ಕೇಳಿರೇ ಮಂಗಳವಾದ, ಕೇಳಿರವ್ವಾ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕೇಳಿರೇ ಕೇಳಿರವ್ವಾ ಕೆಳದಿಯರೆಲ್ಲ. ಮನಕ್ಕೆ ಮನೋಹರವಾದ
ಕಂಗಳಿಗೆ ಮಂಗಳವಾದ
ಶೃಂಗಾರದ ಸೊಬಗಿನ ನಲ್ಲ ಬಂದು ಎನ್ನ ತನ್ನೊಳಗೆ ಮಾಡಿಕೊಂಡ ಒಂದು ವಿಪರೀತವ ಹೇಳುವೆ ಚಿತ್ತವೊಲಿದು ಲಾಲಿಸಿರವ್ವಾ. ಎನ್ನ ತನುವಿನೊಳಗೆ ತನ್ನ ತನುವನಿಟ್ಟು ಮಹಾತನುವಮಾಡಿದ. ಎನ್ನ ಮನದೊಳಗೆ ತನ್ನ ಮನವನಿಟ್ಟು ಘನಮನವಮಾಡಿದ. ಎನ್ನ ಪ್ರಾಣದೊಳಗೆ ತನ್ನ ಪ್ರಾಣವನಿಟ್ಟು ಚಿತ್‍ಪ್ರಾಣವಮಾಡಿದ. ಎನ್ನ ಜೀವದೊಳಗೆ ತನ್ನ ಜೀವವನಿಟ್ಟು ಸಂಜೀವನವಮಾಡಿದ. ಎನ್ನ ಭಾವದೊಳಗೆ ತನ್ನ ಭಾವವನಿಟ್ಟು ಸದ್ಭಾವವಮಾಡಿದ. ಎನ್ನ ಕರಣಂಗಳೊಳಗೆ ತನ್ನ ಕರಣಂಗಳನಿಟ್ಟು ಚಿತ್‍ಕರಣಂಗಳಮಾಡಿದ. ಎನ್ನ ಇಂದ್ರಿಯಂಗಳೊಳಗೆ ತನ್ನ ಇಂದ್ರಿಯಂಗಳನಿಟ್ಟು ಚಿದಿಂದ್ರಿಯಂಗಳಮಾಡಿದ. ಎನ್ನ ವಿಷಯಂಗಳೊಳಗೆ ತನ್ನ ವಿಷಯಂಗಳನಿಟ್ಟು ನಿರ್ವಿಷಯಂಗಳ ಮಾಡಿದನಾಗಿ
ಅಖಂಡೇಶ್ವರನೆಂಬ ನಲ್ಲನೊಳಗೆ ಕರ್ಪುರವೆಣ್ಣು ಉರಿಪುರುಷನನಪ್ಪಿ ರೂಪಳಿದಂತಾದೆನು ಕೇಳಿರವ್ವಾ.