇಬರಾದರೂ ಲೈಲಿಯ ಯೋಗ್ಯತೆಯನ್ನು ಅರಿತಿದ್ದರು. ಆಕೆಯು ಬಹುಶ್ರುತಳೆಂತಲೂ, ಸುಜ್ಞಳೆಂತಲೂ ತಿಳಿದು ಆಕೆಯ ವಿಷಯವಾಗಿ ಅವರು ಆದರಭಾವವುಳ್ಳವರಾಗಿದ್ದರು. ಆದರೆ ಸಲಿಗೆಯಿಂದ ಒಮ್ಮೊಮ್ಮೆ ಆಕೆಯ ಹಂಗನ್ನು ಅವರು ಎಷ್ಟು ಮಾತ್ರವೂ ಇಡುತ್ತಿದ್ದಿಲ್ಲ. ಇರಲಿ ಲೈಲಿಗೆ ಸ್ವಲ್ಪ ಹೊತ್ತಿನಲ್ಲಿ ನಿದ್ದೆ ಹತ್ತಿತು. ಮಾಸಾಹೇಬರು ಜಪ ಮಾಡುವದನ್ನು ಬಿಟ್ಟು, ಮಗನು ಈ ದಿನ ಹೊರಗೆ ಹೋಗಿರಬಹುದೋ ಎಂದು ಚಡಪಡಿಸುತ್ತ ಕುಳಿತುಕೊಂಡಿದ್ದರು. ಅವರಿಗೆ ಹಿಂದಿನ ವೃತ್ತಾಂತವೆಲ್ಲ ನೆನಪಾಗಿತ್ತು. ಅವರು ವಿಚಾರ ಮಾಡಿಮಾಡಿ ದಣಿದು ಮಲಗಿಕೊಂಡರು; ಆದರೆ ಅವರಿಗೆ ನಿದ್ದೆಯು ಬರಲೊಲ್ಲದು. ಅವರು ಹಲವು ಸಾರೆ ಕಿಟಕಿಯಲ್ಲಿ ಹಣಿಕಿ ನೋಡಿದರು. ಸ್ವಚ್ಛವಾದ ಬೆಳದಿಂಗಳಲ್ಲಿ ಯಾರಾದರೂ ಹೋಗುವುದು ಕಂಡರೆ ನೋಡಬೇಕೆಂತಲೂ ಯಾರಾದರೂ ಹೋಗುವ ಸಪ್ಪಳವು ಕಿವಿಗೆ ಬಿದ್ದರೆ ಕೇಳಬೇಕೆಂತಲೂ ಅವರು ಆತುರಪಡುತ್ತಿದ್ದರು. ಅಂದು ಅವರ ಮನಸ್ಸಿನ ಸ್ಥಿತಿಯು ವಿಲಕ್ಷಣವಾಗಿತ್ತು.

ಇತ್ತ ಅದೇ ರಾತ್ರಿ ರಣಮಸ್ತಖಾನನು ತನ್ನ ಕೋಣೆಯಲ್ಲಿ ಅಸಮಾಧಾನದಿಂದ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದನು. ಇಂದು ಮುಂಜಾನೆ ಮಾಸಾಹೇಬರ ಸಂಗಡ ಬಹು ನಿಷ್ಠುರತನದಿಂದ ನಡೆದುಕೊಂಡೆನೆಂಬ ಬಗ್ಗೆ ಆತನಿಗೆ ಬಹಳ ಪಶ್ಚಾತ್ತಾಪವಾಗಿತ್ತು. ಆದರೂ ತಾನು ಹೀಗೆ ನಡೆಯದಿದ್ದರೆ ನಿರ್ವಾಹವೇ ಇದ್ದಿಲ್ಲೆಂದು ಆತನು ಸಮಾಧಾನ ಮಾಡಿಕೊಳ್ಳುತ್ತಿದ್ದನು. ನೂರಜಹಾನಳ ವೃತ್ತಾಂತವೆಲ್ಲ ಆತನ ಕಣ್ಣುಮುಂದೆ ಕಟ್ಟಿದಂತೆ ಆಗಿ, ತಾನು ಯಾವ ಉಪಾಯದಿಂದ ನೂರಜಹಾನಳ ಲಗ್ನವಾಗಬೇಕಾದೀತೆಂದು ಆತನು ಆಲೋಚಿಸತೊಡಗಿದನು. ಆ ಕಾರ್ಯಕ್ಕೆ ತಾನು ಈಗ ರಾಮರಾಜನೊಡನೆ ನಡೆಸುವ ಒಳಸಂಚೇ ಅನುಕೂಲವಾದದ್ದೆಂದು ಆತನು ನಿರ್ಧರಿಸಿದನು. ಅಷ್ಟರಲ್ಲಿ ರಾತ್ರಿಯು ಐದು ತಾಸಿಗೆ ಬಂದಿತ್ತು. ಕೂಡಲೆ ರಣಮಸ್ತಖಾನನು ತನ್ನ ಸೇವಕನಾದ ನಜೀರನನ್ನು ಕರೆದು-ಹೋಗು, ಅಲ್ಲಿ ಖಾನನಿಗೆ ನನ್ನ ಕುದುರೆಯನ್ನು ಜೇನು ಹಾಕಿಕೊಂಡು ನಿನ್ನಿನ ಸ್ಥಳದಲ್ಲಿ ನಿಲ್ಲಿಸೆಂದು ಹೇಳು. ನಾನು ಇಂದೂ ನಿನ್ನಿನಂತೆಯೇ ಹೊರಗೆ ಹೋಗುತ್ತೇನೆ. ಬೆಳಗುಮುಂಜಾನೆ ಬರುವೆನು, ಮಾಸಾಹೇಬರು ಕದಾಜಿತ್ ಇಂದು ನನ್ನ ಶೋಧ ಮಾಡಬಹುದು. ಅವರಿಗೆ ನಾನು ಮಲಗಿಕೊಂಡಿರುವೆನೆಂದು ಹೇಳು. ಅವರು ನನ್ನನ್ನು ಎಬ್ಬಿಸಹೇಳಿದರೆ, 'ಯಾರು ಎಬ್ಬಿಸೆಂದರೂ ಎಬ್ಬಿಸಬೇಡೆಂದು' ತಕ್ಕ ತಾಕೀತುಮಾಡಿ ಮಲಗಿರುತ್ತಾರೆಂದು ಹೇಳಿಬಿಡು, ಎಂದು ಹೇಳಿದನು. ನಜೀರನಿಗೆ ಇಷ್ಟೆ ಬೇಕಾಗಿತ್ತು. ಅವನು ಅಲಿಖಾನ್‌ನ ಬಳಿಗೆ ಓಡುತ್ತ ಹೋಗಿ ರಣಮಸ್ತಖಾನನ ಅಪ್ಪಣೆಯನ್ನು ತಿಳಿಸಿದನು. ಈ ಸುದ್ದಿಯನ್ನು ಮಾಸಾಹೇಬರ ಮುಂದೆ ಯಾವಾಗ ಹೇಳೇನೆನ್ನುವ ಹಾಗೆ ನಜೀರನಿಗೆ ಆಗಿತ್ತು. ಆತನು ಈಗಲೇ ಈ ಸುದ್ದಿಯನ್ನು ಮಾಸಾಹೇಬರಿಗೆ ತಿಳಿಸಿ ಹೋಗಬೇಕೆಂಬ ಉಬ್ಬಿನಿಂದ, ರಣಮಸ್ತಖಾನನ ಬಂಗಲೆಯ ಕಡೆಗೆ ಹೋಗದೆ, ಮಾಸಾಹೇಬರ ಮನೆಯ ಕಡೆಗೆ ತಿರುಗಿದನು. ಅವನು ಹೋಗುವದರೊಳಗೆ ಮಾಸಾಹೇಬರ ಬಾಗಿಲು ಹಾಕಿಕೊಂಡು ಕುಳಿತ್ತಿದ್ದರು. ಲೈಲಿಯು ಹೊರಗೆ ಗೊರಕೆ ಹೊಡೆಯುತ್ತ ಮಲಗಿಕೊಂಡಿದ್ದಳು. ಮಾಸಾಹೇಬರು ಕೋಣೆಯಲ್ಲಿರುವಾಗ ಕರೆಯಲಾಗದೆಂದು ನಜೀರನಿಗೆ ಗೊತ್ತಿದ್ದರೂ, ಆತನು ಗೌರವದಿಂದ ಮಾಸಾಹೇಬರ ಬಾಗಿಲನ್ನು ನೂಕಿದನು. ಕೂಡಲೆ ಮಾಸಾಹೇಬರು “ಯಾರವರು” ಎಂದು ಕೇಳಲು, “ನಾನು ನಜೀರನು” ಎಂಬ ಉತ್ತರವು ಮಾಸಾಹೇಬರ ಕಿವಿಗೆ ಬಿದ್ದಿತು. ಕೂಡಲೆ ಮಾಸಾಹೇಬರು ಬಾಗಿಲು ತೆರೆದು ನಜೀರನಿಗೆ “ಯಾಕೋ ? ಏನಾದರು ವಿಶೇಷ ಸುದ್ದಿಯು ?” ಎಂದು ಕೇಳಿದ ಕೂಡಲೆ, ನಜೀರನು ಖಾನಾಸಹೇಬರು ನಿನ್ನಿನಂತೆಯೇ ಇಂದೂ ಹೊರಗೆ ಹೋಗುವವರಿದ್ದಾರೆ. ಅವರ ಅಪ್ಪಣೆಯಂತೆ ಅಲಿಖಾನ್‌ನಿಗೆ ಕುದುರೆಯನ್ನು ಜೀನುಹಾಕಿ ಸಂಕೇತ ಸ್ಥಳದಲ್ಲಿ ತಂದು ನಿಲ್ಲಿಸೆಂದು ಇದೇ ಈಗ ನಾನೇ ಹೇಳಿ ಬಂದೆನು. ನನಗೆ ಖಾನಸಾಹೇಬರು ತಕ್ಕ ತಾಕೀತು ಮಾಡಿದ್ದಾರೆ. ಯಾರು ಬಂದು ಕೇಳಿದರೂ, ಸ್ವತಃ ನೀವು ಬಂದು ಕೇಳಿದರೂ ಒಳಗೆ ಮಲಗಿಕೊಂಡಿರುತ್ತಾರೆಂದು ಹೇಳಬೇಕಂತೆ. ಈ ಸುದ್ದಿಯನ್ನು ನಿಮಗೆ ಹೇಳಿಹೋಗಬೇಕೆಂದು ಬಂದೆನು, ಎಂದು ಹೇಳಿದನು. ಅದಕ್ಕೆ ಮಾಸಾಹೇಬರು ಉತ್ಸಾಹದಿಂದ- “ಶಾಬಾಸ್ ! ಶಾಬಾಸ್ ! ಇನ್ನು ನೀನು ಆತನಿಗೆ ತಿಳಿಯದ ಹಾಗೆ ಆತನ ಬೆನ್ನಹತ್ತಿ ಹೋಗಿ ಆತನು ಯಾವದಿಕ್ಕಿಗೆ ಹೋಗುತ್ತಾನೆಂಬದನ್ನು ನನಗೆ ಬಂದು ಹೇಳು” ಎಂದು ನಜೀರನನ್ನು ಪ್ರೋತ್ಸಾಹಿಸಿ ಕಳಿಸಿಕೊಟ್ಟರು. ನಜೀರನಿಗೆ ಇಂದು ಮೈಯೆಲ್ಲ ಮಾಂಸಾ ಬಂದಹಾಗಾಯಿತು.

ಇತ್ತಿತ್ತ ರಣಮಸ್ತಖಾನನ ಸ್ವಭಾವವು ಬಹು ಸಂಶಯಗ್ರಸ್ತವಾಗಿತ್ತು; ಆತನು ಹೊರಗೆ ಹೊರಡುವದಕ್ಕಾಗಿ ಉಡುಪು-ತೊಡಪುಗಳನ್ನು ಧರಿಸಬೇಕಾದ್ದರಿಂದ ನಜೀರನ ಹಾದಿಯನ್ನು ನೋಡಹತ್ತಿದನು. ಸುದ್ದಿ ಹೇಳಿಬರಲಿಕ್ಕೆ ನಜೀರನಿಗೆ ಇಷ್ಟು ಹೊತ್ತು ಬೇಡೆಂಬದು ಸಹ ಆತನ ಮನಸ್ಸಿನಲ್ಲಿ ತಟ್ಟನೆ ಬಂದಿತು. ನಜೀರನು ಬಂದಕೂಡಲೆ ಆತನನ್ನು ಕುರಿತು ರಣಮಸ್ತಖಾನನು- “ಬರಿಯ ಸುದ್ದಿಯನ್ನು ಹೇಳಿ ಬರಲಿಕ್ಕೆ ಇಷ್ಟ ಹೊತ್ತು ಯಾಕೆ ?” ಎಂದು ಕೇಳಿದನು. ಕೂಡಲೆ ನಜೀರನ ಮೋರೆಯು ಕಪ್ಪಿಟ್ಟಿತು. ಆತನಿಗೆ ಏನು ಹೇಳಬೇಕೆಂದಂಬುದು ತಿಳಿಯದಾಯಿತು; ಅಷ್ಟರಲ್ಲಿ ರಣಮಸ್ತಖಾನನೇ ನಜೀರನಿಗೆ- “ಹೊತ್ತಿಲ್ಲ, ವೇಳೆಯಿಲ್ಲ; ತಂಬಾಕದ ಝರಕೆಗಳನ್ನು ಹೊಡೆಯುತ್ತ ಕುಳಿತುಕೊಂಡಿದ್ದೆಯಾದೀತು, ಮತ್ತೇನಿದೆ ?” ಎಂದನು. ಇದು ಅನಾಯಾಸವಾಗಿ ನಜೀರನ ಹೊತ್ತಿಗೆಬಿದ್ದಿತು. ಆತನು ದೇಶಾವರಿಯ ನಗುವನ್ನು ನಗುತ್ತ ರಣಮಸ್ತಖಾನನ ಉಡುಪು ತೊಡಪುಗಳನ್ನು ತಂದು ಕೊಡಹತ್ತಿದನು. ರಣಮಸ್ತಖಾನನು ಅವಸರದಿಂದ ಪೋಷಾಕು ಹಾಕಿಕೊಂಡನು ಆತನು ಪುನಃ ನಜೀರನಿಗೆ- “ನಾನು ಎಲ್ಲಿಗೆ ಹೋದೆನೆಂಬದನ್ನು ಮಾಸಾಹೇಬರಿಗೆ ತಿಳಿಸಬೇಡ” ಎಂದು ಗಟ್ಟಿಯಾಗಿ ಹೇಳಿ, ಅಲ್ಲಿಖಾನನು ಸಂಕೇತಸ್ಥಳದಲ್ಲಿ ನಿಲ್ಲಿಸಿದ್ದ ಕುದುರೆಯನ್ನು ಹತ್ತಿ ಹಾದಿಯ ಹಿಡಿದನು. ನಜೀರನು ಕಾಲಲ್ಲಿ ಬಲು ಹಗುರು ಇದ್ದನು. ರಣಮಸ್ತಖಾನನಾದರೂ ಕುದುರೆಯನ್ನು ಸಾವಕಾಶವಾಗಿ ಬಿಟ್ಟಿದ್ದನು; ಆದ್ದರಿಂದ ನಜೀರನಿಗೆ ರಣಮಸ್ತಖಾನನ ಬೆನ್ನಹತ್ತಿ ಹೋಗಿ ಆತನು ಯಾವ ದಿಕ್ಕಿಗೆ ಹೋಗುತ್ತಾನೆಂಬುದನ್ನು ನೋಡಿಕೊಳ್ಳಲಿಕ್ಕೆ ಬಹಳ ಅನುಕೂಲವಾಯಿತು. ರಣಮಸ್ತಖಾನನು ವಿಜಯನಗರದ ದಿಕ್ಕನ್ನೇ ಹಿಡಿದಿದ್ದನು. ಆದಷ್ಟು ಗಟ್ಟಿಮುಟ್ಟಿಯಾಗಿ ಗೊತ್ತಾದ ಕೂಡಲೆ ನಜೀರನು ಹಿಂದಿರುಗಿ ಮಾಸಾಹೇಬರ ಬಳಿಗೆ ಹೋಗಿ ಆ ಸುದ್ದಿಯನ್ನು ಹೇಳಿದನು. ಅದನ್ನು ಕೇಳಿ ಮಾಸಾಹೇಬರ ಚಿತ್ತವೃತ್ತಿಯು ವಿಲಕ್ಷಣವಾಯಿತು; ಆದರೂ ಅದನ್ನೇನು ಹೊರಗೆ ತೋರಗೊಡದೆ ಅವರು ನಜೀರನನ್ನು ಹೊಗಳಿ “ಹೋಗು, ಓಡಿ ಓಡಿ ದಣಿದಿರುತ್ತೀ, ಮಲಗಿಕೋ. ಇನ್ನು ಮೇಲೆ ರಣಮಸ್ತಖಾನನು ಯಾವಾಗ ಬರುತ್ತಾನೆಂಬದನ್ನು ನನಗೆ ಬೆಳಗಾದ ಬಳಿಕ ಯಾವಾಗಾದರೂ ಹೇಳು” ಎಂದು ಹೇಳಿದರು. ನಜೀರನು ಬಹಳ ಆನಂದಪಟ್ಟನು. “ತಪ್ಪದೆ ಹೇಳುತ್ತೇನೆ” ಎಂದು ಹೇಳಿ ಆತನು ಹೊರಟುಹೋದನು. ಮಾಸಾಹೇಬರ ಚಿತ್ತವು ಅತ್ಯಂತ ಅಸ್ವಸ್ಥವಾಯಿತು. ರಣಮಸ್ತಖಾನನ ಬೆನ್ನಹತ್ತಿ ಅಶ್ವಾರೂಢನಾಗಿ ನಾನೇ ಹೋಗಲಾ, ಅನ್ನುವ ಹಾಗೆ ಅವರಿಗೆ ಆಯಿತು; ಆದರೆ ಹಾಗೆ ಮಾಡಲಿಕ್ಕೆ ಬರುವಹಾಗಿದ್ದಿಲ್ಲ; ಇದಲ್ಲದೆ ಅವರು ಕರೀಮಬಕ್ಷಮನನ್ನು ವಿಜಯನಗರದ ಅರ್ಧಹಾದಿಯ ಮೇಲೆ ಕುಳಿತಿರುವಂತೆ ನಿಯಮಿಸಿ ಕಳಿಸಿದ್ದರು. ಆತನು ಮುಂಜಾನೆ ಬಂದು ಸುದ್ದಿಯನ್ನು ಹೇಳಿದ ಬಳಿಕ ಏನುಮಾಡತಕ್ಕದನ್ನು ಮಾಡೋಣವೆಂದು ಅವರು ನಿಶ್ಚಯಿಸಿದರು. ವಿಚಾರ ಮಾಡಿ ಮಾಡಿ ಅವರಿಗೆ ದಣಿವಿಕೆ ಬಂದ ಹಾಗಾದ್ದರಿಂದ ಅವರು ಹಾಸಿಗೆಯ ಮೇಲೆ ಹೋಗಿ ಬಿದ್ದುಕೊಂಡರು; ಆದರೆ ಅವರಿಗೆ ನಿದ್ದೆ ಬರೆಲೊಲ್ಲದು! ಜೀವಕ್ಕೆ ಬಹಳ ತಾಪವಾಗಹತ್ತಿತು. ಹೀಗೆ ಕೆಲವು ಹೊತ್ತು ತಳಮಳಿಸುತ್ತಿರಲು, ಬೆಳಗು ಮುಂಜಾನೆ ಅವರಿಗೆ ಸ್ವಲ್ಪ ನಿದ್ದೆ ಹತ್ತಿದಹಾಗಾಗಿ, ಅವರು ವಿಲಕ್ಷಣ ಕನಸನ್ನು ಕಂಡರು. ಅದೇನೆಂದರೆ ಒಂದು ಎತ್ತರವಾದ ಪರ್ವತ ಶಿಖರದ ಮೇಲೆ ಯಾರದೋ ಹಾದಿಯನ್ನು ನೋಡುತ್ತ ತಾವು ಒಬ್ಬರೇ ನಿಂತುಕೊಂಡಿರುವಂತೆ ಮಾಸಾಹೇಬರಿಗೆ ತೋರಿತು. ಅಷ್ಟರಲ್ಲಿ ರಾಮರಾಜನು ಅಲ್ಲಿಗೆ ಬಂದನು. ಆತನನ್ನು ನೋಡಿದ ಕೂಡಲೆ ತಮ್ಮ ಸರ್ವಾಂಗವು ತಪ್ತವಾಗಿ ಕೆಂಪಡರಿದ ಕಣ್ಣುಗಳಿಂದ ತಾವು ಆತನನ್ನು ನೋಡುತ್ತಿರುವಂತೆ ಮಾಸಾಹೇವರಿಗೆ ಭಾಸವಾಯಿತು. ಆಗ ತಾವು ತಮ್ಮ ಹಲ್ಲುಗಳಿಂದ ತಮ್ಮ ತುಟಿಯನ್ನು ಕಚ್ಚುತ್ತಿರುವಂತೆಯೂ, ತಮ್ಮ ಬಿಗಿಯಾದ ಮುಷ್ಠಿಯನ್ನು ಕಸುವಿನಿಂದ ಹಿಂದಕ್ಕೆ ಜಾಗಿಸಿ ಹಿಡಿದಂತೆಯೂ, ಸಿಟ್ಟಿನಿಂದ ಬುಸುಗುಟ್ಟುತ್ತಿರುವಂತೆಯೂ ಅವರಿಗೆ ತೋರಿತು. ರಾಮರಾಜನು ಮಾತ್ರ ಅತ್ಯಂತ ಶಾಂತಮುದ್ರೆಯಿಂದ ಮುಗುಳುನಗೆ ನಗುತ್ತ ತಮ್ಮ ಕಡೆಗೆ ನೋಡಿದಹಾಗಾಯಿತು. ರಾಮರಾಜನು ನೋಡನೋಡುತ್ತ ತಮ್ಮನ್ನು ಅಪ್ಪಿಕೊಳ್ಳಲಿಕ್ಕೆ ಬರುವಂತೆ ಮಾಸಾಹೇಬರಿಗೆ ತೋರಿತು. ರಾಮರಾಜನು ತಮ್ಮನ್ನು ಅಪ್ಪಿಕೊಳ್ಳಲಿಕ್ಕೆ ಹತ್ತಿರ ಬಂದರೆ, ಆತನನ್ನು ಪರ್ವತದ ಶಿಖರದ ಕೆಳಗೆ ನೂಕಿಬಿಡಬೇಕೆಂದು ತಾವು ತೀರ ತುದಿತುದಿಗೆ ಹೋಗುವ ಹಾಗೆ ಅವರಿಗೆ ಕಂಡಿತು. ಅಷ್ಟರಲ್ಲಿ ರಾಮರಾಜನು ತೀರ ಹತ್ತಿರ ಬಂದು ತನ್ನ ಅತ್ಯಂತ ಮಧುರ ಧ್ವನಿಯಿಂದ- “ಸುಂದರೀ, ಎಂದು ತಪ್ಪಿಸಲಿಕ್ಕೆ ಬಾರದಿರುವಾಗ ಯಾಕೆ ತಪ್ಪಿಸಿಕೊಳ್ಳುಯತ್ನಿಸುತ್ತಿ ? ಎಂದೂ ಆಗದೆ ಇರುವದನ್ನು ಯಾಕೆ ಮಾಡಲಿಕ್ಕೆ ಹೋಗುತ್ತೀ ಇಗೋ ನೋಡು, ಈಗಲು ನನ್ನ ಮಗನು” ಹೀಗೆ ಅನ್ನುತ್ತಿರುವಾಗ ರಣಮಸ್ತಖಾನನು ರಾಮರಾಜನ ಬಳಿಯಲ್ಲಿ ನಿಂತಂತೆ ಮಾಸಾಹೇಬರಿಗೆ ಕಂಡಿತು, ತಾವು ಅತಿ ನಿರ್ಬಲರೂ, ನಿಶ್ಚಲರೂ ಆದದ್ದನ್ನು ನೋಡಿ ಮತ್ತಷ್ಟು ಮಧುರಹ್ಯಾಸ ಮಾಡಿ ರಾಮರಾಜನು ತೀರ ಹತ್ತಿರಕ್ಕೆ ಬಂದ........ ನೋಡು ನೋಡು, ನಾನು ಈತನನ್ನು ಸ್ವಾಧೀನಪಡಿಸಿಕೊಂಡಿದ್ದೇನೆ. ಈತನು ನನ್ನವನು, ನನಗೆ ಸಿಕ್ಕನು, ಈಗ ನೀನಷ್ಟೇಯಾಕೆ ದೂರ ಹೋಗುತ್ತೀ ಬಾ, ಬಾ ಎಂದು ತಮ್ಮನ್ನು ಹಿಡಿಯಲಿಕ್ಕೆ ಬರುವಂತೆ ಮಾಸಾಹೇಬರಿಗೆ ತೋರಿತು. ಅಷ್ಟರಲ್ಲಿ ರಣಮಸ್ತಖಾನನು ಮುಂದಕ್ಕೆ ಬಂದಂತಾಯಿತು. ಆತನ ಬಳಿಯಲ್ಲಿ ನೂರಜಹಾನಳೂ ನಿಂತಂತೆ ತೋರಿತು. ಆಕೆಯು ಏನೋ ರಣಮಸ್ತಖಾನನಿಗೆ ಸನ್ನೆ ಮಾಡಿದ ಹಾಗಾಯಿತು. ಕೂಡಲೇ ರಣಮಸ್ತಖಾನನು-ಹೋಗಿರಿ. ಹಾಳಾಗಿ ಹೋಗಿರಿ; ನನ್ನ ಆಯುಷ್ಯವನ್ನು ನೀವಿಬ್ಬರೂ ಮಣ್ಣುಗೂಡಿಸಿಬಿಟ್ಟಿರಿ, ಎನ್ನುತ ತಮ್ಮನ್ನೂ, ರಾಮರಾಜನನ್ನೂ ಕೂಡಿಯೇ ಪರ್ವತ ಶಿಖರದ ಕೆಳಗೆ ದೂಡಿಕೊಟ್ಟಂತೆ ಮಾಸಾಹೇಬರಿಗೆ ಆಯಿತು. ಹೀಗಾದಕೂಡಲೆ ಮಾಸಾಹೇಬರು ಚಿಟ್ಟನೆ ಚೀರಿ ಹೊರಸಿನ ಕೆಳಗೆ ಬಿದ್ದರು.

ಹೀಗೆ ಚೀರಿದ್ದನ್ನು ಲೈಲಿಯು ಕೇಳಿ ಗಾಬರಿಯಾಗಿ ಬಂದಳು, ಕರ್ಮ ಧರ್ಮಸಂಯೋಗದಿಂದ ಬಾಗಲಿಗೆ ಒಳಚಿಲಕ ಹಾಕದ್ದರಿಂದ ಲೈಲಿಯು ಬಾಗಿಲು ತೆರೆದು ಒಳಗೆ ಹೋಗಿ ನೋಡಲು, ಮಾಸಾಹೇಬರು ನೆಲದ ಮೇಲೆ ಅಸ್ತವ್ಯಸ್ತವಾಗಿ ಬಿದ್ದಿದ್ದರು. ಅವರಮೈಮೇಲೆ ಎಚ್ಚರವಿದ್ದಿಲ್ಲ. ಲೈಲಿಯು ಅವಸರದಿಂದ ನೀರು ತಂದು ಅವರ ಕಣ್ಣಿಗೆ ಹಚ್ಚಿ ನೆತ್ತಿಗೆ ತಟ್ಟಿದಳು; ಆದರೆ ಬಹಳ ಹೊತ್ತಾದರೂ ಎಚ್ಚರವಾಗಲಿಲ್ಲ. ಇನ್ನೂ ಅವರು ಆಗಾಗ್ಗೆ ಚಿಟ್ಟಚಿಟ್ಟೆ ಚೀರುತ್ತಲೇ ಇದ್ದರು. ಲೈಲಿಯು ಎಚ್ಚರವಾಗಬೇಕೆಂದು ಬಹಳ ಯತ್ನಿಸಿದಳು; ಆದರೆ ವ್ಯರ್ಥವು ಕಡೆಗೆ ರಣಮಸ್ತಖಾನನನ್ನು ಕರೆಕಳುಹಿಸಿದಳು. ಅವರು ರಾತ್ರಿ ಹೋದವರು ಇನ್ನೂ ಬಂದಿಲ್ಲೊಂದು ಸುದ್ದಿಯು ಬಂದಿತು. ಹೊರಗೆ ತಾಸುಹೊತ್ತು ಏರಿತ್ತು. ಕಡೆಗೆ ಲೈಲಿಯು ತನಗೆ ಗೊತ್ತಿದ್ದ ಬೇರೆಬೇರೆ ಉಪಾಯಗಳನ್ನು ಮಾಡಿದಳು. ಆಗ ಬಹಳ ಹೊತ್ತಿನ ಮೇಲೆ ಮಾಸಾಹೇಬರಿಗೆ ಎಚ್ಚರವಾಯಿತು; ಆದರೆ ಅವರು ಭ್ರಮಿಷ್ಟರಂತೆ ನಾಲ್ಕೂ ಕಡೆಗೆ ನೋಡಹತ್ತಿದರು. ತಾವು ಎಲ್ಲಿ ಇರುತ್ತೇವೆಂಬದರ ನಿಶ್ಚಯವು ಅವರಿಗೆ ಆದಂತೆ ತೋರಲಿಲ್ಲ. ಆವರು ಬಹಳ ಹೊತ್ತು ಲೈಲಿಯನ್ನು ದಿಟ್ಟಿಸಿ ನೋಡಿದರು. ಆದರೆ ತಾವು ಯಾರನ್ನು ನೊಡುತ್ತೇವೆಂಬ ಪ್ರಜ್ಞೆಯೂ ಅವರಿಗೆ ಇದ್ದಿಲ್ಲ. ಅವರಿಗೆ ಇನ್ನೂ ಕನಸಿನ ಗುಂಗು ಇದ್ದಂತೆ ತೋರಿತು. ಲೈಲಿಯು ಈಗ ನಾಲ್ವತ್ತೈದು ವರ್ಷಗಳಿಂದ ಮಾಸಾಹೇಬರ ಬಳಿಯಲ್ಲಿರುತ್ತ ಬಂದಿದ್ದಳು; ಅವಳಿಗೆ ಇಂಥ ಪ್ರಸಂಗವು ಎಂದೂ ಬಂದಿದ್ದಿಲ್ಲ; ಆದರೆ ಈಗ ಸುಮಾರು ಮೂವತ್ತು ವರ್ಷಗಳ ಹಿಂದೆ ಒಮ್ಮೆ ಮಾಸಾಹೇಬರ ಹೀಗೆಯೇ ಚೀರಿ ನೆಲದ ಮೇಲೆ ಬಿದ್ದದ್ದು ಲೈಲಿಗೆ ನೆನಪಾಯಿತು. ಆಗಾದರೂ ಇಷ್ಟು ಹೊತ್ತು ಎಚ್ಚರ ತಪ್ಪಿ ಮಾಸಾಹೇಬರು ಬಿದ್ದಿದ್ದಿಲ್ಲ. ಲೈಲಿಯು ಹ್ಯಾಗಾದರೂ ಮಾಡಿ ಮಾಸಾಹೇಬರನ್ನು ಅವರ ಹೊರಸಿನ ಮೇಲೆ ಮಲಗಿಸಿದಳು. ಆಗ ಮಾಸಾಹೇಬರು ಒಂದೇಸವನೆ ಬಿಕ್ಕಿಬಿಕ್ಕಿ ಅಳಹತ್ತಿದರು. ಅದನ್ನು ನೋಡಿ ಲೈಲಿಯು ಮತ್ತಷ್ಟು ಗಾಬರಿಯಾದಳು. ಹೀಗೆ ಕೆಲಕಾಲ ಕ್ರಮಿಸಿದ ಮೇಲೆ ಮಾಸಾಹೇಬರು ಹೊರಸಿನ ಮೇಲೆ ಎದ್ದು ಕುಳಿತು ಲೈಲಿಯನ್ನು ಕುರಿತು- “ಲೈಲಿ, ಆ ನಜೀರನನ್ನು ಕರೆದುಕೊಂಡು ಬಾ” ಎಂದು ಹೇಳಿದರು. ಹೀಗೆ ಮಾಸಾಹೇಬರು ಎಚ್ಚರಿಕೆಯಿಂದ ಮಾತಾಡಿದ್ದನ್ನು ಕೇಳಿ ಲೈಲಿಗೆ ಪರಮಾನಂದವಾಯಿತು. ಆ ಆನಂದದಲ್ಲಿ ಆಕೆಯು ನಜೀರನನ್ನು ಕರೆಯಹೋಗಲಿಕ್ಕೆ ಸ್ವಲ್ಪ ತಡಮಾಡಲು, ಮಾಸಾಹೇಬರು ಲೈಲಿಗೆ-ನಾನು ಹೇಳಿದ್ದು ನಿನಗೆ ಕೇಳಿಸಲಿಲ್ಲವೇನು? ನಜೀರನ್ನು ಕರಕೊಂಡು ಬಾ, ನಜೀರನನ್ನು, ಎಂದು ಹೇಳಲು, ಲೈಲಿಯು ನಜೀರನನ್ನು ಕರಕೊಂಡು ಬಂದಳು. ಆಗ

ಮಾಸಾಹೇಬ-ನಿಮ್ಮ ಒಡೆಯನು ನಿನ್ನೆ ರಾತ್ರಿ ಯಾವಾಗ ಬಂದನು? ಇನ್ನೂ ಮಲಗಿಯೇ ಇರುವನೋ ಎದ್ದಿರುವನೋ? ಕರಿಂಬಕ್ಷನು ಇನ್ನೂ ಯಾಕೆ ಬರಲಿಲ್ಲ?

ನಜೀರ-ಮಾಸಾಹೇಬ, ಒಡೆಯರು ನಿನ್ನೆ ರಾತ್ರಿ ಹೋದವರು ಇನ್ನೂ ತಿರುಗಿ ಬಂದೇಯಿಲ್ಲ !

ಮಾಸಾಹೇಬ- (ಭಯದಿಂದ ಹೊರಸುಬಿಟ್ಟು ತಟ್ಟನೆ ಇಳಿದು ನಜೀರನ ಬಳಿಗೆ ಬಂದು) ಏನಂದಿ ? ರಣಮಸ್ತಖಾನನು ಇನ್ನೂ ಬಂದಿರುವದಿಲ್ಲವೆ ? ಹಾಗಾದರೆ ಕರೀಂಬಕ್ಷನ ಗತಿಯೇನು ?

ನಜೀರ- (ಸಮಾಧಾನದಿಂದ) ಅವನೂ ಇನ್ನೂ ಬಂದಿಲ್ಲ.

ಮಾಸಾಹೇಬ-ಅವನೂ ಇನ್ನೂ ಬಂದಿಲ್ಲ ! ಅವನೂ ಇನ್ನೂ ಬಂದಿಲ್ಲವೆ?

ನಜೀರ-(ಅತ್ಯಂತ ನಮ್ರತೆಯಿಂದ) ಜೀ ಸರ್ಕಾರ, ಅವನು ಇನ್ನೂ ಬಂದಿಲ್ಲ.

ಮಾಸಾಹೇಬ-ಅವನೂ ಇನ್ನೂ ಬಂದಿಲ್ಲ ! ಅವನು ಇನ್ನೂ ಬಂದಿಲ್ಲವೆ?

ನಜೀರ- (ಅತ್ಯಂತ ನಮ್ರತೆಯಿಂದ) ಜೀ ಸರ್ಕಾರ, ಅವನು ಇನ್ನೂ ಬಂದಿಲ್ಲ.

****