ಕಾಯದ ಕೊನೆಯ ಮೊನೆಯ ಮೇಲಣ ಲಿಂಗವ [ಇಷ್ಟ]ಲಿಂಗವೆಂದು ಪೂಜಿಸುವರು ಜೀವದ ಕೊನೆಯ ಮೊನೆಯ ಮೇಲಣ ಲಿಂಗವ ಪ್ರಾಣಲಿಂಗವೆಂದೆಂಬರು
ಭಾವದ ಕೊನೆಯ ಮೊನೆಯ ಮೇಲಣ ಲಿಂಗವ [ಭಾವ]ಲಿಂಗವೆಂದು ಪೂಜಿಸುವರು. ಕಾಯ ಲಿಂಗವೆಂದು ಪೂಜಿಸುವ ಖಂಡಿತರನೇನೆಂಬೆ ? ಜೀವ ಲಿಂಗವೆಂದು ಪೂಜಿಸುವ ಉಪಜೀವಿಗಳನೇನೆಂಬೆ ? ಭಾವ ಲಿಂಗವೆಂದು ಪೂಜಿಸುವ ಭ್ರಮಿತರನೇನೆಂಬೆ ? ಕಾಯ ಲಿಂಗವೇ ? ಅಲ್ಲ
ಜೀವ ಲಿಂಗವೇ ? ಅಲ್ಲ
ಭಾವ ಲಿಂಗವೇ ? ಅಲ್ಲ
ಅದೃಶ್ಯಭಾವನಾ ನಾಸ್ತಿ ದೃಶ್ಯಮೇವ ವಿನಶ್ಯತಿ ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ ಎಂದುದಾಗಿ_ ಇಷ್ಟಲಿಂಗವ ಪೂಜಿಸಿ ದೃಷ್ಟಲಿಂಗದಲ್ಲಿ ನೆರೆಯಬಲ್ಲರೆ ಕೂಡಲಚೆನ್ನಸಂಗಯ್ಯಾ
ಅವರ ಸರ್ವಾಂಗಲಿಂಗಿಗಳೆಂಬೆನು