ಗುಣತ್ರಯಂಗಳನಳಿದ ನಿರ್ಗುಣನ ಮೇಲೆ ನಿರ್ವಯಲು ಬಂದೆರಗಿತ್ತು ನೋಡಾ. ನಿರ್ವಯಲು ಬಂದೆರಗಿದ ರಭಸಕ್ಕೆ ವಿಶ್ವಪ್ರಪಂಚು ಎದ್ದೋಡಿದವು. ಕರಣಂಗಳೆಂಬ ಕಳ್ಳರು ಕಾಲುಗೆಟ್ಟರು ನೋಡಾ. ತನುತ್ರಯಂಗಳೆಂಬ ತ್ರಿಪುರದ ಕೀಲು ಹರಿಯಿತ್ತು. ಕಾಮ ಕಾಲರ ಊಳಿಗದ ಉಪಟಳ ಎದ್ದೋಡಿತ್ತು ನೋಡಾ. ಆತ್ಮತ್ರಯಂಗಳ ಅಹಂಕಾರದ ಬೇರು ಸಂಹಾರವಾಗಿ ಪ್ರಕೃತಿತ್ರಯಂಗಳ ಪ್ರಪಂಚು ಕೆಟ್ಟು ಜೀವ ಪರಮರೆಂಬ ಭಾವ ಸತ್ತಿತ್ತು. ಜೀವ ಪರಮರೆಂಬ ಭಾವ ಸತ್ತಿತ್ತಾಗಿ ನಿರ್ಗುಣ ಲಿಂಗೈಕ್ಯವಾಯಿತ್ತು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.