ಕಾಯವಿಡಿದು ಸುಳಿದಾಡುವನ್ನಕ್ಕ ಕರಣಂಗಳ ಮೀರುವರಾರೈ ಚೆನ್ನಬಸವಣ್ಣಾ ? ಕರಣಂಗಳಿಂದ ಕರ್ಮಂಗಳ ಮಾಡುತ್ತಿದ್ದಿತು. ಕರ್ಮವ ಕರ್ಮದಿಂದ ಅಳಿದು ಮಲವ ಜಲ ತೊಳೆದಂತೆ_ ನಾನು ಕಾಯದ ಕರ್ಮ ಮಾಡುವಲ್ಲಿ ಜೀವವಿಕಾರ ಬಿಡಿಸಿದೆಯಲ್ಲಾ ! ಗುಹೇಶ್ವರಲಿಂಗಕ್ಕೆ ಒಡಲಿಲ್ಲ ಎಂಬುದನು ಅರುಹಿದೆಯಲ್ಲಾ ಚೆನ್ನಬಸವಣ್ಣಾ.