ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯ ವಾಸನೆ ಇಲ್ಲವಾಗಿ
ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿ ಇಲ್ಲವಾಗಿ
ಅಲ್ಲಿಯೆ ಮಹತ್ತಪ್ಪ ಅಪ್ಪು ಅಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲವಾಗಿ
ಅಲ್ಲಿಯೆ ಮಹತ್ತಪ್ಪ ಅಗ್ನಿ ಅಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ತ್ವಕ್ಕಾಯಿತ್ತು. ತಾನಲ್ಲದೆ ಅನ್ಯ ಸೋಂಕಿಲ್ಲವಾಗಿ
ಅಲ್ಲಿಯೆ ಮಹತ್ತಪ್ಪ ವಾಯು ಅಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಶ್ರೋತ್ರವಾಯಿತ್ತು. ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ
ಅಲ್ಲಿಯೆ ಮಹತ್ತಪ್ಪ ಆಕಾಶವಡಗಿತ್ತು. ಇಂತು ಪಂಚಭೂತಂಗಳಡಗಿದಡೆ
ಪಂಚಬ್ರಹ್ಮಮಯವಾಯಿತ್ತು. ಅದರೊಳಗೆ ಜಗತ್ತಡಗಿದ ಭೇದವದೆ. ಪಂಚವರ್ಣಾತೀತವಾಗಿ ಮಹತ್ತನೊಳಕೊಂಡ ಶರಣನ ಭೇದವನು ಏನೆಂದುಪಮಿಸುವೆನಯ್ಯಾ ಗುಹೇಶ್ವರಾ.