೧೬ ನೆಯ ಪ್ರಕರಣ – ಉಪಸಂಹಾರ

೧೨೩




೧೬ನೆಯ ಪ್ರಕರಣ


ಉಪಸಂಹಾರ

ನ್ನಡಿಗರೇ ! ಈ ಬಗೆಯಾಗಿ, ನಮಗೆಲ್ಲರಿಗೂ ಅತ್ಯಂತ ಪ್ರಿಯವಾಗಿರುವ ಈ ಕರ್ನಾಟಕದ ಗತವೈಭವವನ್ನು ವಿಹಂಗಮ ದೃಷ್ಟಿಯಿಂದ-ಅಲ್ಲ- ಆಕಾಶಯಾನ ದೃಷ್ಟಿಯಿಂದ ನಾವು ನಿಮ್ಮ ಅವಲೋಕನಕ್ಕೆ ತಂದು ಕೊಟ್ಟಿರುವವು. ಇನ್ನೂ ಅನೇಕ ಸಂಗತಿಗಳು ಹೇಳದೆ ಉಳಿದಿರುತ್ತವೆ. ಆಗಿನ ಕಾಲದ ಬಂದರಗಳು, ನಾಣ್ಯಗಳು, ರಾಜ್ಯ ಪದ್ಧತಿ, ವ್ಯಾಪಾರೋದ್ಯೋಗ, ರೀತಿ ನೀತಿ ಮುಂತಾದ ಅನೇಕ ಮಹತ್ವದ ವಿಷಯಗಳ ಬಗ್ಗೆ ಅನೇಕ ಬೋಧಪ್ರದವಾದ ಮತ್ತು ಅಭಿಮಾನಾಸ್ಪದವಾದ ಸಂಗತಿಗಳನ್ನು ನಾವು ನಮ್ಮ ಇತಿಹಾಸದಲ್ಲಿ ಕಾಣಬಹುದು. ಆದರೆ, ಈ ಪ್ರಬಂಧವು ಈಗಾಗಲೇ ಅನಪೇಕ್ಷಿತವಾಗಿ ಬೆಳೆದಿರುವುದರಿಂದ, ಅವುಗಳ ಬಗ್ಗೆ ನಮಗೆ ಗೊತ್ತಾಗಿರುವ ಅಲ್ಪ ಸ್ವಲ್ಪ ಸಂಗತಿಗಳನ್ನೂ ಹೇಳದೆ ಕೈ ಬಿಗಿ ಹಿಡಿಯಬೇಕಾಗಿರುತ್ತದೆ.

ಬರೇ, ಅರಸರ ನಾಮಾವಳಿಯನ್ನೂ ರಾಜವಂಶಗಳ ಪರಂಪರೆಯನ್ನೂ ಹಲಕೆಲವು ಸಂಗತಿಗಳ ತಿಥಿ ವಾರಗಳನ್ನೂ, ಕೆಲವು ಪುಸ್ತಕ ಮತ್ತು ಕವಿಗಳ ಹೆಸರುಗಳನ್ನೂ, ಹೇಳಿದ ಮಾತ್ರಕ್ಕೆ ಇತಿಹಾಸವಾಗಲಿಲ್ಲವೆಂಬುದನ್ನು ನಾವು ಸಂಪೂರ್ಣವಾಗಿ ಅರಿತಿರುವೆವು. ನಮ್ಮ ಪೂರ್ವಜರು ಇಷ್ಟೊಂದು ವೈಭವವನ್ನು ಹೇಗೆ ಪಡೆದರು, ಅವರ ವಿಚಾರಗಳ ಉತ್ಕ್ರಾ೦ತಿಯು ಯಾವ ಬಗೆಯಿಂದ ಆಯಿತು, ಅವರ ಧರ್ಮವು ಏಕೆ ಉನ್ನತಿಯನ್ನು ಹೊಂದಿತು, ಅವರ ವಿಚಾರಗಳು ಏಕೆ ವಿಕಾಸವಾಗಿದ್ದುವು ಇವೇ ಮೊದಲಾದ ಸಂಗತಿಗಳನ್ನು ಸಾದ್ಯಂತವಾಗಿ ವಿವರಿಸುವುದೇ ನಿಜವಾದ ಇತಿಹಾಸವು. ಆದರೆ ಅಂಥ ಇತಿಹಾಸವನ್ನು ಬರೆಯುವುದು ನಮ್ಮ ಉದ್ದೇಶವಲ್ಲ, ಅದು ನನಗೆ ಇಷ್ಟರಲ್ಲಿ ಸಾಧ್ಯವೂ ಇಲ್ಲ. ಕನ್ನಡಿಗರಲ್ಲಿ ಅಭಿಮಾನವೂ ಕುತೂಹಲವೂ ಜಿಜ್ಞಾಸೆಯೂ ಜಾಗೃತವಾಗಲಿಕ್ಕೆ ಹಿಂದೆ ಹೇಳಿದ ಸಂಗತಿಗಳು ಸಾಕೆಂದೂ ಹೆಚ್ಚಿಗೆ ಹೇಳುವುದರಿಂದ ಅಪಚನವಾಗಬಹುದೆಂದೂ ನಾವು ಬಗೆಯುತ್ತೇವೆ. ನಮ್ಮ ಇತಿಹಾಸದ ಬಗ್ಗೆ ಈ ಮುಖ್ಯ 

೧೨೪

ಕರ್ನಾಟಕ-ಗತವೈಭವ


ಮುಖ್ಯ ಸಂಗತಿಗಳಾದರೂ ಗೊತ್ತಿರದಿದ್ದರೆ, ನಾವು “ಸುಶಿಕ್ಷಿತ"ರೆಂಬ ನಾಮಾಭಿಧಾನಕ್ಕೂ ಅರ್ಹರಲ್ಲವೆಂದು ನಮ್ಮ ಭಾವನೆ.

ಹಿಂದುಸ್ಥಾನವು ಒಂದು ಸಣ್ಣ ಜಗತ್ತೇ ಇರುತ್ತದೆ. ಇದರಲ್ಲಿ ನಾನಾತರದ ಜನಾಂಗಗಳೂ ಭಾಷೆಗಳೂ ಇರುವುದರಿಂದ ಒಂದು ಭಾಗದ ಇತಿಹಾಸವು ಮತ್ತೊಂದು ಭಾಗದ ಇತಿಹಾಸದಲ್ಲಿ ತೊಡಕಿಕೊಂಡಿರುತ್ತದೆ. ಉದಾ – ಮಹಾರಾಷ್ಟ್ರದ ಇತಿಹಾಸವು ನಮ್ಮ ಇತಿಹಾಸದಲ್ಲಿ ತೊಡಕಿಕೊಂಡಿದೆ. ನಮ್ಮ ಇತಿಹಾಸವು ತಮಿಳರ ಇತಿಹಾಸದಲ್ಲಿ ತೊಡಕಿಕೊಂಡಿದೆ. ಆದಕಾರಣ, ಆಯಾ ಭಾಷೆಯ ಜನರು ತಮ್ಮ ಇತಿಹಾಸವನ್ನು ಅಭ್ಯಾಸ ಮಾಡುವುದಲ್ಲದೆ, ಮಿಕ್ಕ ಇತಿಹಾಸವನ್ನೂ ಅಭ್ಯಾಸಮಾಡಬೇಕಾಗುವುದು, ಅದಕ್ಕಾಗಿ ಬೇರೆ ಬೇರೆ ಪ್ರಾಂತಿಕ ಇತಿಹಾಸ ಮಂಡಲಗಳಲ್ಲದೆ ರಾಷ್ಟ್ರೀಯ ಇತಿಹಾಸ ಮಂಡಲವೊಂದನ್ನು ವಿದ್ವಾಂಸರು ಏರ್ಪಡಿಸಬೇಕೆಂದು ನಮ್ಮ ನಮ್ರ ಸೂಚನೆ.

ಆದರೆ, ಕರ್ನಾಟಕಸ್ಥರೇ! ನಾವು ನಮ್ಮ ರಾಷ್ಟ್ರೀಯ ಧ್ಯೇಯವನ್ನು ಮಾತ್ರ ಎಂದೆಂದಿಗೂ ಕಣ್ಣು ಮುಂದಿನಿಂದ ಕೀಳಬಾರದು. “ನಮ್ಮ ಪೂರ್ವಜರು ದೊಡ್ಡವರಾಗಿದ್ದರು; ವಿದ್ವಾಂಸರಾಗಿದ್ದರು; ಬಲಾಢ್ಯರಾಗಿದ್ದರು; ಅವರ ವೈಭವವು ಅಪಾರವಾಗಿತ್ತು” ಎಂದು ಮುಂತಾಗಿ ಒರಲುತ್ತ ಕುಳಿತ ಮಾತ್ರಕ್ಕೆ ಕಾರ್ಯವಾಗಲಿಲ್ಲ. ಆ ವಿಚಾರಗಳಿಂದ ನಾವು ಉತ್ಸಾಹಗೊಂಡು, ವರ್ತಮಾನ ಕಾಲದ ಹೀನ ಸ್ಥಿತಿಯನ್ನು ದೂರ ಮಾಡಬೇಕೆಂದು ಪ್ರತಿಜ್ಞೆ ಮಾಡಿ. ಭವಿಷ್ಯ ಕಾಲದ ಧ್ಯೇಯವನ್ನು ಪಡೆಯಲಿಕ್ಕೆ ಈ ಇತಿಹಾಸದ ಸಹಾಯವನ್ನು ಪಡೆದರಲ್ಲವೇ ಇದರ ಪ್ರಯೋಜನವು? ಹಿಂದಿನ ವೈಭವವನ್ನು ನೆನೆಸುವುದೇ ನಿರರ್ಥಕವೆಂದು ತಿಳಿಯುವುದು ಎಷ್ಟು ಹೆಡ್ಡತನವೋ ಅಷ್ಟೇ, ಹಿಂದಿನ ವೈಭವವನ್ನು ನೆನಿಸಿ ಮುಳು ಮುಳು ಅಳುತ್ತ ಕೈಕಾಲು ಕಳೆದುಕೊಂಡು ಕುಳ್ಳಿರುವುದೂ ತಿರಸ್ಕರಣೀಯವು. ಹಿಂದಿನ ಇತಿಹಾಸದ ಪ್ರಯೋಜನವನ್ನು ಮುಂದಿನ ರಾಷ್ಟ್ರೀಯ ಉನ್ನತಿಗಾಗಿ ನೇರ್ಪಡಿಸಿಕೊಳ್ಳುವುದೇ ಜಾಣತನದ ಮಾರ್ಗವು. ನಾವು ಸುಧಾರಣೆಯ ಉಚ್ಚ ಶಿಖರದಿಂದ ಈಗ ಪತಿತರಾಗಿರುವೆವಲ್ಲವೆ? ಹಾಗೆ ಪತಿತರಾಗುವುದಕ್ಕೆ ಬೇಕಾಗುವ ವಿಘಾತಕ ಬೀಜಗಳು ನಮ್ಮಲ್ಲಿ ಈಗ ಬೀಡುಬಿಟ್ಟು ಕೊಂಡಿರುವುವು. ಅವುಗಳನ್ನು ಕಂಡುಹಿಡಿದು ಕಿತ್ತು ಹಾಕುವುದಕ್ಕೆ ಇತಿಹಾಸವೇ ಔಷಧವು. 

೧೨೫

೧೬ ನೆಯ ಪ್ರಕರಣ – ಉಪಸಂಹಾರ


ಆದುದರಿಂದ, ಕೊನೆಗೆ ನಮ್ಮ ಕನ್ನಡ-ಬಾಂಧವರಿಗೆ ಕೈ ಜೋಡಿಸಿ ಪುನಃ ಪುನಃ ಹೇಳುವುದೇನೆಂದರೆ, ಕನ್ನಡಿಗರೇ, ನಾವು ನಮ್ಮ ಆಲಸ್ಯವನ್ನು ತಳ್ಳೋಣ; ಭ್ರಾಮಕ ಕಲ್ಪನೆಗಳನ್ನು ಬಿಟ್ಟು ಬಿಡೋಣ; ಮತ್ತು ಮುಂದಿನ ಮಾರ್ಗಕ್ಕೆ ಹತ್ತೋಣ. ಪಾತಾಳಕ್ಕಿಳಿದ ನಮ್ಮ ಕರ್ನಾಟಕದ ಆರ್ಯ ಸಂಸ್ಕೃತಿಯನ್ನು ನಾವು ಉದ್ಧರಿಸದೆ ಇನ್ನಾರು ಉದ್ಧರಿಸುವವರು? ಕನ್ನಡಿಗರು ಹೇಡಿಗಳು, ಹಿಂದುಳಿದವರು, ಅಭಿಮಾನಶೂನ್ಯರು ಎಂದು ಮೊದಲಾದ ಕರ್ಣಕಟುವಾದ ನುಡಿಗಳಿಂದ ನಮ್ಮನ್ನು ಚುಚ್ಚುವವರಿಗೆ ನಾವು ನಮ್ಮ ಕ್ರಿಯಾಶಕ್ತಿಯಿಂದ ಉತ್ತರ ಕೊಡೋಣ. ಸಾಯಲಾದ ಕರ್ನಾಟಕಕ್ಕೆ ಇತಿಹಾಸದ ಸಂಜೀವನಿ ಮಾತ್ರೆಯನ್ನು ಹಾಕಿ ಚೇತರಗೊಳಿಸೋಣ. ನಮ್ಮ ಆಶಾವೃಕ್ಷವನ್ನು ಕೊಳೆಯಿಸಿಬಿಡುವಂಥ ಹುಳಗಳನ್ನು ಕೊಲ್ಲಲು ಇತಿಹಾಸವೇ ಮದ್ದು. ಕನ್ನಡಿಗರೇ, "ಕರ್ನಾಟಕ”ವೆಂಬ ಒಂದು ಶಬ್ದದಲ್ಲಿ, ಎಂಥ ಅದ್ಭುತವಾದ ಮಾಂತ್ರಿಕ ಶಕ್ತಿಯು ತುಂಬಿರುತ್ತದೆಂಬುದನ್ನು ಲಕ್ಷ್ಯಕ್ಕೆ ತನ್ನಿರಿ! ಕರ್ನಾಟಕದ ಅರಸರು ಹೋದರು! ಕವಿಗಳು ಹೋದರು ! ಸಂಸತ್ತು ಹೋಯಿತು! ವೈಭವವು ಹೋಯಿತು! ಆದರೆ 'ಕರ್ನಾಟಕ' ಎಂಬ ಶಬ್ದವು ಮಾತ್ರ ಇನ್ನೂ ಉಳಿದಿದೆ, ಅದು ದ್ರೌಪದಿಯ ಅಕ್ಷಯ ಪಾತ್ರೆಯೊಳಗಿನ ಅಗುಳಿನಂತಿರುತ್ತದೆ. ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ನಾವು ಇದೊಂದು ಅಗುಳಿನಿಂದ ಸಾವಿರಾರು ಜನರ ಹಸಿವೆಯನ್ನು ಹಿಂಗಿಸಬಹುದು. ಆದಕಾರಣ, ಕನ್ನಡಿಗರೇ, ಕರ್ನಾಟಕ ಸಂಸ್ಕೃತಿಯೆಂಬ ಗುಪ್ತಗಾಮಿನಿಯಾದ ಗಂಗೆಯನ್ನು ಮೇಲಕ್ಕೆ ಎತ್ತಿ ತರೋಣ ! ಏಳಿರಿ, ಇದೀಗ ನಮ್ಮ ಮುಖ್ಯ ಕರ್ತವ್ಯವು.

ಆದುದರಿಂದ, ಕನ್ನಡಿಗರೇ, ಇನ್ನು, ಆರ್ಜುನನು ತನ್ನ ಮೋಹವನ್ನು ದೂರೀಕರಿಸಿ ಶ್ರೀಕೃಷ್ಣ ಪರಮಾತ್ಮನಿಗೆ ಉತ್ತರವಿತ್ತಂತೆ, ನಾವು ನಮ್ಮ ರಾಷ್ಟ್ರ ದೇವತೆಗೆ ಹೀಗೆಂದು ಹೇಳುವ. 

नष्टो मोहः स्मृतिर्लब्धा त्वत्प्रसादान्मयाच्युत।
स्थितोऽस्मि गतसंदेहः करिष्ये वचनं तव ॥
-ಗೀತಾ ೧೮-೬೨