ಗಜೇಂದ್ರ ಮೋಕ್ಷ
by ಪುರಂದರದಾಸರು
2683ಗಜೇಂದ್ರ ಮೋಕ್ಷಪುರಂದರದಾಸರು

ರಚನ: ಪುರಂದರದಾಸರು

ನಾರಾಯಣಾಯ ನಮೋ ನಾಗೇಂದ್ರಶಯನಾಯ
ನಾರದಾದ್ಯಖಿಳ ಮುನಿನಮಿತ ಚರಣಾಂಭೋಜ
ಸಾರಿದರೆ ಪೊರೆದ ಕಂಸಾರಿ ರಕ್ಷಿಪುದಿಂದು ಕಾರುಣ್ಯದಿಂದ ಒಲಿದು || ಪ ||

ಪಾಂಡ್ಯ ದೇಶದೊಳು ಇಂದ್ರದ್ಯುಮ್ನನೆಂಬ ಭೂ
ಮಂಡಲಾಧಿಪನು ವೈರಾಗ್ಯದಲಿ ಹರಿಪಾದ
ಪುಂಡರೀಕದ ಧ್ಯಾನದಿಂ ಮಹಾತಪದೊಳಿರೆ ಚಂಡತಾಪಸ ಅಗಸ್ತ್ಯ |
ಹಿಂಡು ಶಿಷ್ಯರವೆರಸಿ ಬರಲು ಸತ್ಕರಿಸದಿರೆ
ಕಂಡು ಗಜಯೋನಿಯಲಿ ಜನಿಸು ಹೋಗೆನುತ ಉ
ದ್ದಂದಡ ಶಾಪವನಿಟ್ಟು ಮುನಿ ಪೋದನಾಕ್ಷಣದಿ ಶುಂಡಾಲನಾದಸರಸ || ೧ ||

ಕ್ಷೀರಸಾಗರತಡಿಯ ಐದು ಯೋಜನದ ವಿ
ಸ್ತಾರದಲಿ ವರತ್ರಿಕೂಟಾದ್ರಿ ಶೃಂಗತ್ರಯದ
ರಾರಾಜಿಸುತಲಿಪ್ಪರಜತ ತಾಮ್ರ ಧ್ವಜದ ಮೇರುಸಮ ಗಾಂಭೀರ್ಯದಿ |
ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ
ಸೌರಭದೊಳಶ್ವತ್ಥಪೂಗ ಪುನ್ನಾಗ ಜಂ
ಬೀರಾದಿ ತರುಗಲ್ಮ ಖಗ ಮೃಗಗಳೆಸೆವಲ್ಲಿ ವಾರಣೇಂದ್ರನು ಮೆರೆದನು || ೨ ||

ಆನೆ ಹೆಣ್ಣಾನೆ ಮರಿಯಾನೆಗಳ ಸಹಿತ ಆ
ಕಾನನದಿ ನಲಿಯುತ್ತ ಬೇಸಿಗೆಯ ಬಿಸಿಲಿನಲಿ
ತಾ ನೀರಡಿಸಿ ಬಂದುದೊಂದು ಸರಸಿಗೆ ಸಲಿಲಪಾನಾಭಿಲಾಷೆಯಿಂದ |
ನಾನಾ ಪ್ರಕಾರದಲಿ ಜಲಕ್ರೀಡೆಯಾಡುತಿರೆ
ಏನಿದೆತ್ತಣ ರಭಸನಂದುಗ್ರ ಕೋಪದಿಂ
ದಾ ನೆಗಳು ಬಾಯ್ತೆರೆದು ನುಂಗಿಕೊಂಡಂಘ್ರಿಯನು ಏನೆಂಬೆನಾಕ್ಷಣದೊಳು || ೩ ||

ಒತ್ತಿ ಹಿಡಿದೆಳೆಯುತಿರೆ ಎತ್ತಣದಿದೇನೆನುತ
ಮತ್ತಗಜರಾಜ ಅವುಡೊತ್ತಿ ಫೀಳಿಡುತಲೆಳ
ದೊತ್ತಿ ತಂದುದು ದಡಕೆ ಮತ್ತೆ ನಡುಮಡುವಿನೊಳಗೆತ್ತೆಳೆದುದಾ ನೆಗಳವು |
ಇತ್ತಂಡವಿತ್ತು ಕಾದಿತ್ತು ಸಾವಿರವರುಷ
ವಿಸ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ
ಸತ್ವ ತಗ್ಗಿತು ತನ್ನ ಚಿತ್ತದೊಳು ಧ್ಯಾನಿಸುತ ಮತ್ತಾರು ಗತಿಯನುತಲಿ || ೪ ||

ಬಂದುದಾ ಸಮಯದಲಿ ಹಿಂದೆ ಮಾಡಿದ ಸುಕೃತ
ದಿಂದ ದಿವ್ಯ ಜ್ಞಾನ ಕಣ್ದೆರದು ಕೈ ಮುಗಿದು
ವಂದಿಸಿದ ಮನದೊಳರವಿಂದನಾಭಾಚ್ಯುತ ಮುಕುಂದ ಮುನಿವೃಂದವಂದ್ಯ |
ಇಂದಿರಾರಮಣ ಗೋವಿಂದ ಕೇಶವ ಭಕ್ತ
ಬಂಧು ಕರುಣಾಸಿಂಧು ತಂದೆ ನೀ ಸಲಹೆನ್ನ
ಬಂದು ಸಿಲುಕಿದೆನು ಬಲು ದುಂದುಗದ ಮಾಯಾಪ್ರಬಂಧದಿಂ ನೆಗಳಿನಿಂದ || ೫ ||

ಪರಮಾತ್ಮ ಪರಿಪೂರ್ಣ ಪರಮೇಶ ಪರತತ್ತ್ವ
ಪರತರ ಪರಂಜ್ಯೋತಿ ಪರಮಪಾವನಮುರ್ತಿ
ಉರುತರಾ ಪರಬ್ರಹ್ಮ ಆನಂದ ಪರಮೇಷ್ಠಿ ಪರಾತ್ಪರ ಪರಮಪುರುಷ |
ನಿರುಪಮ ನಿಜಾನಂದ ನಿರ್ಭಯ ನಿರಾವರಣ
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ
ನಿರವೇದ್ಯ ನಿಸ್ಸಂಗ ನಿಶ್ಚಿಂತ್ಯ ನಿತ್ಯನೇ ನೋಯುಸದೆ ಸಲಹೆನ್ನನು || ೬ ||

ಇಂತೆನುತ ಮೋರ್ಛೆಯಲಿ ಗುಪಿತ ಕಂಠಧ್ವನಿಯೊ
ಳಂತರಾತ್ಮಕನ ನೆನೆಯುತ್ತಳುತ್ತಿರಲಿತ್ತ
ನಂತ ಮಹಿಮನು ಕೇಳಿ ಕರುಣದಿಂದಾಕ್ಷಣಾನಂತಶಯನದಲೆದ್ದನು |
ಸಂತಪಿಸಿ ಸಿರಿಮುಡಿಯು ಗರುಡವಾಹನನಾಗಿ
ಚಿಂತೆ ಬೇಡೇಳೆನುತ ಅಭಯಹಸ್ತವನಿತ್ತೇ
ಕಾಂತ ಭಕ್ತನ ಬಳಗೆ ಬಂದೆರಡು ಕೈಯಿಂದ ದಂತಿವರನನು ನೆಗಹಿದ || ೭ ||

ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ
ಉಗುವ ಕರುಣದಲಿ ಮೈದಡಹಲ್ಕಿ ಗಜ ಜನ್ಮ
ತೆಗದುದಾಕ್ಷಣದಿ ಮಣಿಮಕರಕುಂಡಲದಿಂದ ಮಿಗೆ ಶೋಭಿಸುತಲೆಸೆದನು |
ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ
ಮಿಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ
ಅಘಹರನ ಕಂಡು ನಿಜಗತಿಗೈದುದಮರರೋಳ್ ಮಿಗೆ ಮೆರದುದೋಲೈಸುತ || ೮ ||

ಮಣಿಮಯ ಕಿರೀಟಕುಂಡಲ ಹಾರಕೌಸ್ತುಭದ
ಮಿನುಗುತಿಹ ವೈಜಯಂತಿಯ ಭೂಷಣಾಂಗದ
ಹಣೆಯ ಕಸ್ತೂರಿತಿಲಕ ನಾಮದಿಂದಸೆವುತಿಹ ವರ ಶಂಖ ಚಕ್ರದಿಂದ |
ಝಣಝಣಿತ ನೂಪುರದ ದಂತ ಪಂಕ್ತಿಯ ಕೃಪೇ
ಕ್ಷಣದ ಸಿರಿಮೋಗದ ಪೀತಾಂಬರಾಲಂಕೃತದ
ಮಣಿದಾ ಜಯ ಜಯವೆಂಬ ಸುರಸಿದ್ಧಸಾಧ್ಯ ಸಂದಣಿಯೊಳಗೆ ಹರಿ ಮೆರೆದನು || ೯ ||

ಹರಿಸ್ತುತಿಯ ಗೈದಂಘ್ರಿಕೆರಗಲಾ ಭೂಪನಾ
ದರದಿಂದ ಸತ್ಕರಿಸಿ ಶರಧಿ ಶ್ವೇತದ್ವೀಪ
ಗಿರಿಶೃಂಗ ವಾರಾಶಿ ತರುಶೇಷ ವಾಲ್ಮೀಕಿಮುನಿ ಧರಣಿ ಧ್ರುವ ಲಕ್ಷ್ಮಿಯು |
ಹರ ಗಿರಿಜೆ ವಿಧಿವಾಣಿ ನಾರದ ಪ್ರಹ್ಲಾದ
ಗರುಡ ಗೋ ವಿಪ್ರ ಋಷಿ ಗಂಗಾರ್ಕ ಚಂದ್ರಾಗ್ನಿ
ಸಿರಿವತ್ಸ ಶಂಖ ಚಕ್ರಾದಿಯವತಾರಗಳ ಸ್ಮರಿಸುವರ ಕಾಯ್ದೆನೆಂದ || ೧೦ ||

ಅವನಿದನುದಯಕಾಲದೊಳೆದ್ದು ನಿಜ ಭಕ್ತಿ
ಭಾವಶುದ್ಧಗಳಿಂದ ಪೇಳಿ ಕೇಳುವ ಜನರ
ಘಾವಳಿಯ ಪರಿಹರಿಸಿ ಸುಜ್ಞಾನ ಪದವಿತ್ತು ದೇಹಾವಸಾನದೊಳಗೆ |
ಶ್ರೀ ವಾಸುದೇವನಾಜ್ಞಾಪಿಸಿ ಗಜೇಂದ್ರ ಸಹಿ
ತಾ ವಿಹಂಗಾಧಿಪನನೇರಿ ವೈಕುಂಠಕ್ಕೆ
ದೇವ ಬಿಜಯಂಗೈದ ಶ್ರೀಹರಿ ಪುರಂದರವಿಠಲನು || ೧೧ ||
|| ಶ್ರೀಕೃಷ್ಣಾರ್ಪಣಮಸ್ತು ||