ಕೃತಯುಗದಲ್ಲಿ ದೇವರು ದೇವಾಸುರನ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕೃತಯುಗದಲ್ಲಿ ದೇವರು ದೇವಾಸುರನ ಕೊಲುವಲ್ಲಿ
ಪ್ರಮಥನೆಂಬ ಗಣೇಶ್ವರನಾಗಿರ್ದನು. ಗಜಾಸುರನ ಚರ್ಮವ ಬಿಚ್ಚಿ ಅಜಾರಿ ಹೊದೆವಲ್ಲಿ ಉಗ್ರನೆಂಬ ಗಣೇಶ್ವರನಾಗಿರ್ದನು. ಅಸುರರ ಶಿರೋಮಾಲೆಯ ಕೊರಳಲ್ಲಿ ಉರದಲ್ಲಿ ಹಾರವಾಗಿ ಧರಿಸಿ ಜಗಕ್ಕೆ ಜೂಬಾಗಿಪ್ಪಲ್ಲಿ
ಶಂಕೆಯಿಲ್ಲದೆ ನಿಶ್ಶಂಕನೆಂಬ ಗಣೇಶ್ವರನಾಗಿರ್ದನು. ಸಮಸ್ತ ದೇವರಿಗೆ ಕರುಣಾಮೃತವ ಸುರಿದು ಸುಖವನಿತ್ತು ರಕ್ಷಿಸುವಲ್ಲಿ ಶಂಕರನೆಂಬ ಗಣೇಶ್ವರನಾಗಿರ್ದನು. ಜಾಳಂಧರನೆಂಬ ಅಸುರನ ಕೊಲುವಲ್ಲಿ ಜಾಣರಿಗೆ ಜಾಣನಾಗಿ ವಿಚಿತ್ರನೆಂಬ ಗಣೇಶ್ವರನಾಗಿರ್ದನು. ತ್ರೇತಾಯುಗದಲ್ಲಿ ಕಾಳಂಧರದೊಳಗೆ ಶಿವನು ನಿಜಮಂದಿರವಾಗಿದ್ದಲ್ಲಿ
ಕಾಲಾಗ್ನಿರುದ್ರನೆಂಬ ಗಣೇಶ್ವನಾಗಿರ್ದನು. ಪಿತಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸುವಲ್ಲಿ
ಮಾತಾಪಿತನೆಂಬ ಗಣೇಶ್ವರನಾಗಿರ್ದನು. ತಾಳಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸಿ ಸೃಷ್ಟಿಯ ಕಲ್ಪಿಸಿ ಬ್ರಹ್ಮಾಂಡ ಭಾರಮಂ ಧರಿಸುವಲ್ಲಿ
ತಾಳಸಮ್ಮೇಳನೆಂಬ ಗಣೇಶ್ವರನಾಗಿರ್ದನು. ಜಲಪ್ರಳಯದಲ್ಲಿ ಜಗನ್ನಾಥನು ಅಳಿಯದೆ ಇಪ್ಪಲ್ಲಿ ಜನನಮರಣವರ್ಜಿತನೆಂಬ ಗಣೇಶ್ವರನಾಗಿರ್ದನು. ಜಗವೆಲ್ಲಾ ಶೂನ್ಯವೆಂದಡೆ ನಾನೆ ಹುಟ್ಟಿಸಿದೆನೆಂದು
ಆದಿಗಣನಾಥನೆಂಬ ಗಣೇಶ್ವರನಾಗಿರ್ದನು. ಸುರಾಸುರರು ಅಹಂಕಾರದಲ್ಲಿ ಹೆಚ್ಚಿ ಮೇರೆದಪ್ಪಿದಲ್ಲಿ ಗೂಳಿಯಾಗಿ ಹೋರಿ ಎಲ್ಲರ ತೊತ್ತ?ದುಳಿದು
ಒಕ್ಕಲಿಕ್ಕಿ ಮಿಕ್ಕು ಮೀರಿ ನಂದಿಮಹಾಕಾಳನೆಂಬ ಗಣೇಶ್ವರನಾಗಿರ್ದನು. ಉರಿಗಣ್ಣ ತೆರೆದಡೆ ಉರಿದಹವು ಲೋಕಂಗಳೆಂದು ಜಗವ ಹಿಂದಿಕ್ಕಿಕೊಂಡು ವಂದ್ಯನೆಂಬ ಗಣೇಶ್ವರನಾಗಿರ್ದನು. ಉಮೆಯ ಕಲ್ಯಾಣದಲ್ಲಿ ಕಾಲಲೋಚನನೆಂಬ ಗಣೇಶ್ವರನಾಗಿರ್ದನು. ಅಂಧಕಾಸುರನ ಕೊಲುವಲ್ಲಿ ನೀಲಲೋಹಿತನೆಂಬ ಗಣೇಶ್ವರನಾಗಿರ್ದನು. ತ್ರಿಪುರದಹನವ ಮಾಡುವಲ್ಲಿ ಸ್ಕಂದನೆಂಬ ಗಣೇಶ್ವರನಾಗಿರ್ದನು. ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕುವಲ್ಲಿ ನೀಲಕಂಠನೆಂಬ ಗಣೇಶ್ವರನಾಗಿರ್ದನು. ದ್ವಾಪರದಲ್ಲಿ ಲಿಂಗಪ್ರಾಣಸಂಯೋಗವಾಗಿ ವೃಷಭನೆಂಬ ಗಣೇಶ್ವರನಾಗಿರ್ದನು. ಇಂತು ನಾಲ್ಕು ಯುಗ
ಹದಿನಾಲ್ಕು ಭುವನಂಗಳು ಮಡಿವಲ್ಲಿ
ಹುಟ್ಟುವಲ್ಲಿ ನಂದಿಕೇಶ್ವರನೆಂಬ ಗಣೇಶ್ವರನಾಗಿರ್ದನು. ಕಲಿಯುಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದನದಫ ಪೂರ್ವಾಶ್ರಯವ ಕಳೆದು ಲಿಂಗವಾಗಿ ಕುಳಸ್ಥಳವನರಿತು ಮಹಾಂತ ಕೂಡಲಚೆನ್ನಸಂಗನ ಮಹಾಮನೆಯಲ್ಲಿ
ಸರ್ವಾಚಾರಸಂಪನ್ನ ಬಸವಣ್ಣನೆಂಬ ಗಣೇಶ್ವರನಾಗಿರ್ದನು ಕೇಳಾ ಪ್ರಭುವೆ !