ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, pages ೬೧–೬೮

೭ನೆಯ ಪ್ರಕರಣ

ಮನಸ್ಸಿನ ತಳಮಳಿಕೆ

ಹೀಗೆ ರಾಮರಾಜನು ಅಸ್ವಸ್ಥ ಮನಸ್ಸಿನಿಂದ ವಿಜಯನಗರದ ಕಡೆಗೆ ಸಾಗಿದ್ದನು. ಮೆಹರ್ಜಾನಳ ಶೋಧವಾಗದ್ದರಿಂದ ಆತನಿಗೆ ಹುಚ್ಚು ಹಿಡಿದಹಾಗಾಗಿತ್ತು. ತಾನು ಮೆಹರ್ಜಾನಳಿಗೆ ಪತ್ರ ಬರೆದು ಅಪರಾಧ ಮಾಡಿದೆನೆಂತಲೂ, ಧನಮಲ್ಲನು ದುರ್ಲಕ್ಷದಿಂದ ಅವರನ್ನು ಹೋಗಗೊಟ್ಟು ಅಪರಾಧ ಮಾಡಿದನೆಂತಲೂ ರಾಮರಾಜನು ಭಾವಿಸಿ, ನಡನಡುವೆ ಸಂತಾಪಗೊಳ್ಳುವನು. ಆತನ ಸಂತಾಪದ ಫಲವನ್ನು ಆತನ ಕುದುರೆಯು ಭೋಗಿಸಬೇಕಾಯಿತು. ಆತನು ಸಿಟ್ಟಿನಿಂದ ಒಮ್ಮೆ ಕುದುರೆಯ ಲಗಾಮನ್ನು ಜಗ್ಗುವನು, ಮತ್ತೊಮ್ಮೆ ಸಿಟ್ಟಿನಿಂದ ಕುದುರೆಯನ್ನು ಕೊಸೆಯುವನು, ಇನ್ನೊಮ್ಮೆ ಸಂತಾಪದಿಂದ ಕುದುರೆಯನ್ನು ಚಬಕದಿಂದ ಹೊಡೆಯುವನು, ತನ್ನ ಯಜಮಾನನು ಈ ದಿನ ಹೀಗೆ ಯಾಕೆ ಮಾಡುವನೆಂಬದು ಆತನ ಕುದುರೆಗೆ ತಿಳಿಯದಾಯಿತು. ರಾಮರಾಜನ ಕುದುರೆಯು ನಿಷ್ಕಳಂಕವಾದದ್ದು. ಅದರ ಮೇಲೆ ರಾಮರಾಜನ ಪ್ರೀತಿಯೂ ಬಹಳ. ತನ್ನ ಒಡೆಯನ ಮನಸ್ಸಿನಲ್ಲಿ ವಿಜಯನಗರಕ್ಕೆ ಬೇಗನೆ ಮುಟ್ಟುವದಿರುತ್ತದೆಂದು ತಿಳಿದು ಆ ಮೂಕಪ್ರಾಣಿಯು ನಾಗಾಲೋಟದಿಂದ ಬಹು ವೇಗದಿಂದ ಓಡಹತ್ತಿತು. ರಾಮರಾಜನು ಎಷ್ಟು ಸಮಾಧಾನ ಗೊಳಿಸಿದರೂ, ಅದು ತನ್ನ ವೇಗವನ್ನು ಕಡಿಮೆ ಮಾಡಲಿಲ್ಲ. ಇಷ್ಟು ವೇಗದಿಂದ ಒಂದೇಸಮನೆ ಹೋದರೆ ಕುದುರೆಯು ದಣಿದೀತೆಂಬ ಎಚ್ಚರವೂ ರಾಮರಾಜನಿಗೆ ಉಳಿಯಲಿಲ್ಲ. ಬೇಗನೆ ವಿಜಯನಗರಕ್ಕೆ ಮುಟ್ಟುವದು ರಾಮರಾಜನಿಗೆ ಇಷ್ಟುವಾದದ್ದರಿಂದ, ರಾಮರಾಜನು ಕುದುರೆಯ ವೇಗವನ್ನು ಕಡಿಮೆ ಮಾಡುವ ಭರಕ್ಕೆ ಹೋಗಲಿಲ್ಲ. ಆ ದಿವ್ಯಾಶ್ವವು ಅವಿರಾಮವಾದ ವೇಗದಿಂದ ನಡೆದು, ರಾಮರಾಜನ ಮಂದಿರದ ಬಾಗಲಿಗೆ ಮುಟ್ಟಿತು. ಹೀಗೆ ಅಕಸ್ಮಾತ್ತಾಗಿ ರಾಮರಾಜನು ಬಂದದ್ದನ್ನು ನೋಡಿ ಸೇವಕರಿಬ್ಬರು ಲಗುಬಗೆಯಿಂದ ಬಂದು ಕುದುರೆಯ ಲಗಾಮು ಹಿಡಿದರು. ರಾಮರಾಜನು ಕುದುರೆಯಿಂದ ಇಳಿದದ್ದೊಂದೇ ತಡ, ಆ ಮೂಕ ಪ್ರಾಣಿಯು ಉಸುರಗಟ್ಟಿದಪ್ಪನೆ ನೆಲಕ್ಕೆ ಬಿದ್ದಿತು. ಆಗ ರಾಮರಾಜನು ಗಾಬರಿಯಾಗಿ ತಿರುಗಿ ನೋಡಲು, ಆತನ ಪ್ರೀತಿಯ ಕುದುರೆಯು ಪ್ರಾಣಬಿಟ್ಟಿತು. ಈ ಅನರ್ಥವನ್ನು ನೋಡಿ ರಾಮರಾಜನು ಅಸಮಾಧಾನಪಟ್ಟಿದ್ದಲ್ಲದೆ, ಇದೊಂದು ದೊಡ್ಡ ಅಪಶಕುನವಾಯಿತೆಂದು ಆತನು ಬೆದರಿದನು. ಈ ಅಪಶಕುನದ ಜೊತೆಗೆ ಮೆಹರ್ಜಾನಳ ವಿಯೋಗವಾದದ್ದೊಂದು ಅಪಶಕುನವು ರಾಮರಾಜನ ಮನಸ್ಸಿನಲ್ಲಿ ಬಂದು ಕುಳಿತುಕೊಂಡಿತು. ಇವೆರಡೂ ಅಪಶಕುನಗಳು ಜೋಡು ಗುಂಡು ರಾಮರಾಜನ ಎದೆಗೆ ಬಡೆದಂತಾದ್ದರಿಂದ, ಆತನು ವ್ಯಥೆಪಟ್ಟು ಹಾಗೇ ಒಳಗೆ ಹೋಗಿ ಪೋಷಾಕು ಸಹ ಇಳಿಸದೆ ಮಂಚದ ಮೇಲೆ ಬಿದ್ದುಕೊಂಡನು, ಆಗ ಆತನಿಗೆ ಎಷ್ಟು ವ್ಯಸನವಾಗಿರಬಹುದೆಂಬುದನ್ನು ವಾಚಕರೇ ತರ್ಕಿಸತಕ್ಕದ್ದು. ಆತನ ಉತ್ಸಾಹವು ಅಳಿದುಹೋಯಿತು. ಆಸೆಯು ಕುಗ್ಗಿತು, ಆತನು ಉಸುರ್ಗಳೆಯುತ್ತ ಹಾಸಿಗೆಯ ಮೇಲೆ ಹೊರಳಾಡುತ್ತಿರಲು, ಸೇವಕನು ಬಂದು ತಿರುಮಲರಾಯರು ಭೆಟ್ಟಿಗೆ ಬಂದಿರುವರೆಂದು ವಿಜ್ಞಾಪಿಸಿದನು. ಈ ವಿಜ್ಞಾಪನೆಯಿಂದ ರಾಮರಾಜನಿಗೆ ಎಳ್ಳಷ್ಟು ಸಮಾಧಾನವಾಗಲಿಲ್ಲ. ಆತನು ಸಂತಾಪದಿಂದ ಸೇವಕನ ಮೈಮೇಲೆ ಹೋಗತಕ್ಕವನು, ಅಷ್ಟರಲ್ಲಿ ಆತನಲ್ಲಿ ವಿವೇಕವು ತಲೆದೋರಿ, ಹಾಗೆ ಹರಿಹಾಯುವದು ಸರಿಯಲ್ಲೆಂದು ತಿಳಿದು, ಆತನು ಎದ್ದು ಕುಳಿತು, ಸೇವಕನಿಗೆ ಹೋಗು, ಅವರನ್ನು ಕರೆದು ತಾ, ಎಂದು ಆಜ್ಞಾಪಿಸಿದನು. ರಾಮರಾಜನು ಬಂದಕೂಡಲೆ ತನಗೆ ಸುದ್ದಿಯನ್ನು ಹೇಳಬೇಕೆಂದು ತಿರುಮಲರಾಯನು ಸೇವಕರಿಗೆ ಆಜ್ಞಾಪಿಸಿದ್ದನು. ಅದರಂತೆ ಸೇವಕರು ಸುದ್ದಿಯನ್ನು ಹೇಳಲು, ತಿರುಮಲರಾಯನು ಕ್ಷಣವಾದರೂ ತಡೆಯದೆ ತಮ್ಮನನು ಕಾಣಲಿಕ್ಕೆ ಬಂದಿದ್ದನು. ಅಣ್ಣನು ಒಳಗೆ ಬಂದಕೂಡಲೆ ರಾಮರಾಜನು ಆತನನ್ನು ಸತ್ಕರಿಸಿ ಕುಳ್ಳಿರಿಸಿಕೊಂಡನು. ಕುಶಲ ಪ್ರಶ್ನೆಗಳಾದ ಮೇಲೆ ತಿರುಮಲರಾಯನು ರಾಮರಾಜನನ್ನು ಕುರಿತು-ತಮ್ಮಾ, ನೀನು ಹೋದ ಸುದ್ದಿ ಏನು ? ನೀನು ಬೇಗನೆ ಬಂದದ್ದು ಬಹಳ ನೆಟ್ಟಗಾಯಿತು. ನಾನು ಮೊದಲು ನಿನಗೆ ಸೂಚಿಸಿದಂತೆ ನಿನ್ನ ಲಗ್ನದ ಮುಹೂರ್ತವನ್ನು ನಾಲ್ಕೇ ದಿನಗಳಲ್ಲಿ ನಿರ್ಧರಿಸಿರುವರು. ಇಂಥ ಸುಮುಹೂರ್ತವು ಇನ್ನು ೫ ವರ್ಷಗಳಲ್ಲಿ ದೊರೆಯುವ ಹಾಗಿಲ್ಲದ್ದರಿಂದ, ಇಷ್ಟು ಅವಸರ ಮಾಡಬೇಕಾಯಿತು. ಮಹಾರಾಜರು ಒಂದೇ ಸಮನೆ ನಿನ್ನ ಹಾದಿಯನ್ನು ನೋಡುತ್ತಿರುವರು. ಇಂದು ನೀನು ಬಾರದಿದ್ದರೆ ನಾಳೆ ನಿನ್ನನ್ನು ಕರೆಕಳುಹಬೇಕೆ ಆಗುತ್ತಿತ್ತು, ಇರಲಿ ; ಮುಸಲ್ಮಾನರ ಒಳಸಂಚಿನ ಸುದ್ದಿಯೇನು? ಮಹಾರಾಜರು, ಕೂಡ ಅದನ್ನು ಕೇಳಲು ಆತುರಪಡುತ್ತಿರುವರು. ಎಂದು ಕೇಳಲು, ರಾಮರಾಜನು ಇಲ್ಲದ ಉತ್ಸಾಹವನ್ನು ಮುಂದೆ ಮಾಡಿ ಅಣ್ಣನ ಸಂಗಡ ಮಾತಾಡಹತ್ತಿದನು. ಆತನು ಅಣ್ಣನ ಮಾತುಗಳಿಗೆ ತಟ್ಟನೆ ಉತ್ತರ ಕೊಡಲಾರದವನಾದನು. ತಾನು ಹೋಗುವಾಗ ಅಣ್ಣನ ಮುಂದೆ ಏನು ಹೇಳಿದ್ದೇನೆಂಬುದನ್ನು ಸಹ ಅತನು ಮರೆತುಬಿಟ್ಟಿದ್ದನು. ಸ್ವಲ್ಪ ಹೊತ್ತು ಆಲೋಚಿಸಿ ಅದು ನೆನಪಿಗೆ ಬಂದಕೂಡಲೆ, ಆತನು ಅಣ್ಣನನ್ನು ಕುರಿತು-ಸಂಗನಪಲ್ಲಿಯಲ್ಲಿ ಮುಸಲ್ಮಾನರ ಸಂಚುಗಳು ನಡೆಯುತ್ತಿರುವದು ನಿಜವು, ವೀರನ ಗೋರಿಯ ದರ್ಶನಕ್ಕೆಂದು ಮೊದಮೊದಲು ನೂರಾರು ಜನರು ಬರುತ್ತಿರುವದು ಹೋಗಿ, ಈಗ ಸಾವಿರಾರು ಜನರು ಕೂಡುತ್ತಿರುವರು. ಹೀಗೆಯೇ ನಾವು ದುರ್ಲಕ್ಷ ಮಾಡಿದರೆ, ಯಾತ್ರೆಯ ನೆವದಿಂದ ಲಕ್ಷಾವಧಿ ಮುಸಲ್ಮಾನರು ಕೂಡಿ ನಮ್ಮ ರಾಜ್ಯದಲ್ಲಿ ನುಗ್ಗಲಿಕ್ಕೆ ಅನುಕೂಲವಾಗ ಬಹುದು, ನನಗೆ ಆ ಗೊರಿಯನ್ನು ಕಿತ್ತಿ ಒಗೆಯುವ ತನಕ ಸಮಾಧಾನವಾಗುವ ಹಾಗಿಲ್ಲ, ಯಾತ್ರೆಯ ನೆವದಿಂದ ಬೇರೆ ಬೇರೆ ಮುಸಲ್ಮಾನ ಬಾದಶಹರ ವಕೀಲರು ಅಲ್ಲಿ ಕೂಡಿ ಒಳಸಂಚುಗಳನ್ನು ನಡಿಸುವರೆಂದು ಕೇಳಿದ್ದೇನೆ, ಅಣ್ಣಾ, ನಾನು ಕೇಳಿದ ಸುದ್ದಿಯಲ್ಲಿ ತಥ್ಯವಿರುತ್ತದೆ. ಮುಸಲ್ಮಾನರು ಎಷ್ಟು ಗುಪ್ತರೀತಿಯಿಂದ ಮಸಲತ್ತುಗಳನ್ನು ಮಾಡಿದರೂ, ನಮ್ಮ ಗುಪ್ತಚಾರರು ಕೂಡಲೆ ಅದನ್ನು ನನಗೆ ಬಂದು ತಿಳಿಸುವರು. ನಮ್ಮ ರಾಜ್ಯಕ್ಕೆ ಏನಾದರೂ ಘಾತದ ಪ್ರಸಂಗವು ಒದಗಿದರೆ, ಅದು ಸಂಗನಪಲ್ಲಿ ಯೊಳಗಿನ ದರ್ಗೆಯ ಯೋಗದಿಂದಲೇ ಒದಗುವದೆಂಬದನ್ನು ಚನ್ನಾಗಿ ಲಕ್ಷ್ಯದಲ್ಲಿಡಿರಿ, ಎಂದು ನುಡಿದು ಸುಮ್ಮನಾದನು.

ರಾಮರಾಜನು ಹೀಗೆ ಬಡಬಡ ಮಾತಾಡಿದ್ದನ್ನು ಕೇಳಿ ತಿರುಮಲ ರಾಯನಿಗೆ ಆಶ್ಚರ್ಯವಾಯಿತು. ತನ್ನ ತಮ್ಮನು ಸಂಗನಪಲ್ಲಿಗೆ ಹೋದ ನಿಜವಾದ ಕಾರಣವು ಗೊತ್ತಾದದ್ದರಿಂದ ಆತನು ಹೀಗೆ ಆಶ್ಚರ್ಯ ಪಟ್ಟದ್ದು ಅಸ್ವಾಭಾವಿಕವಲ್ಲ. ಮುಸಲ್ಮಾನರ ಕಾರಸ್ಥಾನವನ್ನು ನೋಡಿ ಸಂತಾಪಗೊಂಡಿದ್ದರಿಂದ ತನ್ನ ತಮ್ಮನು ಹೀಗೆ ಬಡಬಡ ಮಾತಾಡುವನೆಂದು ತಿಳಿದು ಆತನು ನಡುವೆ ಪ್ರಶ್ನೆಗಳನ್ನು ಮಾಡದೆ, ಇದ್ದದ್ದನ್ನೆಲ್ಲ ತೋಡಿಕೊಳ್ಳಲಿಕ್ಕೆ ತಮ್ಮನಿಗೆ ಆಸ್ಪದ ಕೊಟ್ಟನು. ರಾಮರಾಜನು ಸುಮ್ಮನಾಗಲು, ತಿರುಮಲರಾಯನು ಸ್ವಲ್ಪ ಹೊತ್ತಿನ ಮೇಲೆ ತಮ್ಮನು ಏನೋ ಪ್ರಶ್ನೆ ಮಾಡಬೇಕೆಂದು ಯೋಚಿಸಿ, ಮಾತಾಡತೊಡಗುತ್ತಿರಲು, ರಾಮರಾಜನು-ಅಣ್ಣಾ. ಈಗ ನನಗೆ ಬಹಳ ತ್ರಾಸವಾಗಿದೆ. ಉಳಿದ ಸಂಗತಿಯನ್ನು ನಾಳೆ ಬೆಳಗಾದ ಬಳಿಕ ಹೇಳುವೆನು, ಹೇಳತಕ್ಕ ಸಂಗತಿಗಳು ಬಹಳ ಇರುತ್ತವೆ, ಇದಲ್ಲದೆ, ವಿಶೇಷ ಸಂಗತಿಯನ್ನು ಅರಿತುಕೊಂಡು ಬರುವದಕ್ಕಾಗಿ ಎರಡನೆಯ ದೂತನನ್ನೂ ಕಳಿಸಿದ್ದೇನೆ. ಆತನು ಬಹಳ ಮಾಡಿ ನಾಳಿಗೆ ಬಂದರೂ ಬರಬಹುದು. ಆಮೇಲೆ ಹ್ಯಾಗೂ ವಿಚಾರ ಮಾಡೇ ಮಾಡಬೇಕಾಗುತ್ತದೆ. ಈಗ ಚೆನ್ನಾಗಿ ವಿಶ್ರಾಂತಿಯು ದೊರೆಯದಿದ್ದರೆ, ಪ್ರಕೃತಿಯು ಕೆಡುವ ಸಂಭವವಿರುತ್ತದೆ. ನಾನು ಹೋದ ಬಳಿಕ ಇಲ್ಲಿ ಯಾವ ಸಂಗತಿಗಳು ನಡೆದವೆಂಬುದನ್ನು ವಿಚಾರಿಸಲಿಕ್ಕೂ, ಅವನ್ನು ಕೇಳಲಿಕ್ಕೂ ನನಗೆ ಉತ್ಸುಕತೆಯಿಲ್ಲ. ನೀವು ಇದ್ದ ಬಳಿಕ ಯಾವ ಮಾತಿಗೂ ಕೊರತೆಯಾಗದು ಎಲ್ಲವೂ ಅನುಕೂಲಿಸಿಯೇ ಅನುಕೂಲಿಸುವದು, ಎಂದು ನುಡಿಯಲು, ತಿರುಮಲರಾಯನು, ನಿನಗೆ ಅಷ್ಟು ತ್ರಾಸವಾಗಿದ್ದರೆ ಈಗ ನಾನಾದರೂ ಹೆಚ್ಚಿಗೆ ಮಾತಾಡುವದಿಲ್ಲ. ನಾಳೆ ಮಾತಾಡೋಣವಂತೆ, ನಾನು ಮೊದಲು ಹೇಳಿದಂತೆ ಮುಹೂರ್ತವು ತೀರ ಸಮೀಪಿಸಿರುವದರಿಂದ ನೀನು ಎಲ್ಲಿಯೂ ಹೋಗಬಾರದು. ಅರಸರು ಸುಪ್ರಸನ್ನವಾಗಿರುವತನಕ ಎಲ್ಲ ನೆಟ್ಟಿಗೆ ಆತನು ಕ್ಷೋಭಿಸಿದರೆ ಕೆಲಸವು ಕೆಟ್ಟುಹೋದೀತು, ನಮಗೆ ಈಗ ಅಭ್ಯುದಯ ಕಾಲವು ಒದಗಿರುವಂತೆ ತೋರುತ್ತದೆ ಎಂದು ನುಡಿಯುತ್ತಿರಲು, ರಾಮರಾಜನು ಅಣ್ಣನನ್ನು ಮುಂದೆ ಮಾತಾಡಗೊಡದೆ ನಾನು ಇನ್ನು ಮೇಲೆ ಎಲ್ಲಿಗೂ ಹೋಗುವದಿಲ್ಲ; ಆದರೆ ಇನ್ನು ನನಗೆ ಸ್ವಸ್ಥವಾಗಿ ಮಲಗಗೊಡಿರಿ. ನೀವು ಹೇಳುವ ಸುದ್ದಿಯು ಅತ್ಯಂತ ಆನಂದದಾಯಕವಾದದ್ದು ; ಅದರೆ ಸದ್ಯಕ್ಕೆ ನಾನು ಕಣ್ಣುತುಂಬ ನಿದ್ದೆ ಮಾಡದ ಹೊರತು, ನನಗೆ ಯಾವ ಮಾತಿನಿಂದಲೂ ಆನಂದವಾಗವ ಹಾಗಿಲ್ಲ. ಶರೀರವು ಸುಖದಿಂದಿದ್ದರೆ, ಎಲ್ಲದರಿಂದ ಸುಖವು. ನಾನು ನಿದ್ದೆ ಮಾಡಿ ವಿಶ್ರಾಂತಿಯನ್ನು ಹೊಂದಿ ನಾಳೆ ಬೆಳಗಿನಲ್ಲಿ ತಮ್ಮ ದರ್ಶನಕ್ಕೆ ಬರುವೆನು. ಇಬ್ಬರೂ ಮಹಾರಾಜರ ದರ್ಶನಕ್ಕೆ ಹೋಗೋಣ ಅಲ್ಲಿಯವರೆಗೆ ಮಹಾರಾಜರಿಗೆ ಏನಾದರೂ ಹೇಳಿ ಸಮಾಧಾನ ಮಾಡಿರಿ. ಇಲ್ಲದಿದ್ದರೆ, ಊರಿಗೆ ಬಂದು ಭೆಟ್ಟಿಗೆ ಬರಲಿಲ್ಲೆಂದು ಅವರು ವಿಕಲ್ಪಭಾವವನ್ನು ತಾಳಿಗೀಳಿಯಾರು, ಎಂದು ನುಡಿದು ಸುಮ್ಮನಾದನು. ಇನ್ನು ಮೇಲೆ ಬಹಳ ಹೊತ್ತು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲೆಂತಲೂ, ರಾಮರಾಜನ ಸ್ಥಿತಿಯು ವಿಲಕ್ಷಣವಾಗಿರುವದೆಂತಲೂ ತಿಳಿದು, ತಿರುಮಲರಾಯನು ಹೊರಟುಹೋದನು, ಆದರಿಂದ ರಾಮರಾಜನಿಗೆ ಸಮಾಧಾನವಾದಂತಾಗಿ, ಆತನು ಪುನಃ ಪಲ್ಲಂಗದ ಮೇಲೆ ಬಿದ್ದುಕೊಂಡನು. ಇನ್ನು ಮೇಲೆ ಯಾರೂ ಬಂದರೂ ತನ್ನನ್ನು ಎಬ್ಬಿಸಬಾರದೆಂದು ರಾಮರಾಜನು ಸೇವಕರಿಗೆ ಕಟ್ಟಪ್ಪಣೆ ಮಾಡಿ, ನಾನು ಹೀಗೆ ಹೇಳಿ ಮಲಗಿರುವೆನೆಂದು ದರ್ಶನಕ್ಕೆ ಬಂದವರ ಮುಂದೆ ಸ್ಪಷ್ಟವಾಗಿ ಹೇಳಬೇಕೆಂದು ಸೇವಕರಿಗೆ ಸೂಚಿಸಿದ್ದನು.

ನಿದ್ದೆಯು ಯಾರ ಕೈಯೊಳಗಿನದೂ ಅಲ್ಲ. ನಿದ್ದೆ ಮಾಡಬೇಕೆನ್ನುವವರಿಗೆ ಅದು ಬರುವದೇ ಇಲ್ಲ. ನಿದ್ದೆ ಮಾಡಬಾರದೆನ್ನುವವರನ್ನು ಮಾತ್ರ ಅದು ದುಂಬಾಲಬಿದ್ದು ಬಾಧಿಸುತ್ತದೆ. ರಾಮರಾಜನಿಗೆ ಆದ ದಣುವಿಕೆಯನ್ನು ನೋಡಿದರೆ, ಮಲಗಿದಕೂಡಲೆ ಆತನಿಗೆ ಗಪ್ಪನೆ ನಿದ್ದೆ ಹತ್ತಬೇಕಾಗಿತ್ತು. ಆದರೆ ಮನಸ್ಸಿನ ಅಸ್ವಸ್ಥತೆಯಿಂದ ತಳಮಳಿಸುತ್ತಿದ್ದ ಆತನನ್ನು ನಿದ್ದೆಯು ಸೋಂಕಲೇ ಇಲ್ಲ. ಮೆಹರ್ಜಾನಳು ಇನ್ನು ಬರಲಿಕ್ಕಿಲ್ಲವೆ ? ಹಾಯ್ ಹಾಯ್! ನಾನು ಇದೇನು ಕೆಲಸ ಮಾಡಿ ಬಿಟ್ಟೆನು! ಎಂದು ಆತನು ಮರುಗಿ ಉಸುರ್ಗಳೆಯುತ್ತಲಿದ್ದನು. ನಡುನಡುವೆ ಮೆಹರ್ಜಾನಳ ವಿಷಯವಾಗಿ ಆತನ ಮನಸ್ಸಿನಲ್ಲಿ ಆಸೆಯು ಉತ್ಪನ್ನವಾಗುತ್ತಿತ್ತು. ಮೆಹರ್ಜಾನಳು ಸಿಟ್ಟಿನ ಭರದಲ್ಲಿ ಹೋಗಿದ್ದರೂ, ಸಿಟ್ಟು ಇಳಿದ ಬಳಿಕ ಪಶ್ಚಾತ್ತಾಪ ಪಟ್ಟು ತಾನಾಗಿ ಬರಬಹುದುದೆಂತಲೂ, ತನ್ನನ್ನು ಅಗಲಿ ಹೋದದ್ದರಿಂದ ಅನುಭೋಗಿಸಬೇಕಾದ ಕಷ್ಟಗಳ ಯೋಗದಿಂದ ಆಕೆಯ ಮನಸ್ಸು ತನ್ನ ಕಡೆಗೆ ತಿರುಗೀತೆಂತಲೂ, ಆತನು ಕಲ್ಪಿಸಿದನು. ಮೆಹರ್ಜಾನಳು ಗರ್ಭಿಣಿಯಿರುವಳೆಂದು ಮಾರ್ಜೀನೆಯು ಹೇಳಿದ್ದು ನೆನಪಾದ ಕೂಡಲೆ, ರಾಮರಾಜನ ಮನಸ್ಸಿಗೆ ಹ್ಯಾಗೆ ಹ್ಯಾಗೋ ಆಯಿತು. ತಾನು ಧನಮಲ್ಲನಿಗೆ ಒಳಿತಾಗಿ ಸಿಟ್ಟು ಮಾಡಿ ಕಳಿಸಿಕೊಟ್ಟಿರುವದರಿಂದ, ಆತನು ಮೆಹರ್ಜಾನಳನ್ನು ಗೊತ್ತು ಹಚ್ಚಿಕೊಂಡು ಬಾರದೆಯಿರಲಿಕ್ಕಿಲ್ಲ ಎಂಬ ಆಸೆಯೂ ಆತನಲ್ಲಿ ಉತ್ಪನ್ನವಾಯಿತು. ಒಮ್ಮೊಮ್ಮೆ ಇವೆಲ್ಲ ಆಸೆಗಳು ನಿರಾಶೆಯ ಸ್ವರೂಪವನ್ನು ಹೊಂದಲು, ಆತನು ದುಃಖದಿಂದ ತಳಮಳಿಸುವನು. ಹೀಗೆ ಸಮಾಧಾನ-ಅಸಮಾಧಾನ, ಆಸೆ-ನಿರಾಸೆಗಳ ಜಗ್ಗಾಟದಿಂದ ಆತನಿಗೆ ಗ್ಲಾನಿಯು ಬಂದಂತೆ ಆಗಿ, ಆತನು ಕಣ್ಣು ಮುಚ್ಚಿಕೊಂಡು ಬಿದ್ದು ನಿದ್ರಾಧೀನನಾದಂತೆ ತೋರಿದನು. ಆ ಆರನಿದ್ದೆಯ ಗುಂಗಿನಲ್ಲಿ ಆತನಿಗೆ ಸುಖದ ಸ್ವಪ್ನಗಳು ಬಿದ್ದವೋ, ದುಃಖದ ಸ್ವಪ್ನಗಳು ಬಿದ್ದಿದ್ದವೋ, ಬೇರೆ ಯಾರಾದರೂ ನನ್ನನ್ನು ಕಾಣಲಿಕ್ಕೆ ಬಂದಿದ್ದರೋ ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಸೇವಕರು-ಧನಮಲ್ಲನು ಬಂದಿಲ್ಲೆಂತಲೂ, ಬಹು ಜನ ಸರದಾರರೂ, ಮಾಂಡಲಿಕರೂ ಭೆಟ್ಟಿಯ ಆಸೆಯಿಂದ ಬಂದು ಹೋದರೆಂತಲೂ ಹೇಳಿದರು. ಅದನ್ನು ಕೇಳಿ ರಾಮರಾಜನು ಅಸಮಾಧಾನಪಟ್ಟು, ಹೂ! ಎಂದು ತಿರಸ್ಕಾರದಿಂದ ತಲೆಕೊಡುವಿ, ಸೇವಕರಿಗೆ ಹೊರಟುಹೋಗಲು ಹೇಳಿ, ಮತ್ತೆ ಹಾಸಿಗೆಯ ಮೇಲೆ ಮಲಗಿಕೊಂಡನು. ಇನ್ನು ಮೇಲೆ ತನ್ನನ್ನು ಕಾಣಲಿಕ್ಕೆ ಯಾವ ಸರದಾರರೂ, ಮಾಂಡಲಿಕರೂ ಬರುವ ಆಸೆಯಿಲ್ಲೆಂದು ತಿಳಿದು, ಆತನು ಸೇವಕರಿಗೆ-ಧನಮಲ್ಲನು ಬಂದ ಕೂಡಲೆ ನನಗೆ ತಿಳಿಸಿರಿ. ನಾನು ಮಲಗಿರಲಿ, ನಿದ್ದೆ ಮಾಡುತ್ತಿರಲಿ ಎಬ್ಬಿಸಿ ಸುದ್ದಿಯನ್ನು ಹೇಳಲಿಕ್ಕೆ ಹಿಂದು ಮುಂದು ನೋಡಬೇಡಿರಿ, ಎಂದು ಆಗ್ರಹದಿಂದ ಹೇಳಿ ಮಲಗಿಕೊಂಡನು. ಧನಮಲ್ಲನು ಬರಲಿಲ್ಲೆಂಬ ಅಸಮಾಧಾನದಿಂದ ಆತನಿಗೆ ನಿದ್ದೆಯು ಬರಲೊಲ್ಲದು. ಆತನು ಹಾಸಿಗೆಯ ಮೇಲೆ ಹೊರಳಾಡಿ ಬೇಸತ್ತನು. ತಾನು ನಿತ್ಯದಲ್ಲಿ ಕುಳಿತುಕೊಳ್ಳುವ ಆಸನದಲ್ಲಿ ಕುಳಿತುಕೊಂಡು ಆಲೋಚಿಸಿ ದಣಿದನು. ಮತ್ತೆ ಆತನಿಗೆ ಹಾಸಿಗೆ ಹಿಡಿಯಬೇಕಾಯಿತು. ಇನ್ನೂ ಬೆಳಗಾಗಲಿಲ್ಲೆಂಬ ಆತುರದಿಂದ ಆಗಾಗ್ಗೆ ಆತನು ಪೂರ್ವದಿಕ್ಕಿನ ಕಿಟಕಿಗಳಲ್ಲಿ ಹಣಕಿಹಾಕಿ ನೋಡಿದನು. ಅಂದಿನ ರಾತ್ರಿಯು ರಾಮರಾಜನಿಗೆ ಬಹು ದೀರ್ಘವಾಗಿ ತೋರಿತು. ಆತನು ಹೀಗೆ ತಳಮಳಿಸುತ್ತ, ಬೇಸರದಿಂದ ರಾತ್ರಿಯನ್ನು ತಿರಸ್ಕರಿಸುತ್ತ ಬೆಳಗಿನ ಹಾದಿಯನ್ನು ನೋಡುತ್ತಿರಲು, ಪೂರ್ವದಿಕ್ಕು ಒಮ್ಮೆ ಬೆಳಗಾಯಿತು. ಅದನ್ನುನೋಡಿ ರಾಮರಾಜನಿಗೆ ಮೊದಲು ಸ್ವಲ್ಪ ಸಮಾಧಾನವಾದರೂ, ಮೆಹರ್ಜಾನಳ ವಿಯೋಗದ ಸ್ಮರಣವಾಗಿ ಆತನ ಮನಸ್ಸು. ಮತ್ತೆ ಅಸಮಾಧಾನ ಹೊಂದಿತು. ನಿದ್ದೆಗೇಡೂ, ಬುದ್ಧಿಗೇಡೂ ಆಗಿ ರಾಮರಾಜನಿಗೆ ಹುಚ್ಚು ಹಿಡಿದ ಹಾಗೆ ಆಗಿತ್ತು. ಆತನ ಕಣ್ಣುಗಳು ಉರಿಯುತ್ತಿದ್ದವು. ಮೈಯು ಒಡ್ಡು ಮುರಿಯುತ್ತಿತ್ತು. ಆತನಿಗೆ ಆಕಳಿಕೆಗಳು ಅಗಾಗ್ಗೆ ಬರುತ್ತಿದ್ದವು. ಆತನು ವಿಚಾರಮಗ್ನನಾಗಿ ಯಂತ್ರದಂತೆ ಪ್ರಾತರ್ವಿಧಿಗಳನ್ನು ತೀರಿಸಿಕೊಂಡನು. ಕೃಷ್ಣದೇವ-ಮಹಾರಾಜರನ್ನು ಕಾಣಲಿಕ್ಕೂ, ತನ್ನ ಲಗ್ನದ ವರ್ತಮಾನವನ್ನು ಕೇಳಲಿಕ್ಕೂ ಆತನಿಗೆ ಉತ್ಸಾಹವಾಗಲೊಲ್ಲದು. ಅಷ್ಟರಲ್ಲಿ ತಿರುಮಲರಾಯನು ಬರಲು, ಅವರಿಬ್ಬರೂ ರಾಜದರ್ಶನಕ್ಕಾಗಿ ಹೊರಟುಹೋದರು.

ತಾನು ರಾಮರಾಜನಿಂದ ಕೇಳಿದ ಸುದ್ದಿಯನ್ನೆಲ್ಲ ತಿರುಮಲರಾಯನು ಈ ಮೊದಲೆ ಮಹಾರಾಜನಿಗೆ ತಿಳಿಸಿದ್ದನು. ಮತ್ತೆ ಅದನ್ನು ರಾಮರಾಜನ ಮುಖದಿಂದ ತಿಳಿದುಕೊಳ್ಳುವ ಇಚ್ಛೆಯಿಂದ ಮಹಾರಾಜರು ರಾಮರಾಜನಿಗೆ ಪ್ರಶ್ನೆ ಮಾಡಿದರು. ಹೊಂದಿಸಿ ಹೇಳಲಿಕ್ಕೆ ಅವಕಾಶ ದೊರೆತದ್ದರಿಂದ ರಾಮರಾಜನು ಮೊದಲೇ ಪ್ರಾಜ್ಞವಾಗಿ ಕೂಡಿಸಕೊಂಡಂತೆ ಯಾವತ್ತೂ ಸುದ್ದಿಯನ್ನು ಮಹಾರಾಜರ ಮುಂದೆ ಉಪ್ಪುಕಾರ ಹಚ್ಚಿ ಸವಿಮಾಡಿ ಹೇಳಿದನು. ಸುದ್ದಿ ಹೇಳುವದಾದ ಮೇಲೆ ಆತನು ಮಹಾರಾಜರಿಗೆ-ಇನ್ನು ಈ ಮುಸಲ್ಮಾನರ ಬಂದೋಬಸ್ತು ಮಾಡುವ ವಿಚಾರದ ಹೊರತು ಎರಡನೆಯ ವಿಚಾರಗಳು ನನ್ನ ಮನಸ್ಸಿನಲ್ಲಿ ಉತ್ಪನ್ನವಾಗುವದಿಲ್ಲವು, ಹೊತ್ತಿಗೆ ತಕ್ಕ ಬಂದೋಬಸ್ತು ಮಾಡದಿದ್ದರೆ ನಮ್ಮ ರಾಜ್ಯದ ವ್ಯವಸ್ಥೆ ಯೇನಾದೀತೆಂಬುದನ್ನು ಹೇಳಲಾಗುವದಿಲ್ಲ. ಮೊದಲು ಆ ದರ್ಗೆಯ ಮೇಲೆ ಚೆನ್ನಾಗಿ ಕಣ್ಣಿಡಬೇಕು. ನಮ್ಮ ನಂಬಿಗೆಯ ಸೇವಕರು ದರ್ಗೆಯಲ್ಲಿರುವಂತೆ ವ್ಯವಸ್ಥೆ ಮಾಡಬೇಕೆಂದು ಹೇಳಿದನು. ಇದನ್ನು ಕೇಳಿ ಕೃಷ್ಣದೇವ ಮಹಾರಾಜರು ರಾಮರಾಜನನ್ನು ಕುರಿತು-ಈ ಎಲ್ಲ ಮಾತುಗಳ ವಿಚಾರವನ್ನು ಇನ್ನು ಮೇಲೆ ನೀವೇ ಮಾಡಬೇಕಾಗಿದೆ. ನಿಮ್ಮ ಶೌರ್‍ಯ-ವೀರ್‍ಯಗಳ ವಿಷಯವಾಗಿ ನಮಗೆ ಸಂಪೂರ್ಣ ನಂಬಿಕೆಯಿರುತ್ತದೆ. ನೀವು ಎಂಥ ಸಂಕಟಗಳಿಗೂ ಸೊಪ್ಪು ಹಾಕಲಾರಿರೆಂಬುದು ನಮಗೆ ಗೊತ್ತಿದೆ. ಒಮ್ಮೆ ನಮ್ಮೀ ಅಪೇಕ್ಷೆಯಂತೆ ಈ ಮಂಗಲ ಕಾರ್ಯವನ್ನಷ್ಟು ಸಾಂಗವಾಗಿ ಮಾಡಿಕೊಳ್ಳಿರಿ. ಆಮೇಲೆ ಯೋಗ್ಯವಾಗಿ ತೋರಿದಂತೆ ವ್ಯವಸ್ಥೆ ಮಾಡಬಹುದು. ಕಾರ್ಯವಾದ ಮೇಲೆ ನೀವು ನಾಲ್ಕು ದಿನ ಸಂಗನಪಲ್ಲಿಗೆ ಹೋಗಿ ನಿಂತು ವ್ಯವಸ್ಥೆ ಮಾಡಿ ಬಂದರೂ ಬರಬಹುದು, ಜ್ಯೋತಿಷಿಗಳು “ಶುಭಸ್ಯಶೀಘ್ರಂ” ಎಂದು ಅವಸರದಿಂದ ಮುಹೂರ್ತವನ್ನು ನಿರ್ಧರಿಸಿದ್ದಾರೆ. ನಿರ್ವಿಘ್ನವಾಗಿ ಎಲ್ಲ ಕಾರ್ಯಗಳೂ ಜರಗುವಂತೆ ವ್ಯವಸ್ಥೆ ಮಾಡತಕ್ಕದ್ದು. ಯಾವತ್ತು ವ್ಯವಸ್ಥೆಯ ಭಾರವು ತಿರುಮಲರಾಯರ ತಲೆಯ ಮೇಲಿರುತ್ತದೆ. ನಮ್ಮ ತನಕ ಯಾವ ಮಾತನ್ನೂ ಬರಗೊಡಬಾರದು ನಮ್ಮ ಮನಸ್ಸಿನ ಇಚ್ಚೆಯು ಈಗ ಪೂರ್ಣವಾಗಲಿಕ್ಕೆ ಬೇಕು. ನಾವು ನಾಲ್ಕೂ ಕಡೆಗೆ ಅಪ್ಪಣೆಗಳನ್ನು ಕಳಿಸುತ್ತೇವೆ. ಎಲ್ಲ ವ್ಯವಸ್ಥೆಯು ಉತ್ತಮ ರೀತಿಯಿಂದ ಆಗಲಿಕ್ಕೆಬೇಕು. ನಿಮ್ಮ ಹಿರಿಯರು ಇದ್ದರೆ ನಿಮ್ಮ ಮುಂದೆ ಈ ಮಾತುಗಳನ್ನಾಡುವ ಪ್ರಸಂಗವು ನಮಗೆ ಬರುತ್ತಿದ್ದಿಲ್ಲ, ಎಂದು ಹೇಳಿದರು. ಈ ಮೇರೆಗೆ ಮತ್ತೆ ಕೆಲವು ಸಂಭಾಷಣೆಗಳು ಆದ ಬಳಿಕ ಕೃಷ್ಣದೇವರಾಯನು ಅವರಿಬ್ಬರು ಬಂಧುಗಳಿಗೆ ಅಪ್ಪಣೆಕೊಟ್ಟು ಕಳಿಸಿದನು.

ಏನು ಮಾಡಿದರೂ ರಾಮರಾಜನ ಮನಸ್ಸಿಗೆ ಸೊಗಸಾಗಲಿಲ್ಲ. ಪ್ರತ್ಯಕ್ಷ ರಾಜಪುತ್ರಿಯೊಡನೆ ತನ್ನ ವಿವಾಹವಾಗಿ, ತನಗೆ ರಾಜಜಾಮಾತೃಪದವಿಯು ದೊರೆಯುವ ಯೋಗವು ಸಮೀಪಿಸಿದರೂ ಆತನಿಗೆ ಸಮಾಧಾನವಾಗಲಿಲ್ಲ. ಆತನ ಅಂತರಂಗ ಬಹಿರಂಗಗಳೆರಡನ್ನೂ ಮೆಹರ್ಜಾನಳು ಆಕ್ರಮಿಸಿಬಿಟ್ಟಿದ್ದಳು. ಇನ್ನು ನಾನು ಮೆಹರ್ಜಾನಳನ್ನು ಕಾಣಲಿಕ್ಕಿಲ್ಲವೇ, ಎಂಬದೊಂದೇ ಚಿಂತೆಯು ರಾಮರಾಜನನ್ನು ಬಾಧಿಸುತ್ತಿತ್ತು. ಆತನು ಹೀಗೆ ಅಸಮಾಧಾನದಿಂದಿರುವಾಗಲೇ ಆತನ ವಿವಾಹ ಕಾರ್ಯವು ವಿಜೃಂಭಣೆಯಿಂದ ನೆರವೇರಿತು. ಸಮಾರಂಭವು ಪೂರ್ಣವಾಗುವ ಹಾದಿಯನ್ನೇ ರಾಮರಾಜನು ನೋಡುತ್ತಿದ್ದನು. ಕಡೆಯ ಸಮಾರಂಭವು ಮುಗಿದ ದಿನದ ರಾತ್ರಿಯು ಹೋಗಿ ಬೆಳಗಾಗಲು, ರಾಮರಾಜನು ರಾಜದರ್ಶನಕ್ಕೆ ಹೋದನು. ಆತನು ಮಹಾರಾಜರ ಮುಂದೆ-ನನಗೆ ಮತ್ತೆ ಇಂಥ ಇಂಥ ಹೊಸ ಸುದ್ದಿಗಳು ಹತ್ತಿರುತ್ತವೆ, ಎಂದು ಹೇಳಿ, ತನ್ನ ವರ್ಣನಾಶಕ್ತಿಯ ಪರಮಾವಧಿಯಿಂದ ಮುಸಲ್ಮಾನರ ಒಳಸಂಚಿನ ಕಾಲ್ಪನಿಕ ಸ್ವರೂಪವನ್ನು ಮಹಾರಾಜರ ಕಣ್ಣಮುಂದೆ ಇಟ್ಟನು. ಅದರಿಂದ ಮಹಾರಾಜರ ಮನಸ್ಸಿನಲ್ಲಿ ಇನ್ನು ಮೇಲೆ ಈ ಸಂಬಂಧದಿಂದ ಏನಾದರೂ ವ್ಯವಸ್ಥೆ ಮಾಡಬೇಕೆಂಬ ವಿಚಾರವು ಉತ್ಪನ್ನವಾಯಿತು. ಅವರು ಇದನ್ನೆ ಏನು ಉಪಾಯ ಮಾಡಬೇಕೆಂದು ರಾಮರಾಜನನ್ನು ಕೇಳಿದರು. ಹೀಗೆ ಕೇಳುವದೇ ರಾಮರಾಜನಿಗೆ ಬೇಕಾಗಿತ್ತು. ಮಹಾರಾಜರು ಕೇಳಿದ ಕೂಡಲೇ ರಾಮರಾಜನು ಕೈಜೋಡಿಸಿ, ಅವರನ್ನು ಕುರಿತು-ತಮ್ಮ ಅಪ್ಪಣೆಯಾದರೆ, ನಾನು ಗುಪ್ತವೇಷದಿಂದ ಹೋಗಿ ಯಾವತ್ತು ಗುಪ್ತ ಸಂಗತಿಯನ್ನು ಚಾತುರ್ಯದಿಂದ ತಿಳಿದುಕೊಂಡು ಬರುತ್ತೇನೆ. ಇನ್ನು ಹದಿನೈದು ದಿವಸ ತುಂಗಭದ್ರೆಯ ದಂಡೆಯನ್ನು ಹಿಡಿದು ತಿರುಗುವದು ಅವಶ್ಯವಾಗಿದೆ. ನಾವಾಗಿ ಮೊದಲು ಏನೂ ಮಾಡಬಾರದು. ಎಲ್ಲ ಒಳಸಂಚುಗಳು ಬೈಲಿಗೆ ಬಂದರೆ, ಎಲ್ಲ ವ್ಯವಸ್ಥೆಯು ತಾನೇ ಆಗುತ್ತದೆ, ಎಂದು ಹೇಳಿ, ವಿದ್ಯಾನಗರದಿಂದ ಹತ್ತು ಹದಿನೈದು ದಿವಸ ಹೊರಗೆ ಹೋಗಲಿಕ್ಕೆ ಮಹಾರಾಜದಿಂದ ಅಪ್ಪಣೆಯಯನ್ನು ಪಡೆದನು. ಅಪ್ಪಣೆ ಕೊಡುವಾಗ ಅಳಿಯನಾದ ರಾಮರಾಜನಿಗೆ, ಮಹಾರಾಜರು ಇಲ್ಲದ ಯಾವ ಪ್ರಕಾರದ ಸಾಹಸಕ್ಕೂ ನೀವು ಹೋಗಬೇಡಿರಿ. ಜೀವಕ್ಕೆ ಜೀವ ಕೊಡುವ ಮನುಷ್ಯರನ್ನು ಸಂಗಡ ಕರಕೊಂಡು ಹೋಗಿರಿ. ಮುಖ್ಯ ಮಾತು, ಎಲ್ಲ ರೀತಿಯಿಂದಲೂ ಜೋಕೆ, ಎಂದು ಹೇಳಿದರು. ಹೀಗೆ ಒಪ್ಪಿಗೆ ದೊರೆತ ಕೂಡಲೇ ರಾಮರಾಜನು ಕ್ಷಣವಾದರೂ ವಿಳಂಬಮಾಡದೆ, ವಿದ್ಯಾನಗರದಿಂದ (ವಿಜಯನಗರದಿಂದ) ಹೊರಟು, ನೆಟ್ಟಗೆ ತನ್ನ ಕುಂಜವನದ ಹಾದಿಯನ್ನು ಹಿಡಿದನು.

****