ಕಾಯವಿಲ್ಲದ ಪುರುಷನು ಕಸವಿಲ್ಲದ ಭೂಮಿಯಲ್ಲಿ ಕಾಮಿತವಿಲ್ಲದ ಬೀಜವ ಬಿತ್ತಲು ಅದು ಅಂಕುರಿಸಿ ಎಲೆ ಎರಡಾಯಿತ್ತು. ಶಾಖೆ ಮೂರಾಯಿತ್ತು
ತಳಿರು ಆರಾಯಿತ್ತು
ಕುಸುಮ ಮೂವತ್ತಾರಾಯಿತ್ತು
ಕಾಯಿ ಇನ್ನೂರಹದಿನಾರಾಯಿತ್ತು
ಹಣ್ಣು ವಿಶ್ವಪರಿಪೂರ್ಣವಾಯಿತ್ತು . ಅದು ಅಖಂಡ ರಸತುಂಬಿ ಬಟ್ಟಬಯಲಲ್ಲಿ ತೊಟ್ಟುಬಿಟ್ಟಿತ್ತು. ಆ ಹಣ್ಣ ನಾನು ಕಣ್ಣಿಲ್ಲದೆ ನೋಡಿ
ಕೈಯಿಲ್ಲದೆ ಮುಟ್ಟಿ
ಬಾಯಿಲ್ಲದೆ ಸವಿದು
ಮನವಿಲ್ಲದೆ ಪರಿಣಾಮಿಸಿದೆನಾಗಿ
ಅಖಂಡೇಶ್ವರನು ತನ್ನೊಳಗೆ ಇಂಬಿಟ್ಟುಕೊಂಡನು.