ಕಾಯವೆಂಬ ಕಂಥೆಯ ತೊಟ್ಟವರು
ಬ್ರಹ್ಮನಾಗಲಿ ವಿಷ್ಣುವಾಗಲಿ ಈಶ್ವರನಾಗಲಿ ಅಂಗಾಲ ಕಣ್ಣು ಮೈಯೆಲ್ಲಾ ಕಣ್ಣುಳ್ಳ ನಂದಿವಾಹನ ರುದ್ರನಾಗಲಿ ಗಂಗಾಧರನಾಗಲಿ ಗೌರೀಪತಿಯಾಗಲಿ ಮಾಯೆ ಕಾಡದೆ ಬಿಡಳು ನೋಡಾ ! ಕಾಯವೆಂಬ ಕಂಥೆಯ ತೊಟ್ಟು ಕೈಲಾಸದಲ್ಲಿದ್ದಡೆ
ಅಗ್ಗದ ರುದ್ರರೆನ್ನ ನುಗ್ಗು ನುಗ್ಗು ಮಾಡಿ ನೆಲಕ್ಕೆ ಹಾಯ್ಕಿದಡೆ
ಬಿದ್ದು ಎದ್ದು ಬಂದು ಗುರುವಿನಿಂದ ಭವದ ಬಳ್ಳಿಯ ಹರಿದೆ ನೋಡಾ
ಹಿಂದಣ ಭವಕ್ಕಂಜಿ
ಮುಂದೆ ಪರಲೋಕದ ಗತಿಯನೊಲ್ಲೆನೆಂದು ಜರೆದು ಕಳೆದಡೆ_ಪುಣ್ಯಪಾಪಂಗಳೆರಡೂ ಹೊರಗಾದವು. ಗುಹೇಶ್ವರನೊಡ್ಡಿದ ಸಂಸಾರಸಾಗರವ ದಾಟಿ ನಿತ್ಯ ನಿಜನಿವಾಸದ ಮುಂಬಾಗಿಲ ಕಂಡು
ತಲೆವಾಗಿ ಹೊಕ್ಕೆನಯ್ಯಾ.