ಕೃತಯುಗದಲ್ಲಿ ನೀನು ದೇವಾಂಗನೆಂಬ ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ
ಸ್ಥೂಲಕಾಯನೆಂಬ ಜಂಗಮವಾಗಿ ಬಂದು ಲಿಂಗಾರ್ಚನೆಯ ಮಾಡಿಹೋದ; ಅದರ ಕ್ರಿಯಾಂಗವನು ಮರೆದೆಯಲ್ಲಾ ಬಸವಣ್ಣಾ. ತ್ರೇತಾಯುಗದಲ್ಲಿ ನೀನು ಘಂಟಾಕರ್ಣನೆಂಬ ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ
ಶೂನ್ಯಕಾಯನೆಂಬ ಜಂಗಮವಾಗಿ ಬಂದು ಲಿಂಗಾರ್ಚನೆಯ ಮಾಡಿಹೋದ; ಅದರ ಕ್ರಿಯಾಂಗವನು ಮರೆದೆಯಲ್ಲಾ ಬಸವಣ್ಣಾ. ದ್ವಾಪರಯುಗದಲ್ಲಿ ನೀನು ವೃಷಭನೆಂಬ ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ
ಅನಿಮಿಷನೆಂಬ ಜಂಗಮನಾಗಿ ಬಂದು ಲಿಂಗಾರ್ಚನೆಯ ಮಾಡಿಹೋದ; ಅದರ ಕ್ರಿಯಾಂಗವ ಮರೆದೆಯಲ್ಲಾ ಬಸವಣ್ಣಾ. ಕಲಿಯುಗದಲ್ಲಿ ನೀನು ಬಸವನೆಂಬ ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ
ಪ್ರಭುದೇವರೆಂಬ ಜಂಗಮವಾಗಿ ಲಿಂಗಾರ್ಚನೆಯ ಮಾಡಬಂದ ಕಾಣಾ ಬಸವಣ್ಣಾ. ಇಂತೀ ದೇವ ಭಕ್ತನೆಂಬ ನಾಮನಾಟಕ ಬಿನ್ನಾಣವಲ್ಲದೆ
ಬೇರೆಂದು ಕಂಡವರಿಗೆ ನಾಯಕನರಕ ತಪ್ಪದು
ಕೂಡಲಚೆನ್ನಸಂಗಮದೇವಾ.